ಉಪ್ಪಿನಂಗಡಿ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರ ಇಲ್ಲಿನ 2024-25ನೇ ಸಾಲಿನ ಪ್ರತಿಭೋತ್ಸವ ಕಾರ್ಯಕ್ರಮ ಡಿ.19ರಂದು ನಡೆಯಿತು.
ಬೆಳಿಗ್ಗೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಝೀಝ್ ಬಿ.ಕೆ., ಧ್ವಜಾರೋಹಣ ನೆರವೇರಿಸಿದರು. ಹಿರಿಬಂಡಾಡಿ ಗ್ರಾ.ಪಂ. ಸದಸ್ಯೆ ವಾರಿಜಾಕ್ಷಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಹಿರೆಬಂಡಾಡಿ ಗ್ರಾ.ಪಂ.ಸದಸ್ಯ ಹೇಮಂತ್ ಮೈತಳಿಕೆ ಮಾತನಾಡಿ, ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸಬೇಕಾದರೆ ಶಿಕ್ಷಣದ ಜೊತೆ ಪ್ರತಿಭೆಗಳನ್ನು ಗುರುತಿಸುವುದು ಅನಿವಾರ್ಯ ಎಂದರು. ಮುಖ್ಯ ಅತಿಥಿಯಾಗಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಹಿರಿಯ ವಿದ್ಯಾರ್ಥಿಗಳ ಸಹಕಾರ ಮಕ್ಕಳ ಪ್ರತಿಭೆಯನ್ನು ಇಮ್ಮಡಿಗೊಳಿಸಲಿದೆ ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪಾಣಾಜೆ ವಲಯ ಮೇಲ್ವಿಚಾರಕಿ ನಂದನ ಪಿ.ಶೆಟ್ಟಿ, ಶ್ರೀ ಚೌಡೇಶ್ವರಿ ದೇವಸ್ಥಾನದ ಅಧ್ಯಕ್ಷ ಸಂಜೀವ ನೇಕಾರ ಬಡ್ಡಮೆ, ಕೆಮ್ಮಾರ ಮುಹಿಯುದ್ದಿನ್ ಜುಮಾ ಮಸೀದಿ ಅಧ್ಯಕ್ಷ ರಶೀದ್ ಹಾಜಿ ಬಡ್ಡಮೆ, ನಿವೃತ ಮುಖ್ಯಗರು ಕುಶಾಲಪ್ಪ ಪಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನಕರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವಾರ್ಪಣೆ:
ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿರುವ ಅಧ್ಯಾಪಕ ವೃಂದ, ಅಕ್ಷರ ದಾಸೋಹ ಸಿಬ್ಬಂದಿ ಹಾಗೂ ಶಾಲೆಯ ಅಭಿವೃದ್ದಿಯಲ್ಲಿ ಕೈ ಜೋಡಿಸುತ್ತಿರುವ ಯುನೈಟೆಡ್ ಎಫ್.ಸಿ ಕೆಮ್ಮಾರ ತಂಡದ ಸದಸ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬಹುಮಾನ ವಿತರಣೆ:
ಪ್ರತಿಭೋತ್ಸವ ಸಲುವಾಗಿ ವಿದ್ಯಾರ್ಥಿಗಳಿಗೆ ನಡೆದ ಆಟೋಟ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಶಾಲಾ ಶಿಕ್ಷಕಿ ಮೆಹನಾಝ್, ದೈಹಿಕ ಶಿಕ್ಷಣ ಶಿಕ್ಷಕಿ ಮೋಹನಾಂಗಿ, ಜಿಪಿಟಿ ಶಿಕ್ಷಕಿ ಸಂಧ್ಯಾ, ಸಹಶಿಕ್ಷಕಿ ಲೀನಾ ಲಸ್ರಾಡೊ ಬಹುಮಾನ ವಿಜೇತರ ಹೆಸರು ವಾಚಿಸಿದರು. ಹಿರಿಯ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ನಡೆದ ಆಟೋಟ ಸ್ಪರ್ಧೆಗಳ ಬಹುಮಾನ ವಿತರಣೆ ಮಾಡಲಾಯಿತು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಜುನೈದ್, ಹಕೀಮ್ ಪಿ.ಕೆ., ವಿಜೇತರ ಹೆಸರು ವಾಚಿಸಿದರು.
ಹಿರಿಯ ವಿದ್ಯಾರ್ಥಿ ಸಂಘದ ಪದಗ್ರಹಣ:
ಕಾರ್ಯಕ್ರಮದಲ್ಲಿ 2024-25ನೇ ಸಾಲಿನ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮ:
ಸಭಾ ಕಾರ್ಯಕ್ರಮದ ನಂತರ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ, ಶಾಲಾ ವಿದ್ಯಾರ್ಥಿಗಳಿಂದ ಮತ್ತು ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶ್ರೀದುರ್ಗಾ ಮಿತ್ರವೃಂದ ತಂಡದವರಿಂದ ’ಪೇಸ್‌ಬುಕ್ ಅವಾಂತರ’ ಎಂಬ ಕಿರು ನಾಟಕ ಪ್ರದರ್ಶನಗೊಂಡಿತು. ಸಹ ಶಿಕ್ಷಕ ವೆಂಕಟರಮಣ ಭಟ್, ಶಿಕ್ಷಕಿ ಮುಝೈನಾ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಮುಖ್ಯಗುರು ಜಯಶ್ರೀ ಎಂ., ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನಕರಾಜ್ ವಂದಿಸಿದರು. ಶಾಲಾ ಜಿಪಿಟಿ ಶಿಕ್ಷಕಿ ಸಂಧ್ಯಾ, ಪ್ರಕಾಶ್ ಕೆ.ಆರ್.ಕಾರ್ಯಕ್ರಮ ನಿರೂಪಿಸಿದರು. ಶಾಲಾಭಿವೃದ್ದಿ ಸಮಿತಿ ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಪೋಷಕರು, ದಾನಿಗಳು, ಅಧ್ಯಾಪಕ ವೃಂದದವರು ಸಹಕರಿಸಿದರು.
ಶಿಕ್ಷಣ ಇಲಾಖಾಧಿಕಾರಿಗಳ ಗೈರು ಹಾಜರಿಗೆ ಅಸಮಾಧಾನ:
ಪ್ರತಿಭೋತ್ಸವ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖಾಧಿಕಾರಿಗಳು ಗೈರು ಹಾಜರಿಯಾಗಿರುವುದಕ್ಕೆ ಶಾಲಾ ಎಸ್‌ಡಿಎಂಸಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ಸರಕಾರಿ ಶಾಲೆಯ ಮೇಲೆ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ತಾತ್ಸಾರ ಮಾಡಿದರೆ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಭವಿಷ್ಯದ ಗತಿಯೇನು?, ಸರಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ಪ್ರತಿಭೆಗಳನ್ನು ಗುರುತಿಸುವ ಪ್ರತಿಭೋತ್ಸವ ಕಾರ್ಯಕ್ರಮ ಶಿಕ್ಷಣ ಇಲಾಖೆಯ ಭಾಗವಾಗಿದೆ. ಪ್ರೊಟೊಕಾಲ್ ಪ್ರಕಾರ ಬಿಇಓ, ಸಿಆರ್‌ಪಿಯವರಿಗೆ ಆಹ್ವಾನ ನೀಡಿದ್ದರೂ ಕಾರ್ಯಕ್ರಮಕ್ಕೆ ಆಗಮಿಸಿಲ್ಲ ಎಂದು ಎಸ್‌ಡಿಎಂಸಿ ಅಧ್ಯಕ್ಷ ಅಝೀಝ್ ಬಿ.ಕೆ.ಅಸಮಾಧಾನ ವ್ಯಕ್ತಪಡಿಸಿದ್ದಾರೆ.