ಪುತ್ತೂರು: 3 ವರ್ಷದ ಹಿಂದೆ ಅಡ್ಡಹೊಳೆಯಲ್ಲಿ ಬಸ್ ಮತ್ತು ಕಾರು ನಡುವೆ ನಡೆದ ಅಪಘಾತ ಪ್ರಕರಣದ ಆರೋಪಿ ಕಾರು ಚಾಲಕನ ಆರೋಪ ಸಾಬೀತಾಗಿದ್ದು, ಆರೋಪಿಗೆ ಪುತ್ತೂರು ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕಾರು ಚಾಲಕ ಮಹಮ್ಮದ್ ಅನಾಸ್ ಅವರು ಜೈಲು ಶಿಕ್ಷೆಗೆ ಒಳಗಾದವರು. 2021ರ ಫೆ.13ರಂದು ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಹೋಗುತ್ತಿದ್ದ ಬಸ್‌ಗೆ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆ ಎಚ್.ಪಿ. ಪೆಟ್ರೋಲ್ ಪಂಪ್ ಬಳಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರೊಂದು ಡಿಕ್ಕಿಯಾಗಿತ್ತು. ಪರಿಣಾಮ ಕಾರು ಮತ್ತು ಬಸ್ ಜಖಂಗೊಂಡು, ಕಾರು ಚಾಲಕ ಮಹಮ್ಮದ್ ಅನಾಸ್ ಅವರ ತಲೆಗೆ ಮತ್ತು ಕಾಲಿಗೆ ಗಾಯವಾಗಿತ್ತು. ಕಾರಿನಲ್ಲಿದ್ದ ಫಾಯಿಝಾ, ಮರಿಯಮ್ಮ, ಮಹಮ್ಮದ್ ಮುರ್ತಾಲ್, ಮಕ್ಕಳಾದ ಮಹಮ್ಮದ್ ಸಹಾನ್, ಮರಿಯಮ್ಮ ಜುಲಾ, ಆಯಿಸಾತ್ ಜಝಾರವರಿಗೂ ಗಾಯವಾಗಿತ್ತು. ಘಟನೆ ಕುರಿತು ಉಪ್ಪಿನಂಗಡಿ ಪೊಲೀಸರು ಕಾರು ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದರು. ಆಗಿನ ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಗೆ ಅವರು ತನಿಖೆ ನಡೆಸಿ ಆರೋಪಿ ಕಾರು ಚಾಲಕನ ವಿರುದ್ಧ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆಯುತ್ತಿತ್ತು. ಸರಕಾರಿ ಸಹಾಯಕ ಅಭಿಯೋಜಕಿ ಕವಿತಾ ಅವರು ಪ್ರಾಸಿಕ್ಯೂಷನ್ ಪರ ವಾದಿಸಿದ್ದರು. ವಿಚಾರಣೆ ನಡೆಸಿದ ಎಸಿಜೆ ಮತ್ತು ಜೆಎಮ್‌ಎಫಿಸಿ ನ್ಯಾಯಾಲಯದ ನ್ಯಾಯಾದೀಶ ಶಿವಣ್ಣ ಅವರು ಆರೋಪಿಯ ಆರೋಪ ಸಾಬೀತಾಗಿರುವುದರಿಂದ ಆರೋಪಿಗೆ ಕಲಂ 279 ರಲ್ಲಿ ಒಂದು ಸಾವಿರ ರೂಪಾಯಿ ದಂಡ ಮತ್ತು ಕಲಂ 337 ಐಪಿಸಿಗೆ 500 ರೂಪಾಯಿ ದಂಡ ಮತ್ತು ಕಲಂ 338 ಐಪಿಸಿ ಗೆ ಒಂದು ಸಾವಿರ ರೂಪಾಯಿ ದಂಡ ಮತ್ತು ಕಲಂ 304 ಎ ಐಪಿಸಿ ರೂ.2ಸಾವಿರ ದಂಡ ಮತ್ತು ಆರು ತಿಂಗಳ ಕಾರವಾಸ ವಿಧಿಸಿ ತೀರ್ಪು ನೀಡಿದ್ದಾರೆ.