ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು ಪಾಣಾಜೆ ಇದರ ವತಿಯಿಂದ ಸುಳ್ಯ ಕೆವಿಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯವರಿಂದ ಇರ್ದೆ ಉಪ್ಪಳಿಗೆ ಹಿ.ಪ್ರಾ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ದಂತ ಚಿಕಿತ್ಸಾ ಶಿಬಿರವು ಡಿ.23ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಅಂತಾರಾಷ್ಟ್ರೀಯ ಸಮಾಜ ಸೇವಾ ಸಂಸ್ಥೆಯಾಗಿರುವ ಲಯನ್ಸ್ ಕ್ಲಬ್ ಮುಖಾಂತರ ನಡೆಯುವ ಉಚಿತ ಶಿಬಿರವು ಆರೋಗ್ಯ ರಕ್ಷಣೆಗೆ ಸಹಕಾರಿಯಾಗಲಿದೆ ಎಂದರು. ಊರಿನ ಅಭಿವೃದ್ಧಿಯಲ್ಲಿ ರಾಜಕೀಯ ರಹಿತವಾಗಿ ಎಲ್ಲರೂ ಒಟ್ಟುಗೂಡಿ ಪ್ರಯತ್ನಿಸಲಾಗುತ್ತಿದ್ದು ಉಪ್ಪಳಿಗೆಯಲ್ಲಿ ಕೆಪಿಎಸ್ ಶಾಲೆ ಮಂಜೂರಾತಿಗೆ ಪ್ರಯತ್ನಿಸಲಾಗುವುದು ಎಂದರು.
ಲಯನ್ಸ್ ಕ್ಲಬ್ನ ನಿಕಟಪೂರ್ವ ಅಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿ ಮಾತನಾಡಿ, ಗ್ರಾಮಗಳ ಅಭಿವೃದ್ಧಿ ಆದಾಗ ದೇಶದ ಅಭಿವೃದ್ಧಿ. ಈ ನಿಟ್ಟಿನಲ್ಲಿ ಗ್ರಾಮೀಣ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಲಯನ್ಸ್ ಕ್ಲಬ್ ನ ಸೇವಾ ಕಾರ್ಯವನ್ನು ಶ್ಲಾಘಿಸಿದರು.
ಕೆವಿಜಿ ದಂತ ವಿದ್ಯಾಲಯದ ಡಾ. ಯಾಣಾ ನಿರೀಕ್ಷಾ ಮಾತನಾಡಿ, ಹಲ್ಲಿನ ಸುರಕ್ಷತೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ಪ್ರಕಾಶ್ ರೈ ಬೈಲಾಡಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಲೋಕನಾಥ ಆಚಾರ್ಯ, ಮುಖ್ಯಗುರು ಲಿಂಗಮ್ಮ, ಲಯನ್ಸ್ ಕ್ಲಬ್ ಕೋಶಾಧಿಕಾರಿ ಜಲೀಲ್ ಬೈತ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಶಾಲೆ ಅಭಿವೃದ್ದಿಯಲ್ಲಿ ಮಹತ್ತರ ಕೊಡುಗೆ ನೀಡಿದ ಶಾಲಾ ಎಸ್.ಡಿಎಂಸಿ ಅಧ್ಯಕ್ಷ ಲೋಕನಾಥ ಆಚಾರ್ಯ ಚೆಲ್ಯಡ್ಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಕುಕ್ಕುವಳ್ಳಿ, ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ಕೃಷ್ಣಪ್ರಸಾದ್ ಆಳ್ವ ಹಾಗೂ ಕೆವಿಜಿ ದಂತ ವಿದ್ಯಾಲಯದ ಡಾ. ಯಾಣಾ ನಿರೀಕ್ಷಾರವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್ ಪುತ್ತೂರು ಪಾಣಾಜೆ ಅಧ್ಯಕ್ಷ ದಯಾನಂದ ರೈ ಕೋರ್ಮಂಡ ಸ್ವಾಗತಿಸಿದರು. ಕಾರ್ಯದರ್ಶಿ ನವೀನ್ ರೈ ಚೆಲ್ಯಡ್ಕ ವಂದಿಸಿದರು. ಶಿಕ್ಷಕಿ ವಾಣಿಶ್ರೀ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳ ದಂತ ತಪಾಸಣೆ ನಡೆಸಲಾಯಿತು.