ಪುತ್ತೂರು ತಾ| ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ 60ನೇ ಹುಟ್ಟುಹಬ್ಬ ಆಚರಣೆ

0


ಪುತ್ತೂರು: ತಾಲೂಕು ಬಂಟರ ಸಂಘದ ಅಧ್ಯಕ್ಷ, ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಮುಖಂಡರಾದ ಕಾವು ಹೇಮನಾಥ ಶೆಟ್ಟಿಯವರ 60ನೇ ವರ್ಷದ ಹುಟ್ಟುಹಬ್ಬ ಆಚರಣೆ ಡಿ.21ರಂದು ಕಾವುನಲ್ಲಿರುವ ಹೇಮನಾಥ ಶೆಟ್ಟಿಯವರ ಸ್ವಗೃಹದಲ್ಲಿ ನಡೆಯಿತು.


ಊರಿನ ಅಭಿವೃದ್ಧಿಯಲ್ಲಿ ಜೊತೆಯಾಗಿದ್ದೇವೆ-ನನ್ಯ ಅಚ್ಚುತ ಮೂಡಿತ್ತಾಯ: ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯರವರು ಮಾತನಾಡಿ, ನಾನು ಮತ್ತು ಕಾವು ಹೇಮನಾಥ ಶೆಟ್ಟಿ ಅವರು ರಾಜಕೀಯವಾಗಿ ಬೇರೆ ಬೇರೆ ಪಕ್ಷದಲ್ಲಿದ್ದರೂ, ಊರಿನ ಅಭಿವೃದ್ಧಿಯಲ್ಲಿ ಜೊತೆಯಾಗಿದ್ದೇವೆ. ಹೇಮನಾಥ ಶೆಟ್ಟಿಯವರ ತಂದೆ ಕಾವು ಅಂತಪ್ಪ ಶೆಟ್ಟಿ ಅವರು ಈ ಭಾಗದಲ್ಲಿ ಪ್ರಭಾವಿ ರಾಜಕೀಯ ವ್ಯಕ್ತಿಯಾಗಿದ್ದರು. ನಾನು ಎಳೆಯ ಪ್ರಾಯದಲ್ಲೇ ಕಾವು ದೇವಸ್ಥಾನದ ಅಧ್ಯಕ್ಷನಾಗಲು ಅವರ ಪ್ರೋತ್ಸಾಹ ಕಾರಣವಾಗಿತ್ತು. ಹೇಮನಾಥ ಶೆಟ್ಟಿಯವರು ರಾಜಕೀಯ ಕ್ಷೇತ್ರದಲ್ಲಿ ಬಹಳ ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಹೇಮನಾಥ ಶೆಟ್ಟಿಯವರಿಗೆ ರಾಜಕೀಯದಲ್ಲಿ ಉನ್ನತ ಸ್ಥಾನ ಒದಗಿ ಬರಲಿ ಎಂದರು.


ಹೇಮನಾಥ ಶೆಟ್ಟಿಯವರ ಮುಂದಿನ ಬದುಕು ಉನ್ನತವಾಗಲಿ- ಸೀತಾರಾಮ ರೈ: ಸಹಕಾರ ರತ್ನ ಸವಣೂರು ಸೀತಾರಾಮ ರೈಯವರು ಮಾತನಾಡಿ, ಫುಲ್ ಟೈಮ್ ರಾಜಕೀಯ ವ್ಯಕ್ತಿಯಾಗಿರುವ ಹೇಮನಾಥ ಶೆಟ್ಟಿಯವರು ಶಿಕ್ಷಣ, ಲಯನ್ಸ್ ಕ್ಲಬ್, ಬಂಟರ ಸಂಘಟನೆಯಲ್ಲೂ ತೊಡಗಿಕೊಂಡಿರುವುದು ಬಹಳ ಸಂತೋಷ ತರುವ ವಿಚಾರವಾಗಿದೆ. ಪ್ರಭಾವಿ ವ್ಯಕ್ತಿಯಾಗಿದ್ದ ಅಂತಪ್ಪ ಶೆಟ್ಟಿಯವರ ಮಗನಾಗಿರುವ ಹೇಮನಾಥ ಶೆಟ್ಟಿಯವರು ಈಗ ಪುತ್ತೂರು, ಸುಳ್ಯ, ಕಡಬ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಕೂಡು ಕುಟುಂಬದಲ್ಲಿ ವಾಸಿಸುತ್ತಿರುವ ಹೇಮನಾಥ ಶೆಟ್ಟಿಯವರ ಬಗ್ಗೆ ಅವರ ಸಹೋದರ ಅಣ್ಣ ದೇವರಿಗೆ ಸಮಾನ ಎಂದು ಹೇಳಿದಾಗ ಮನಸ್ಸು ತುಂಬಿ ಬಂತು, ಹೇಮನಾಥ ಶೆಟ್ಟಿಯವರ ಮುಂದಿನ ಬದುಕು ಉನ್ನತವಾಗಲಿ ಎಂದು ಶುಭ ಹಾರೈಸಿದರು.


ಮಾದರಿ ಕೂಡು ಕುಟುಂಬ- ದಂಬೆಕ್ಕಾನ ಸದಾಶಿವ ರೈ: ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈಯವರು ಮಾತನಾಡಿ, ಕೂಡುಕುಟುಂಬ ಈ ಕಾಲದಲ್ಲೂ ಹೇಗಿರುತ್ತದೆ ಎಂಬುದನ್ನು ಕಾವು ಹೇಮನಾಥ ಶೆಟ್ಟಿಯವರ ಮನೆಯಲ್ಲಿ ನೋಡಿ ಕಲಿಯಬೇಕು. ಅವರದ್ದು ಮಾದರಿ ಕೂಡು ಕುಟುಂಬವಾಗಿದೆ. ನಾನು ಅನೇಕ ಸಲ ವಿವಿಧ ಕಡೆ ಈ ವಿಚಾರವನ್ನು ಹೇಳಿದ್ದೇನೆ, 45 ವರ್ಷಗಳಿಂದ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಇರುವ ಹೇಮನಾಥ ಶೆಟ್ಟಿಯವರ ಪ್ರತಿಯೊಂದು ಕಾರ‍್ಯದಲ್ಲೂ ಅವರ ಪತ್ನಿ ಅನಿತಾರವರ ಸಹಕಾರ ಇದೆ ಎಂದು ಹೇಳಿದರು.


ಹುದ್ದೆಗೆ ಗೌರವವನ್ನು ತಂದಿದ್ದಾರೆ- ಕುಂಬ್ರ ದುರ್ಗಾಪ್ರಸಾದ್ ರೈ: ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡು ಬಂದಿರುವ ಕಾವು ಹೇಮನಾಥ ಶೆಟ್ಟಿಯವರು ಅನೇಕ ಮಂದಿಯನ್ನು ಸಮಾಜದಲ್ಲಿ ಬೆಳೆಸಿದ್ದಾರೆ. ಬಂಟರ ಸಂಘಟನೆಯಲ್ಲೂ ತೊಡಗಿಸಿಕೊಂಡು, ಅನೇಕ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿ, ಆ ಹುದ್ದೆಗೆ ಗೌರವವನ್ನು ತಂದಿದ್ದಾರೆ ಎಂದರು.


ಸಮರ್ಥ ರಾಜಕೀಯ ನಾಯಕ- ಮಹಮ್ಮದ್ ಬಡಗನ್ನೂರು: ತಾ.ಪಂ.ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರುರವರು ಮಾತನಾಡಿ, ಹೇಮನಾಥ ಶೆಟ್ಟಿಯವರು ರಾಜಕೀಯ ಕ್ಷೇತ್ರದ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಅವರಿಗೆ ಶಾಸಕ, ಸಂಸದ ಸ್ಥಾನ ಸಿಗದಿರಬಹುದು. ಆದರೆ ಅವರೊಬ್ಬ ಸಮರ್ಥವಾದ ರಾಜಕೀಯ ನಾಯಕರಾಗಿ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದಾರೆ. ವಿಶಾಲ ಮನೋಭಾವವನ್ನು ಹೊಂದಿರುವ ಹೇಮನಾಥ ಶೆಟ್ಟಿಯವರಿಗೆ ಮುಂಬರುವ ದಿನಗಳಲ್ಲಿ ಉನ್ನತವಾದ ಹುದ್ದೆ ದೊರೆಯಲಿ ಎಂದು ಆಶಿಸಿದರು.


ಹೇಮನಾಥ ಶೆಟ್ಟಿ,ಅನಿತಾ ಆದರ್ಶ ದಂಪತಿ-ಜಗನ್ನಿವಾಸ್ ರಾವ್: ನ್ಯಾಯವಾದಿ ಜಗನ್ನಿವಾಸ್ ರಾವ್ ಅವರು ಮಾತನಾಡಿ, ಬಹಳ ವರ್ಷಗಳ ಸ್ನೇಹಿತನಾಗಿರುವ ಹೇಮನಾಥ ಶೆಟ್ಟಿಯವರು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದಿದ್ದಾರೆ. ಹೇಮನಾಥ ಶೆಟ್ಟಿ ಮತ್ತು ಅನಿತಾ ಅವರು ಆದರ್ಶ ದಂಪತಿಗಳಾಗಿದ್ದಾರೆ ಎಂದು ಹೇಳಿದರು.


ಸಮಾಜ ಸೇವೆಗೆ ಮತ್ತಷ್ಟೂ ಪ್ರೇರಣೆ ಸಿಕ್ಕಿದೆ-ಹೇಮನಾಥ ಶೆಟ್ಟಿ: ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ನನ್ನ ಪ್ರತಿಯೊಂದು ಕೆಲಸದಲ್ಲೂ ಪತ್ನಿ ಅನಿತಾರವರ ಸಹಕಾರ, ಪ್ರೋತ್ಸಾಹ ಸದಾ ದೊರೆತಿದೆ. ನನ್ನ ಮನೆಯವರ ಪೂರ್ಣ ಬೆಂಬಲ ಹಾಗೂ ಅಭಿಮಾನಿಗಳ, ಹಿತೈಷಿಗಳ ಪ್ರೋತ್ಸಾಹ, ಮಾರ್ಗದರ್ಶನದಿಂದ ಸಮಾಜಸೇವೆಯನ್ನು ಮಾಡಲು ಸಾಧ್ಯವಾಗಿದೆ, 60ನೇ ಹುಟ್ಟು ಹಬ್ಬದ ಈ ಸಮಯ ನನಗೆ ಮತ್ತಷ್ಟು ಸಮಾಜ ಸೇವೆ ಮಾಡಲು ಪ್ರೇರಣೆ ದೊರೆತಿದೆ ಎಂದು ಹೇಳಿ, ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ನಮ್ಮ ಪಾಲಿನ ದೇವರು- ದಿವ್ಯನಾಥ ಶೆಟ್ಟಿ: ಸ್ವಾಗತಿಸಿ ಮಾತನಾಡಿದ ಕಾವು ಹೇಮನಾಥ ಶೆಟ್ಟಿಯವರ ಸಹೋದರ ಕಾವು ದಿವ್ಯನಾಥ ಶೆಟ್ಟಿಯವರು ಮಾತನಾಡಿ, ನಮ್ಮ ಮನೆ ಕೂಡು ಕುಟುಂಬವಾಗಿದ್ದು, ನನ್ನ ಅಣ್ಣ ಹೇಮನಾಥ ಶೆಟ್ಟಿಯವರು ಎಲ್ಲರನ್ನು ಅಕ್ಕರೆಯಿಂದ ನೋಡಿಕೊಂಡು ಬರುತ್ತಿದ್ದಾರೆ. ನಮ್ಮ ಕೂಡು ಕುಟುಂಬದ ಎಲ್ಲರ ಬದುಕಿಗೆ ಪ್ರೇರಕ ಶಕ್ತಿಯಾಗಿದ್ದಾರೆ. ಅವರು ನಮ್ಮ ಪಾಲಿನ ದೇವರು ಎಂದು ಹೇಳಿ, ಅವರಿಗೆ ಮುಂದೆಯೂ ಉತ್ತಮ ಆರೋಗ್ಯ ಮತ್ತು ಸಮಾಜ ಸೇವೆ ಮಾಡುವ ಭಾಗ್ಯ ಒದಗಿ ಬರಲಿ ಎಂದರು.


ಉಪನ್ಯಾಸಕ ಮೆಲ್ವಿನ್ ಡಿ.ಸೋಜರವರು ಮಾತನಾಡಿ, ಹೇಮನಾಥ ಶೆಟ್ಟಿಯವರು ಲಯನ್ಸ್‌ಗೆ ಸೇರಿ ೩ ವರ್ಷದಲ್ಲೇ ಅದ್ಭುತವಾದ ಸಾಧನೆಯನ್ನು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿಯವರು ಮಾತನಾಡಿ, ಹೇಮನಾಥ ಶೆಟ್ಟಿಯವರ ಸರಳ ಜೀವನ, ನಾಯಕತ್ವ ಹಾಗೂ ಸಂಘಟನೆಗಳ ಬಗ್ಗೆ ಮಾತನಾಡಿದರು. ಬೆಳ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜ್‌ನ ಜೀವ ಶಾಸ ವಿಭಾಗದ ಉಪನ್ಯಾಸಕಿ ಕಿಶೋರಿ ಪ್ರೇಮನಾಥ್ ಶೆಟ್ಟಿಯವರು ಸಂದರ್ಭೋಚಿತವಾಗಿ ಮಾತನಾಡಿದರು. ಕೃಷ್ಣರಾಜ್ ಸುಳ್ಯ ನಿರೂಪಿಸಿದರು. ಡಾ. ರಂಜಿತಾ ಶೆಟ್ಟಿ ವಂದಿಸಿದರು. ಸಮಾರಂಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಹಕಾರ ಕ್ಷೇತ್ರದ ಮುಖಂಡರು, ಹೇಮನಾಥ ಶೆಟ್ಟಿಯವರ ಹಿತೈಷಿಗಳು ಭಾಗವಹಿಸಿದರು.

ಗೌರವಾರ್ಪಣೆ: ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನದ ಅಧ್ಯಯನ ಮಂಡಳಿಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಡಾ.ವನಿತಾ ಸುಧಾಕರ್ ಶೆಟ್ಟಿ ಹಾಗೂ ವೈದ್ಯೆಯಾಗಿರುವ ಡಾ.ವಾಸ್ತವಿ ಶೆಟ್ಟಿಯವರು ಎಂಎಸ್‌ಇಎನ್‌ಟಿ ಕೋರ್ಸ್‌ಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ದಂಬೆಕ್ಕಾನ ಸದಾಶಿವ ರೈಯವರು ಈ ಸಂದರ್ಭದಲ್ಲಿ ಗೌರವಿಸಿದರು.


ಬೃಹತ್ ಮಾಲಾರ್ಪಣೆ: ಹೇಮನಾಥ ಶೆಟ್ಟಿ ಮತ್ತು ಅನಿತಾ ಹೇಮನಾಥ ಶೆಟ್ಟಿ ದಂಪತಿಗೆ ಹೇಮನಾಥ ಶೆಟ್ಟಿ ಅಭಿಮಾನಿ ಬಳಗದಿಂದ ಬೃಹತ್ ಮಾಲಾರ್ಪಣೆ ಮಾಡಿ, ಗೌರವಿಸಲಾಯಿತು. ಕಾರ್ಯಕ್ರಮದ ಮೊದಲು ವೇದಿಕೆಗೆ ಹೇಮನಾಥ ಶೆಟ್ಟಿ ಮತ್ತು ಅನಿತಾ ಹೇಮನಾಥ ಶೆಟ್ಟಿಯವರನ್ನು ಮನೆಯವರು ಮತ್ತು ಬಂಧುಗಳು ಕರೆತಂದರು. ಬಳಿಕ ನೂರಾರು ಮಂದಿ ಹೇಮನಾಥ ಶೆಟ್ಟಿಯವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.

ರಂಜಿಸಿದ ಯಕ್ಷ ವೈಭವ
ಗಿರೀಶ್ ರೈ ಕಕ್ಕೆಪದವು ಮತ್ತು ಶ್ರೇಯಾ ಆಲಂಕಾರು ಅವರ ನೇತೃತ್ವದಲ್ಲಿ ಸುಮಾರು ಒಂದೂವರೇ ತಾಸು ನಡೆದ ಯಕ್ಷ ವೈಭವ ಪ್ರೇಕ್ಷಕರ ಮನರಂಜಿಸಿತು.

LEAVE A REPLY

Please enter your comment!
Please enter your name here