ಪುತ್ತೂರು:ಪ್ರೀತಿಯ ಸಹೋದರ ಸಹೋದರಿಯರೇ, ಎಲ್ಲರಿಗೂ ಕ್ರಿಸ್ತ ಜಯಂತಿಯ ಹಾರ್ಧಿಕ ಶುಭಾಶಯಗಳು. ಸಾಮಾನ್ಯ ವಾಡಿಕೆಯಂತೆ, ಕ್ರಿಸ್ಮಸ್ ಅಂದರೆ ಏಸುಕ್ರಿಸ್ತರ ಜನನ ಮತ್ತು ಕ್ರೈಸ್ತ ಧರ್ಮದ ಆಚರಣೆ ಆಗಿದೆ. ಆದರೆ ನಾವು ವಿಶೇಷವಾಗಿ ತಿಳಿಯಬೇಕಾದ ಸಂಗತಿ ಏನೆಂದರೆ, ಕ್ರಿಸ್ಮಸ್ ಸಂದೇಶ ಕೇವಲ ಕ್ರೈಸ್ತ ಧರ್ಮದವರಿಗೆ ಮಾತ್ರ ಸೀಮಿತವಾಗಿರುವ ಸಂದೇಶ ಅಲ್ಲ. ಬದಲಾಗಿ ಇದರಲ್ಲಿರುವ ಜಾಗತಿಕ ಸಂದೇಶವನ್ನು ಅರ್ಥ ಮಾಡಿ ಪೂರಕವಾಗಿ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ನಾನು ಭಾವಿಸುತ್ತೇನೆ. ಯೇಸು ಕ್ರಿಸ್ತರು ಹುಟ್ಟಿದ್ದು ಯಹೂದಿ ಧರ್ಮದಲ್ಲಿ. ಕಾಲಮಾನಗಳಿಗೆ ಅತೀತವಾಗಿರುವ ದೇವರು ಈ ಕಾಲಮಾನದಲ್ಲಿ ಮಾನವನಾಗಿ ಹುಟ್ಟಿ ನಮ್ಮೊಡನೆ ಇರುವ ದೇವರ ಸಾನಿಧ್ಯವೇ ಕ್ರಿಸ್ಮಸ್. ಇದರಿಂದ ಕಾಲಮಾನವೇ ಕ್ರಿಸ್ತಪೂರ್ವ ಹಾಗೂ ಕ್ರಿಸ್ತಶಕ ಎಂಬುದಾಗಿ ಬದಲಾವಣೆಯಾಗಿರುವುದು. ಯಹೂದಿ ಧರ್ಮದಲ್ಲಿ ಹುಟ್ಟಿದರೂ ಕೂಡ ಅವರ ಬೋಧನೆ ಹಾಗೂ ಸಂದೇಶಗಳು ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲಾ ಧರ್ಮಗಳಿಗೂ ಅನ್ವಯಿಸುವ ಸಂದೇಶವಾಗಿದೆ. ಈ ಘಟನೆಯನ್ನು ಸ್ವೀಕಾರ ಮಾಡಿ ವಿಧಿವತ್ತಾಗಿ ಆಚರಣೆ ಮಾಡುವುದರಿಂದ ಇದು ಕ್ರೈಸ್ತ ಧರ್ಮದ ಆಚರಣೆಯಾಗಿರತಕ್ಕದ್ದು. ನಮ್ಮ ಬದುಕಿನ ಸಾಮಾಜಿಕ, ರಾಜಕೀಯ, ನೈತಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳಿಗೆ ಭರವಸೆಯನ್ನು ತುಂಬುವ ಸಂದೇಶವಾಗಿದೆ. ಎಲ್ಲರನ್ನೂ ಸತ್ಕಾರ್ಯಗಳಿಗೆ ಪ್ರೇರೇಪಿಸುವ ಸಂದೇಶವೂ ಆಗಿದೆ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ದೇವರನ್ನು ಮಹಿಮೆ ಪಡಿಸಬೇಕು. ಅದೇ ರೀತಿ, ದೇವರ ಕೃಪೆಯಿಂದ ಪ್ರೇರಿತರಾಗಿ ಶಾಂತಿ ಸಮಾಧಾನದಲ್ಲಿ ಬಾಳಬೇಕು. ಯಾರಿಗೆ ತಾನೇ ಶಾಂತಿ ಸಮಾಧಾನ ಬೇಡವಾಗಿರುವುದು. ಯೇಸು ಕ್ರಿಸ್ತರ ಜನನದ ಸಮಯದಲ್ಲಿ ಮೊಳಗಿದ ಸಂದೇಶ, “ಮಹೋನ್ನತದಲ್ಲಿ ದೇವರಿಗೆ ಮಹಿಮೆ ಭೂಲೋಕದಲ್ಲಿ ದೇವರು ಒಲಿದ ಮಾನವನಿಗೆ ಶಾಂತಿ ಸಮಾಧಾನ”. ಇದು ಎಲ್ಲರಿಗೂ ಪರಮಾನಂದವನ್ನು ತರುವ ಸಂದೇಶ ಹಾಗೂ ಎಲ್ಲರನ್ನೂ ಒಳಗೊಳ್ಳುವ ಸಂದೇಶವಾಗಿದೆ. ಯೇಸು ಕ್ರಿಸ್ತರು ಬೋಧಿಸಿದ ಶಾಂತಿ,ಸಮಾಧಾನ, ಸಹೋದರತ್ವ ಹಾಗೂ ಭ್ರಾತೃತ್ವ ಸಮಸ್ತ ನಾಗರಿಕರಿಗೂ ಎಲ್ಲಾ ಕಡೆಯಲ್ಲೂ ಯಾವಾಗಲೂ ಅನಿವಾರ್ಯವಾದ ಸಂಗತಿಗಳಾಗಿವೆ. ಆಸ್ತಿಕನಿಗೂ ನಾಸ್ತಿಕನಿಗೂ ತನ್ನ ಬದುಕಿಗೆ ಪೂರಕವಾದ ಸಂದೇಶವಾಗಿದೆ. ಇದೆ ಕ್ರಿಸ್ಮಸಿನ ಜಾಗತಿಕ ಮಾನ. ಇದರಿಂದ ಪ್ರೇರಿತರಾಗಿ ವಿಶ್ವ ಬಾಂಧವ್ಯ ಹಾಗೂ ಮಾನವೀಯತೆ ಮೊದಲಾದ ಉದಾತ ಭಾವನೆಗಳನ್ನು ಮೂಡಿಸಲು ನಾವೆಲ್ಲರೂ ಬದ್ಧರಾಗಬೇಕು. ಏಸುಕ್ರಿಸ್ತರು ತನ್ನನ್ನು ತಾನೇ ಬರಿದು ಮಾಡಿ ನರ ಮಾನವನಾಗಿ ಎಲ್ಲರಿಗಾಗಿ ತನ್ನನ್ನು ತಾನೇ ಸಮರ್ಪಿಸಿದ ಮಾದರಿಯಲ್ಲಿ ನಾವು ಕೂಡ ನಮ್ಮ ನಮ್ಮ ಸಣ್ಣತನಗಳನ್ನು ಬದಿಗಿಟ್ಟು ನಮ್ಮಿಂದ ಕೈಲಾದ ಮಟ್ಟಿಗೆ ಇತರರ ಬದುಕಿಗೆ ಕಿಂಚಿತ್ತಾದರು ಪೂರಕವಾಗಿ ಸ್ಪಂದಿಸಲು ಸಿದ್ದರಾಗೋಣ. ಬಸವಣ್ಣನವರು ತನ್ನನ್ನು ತಾನೇ ಅರ್ಥೈಸಿದ ಪ್ರಕಾರ ನಾವು ಕೂಡ ನಮ್ಮನ್ನು ತಿಳಿಯಬೇಕು. “ಎನಗಿಂತ ಕಿರಿಯವರಿಲ್ಲ”. ಈ ವಿಚಾರಧಾರೆ ಒಂದು ವೇಳೆ, ನಮ್ಮನ್ನು ಕಾಡುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಲು ಶಕ್ತಿದಾಯಕ ಎಂದು ಹೇಳಬಯಸುತ್ತೇನೆ. ಕ್ರಿಸ್ತ ಜಯಂತಿಯ ಆಚರಣೆಯ ಸಮಯದಲ್ಲಿ ನಮ್ಮ ನಡೆ ನುಡಿಗಳು ಸ್ವಾರ್ಥದ ಅತಿರೇಕದಿಂದ ಹೊರಬಂದು, ಕ್ರಿಸ್ಮಸ್ ಸಂದೇಶದಿಂದ ಪ್ರೇರಿತವಾಗಿ ಭರವಸೆಯ ನವ ಚೇತನವನ್ನು ತುಂಬಲಿ ಎಂದು ಪ್ರಾರ್ಥಿಸಿ, ಕ್ರೈಸ್ತ ಜಯಂತಿಯ ಹಾಗೂ ಹೊಸ ವರ್ಷದ ಶುಭಾಶಯಗಳನ್ನು ಎಲ್ಲರಿಗೂ ಮಗದೊಮ್ಮೆ ಕೋರುತ್ತಿದ್ದೇನೆ.
-ಅತಿ.ವಂ.ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್, ಧರ್ಮಾಧ್ಯಕ್ಷರು, ಪುತ್ತೂರು ಮಲಂಕರ ಧರ್ಮಪ್ರಾಂತ್ಯ
Home ಇತ್ತೀಚಿನ ಸುದ್ದಿಗಳು ಶಾಂತಿ,ಸಮಾಧಾನ, ಸಹೋದರತ್ವ, ಭ್ರಾತೃತ್ವದಿಂದ ಬಾಳುವುದೇ ಕ್ರಿಸ್ಮಸ್ ಸಂದೇಶ-ಬಿಷಪ್ ಗೀವರ್ಗೀಸ್ ಮಕಾರಿಯೋಸ್