ಪುತ್ತೂರು: ಪ್ರಯಾಣಿಕರ ತಂಗುದಾಣ ಕಕ್ಕೂರು ( ಕಕ್ಕೂರು-ಕೋಡಿ-ಅಡ್ಯತಿಮಾರು) ಅಡ್ಡರಸ್ತೆ ಇದರ ಉದ್ಘಾಟನೆ ಸಮಾರಂಭ ಡಿ.22 ರಂದು ನಡೆಯಿತು.
ಕಕ್ಕೂರು ನುಳಿಯಾಲು ಮಾರ್ಗವಾಗಿ ಚಲಿಸುವ ಕೆ.ಎಸ್.ಆರ್.ಟಿ.ಸಿ ಬಸ್ ನ ಚಾಲಕರು ಹಾಗೂ ನಿರ್ವಾಹಕರು ದೀಪ ಬೆಳಗಿಸುವುದರ ಮೂಲಕ ನೂತನ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಲಾಯಿತು.
ಕಕ್ಕೂರು ಮಾರ್ಗವಾಗಿ ಚಲಿಸುವ ಕೆ.ಎಸ್.ಆರ್.ಟಿ.ಸಿ ಬಸ್ ನ ಚಾಲಕ ಸಂತೋಷ್ ಹಾಗೂ ನಿರ್ವಾಹಕ ಅಮೋಘ ರವರನ್ನು ಕಕ್ಕೂರು ಹಿರಿಯ ಪ್ರಾಥಮಿಕ ಶಾಲೆಯ ಸಂಸ್ಥಾಪಕರಾದ ಗಣಪತಿ ಭಟ್ ಕಕ್ಕೂರು ಶಾಲು ಹೊದಿಸಿ, ಫಲ-ಪುಷ್ಪ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಗಣ್ಯರು, ಊರಿನ ಹಿರಿಯರು, ಬಸ್ ತಂಗುದಾಣದ ಫಲಾನುಭವಿಗಳು ಉಪಸ್ಥಿತರಿದ್ದರು. ಬಸ್ ತಂಗುದಾಣ ನಿರ್ಮಾಣದ ಕೆಲಸ, ಜನರ ಸಮಾಜ ಸೇವೆಯ ಬಗ್ಗೆ ಹರ್ಷ ವ್ಯಕ್ತಪಡಿಸಿ ಶ್ಲಾಘಿಸಿದರು.
ವಸಂತ ಕುಮಾರ್ ಕಕ್ಕೂರು ಸ್ವಾಗತಿಸಿ, ರಾಧಾಕೃಷ್ಣ ಭಟ್ ಕಕ್ಕೂರು ವಂದನಾರ್ಪಣೆಗೈದರು.
ಈ ಸಂದರ್ಭದಲ್ಲಿ ಸಮಾಜಸೇವೆಯನ್ನು ಗಮನದಲ್ಲಿಟ್ಟುಕೊಂಡು ಶ್ರೀ ಜಟಾಧಾರಿ ಸೇವಾ ಸಂಘ ಕಕ್ಕೂರು ಸಮಿತಿಯನ್ನು ಸ್ಥಾಪಿಸಲಾಯಿತು. ರಾಧಾಕೃಷ್ಣ ಭಟ್ ಕಕ್ಕೂರು ರನ್ನು ಅಧ್ಯಕ್ಷರಾಗಿ, ರಾಧಾಕೃಷ್ಣ ಕೋಡಿ ರನ್ನು ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ನೇಮಿಸಲಾಯಿತು.