ಪುತ್ತೂರು: ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯತ್ಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಈ ನಿಟ್ಟಿನಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಭ್ರಷ್ಟಾಚಾರ ರಹಿತವಾಗಿ ಉತ್ತಮ ಅಭಿವೃದ್ದಿ ಕೆಲಸಗಳನ್ನು ನಿರ್ವಹಿಸಿದೆ. ಗ್ರಾಪಂ ಅಧ್ಯಕ್ಷೆ ಹಾಗೂ ಆಡಳಿತ ಮಂಡಳಿ, ಅಧಿಕಾರಿ ವರ್ಗವು ಭ್ರಷ್ಟಾಚಾರಕ್ಕೆ ಯಾವುದೇ ಆಸ್ಪದ ಕೊಡದೆ, ಪಕ್ಷ ಬೇಧವಿಲ್ಲದೆ ಗ್ರಾಮದಲ್ಲಿ ಹಲವು ಅಭಿವೃದ್ದಿಗಳನ್ನು ಮಾಡುವ ಮೂಲಕ ಒಂದು ಮಾದರಿ ಗ್ರಾಮ ಪಂಚಾಯತ್ಯನ್ನಾಗಿ ಮಾಡಿದ್ದಾರೆ ಎಂದು ಒಳಮೊಗ್ರು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸುವ ಮೂಲಕ ಅಭಿನಂದನೆ ಸಲ್ಲಿಸಿದರು.
ಗ್ರಾಮಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ದ.24ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ನಡೆಯಿತು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ನಿತೀಶ್ ಕುಮಾರ್ ಶಾಂತಿವನರವರು, ಒಳಮೊಗ್ರು ಗ್ರಾಮ ಪಂಚಾಯತ್ ಸರಕಾರದ ಅನುದಾನಗಳನ್ನು ಉತ್ತಮವಾಗಿ ಬಳಸಿಕೊಂಡು ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದ ಕೊಡದೆ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಿದೆ. ಮುಖ್ಯವಾಗಿ ಗ್ರಾಪಂ ಅಧ್ಯಕ್ಷೆ ಹಾಗೂ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದವರು ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂದು ಪಂಚಾಯತ್ಗೆ ಅಭಿನಂದನೆ ಸಲ್ಲಿಸಿದರು. ಪಂಚಾಯತ್ನ ಒಳ್ಳೆಯ ಕೆಲಸಗಳನ್ನು ಮೆಚ್ಚಿಕೊಂಡ ಗ್ರಾಮಸ್ಥರು ಚಪ್ಪಾಳೆಯ ಮೂಲಕ ಶ್ಲಾಘನೆ ವ್ಯಕ್ತಪಡಿಸಿದರು.
ಒಳಮೊಗ್ರು ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಬೇಕು
ಒಳಮೊಗ್ರು ಗ್ರಾಮವು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅವಶ್ಯಕತೆ ತುಂಬಾ ಇದೆ. ಕಳೆದ ಹಲವು ವರ್ಷಗಳಿಂದ ಈ ಬೇಡಿಕೆಯನ್ನು ನಾವು ಇಡುತ್ತಾ ಬಂದಿದ್ದೇವೆ ಎಂದು ಕೆ.ಮಹಮ್ಮದ್ ಅಡ್ಕರವರು ತಿಳಿಸಿದರು. ಈ ಬಗ್ಗೆ ಅರೋಗ್ಯ ಇಲಾಖೆಗೆ ಬರೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಗ್ರಾಮಸ್ಥರು ಧ್ವನಿಗೂಡಿಸಿದರು. ನಿತೀಶ್ ಕುಮಾರ್ ಶಾಂತಿವನ ಧ್ವನಿಗೂಡಿಸಿ ಗ್ರಾಮಕ್ಕೆ ಒಂದು ಸುಂದರ ಉದ್ಯಾನವನ ಹಾಗೂ 108 ಆಂಬುಲೆನ್ಸ್ ವ್ಯವಸ್ಥೆ ಆಗಬೇಕು ಎಂದು ತಿಳಿಸಿದರು.
ಆನ್ಲೈನ್ ವ್ಯವಸ್ಥೆಯಿಂದ ಸ್ಕಾಲರ್ಶಿಪ್ಗೆ ತೊಂದರೆ
ಇತ್ತೀಚಿನ ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಅರ್ಜಿ ತುಂಬಲು ಎಲ್ಲವನ್ನೂ ಆನ್ಲೈನ್ ಮಾಡಬೇಕಾಗಿದೆ, ಇದರಿಂದ ಬಹಳಷ್ಟು ವಿದ್ಯಾರ್ಥಿಗಳು ಸ್ಕಾಲರ್ಶಿಪ್ನಿಂದ ವಂಚಿತರಾಗುತ್ತಿದ್ದಾರೆ. ಸರಿಯಾದ ರೀತಿಯಲ್ಲಿ ಆನ್ಲೈನ್ನಲ್ಲಿ ಅರ್ಜಿ ತುಂಬದೇ ಇರುವುದರಿಂದ ಮತ್ತು ಆನ್ಲೈನ್ನಲ್ಲಿ ಅರ್ಜಿ ತುಂಬುವಾಗ ಆಗುವ ಎಡವಟ್ಟುಗಳಿಂದಾಗಿ ಕೆಲವೊಂದು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಬರುತ್ತಿಲ್ಲ ಆದ್ದರಿಂದ ಮೊದಲಿನ ಮ್ಯಾನ್ಯುವೆಲ್ ರೀತಿಯನ್ನೆ ಮತ್ತೆ ತರಬೇಕು ಎಂದು ಶಿಕ್ಷಕ ರಾಮಣ್ಣ ರೈಯವರು ಆಗ್ರಹಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಬುದ್ದಿಮಾಂದ್ಯ ಮಕ್ಕಳಿಗೂ ಸರಕಾರದ ಸವಲತ್ತುಗಳು ಸಿಗುವಂತಾಗಬೇಕು
ದೈಹಿಕವಾಗಿ ವಿಕಲತೆಯನ್ನು ಹೊಂದಿರುವ ವಿಶೇಷ ಚೇತನ ಮಕ್ಕಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಸಿಗುವ ಸವಲತ್ತುಗಳು ಬುದ್ದಿಮಾಂದ್ಯ ಮಕ್ಕಳಿಗೂ ಸಿಗುವಂತಾಗಬೇಕು ಎಂದು ಒತ್ತಾಯಿಸಿದ ಸಂತೋಷ್ ಭಂಡಾರಿ ಚಿಲ್ಮೆತ್ತಾರುರವರು, ದೈಹಿಕವಾಗಿ ವಿಕಲತೆಯನ್ನು ಹೊಂದಿರುವವರನ್ನು ಮಾತ್ರ ಸವಲತ್ತುಗಳು ಸಿಗುತ್ತಿದೆ. ಬುದ್ದಿಮಾಂದ್ಯರಿಗೂ ಕೂಡ ಸರಕಾರದ ಎಲ್ಲಾ ಸವಲತ್ತುಗಳು ಸಿಗಬೇಕು ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ತಿಳಿಸಿದರು.ಅದರಂತೆ ನಿರ್ಣಯಿಸಲಾಯಿತು. ವಿಶೇಷ ಚೇತನ ಮಕ್ಕಳ ಆರೋಗ್ಯ ತಪಾಸಣಾ ಕ್ಯಾಂಪ್ ಪ್ರತಿ ಗ್ರಾಮ ಮಟ್ಟದಲ್ಲಿ ಆಗಬೇಕು, ಪ್ರಸ್ತುತ ಮಂಗಳೂರಿನಲ್ಲಿ ಆಗುತ್ತಿರುವುದರಿಂದ ಅಲ್ಲಿಗೆ ಮಕ್ಕಳನ್ನು ಕರೆದುಕೊಂಡು ಹೋಗಲು ಕಷ್ಟವಾಗುತ್ತಿದೆ ಎಂದು ಶಿಕ್ಷಕ ರಾಮಣ್ಣ ರೈ ತಿಳಿಸಿದರು.
ಅಂಗಡಿ ಕೋಣೆಗಳ ಏಲಂ ಪ್ರಕ್ರಿಯೆ ಏನಾಯ್ತು?
ಪಂಚಾಯತ್ ಕಟ್ಟಡದ ಅಂಗಡಿ ಕೋಣೆಗಳ ಏಲಂ ಪ್ರಕ್ರಿಯೆ ಏನಾಯ್ತು ಎಂದು ಕೆ.ಮಹಮ್ಮದ್ ಅಡ್ಕ, ಅಝೀಜ್ ನೀರ್ಪಾಡಿ, ಮಹಮ್ಮದ್ ಬೊಳ್ಳಾಡಿ ಮತ್ತಿತರರು ಪ್ರಶ್ನಿಸಿದರು. ಇದಕ್ಕೆ ಪಂಚಾಯ್ ಅಭಿವೃದ್ಧಿ ಅಧಿಕಾರಿಯವರು ಸಮರ್ಪಕ ಉತ್ತರ ನೀಡಿದರು. ಈ ಬಗ್ಗೆ ಕೆಲಹೊತ್ತು ಚರ್ಚೆ ನಡೆಯಿತು. ಈ ನಡುವೆ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಮಾತನಾಡಿ, ವರ್ತಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದು ಪಂಚಾಯತ್ನ ಜವಾಬ್ದಾರಿ ಆಗಿದೆ. ಏಲಂ ವಿಚಾರವಾಗಿ ವರ್ತಕರು ತಮ್ಮ ಸಂಕಷ್ಟವನ್ನು ಹೇಳಿಕೊಂಡು ಪಂಚಾಯತ್ಗೆ ಒಂದು ಮನವಿಯನ್ನು ಸಲ್ಲಿಸಿದ್ದರು. ಆ ಮನವಿಯ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಂಡ ಪ್ರಕಾರ, ಪಂಚಾಯತ್ಗೆ ಯಾವುದೇ ನಷ್ಟವಾಗದಂತೆ ನೋಡಿಕೊಂಡು ಪ್ರಸ್ತುತ ಇರುವ ಬಾಡಿಗೆ ದರವನ್ನು ಒಂದು ಪಟ್ಟು ಹೆಚ್ಚಿಸುವ ಮೂಲಕ ಮಾನವೀಯ ದೃಷ್ಟಿಯಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು. ಮುಂದೆ ಯಾವಾಗ ಏಲಂ ಪ್ರಕ್ರಿಯೆ ಮಾಡುತ್ತೀರಿ ಎಂಬ ಪ್ರಶ್ನೆಗೆ ಪಿಡಿಒರವರು ಸಾಮಾನ್ಯ ಸಭೆಯ ನಿರ್ಣಯದಂತೆ ಮುಂದಿನ 3 ವರ್ಷಗಳ ಅವಧಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ ಮುಂದೆ ಏಲಂ ಮಾಡುತ್ತೇವೆ ಎಂದು ತಿಳಿಸಿದರು. ಇದಕ್ಕೆ ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದರು.
ರಸ್ತೆಬದಿ 3 ಮೀಟರ್ ಬಿಟ್ಟು ವಿದ್ಯುತ್ ಕಂಬ ಹಾಕಿ
ವಿದ್ಯುತ್ ಕಂಬ ಹಾಕುವಾಗ ರಸ್ತೆಯ ಡಾಂಬರ್ನ ಬದಿಯಲ್ಲೆ ಕಂಬ ಹಾಕುತ್ತಿದ್ದಾರೆ. ಇದು ಸರಿಯಲ್ಲ ಕನಿಷ್ಟ 3 ಮೀಟರ್ ಅಂತರ ಬಿಟ್ಟು ಕಂಬ ಹಾಕಬೇಕು ಎಂದು ಮಹಮ್ಮದ್ ಬೊಳ್ಳಾಡಿ ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ರಾಜೇಶ್ ರೈ ಪರ್ಪುಂಜರವರು ಯಾರದೋ ಸೈಟ್ಗೆ ವಿದ್ಯುತ್ ತಂತಿ ಅಳವಡಿಸುವಾಗಲೂ ವರ್ಗ ಜಾಗದವರ ಅನುಮತಿಯನ್ನು ಪಡೆದುಕೊಂಡೇ ಕಂಬ ಅಳವಡಿಸಬೇಕು ಎಂದು ತಿಳಿಸಿದರು. ವಿಶ್ವನಾಥ ರೈ ಕೋಡಿಬೈಲ್ರವರು ಮಾತನಾಡಿ, ನನ್ನ ಅನುಮತಿ ಇಲ್ಲದೆ ನಾನು ಇಲ್ಲದ ಸಮಯದಲ್ಲಿ ನನ್ನ ವರ್ಗ ಜಾಗಕ್ಕೆ ಪ್ರವೇಶ ಮಾಡಿ ನನ್ನ ಬೇಲಿಯನ್ನು ಕತ್ತರಿಸಿದ ವಿದ್ಯುತ್ ಸ್ಟೇ ವಯರ್ ಅಳವಡಿಸಿದ್ದಾರೆ. ಇದರಿಂದ ನನಗೆ ತೊಂದರೆಯಾಗಿದೆ ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಎಇಇ ಶಿವಶಂಕರ್ರವರು ಇದನ್ನು ತೆಗೆಸಿಕೊಡುವ ಕೆಲಸ ಮಾಡಿಸುತ್ತೇನೆ ಎಂದರು.
ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಗ್ರಾಮಸ್ಥರು
ಮೆಸ್ಕಾಂ ಗ್ರಾಮಾಂತರ ಉಪವಿಭಾಗದ ಕುಂಬ್ರ ಜೆಇಯಾಗಿರುವ ರವೀಂದ್ರರವರು ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಗ್ರಾಮಸ್ಥರ ಫೋನ್ ಕರೆಗಳನ್ನು ಸ್ವೀಕರಿಸುತ್ತಾರೆ ಮತ್ತು ಶೀಘ್ರ ಸ್ಪಂದನೆ ನೀಡುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಮಹಮ್ಮದ್ ಬೊಳ್ಳಾಡಿ ತಿಳಿಸಿದರು. ಇದೇ ರೀತಿ ಉತ್ತಮ ಸೇವೆಯನ್ನು ನೀಡುತ್ತಿರುವ ಆರೋಗ್ಯ ಇಲಾಖೆಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು. ಅಜಲಡ್ಕ-ದರ್ಬೆತ್ತಡ್ಕ ರಸ್ತೆಯ ಅವ್ಯವಸ್ಥೆಯ ಬಗ್ಗೆ ಸುದ್ದಿ ಬಿಡುಗಡೆ ಬಿತ್ತರಿಸಿದ ವರದಿಗೆ ಶೀಘ್ರ ಸ್ಪಂದನೆ ದೊರೆತಿರುವುದು ಖುಷಿ ತಂದಿದೆ. ಈ ನಿಟ್ಟಿನಲ್ಲಿ ಗ್ರಾಪಂ ಅಧ್ಯಕ್ಷರು ಸುದ್ದಿ ಮಾಧ್ಯಮಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಇತರ ಬೇಡಿಕೆಗಳು
ಸರಕಾರಿ ಬಸ್ಸು ಇದ್ದರೂ ಬೆಳಿಗ್ಗೆ 7.30ರ ಬಳಿಕ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳಿಗೆ ತೆರಳಲು ಬಸ್ಸಿನ ಸಮಸ್ಯೆ ಉಂಟಾಗಿದೆ. ಕೆಲವೊಂದು ಬಸ್ಸನ್ನು ನಿಲ್ಲಿಸುವುದಿಲ್ಲ ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಪರ್ಪುಂಜದಲ್ಲಿ ಪ್ರಯಾಣಿಕರಿಗೆ ಬಸ್ಸು ತಂಗುದಾಣದ ಅಗತ್ಯವಿದೆ. ಗ್ರಾಮಸಭೆಗೆ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಭಾಗವಹಿಸಬೇಕು, ಕೇರಳ ಮಾದರಿಯಲ್ಲೇ ಕರ್ನಾಟಕದಲ್ಲೂ ಬ್ಯಾಟರಿ ವಾಹನಗಳಿಗೆ ಚಾರ್ಜಿಂಗ್ ಪಾಯಿಂಟ್ಗಳನ್ನು ಮೆಸ್ಕಾಂ ನಿರ್ಮಿಸಬೇಕು, ಸರಕಾರಿ ಶಾಲೆಯ ಜಾಗವು ಆಯಾ ಶಾಲೆಯ ಹೆಸರಿನಲ್ಲೇ ಆರ್ಟಿಸಿ ಆಗಬೇಕು ಎಂಬಿತ್ಯಾದಿ ಬೇಡಿಕೆಗಳು ಗ್ರಾಮಸಭೆಯಿಂದ ಕೇಳಿಬಂತು. ಚಾರ್ಜಿಂಗ್ ಪಾಯಿಂಟ್ ನಿರ್ಮಿಸುವಂತೆ ಪುರಂದರ ಶೆಟ್ಟಿ ಮುಡಾಲ ಮನವಿಯನ್ನು ಸಲ್ಲಿಸಿದರು.
ವಿವಿದ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಮಹೇಶ್ ರೈ ಕೇರಿ, ಸಿರಾಜುದ್ದೀನ್ ಕುಂಬ್ರ, ಲತೀಫ್ ಕುಂಬ್ರ, ರೇಖಾ ಯತೀಶ್, ವನಿತ ಕುಮಾರಿ, ಚಿತ್ರಾ ಬಿ.ಸಿ, ಸುಂದರಿ, ಶಾರದಾ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಮನ್ಮಥ ಅಜಿರಂಗಳರವರು ಸ್ವಾಗತಿಸಿ, ಪಂಚಾಯತ್ ಮಾಹಿತಿಯೊಂದಿಗೆ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದರು. ಕಾರ್ಯದರ್ಶಿ ಜಯಂತಿ ನಿರ್ಣಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿಗಳಾದ ಗುಲಾಬಿ, ಜಾನಕಿ, ಕೇಶವ, ಲೋಕನಾಥ ಸಹಕರಿಸಿದ್ದರು.
ಅಧ್ಯಕ್ಷರ ಆಡಳಿತಕ್ಕೆ ಮೆಚ್ಚುಗೆ
ಭ್ರಷ್ಟಾಚಾರ ರಹಿತವಾಗಿ, ಯಾವುದೇ ಪಕ್ಷಬೇಧವಿಲ್ಲದೆ ಎಲ್ಲರನ್ನು ಸಮಾನ ರೀತಿಯಲ್ಲಿ ಕಾಣುವ ಮೂಲಕ ಗ್ರಾಮ ಪಂಚಾಯತ್ ಅಧ್ಯಕ್ಷೆಯವರು ಗ್ರಾಮದ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು ಗ್ರಾಮದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ನಡೆದಿದೆ ಎಂದು ನಿತೀಶ್ ಕುಮಾರ್ ಹೇಳಿದರು. ಮುಂದಿನ ದಿನಗಳಲ್ಲಿ ಗ್ರಾಮಕ್ಕೊಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಸುಂದರ ಉದ್ಯಾನವನ, 108 ಆಂಬುಲೆನ್ಸ್ ವ್ಯವಸ್ಥೆ ಆಗಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು.
‘ಎಲ್ಲಾ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮದ ಅಭಿವೃದ್ಧಿ ಮಾಡಿದ್ದೇವೆ. ಇದೆಲ್ಲವೂ ಗ್ರಾಮಸ್ಥರ ಸಹಕಾರದಿಂದ ಸಾಧ್ಯವಾಗಿದೆ. ಪಂಚಾಯತ್ನೊಂದಿಗೆ ಸಹಕಾರ ನೀಡಿದ ಗ್ರಾಮದ ಸಮಸ್ತ ಜನತೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಭ್ರಷ್ಟಾಚಾರ ಮುಕ್ತ ಪಂಚಾಯತ್ ಆಗಿ ಮೂಡಿಬರಲು ಗ್ರಾಮಸ್ಥರೇ ಕಾರಣರಾಗಿದ್ದಾರೆ. ಗ್ರಾಮಸಭೆಯಲ್ಲಿ ಬಂದ ಬೇಡಿಕೆಗಳನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿಕೊಡುವ ಮೂಲಕ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನ ಪಡುತ್ತೇವೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಅರ್ಪಿಸುತ್ತಾ, ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.’
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ