ಪುತ್ತೂರು: ಮುಳುಗು ಸೇರುವೆ ಎಂದೇ ಹೆಸರಾಗಿದ್ದ ಬೆಟ್ಟಂಪಾಡಿಯ ಚೆಲ್ಯಡ್ಕದಲ್ಲಿ ನಿರ್ಮಾಣವಾಗಲಿರುವ ಹೊಸ ಸೇತುವೆ ನಿರ್ಮಾಣದ ಕಾಮಗಾರಿಗಳಿಗೆ ಡಿ.24ರಂದು ಚಾಲನೆ ನೀಡಲಾಯಿತು.
ರೂ.3ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸೇತುವೆಗೆ ಸುಮಾರು 7 ತಿಂಗಳ ಹಿಂದೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ನಂತರ ಲೋಕಸಭೆ, ವಿಧಾನ ಪರಿಷತ್ ಚುನಾವಣಾ ನೀತಿ ಸಂಹಿತೆ ಹಾಗೂ ಮಳೆಗಾಲದಿಂದಾಗಿ ಸ್ಥಗಿತಗೊಂಡಿದ್ದ ಕಾಮಗಾರಿಗಳಿಗೆ ಮತ್ತೆ ಚಾಲನೆ ನೀಡಲಾಯಿತು.
ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಬೆಟ್ಟಂಪಾಡಿ ನನ್ನ ಗ್ರಾಮವಿದ್ದಂತೆ. ಹೀಗಾಗಿ ಆದ್ಯತೆಯಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಪ್ರಾರಂಭದಲ್ಲಿ ಸ್ವಲ್ಪ ತೊಡಕುಗಳು ಬಂದಿತ್ತು. ಅನುದಾನ ಬೇರೆ ಕಡೆ ಹೋಗುವುದರಲ್ಲಿತ್ತು. ಸಚಿವರಲ್ಲಿ ಮನ ಒಲಿಸಿ, ಒತ್ತಡ ಹೇರಿ ಅನುದಾನ ತರಲಾಗಿದೆ. ಸೇತುವೆ ನಿರ್ಮಿಸುವ ನಮ್ಮ ಗುರಿ ಈಡೇರಿದೆ. ನಾನು ಶಾಸಕನಾಗುವ ಮೊದಲು ಹಾಗೂ ನಂತರ ಸೇತುವೆ ಮುಳುಗಡೆಯಾಗಿ ಸಂಚಾರಕ್ಕೆ ಸಮಸ್ಯೆಯಾಗುವುದನ್ನು ಗಮಿಸಿದ್ದೇನೆ. ಸೇತುವೆ ನಿರ್ಮಿಸುವ ಬೇಡಿಕೆ ಈ ಭಾಗದ ಜನರಲ್ಲಿ ಹಲವು ವರ್ಷಗಳಿಂದ ಇತ್ತು. ಪಕ್ಷಾತೀತವಾಗಿ ಈ ಭಾಗದ ಜನತೆ ಮನವಿ ಸಲ್ಲಿಸಿದ್ದರು ಎಂದರು. ಸೇತುವೆ ನಿರ್ಮಾಣಕ್ಕೆ ಕಳೆದ 7 ತಿಂಗಳ ಹಿಂದೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ಆದರೆ ಲೋಕಸಭಾ ಚುನಾವಣಾ ನೀತಿ ಸಂಹಿತೆ, ನಂತರ ಮಳೆಗಾಲದಿಂದಾಗಿ ವಿಳಂಭವಾಗಿತ್ತು. ಈಗ ಕಾಲ ಕೂಡಿ ಬಂದಿದೆ. ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಗೊಂಡು ಮೇ.ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಚೆಲ್ಯಡ್ಕ ಮುಳುಗು ಸೇತುವೆಗೆ ಮುಕ್ತಿ ನೀಡಬೇಕು ಎಂಬ ಈ ಭಾಗದ ಜನರ 3 ದಶಕಗಳ ಬೇಡಿಕೆ ಈಗ ಈಡೇರಿದೆ. ಈ ಹಿಂದೆ ಶಾಸಕರಾಗಿದ್ದ 5 ಮಂದಿಯಲ್ಲಿಯೂ ಮನವಿ ಸಲ್ಲಿಸಿದ್ದರೂ ಯಾವುದೇ ಫಲಪ್ರದಾಗಿಲ್ಲ. ಅಶೋಕ್ ಕುಮಾರ್ ರೈಯವರು ಶಾಸಕರಾದ ಬಳಿಕ ನಮ್ಮ ಬೇಡಿಕೆಗೆ ಸ್ಪಂಧಿಸಿ ಅನುದಾನ ನೀಡಿದ್ದು ಸುಸಜ್ಜಿತ ಸೇತುಗೆ ನಿರ್ಮಾಣವಾಗಲಿದೆ ಎಂದರು.
ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ನವೀನ್ ರೈ ಚೆಲ್ಯಡ್ಕ ಮಾತನಾಡಿ, ಸೇತುವೆ ನಿರ್ಮಾಣದ ಬಗ್ಗೆ ವಾಸ್ತವ ಸ್ಥಿತಿ ನಮಗೆಲ್ಲಾ ತಿಳಿಸಿದೆ. ಅಪಪ್ರಚಾರಗಳಿಗೆ ಯಾರೂ ಕಿವಿಕೊಡಬಾರದು. ಶಾಸಕ ಅಶೋಕ್ ಕುಮಾರ್ ರೈಯವರ ಪ್ರಯತ್ನದ ಫಲವಾಗಿ ಅನುದಾನ ದೊರೆತಿದ್ದು ನೂತನ ಸೇರುವೆ ನಿರ್ಮಾಣವಾಗಲಿದೆ. ಮಳೆಗಾಲದ ಮೊದಲು ಕಾಮಗಾರಿ ಪೂರ್ಣಗೊಳ್ಳಲಿದೆ. ಇದರ ಜೊತೆಗೆ ಇರ್ದೆ ದೇವಸ್ಥಾನ, ಬೆಟ್ಟಂಪಾಡಿ ದೇವಸ್ಥಾನ ಹಾಗೂ ಭಾಗದ ಗ್ರಾಮೀಣ ರಸ್ತೆಗಳಿಗೆ ಅನುದಾನಗಳ ನೀಡಿದ್ದಾರೆ ಎಂದ ಅವರು ಮಹಾತ್ಮ ಗಾಂಧೀಜಿಯವರ 125 ಜಯಂತಿಯ ಅಂಗವಾಗಿ ಗಾಂಧೀ ಪಾರ್ಕ್ ನಿರ್ಮಾಣ ಹಾಗೂ 2 ಕಿಂಡಿ ಆಣೆಕಟ್ಟು ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.
ವೇ.ಮೂ ದಿನೇಶ್ ಮರಡಿತ್ತಾಯ, ದಾಸ್ಪ್ರಕಾಶ್ ರೈ ಉಪ್ಪಳಿಗೆ, ಕೊರಿಂಗಿಲ ಮಸೀದಿ ಅಧ್ಯಕ್ಷ ಮಹಮ್ಮದ್ ಕುಂಞಿ ಕೊರಿಂಗಿಲ, ಚಂದ್ರಪ್ರಭಾ ಗೌಡ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಇಸಾಖ್ ಸಾಲ್ಮರ, ಪುಡಾ ಸದಸ್ಯ ನಿಹಾಲ್ ಶೆಟ್ಟಿ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಶ್ ರೈ, ಸಹಾಯಕ ಇಂಜಿನಿಯರ್ ಕೌಶಿಕ್, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ಮೊಯಿದು ಕುಂಞಿ, ನಾಗರಾಜ ಭಟ್, ಐತ್ತಪ್ಪ ಪೇರಲ್ತಡ್ಕ, ಪುತ್ತು ಚೆಲ್ಯಡ್ಕ, ಅಬೂಬಕ್ಕರ್ ಕೊರಿಂಗಿಲ, ಹಮೀದ್ ಕೊಮ್ಮೆಮಾರ್, ಸದಾಶಿವ ರೈ ಗುಮ್ಮಟೆಗದ್ದೆ, ಶಶಿಧರ ರೈ ಚೆಲ್ಯಡ್ಕ, ಸುಬ್ಬಣ್ಣ ನಾಯ್ಕ ಚೆಲ್ಯಡ್ಕ, ಜತ್ತಪ್ಪ ಗೌಡ ಗುಮ್ಮಟೆಗದ್ದೆ ಸಹಿತ ಹಲವು ಮಂದಿ ಗ್ರಾಮಸ್ಥರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.