*ಪ್ರತಿಯೊಬ್ಬರ ಸೇವೆಯ ಮೂಲಕ ಸಮುದಾಯ ಭವನ ನಿರ್ಮಾಣವಾಗಲಿ: ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ
*ಎಲ್ಲರೂ ಜೊತೆ ಸೇರಿದಾಗ ಸಂಘಟನೆ ಬೆಳೆಯುತ್ತದೆ: ಯತೀಶ್‌ಕುಮಾರ್
*ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ಸಿಗಲಿ: ಪ್ರದೀಪ್ ಆರ್.ಗೌಡ
*ಸಹಕಾರ ಸಂಘದ ಸದಸ್ಯತ್ವ ಪಡೆದುಕೊಳ್ಳಿ: ಕೇಶವ ಅಮೈ
*ಸಮುದಾಯ ಭವನ ಸಮಾಜದ ಎಲ್ಲರಿಗೂ ಉಪಯೋಗಕ್ಕೆ ಸಿಗಬೇಕು: ಸುರೇಶ್ ಬೈಲು
ಕಡಬ: ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕು ಇದರ ವತಿಯಿಂದ ಕಡಬ ಹೊಸಮಠದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಸಮುದಾಯ ಭವನದಲ್ಲಿ ಸಂಘದ ಆಡಳಿತ ಕಚೇರಿಯ ಉದ್ಘಾಟನೆ ಹಾಗೂ ಹೊಸಮಠದ ನಿವೇಶನದಲ್ಲಿ ಒಕ್ಕಲಿಗ ಗೌಡ ಸಮಾಜ ಬಾಂಧವರ ಕಡಬ ತಾಲೂಕು ಮಟ್ಟದ ವಾರ್ಷಿಕ ಕ್ರೀಡಾಕೂಟ ಡಿ.25ರಂದು ನಡೆಯಿತು.
ಆಡಳಿತ ಕಚೇರಿ ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದ ಆದಿಚುಂಚನಗಿರಿ ಮಂಗಳೂರು ಕಾವೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರು, ಸಮುದಾಯ ಭವನ ಸಮಾಜದ ಸ್ವಾಭಿಮಾನದ ಸಂಕೇತವಾಗಿದೆ. ಈ ನಿಟ್ಟಿನಲ್ಲಿ ಸಮಾಜ ಬಾಂಧವರ ಶ್ರಮ, ಶ್ರದ್ಧೆ, ಭಕ್ತಿ ಮೆಚ್ಚವಂತದ್ದು. ಸಮಾಜ ಬಾಂಧವರ ಮನೆ ಮನೆ ಭೇಟಿ ಅಭಿಯಾನ ಸೇರಿದಂತೆ ಒಕ್ಕಲಿಗ ಗೌಡ ಸೇವಾ ಸಂಘ ಹಾಕಿಕೊಂಡಿರುವ ಯೋಜನೆಗಳು 10 ಸಮಾಜಕ್ಕೆ ಮಾದರಿಯಾಗಿದೆ. ಪ್ರತಿಯೊಬ್ಬರ ಸೇವೆಯ ಮೂಲಕ ಸಮುದಾಯ ಭವನ ಬೃಹತ್ ಆಗಿ ಬೆಳೆಯಲಿ ಎಂದು ನುಡಿದರು. ಸಮುದಾಯ ಭವನ ನಿರ್ಮಾಣ ನಿಟ್ಟಿನಲ್ಲಿ ಆರ್ಥಿಕ ನೆರವಿನ ಜೊತೆಗೆ ಮಾನವ ಶ್ರಮದಾನದ ಸೇವೆಯೂ ಶ್ರೇಷ್ಠವಾದದ್ದು. ಒಂದು ವರ್ಷದಲ್ಲಿ ಇಲ್ಲಿ ಅದ್ಬುತವಾದ ಕೆಲಸ ನಡೆದಿದೆ. ಇದನ್ನು ಸಮಾಜ ಬಾಂಧವರು ಆನಂದ ಚಿತ್ತದಿಂದ ನೋಡಿ ತಮ್ಮ ಕೈಯಿಂದ ಆದಷ್ಟು ಸೇವೆ ಮಾಡಬೇಕು. ಸಮುದಾಯ ಭವನದ ಜೊತೆಗೆ ಹಾಕಿಕೊಂಡಿರುವ ಸಪ್ತ ಯೋಜನೆಗಳು ಪರಿಪೂರ್ಣವಾಗಲಿ ಎಂದು ಹೇಳಿದ ಸ್ವಾಮೀಜಿಯವರು, ಜ.1 ಹಾಗೂ 2ರಂದು ಮಂಗಳೂರು ಕಾವೂರು ಶಾಖಾ ಮಠದಲ್ಲಿ ನಡೆಯುವ ಶಾಖಾ ಮಠದ ರಜತ ಮಹೋತ್ಸವ, ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಹಾಗೂ 18 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ ಎಲ್ಲರೂ ಭಾಗವಹಿಸುವಂತೆ ಹೇಳಿದರು.
ಎಲ್ಲರೂ ಜೊತೆ ಸೇರಿದಾಗ ಸಂಘಟನೆ ಬೆಳೆಯುತ್ತದೆ: ಯತೀಶ್‌ಕುಮಾರ್
ಕಡಬ ತಾಲೂಕು ಒಕ್ಕಲಿಗ ಗೌಡ ಸ್ವಸಹಾಯ ಸಂಘಗಳ ಲಾಂಛನ ಅನಾವರಣಗೊಳಿಸಿ ಮಾತನಾಡಿದ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್‌ಕುಮಾರ್ ಅವರು, ಎಲ್ಲರೂ ಜೊತೆ ಸೇರಿದಾಗ ಸಂಘಟನೆಯೂ ಬೆಳೆಯುವುದರೊಂದಿಗೆ ಸಂಘಟಕರಿಗೆ ಇನ್ನಷ್ಟೂ ಸಮಾಜಮುಖಿ ಕೆಲಸಗಳಿಗೆ ಪ್ರೇರಣೆ ಸಿಗುತ್ತದೆ. ಕಡಬ ತಾಲೂಕು ಒಕ್ಕಲಿಗ ಗೌಡ ಸಮಾಜವು ಹಾಕಿಕೊಂಡಿರುವ ಸ್ವಸಹಾಯ ಸಂಘ ರಚನೆ, ಕ್ರೀಡಾಕೂಟ, ಆರೋಗ್ಯ ವಿಮೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಸೇರಿದಂತೆ ಇನ್ನಿತರ ಯೋಜನೆಗಳು ಯಶಸ್ವಿಯಾಗಲಿ ಎಂದು ಹೇಳಿದ ಅವರು, ಯುವಕರು ಸಣ್ಣ ಪುಟ್ಟ ಕೆಲಸಗಳಿಗೆ ನಗರಗಳಿಗೆ ಹೋಗುವ ಬದಲು ಪೊಲೀಸ್ ಇಲಾಖೆ ಅಥವಾ ಇನ್ನಿತರ ಸರಕಾರಿ ಕೆಲಸಗಳಿಗೆ ಸೇರಬೇಕೆಂದು ಹೇಳಿದರು.
ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ಸಿಗಲಿ: ಪ್ರದೀಪ್ ಆರ್.ಗೌಡ
ಅತಿಥಿಯಾಗಿದ್ದ ಬೆಂಗಳೂರಿನ ಗೋಲ್ಡ್ ಮ್ಯಾನ್ ಸ್ಯಾಚ್ಸ್ ಸಂಸ್ಥೆಯ ಉಪಾಧ್ಯಕ್ಷ ಪ್ರದೀಪ್ ಆರ್.ಗೌಡ ಅರುವಗುತ್ತು ಮಾತನಾಡಿ, ಒಕ್ಕಲಿಗ ಸಮಾಜವು ಮಾನವ ಕುಲಕ್ಕೆ ದಾರಿದೀಪವಾಗಿದೆ. ಒಕ್ಕಲಿಗ ಸಮುದಾಯವು ಪ್ರಪಂಚದ ಎಲ್ಲಾ ಕಡೆಯೂ ಇದೆ. ಒಕ್ಕಲಿಗ ಸಮಾಜಕ್ಕೆ ನಾಯಕತ್ವ ಗುಣವು ಸ್ವಾಭಾವಿಕವಾಗಿ ಬಂದಿದೆ. ಶಿಕ್ಷಣ, ಆರೋಗ್ಯಕ್ಕೆ ಸಮಾಜದಿಂದ ಹೆಚ್ಚಿನ ಒತ್ತು ನೀಡಬೇಕು, ಇಲ್ಲಿ ವಿಶ್ವ ವಿದ್ಯಾನಿಲಯ ಸ್ಥಾಪಿಸುವ ಕನಸು ಇಟ್ಟುಕೊಳ್ಳಬೇಕು ಎಂದು ಹೇಳಿದ ಅವರು, ಸಂಘದ ಸ್ವಂತ ನಿವೇಶನದಲ್ಲಿ 1 ವರ್ಷದಲ್ಲಿ ಸಾಕಷ್ಟು ಕೆಲಸ ನಡೆದಿದೆ. ಸಂಘದ ವತಿಯಿಂದ 42 ಗ್ರಾಮಗಳ 10 ಸಾವಿರ ಮನೆ ಸಂಪರ್ಕ ಮಾಡುವ ಕೆಲಸ ಆಗಿದೆ. ಸಂಘದ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡುವ ಎಂದರು.
ಸಹಕಾರ ಸಂಘದ ಸದಸ್ಯತ್ವ ಪಡೆದುಕೊಳ್ಳಿ: ಕೇಶವ ಅಮೈ
ಕಡಬ ಸ್ಪಂದನಾ ಸಮುದಾಯ ಸಹಕಾರ ಸಂಘದ ಅಧ್ಯಕ್ಷ ಕೇಶವ ಅಮೈ ಮಾತನಾಡಿ, ಒಕ್ಕಲಿಗ ಸ್ಪಂದನಾ ಸಮುದಾಯ ಸಹಕಾರ ಸಂಘವು ಉನ್ನತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. 1500 ಸದಸ್ಯರಿದ್ದು 35 ಲಕ್ಷ ಮಿಕ್ಕಿ ಪಾಲು ಬಂಡವಾಳವಿದೆ. ಸಮಾಜ ಪ್ರತಿಯೊಬ್ಬರು ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು. ಠೇವಣಿ, ಉಳಿತಾಯ ಖಾತೆ, ಚಾಲ್ತಿ ಖಾತೆ ತೆರೆದು ವ್ಯವಹರಿಸಬೇಕು ಎಂದು ಹೇಳಿದ ಅವರು, ಸಂಘದ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಯಾವುದೇ ಫಲಾಪೇಕ್ಷೆ ಇಲ್ಲದೆ ಸಂಘವನ್ನು ಮುನ್ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇತರೆಡೆಯೂ ಸಂಘದ ಶಾಖೆ ತೆರೆಯಲಾಗುವುದು ಎಂದರು.
ಸಮುದಾಯ ಭವನ ಸಮಾಜದ ಎಲ್ಲರಿಗೂ ಉಪಯೋಗಕ್ಕೆ ಸಿಗಬೇಕು: ಸುರೇಶ್ ಬೈಲು
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು ಮಾತನಾಡಿ, ತಾಲೂಕು ಸಮಿತಿ ವತಿಯಿಂದ ವಲಯ, ಗ್ರಾಮ ಸಮಿತಿ ಜೊತೆ ಸೇರಿಕೊಂಡು ಮನೆ ಮನೆ ಭೇಟಿ ಅಭಿಯಾನದ ಮೂಲಕ ತಾಲೂಕಿನ 42 ಗ್ರಾಮಗಳ ಸಮಾಜ ಬಾಂಧವರ ಮನೆಯನ್ನು ಸಂಪರ್ಕ ಮಾಡಿದ್ದೇವೆ. ಈ ಸಮುದಾಯಭವನ ಉಳ್ಳವರ ಸಮುದಾಯಭವನ ಆಗದೆ ಸಮಾಜದ ಪ್ರತಿಯೊಬ್ಬರಿಗೂ ಉಪಯೋಗಕ್ಕೆ ಸಿಗಬೇಕು ಎಂಬ ನಿಟ್ಟಿನಲ್ಲಿ 1500 ಮಂದಿಯ ಸಭಾಭವನದ ಜೊತೆಗೆ 600 ಮಂದಿಯ ಸಣ್ಣ ಸಭಾಭವನವು ನಿರ್ಮಾಣವಾಗಲಿದೆ. ಜೊತೆಗೆ ಕೃಷಿ ಸಲಕರಣೆ ಒದಗಿಸುವ ನಿಟ್ಟಿನಲ್ಲಿ 4000 ಚದರ ಅಡಿಯ ವಾಣಿಜ್ಯ ಸಂಕೀರ್ಣ, ಸಹಕಾರ ಸಂಘದ ಪ್ರಧಾನ ಕಚೇರಿ ಇಲ್ಲಿ ಆರಂಭವಾಗಲಿದೆ. ಒಟ್ಟಿನಲ್ಲಿ 7 ಯೋಜನೆ ಹಾಕಿಕೊಂಡಿದ್ದು ಇದರಲ್ಲಿ 5 ಯೋಜನೆಗಳು ಶೇ.90ರಷ್ಟು ಪೂರ್ಣಗೊಂಡಿದೆ ಎಂದು ಹೇಳಿದರು. ಯುವಕರು ಶಿಕ್ಷಣ ಪಡೆದರೆ ಸಾಲದು ಅವರಿಗೆ ಸಂಸ್ಕಾರ ಸಿಗಬೇಕು. ಸಮಾಜದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಇಲ್ಲಿ ಶಿಕ್ಷಣ, ಉದ್ಯೋಗ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಯೋಜನೆ ಇದೆ. ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಎಲ್ಲರೂ ಸಹಕರಿಸುವಂತೆ ಹೇಳಿದರು.
ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಸುಳ್ಯ ತಾಲೂಕು ಅಧ್ಯಕ್ಷ ಪಿ.ಎಸ್. ಗಂಗಾಧರ ಗೌಡ, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಗೋಪಾಲಕೃಷ್ಣ ಗೌಡ ಪೂಯಿಲ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಂಜೋಡಿ, ಸಂಘಟನಾ ಕಾರ್ಯದರ್ಶಿ ಶಿವರಾಮ ಗೌಡ ಏನೆಕಲ್ಲು, ಯುವ ಸಂಘದ ಅಧ್ಯಕ್ಷ ಪೂಣೇ೯ಶ್ ಗೌಡ ಬಲ್ಯ, ಮಹಿಳಾ ಸಂಘದ ಅಧ್ಯಕ್ಷೆ ವೀಣಾ ರಮೇಶ್ ಕೊಲ್ಲೆಸಾಗು, ಕಾರ್ಯದರ್ಶಿ ಲಾವಣ್ಯ ಮಂಡೆಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುರೇಶ್ ಗೌಡ ಬೈಲುಬಿಳಿನೆಲೆ ಹಾಗೂ ಸೌಮ್ಯ ದಂಪತಿ ಸ್ವಾಮೀಜಿಗೆ ಗೌರವಾರ್ಪಣೆ ಸಲ್ಲಿಸಿದರು. ದಯಾನಂದ ಗೌಡ ಆಲಡ್ಕ, ರಾಧಾಕೃಷ್ಣ ಗೌಡ ಕೆರ್ನಡ್ಕ, ಪ್ರವೀಣ್ ಕುಂಟ್ಯಾನ ಅತಿಥಿಗಳಿಗೆ ವೀಳ್ಯನೀಡಿ ಸ್ವಾಗತಿಸಿದರು. ಸಮುದಾಯ ಭವನದ ಮೇನೇಜರ್ ಅಶೋಕ್ ಶೇಡಿ ಸ್ವಾಗತಿಸಿ, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷ ತಮ್ಮಯ್ಯ ಗೌಡ ವಂದಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು. ಇಚ್ಲಂಪಾಡಿ ತಂಡದವರು ಧ್ಯೇಯ ಗೀತೆ ಹಾಡಿದರು. ಮಧ್ಯಾಹ್ನ ಸಹಭೋಜನ ನಡೆಯಿತು.
ಪ್ರತಿಭಾ ಪುರಸ್ಕಾರ:
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸ್ಪಂದನಾ ಸಮುದಾಯ ಸಹಕಾರ ಸಂಘದ ನಿರ್ದೇಶಕ ಹಿರಿಯಣ್ಣ ಗೌಡ ಅವರು ವಿದ್ಯಾರ್ಥಿಗಳ ಹೆಸರು ವಾಚಿಸಿದರು. ನೇಗಿಲ ಯೋಗಿ ಹಾಗೂ ನೇಗಿಲು ಸ್ವಸಹಾಯ ಸಂಘ ಉದ್ಘಾಟನೆಗೊಂಡಿತು.
ನಾಗತಂಬಿಲ/ಗಣಹೋಮ:
ಬೆಳಿಗ್ಗೆ ನಾಗನಕಟ್ಟೆಯಲ್ಲಿ ನಾಗತಂಬಿಲ ಹಾಗೂ ನೂತನ ಆಡಳಿತ ಕಚೇರಿಯಲ್ಲಿ ಗಣಹೋಮ ನಡೆಯಿತು.
ಕ್ರೀಡಾಕೂಟ:
ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕು ಮಾತೃ ಸಮಿತಿ, ತಾಲೂಕು ಯುವ ಘಟಕ ಹಾಗೂ ತಾಲೂಕು ಮಹಿಳಾ ಘಟಕದ ಆಶ್ರಯದಲ್ಲಿ ಸಂಘದ ಹೊಸಮಠದ ನಿವೇಶನದಲ್ಲಿ ಸಮಾಜ ಬಾಂಧವರ ವಾರ್ಷಿಕ ಕ್ರೀಡಾಕೂಟ ನಡೆಯಿತು. ಸಂಘದ ಗೌರವಾಧ್ಯಕ್ಷ ಗೋಪಾಲಕೃಷ್ಣ ಗೌಡ ಪೂಯಿಲ ಧ್ವಜಾರೋಹಣ ನೆರವೇರಿಸಿದರು. ಕುಂತೂರು ವಲಯ ಉಪ ವಲಯ ಅರಣ್ಯಾಧಿಕಾರಿ, ನಿವೃತ್ತ ಸೈನಿಕ ಜಯಕುಮಾರ್ ಸಣ್ಣಾರ ಕ್ರಿಡಾಕೂಟ ಉದ್ಘಾಟಿಸಿದರು. ಪುರುಷರಿಗೆ ಕಬಡ್ಡಿ,ವಾಲಿಬಾಲ್, ಹಗ್ಗಜಗ್ಗಾಟ, ಕ್ರಿಕೆಟ್, ಮಹಿಳೆಯರಿಗೆ ಕಬಡ್ಡಿ, ತ್ರೋಬಾಲ್, ಹಗ್ಗಜಗ್ಗಾಟ, ಲಗೋರಿ, ೬೦ವರ್ಷ ಮೇಲ್ಪಟ್ಟ ಪುರುಷರಿಗೆ ಗುರಿಗೆ ಗುಂಡು ಹೊಡೆಯುವುದು, ತೆಂಗಿನಕಾಯಿಗೆ ಕಲ್ಲು ಹೊಡೆಯುವುದು ಹಾಗೂ ೬೦ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಅದೃಷ್ಟದ ಆಟ ಸ್ಪರ್ಧೆಗಳು ನಡೆಯಿತು. ಸಂಜೆ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಿತು.