ಪುತ್ತೂರು: ಕಳೆದ ಕೆಲವು ತಿಂಗಳುಗಳಿಂದ ಗ್ರಾಮಸ್ಥರ ನಿದ್ದೆಗೆಡಿಸುತ್ತಿರುವ ಒಂಟಿ ಸಲಗವೊಂದು ಮತ್ತೆ ಕಾಣಿಸಿಕೊಂಡಿವೆ. ಕೆಯ್ಯೂರು ಗ್ರಾಮದ ದೇರ್ಲ ಭಾಗ ಸೇರಿದಂತೆ ಹಲವು ಕಡೆಗಳಲ್ಲಿ ಕೃಷಿ ಹಾನಿಯುಂಟು ಮಾಡುವ ಮೂಲಕ ಕೃಷಿಕರ ಹಾಗೂ ಗ್ರಾಮಸ್ಥರ ನಿದ್ದೆಗೆಡಿಸಿದ ಒಂಟಿ ಸಲಗ ದ.26 ರಂದು ಸಂಜೆ ವೇಳೆ ಸವಣೂರು ಗ್ರಾ.ಪಂ ವ್ಯಾಪ್ತಿಯ ಪಾಲ್ತಾಡು ಪರಿಸರದಲ್ಲಿ ಕಾಣಿಸಿಕೊಂಡಿದೆ. ಆನೆಯನ್ನು ನೋಡಿದ ಗ್ರಾಮಸ್ಥರು ತಮ್ಮ ಮೊಬೈಲ್ ಗಳಲ್ಲಿ ಆನೆ ನಡಿಗೆಯನ್ನು ಚಿತ್ರೀಕರಿಸಿಕೊಂಡಿದ್ಧಾರೆ. ಪಾಲ್ತಾಡು ಶಾಲಾ ಬಳಿಯಿಂದಾಗಿ ಆನೆ ಉಪ್ಪಳಿಗೆ ಭಾಗಕ್ಕೆ ತನ್ನ ಪ್ರಯಾಣ ಬೆಳೆಸಿದೆ ಎಂದು ಈ ಭಾಗದ ಗ್ರಾಮಸ್ಥರು ತಿಳಿಸಿದ್ದಾರೆ. ಆನೆ ಇರುವ ಪ್ರದೇಶಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರು ಯಾವುದೇ ರೀತಿಯ ಭಯ ಪಡುವ ಅಗತ್ಯವಿಲ್ಲ ಎಂದು ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.
ಅಲೆಮಾರಿ ಆನೆ
ಕಳೆದ ಹಲವು ತಿಂಗಳುಗಳಿಂದ ಈ ಒಂಟಿ ಸಲಗ ಕೊಳ್ತಿಗೆ ಭಾಗದಿಂದ ಹಿಡಿದು ಈ ಕಡೆ ಉಪ್ಪಿನಂಗಡಿ ಬೆಳ್ಳಿಪ್ಪಾಡಿ ತನಕ ಹೆಜ್ಜೆ ಹಾಕಿ ಬೆಳ್ಳಿಪ್ಪಾಡಿ ಭಾಗದಿಂದ ತನ್ನ ಜೊತೆಗಾತಿ ಆನೆಯೊಂದರ ಜೊತೆ ಮತ್ತೆ ಸ್ವಸ್ಥಾನಕ್ಕೆ ಸೇರಿಕೊಂಡಿತ್ತು. ಇದೀಗ ಮತ್ತೆ ಒಂಟಿಯಾಗಿ ಹೆಜ್ಜೆ ಹಾಕಲು ಆರಂಭಿಸಿದೆ. ಇದೊಂದು ಅಲೆಮಾರಿ ಆನೆ ಎಂದು ಜನರಾಡಿಕೊಳ್ಳುತ್ತಿದ್ಥಾರೆ.
ಜನರಿಗೆ ಉಪದ್ರ ಕೊಡದ ಗಜರಾಜ
ಈ ಒಂಟಿ ಕಳೆದ ಹಲವು ತಿಂಗಳುಗಳಿಂದ ಈ ಭಾಗದಲ್ಲಿ ಕಾಣಿಸಿಕೊಂಡಿದ್ದರೂ ಯಾರಿಗೂ ಯಾವುದೇ ರೀತಿಯ ತೊಂದರೆ ಮಾಡಿಲ್ಲ . ಅಲ್ಲಲ್ಲಿ ಒಂದಿಷ್ಟು ಕೃಷಿ ಹಾನಿ ಮಾಡಿದ್ದು ಬಿಟ್ಟರೆ ಮನುಷ್ಯರಿಗೆ ತೊಂದರೆ ಮಾಡದ ಗಜರಾಜ ಇದಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಒಟ್ಟಿನಲ್ಲಿ ಆನೆ ಬಂತೊಂದು ಆನೆ ಎಂಬಂತೆ ಈ ಭಾಗದಲ್ಲಿ ಆಗಾಗ ಈ ಒಂಟಿ ಸಲಗ ಕಾಣಿಸಿಕೊಳ್ಳುತ್ತಲೆ ಇದೆ. ಈ ಆನೆಯನ್ನು ಪರ್ಮೆನೆಂಟ್ ಆಗಿ ಒಂದು ರಕ್ಷಿತಾರಣ್ಯಕ್ಕೆ ಕಳುಹಿಸುವ ಕೆಲಸ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಆಗಬೇಕಾಗಿದೆ ಎಂಬುದು ಗ್ರಾಮಸ್ಥರ ಮನವಿಯಾಗಿದೆ.