ಉಪ್ಪಿನಂಗಡಿ: ಸಮತಾ ಸ್ವೀಟ್ಸ್ ಸ್ಟಾಲಿನಲ್ಲಿ ಬೆಂಕಿ ಅವಘಡ- ಸಂಪೂರ್ಣ ಅಗ್ನಿಯ ಕೆನ್ನಾಲಿಗೆಗೆ ತುತ್ತಾದ ಮಳಿಗೆ – ಲಕ್ಷಾಂತರ ರೂಪಾಯಿ ನಷ್ಟ

0

ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದಲ್ಲಿರುವ ಸ್ಥಳೀಯ ಗ್ರಾಮ ಪಂಚಾಯತ್ ಸ್ವಾಮ್ಯದ ವಾಣಿಜ್ಯ ಕಟ್ಟಡದಲ್ಲಿರುವ ಸಮತಾ ಸ್ವೀಟ್ಸ್ ಸ್ಟಾಲ್ ಎಂಬ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಅಂಗಡಿ ಸಂಪೂರ್ಣ ಸುಟ್ಟು ಹೋದ ಘಟನೆ ಗುರುವಾರ ತಡ ರಾತ್ರಿ ಸಂಭವಿಸಿದೆ.


ರತ್ನಾಕರ ಪೈ ಎಂಬವರ ಮಾಲಕತ್ವದ ಈ ಬೇಕರಿಯಲ್ಲಿ 11.45 ರ ಸುಮಾರಿಗೆ ಹೊಗೆ ಕಾಣಿಸಿಕೊಂಡು ಇಡೀ ವಾಣಿಜ್ಯ ಮಳಿಗೆಯೇ ಹೊಗೆಯಿಂದ ಆವೃತಗೊಂಡಿತ್ತು. ತಕ್ಷಣಕ್ಕೆ ನಿರ್ದಿಷ್ಠವಾಗಿ ಯಾವ ಅಂಗಡಿಯಿಂದ ಬೆಂಕಿ ಕಾಣಿಸಿದೆ ಎನ್ನುವುದು ಖಚಿತವಾಗದೆ ನೆಲ ಮಹಡಿಯಲ್ಲಿನ ಅಂಗಡಿಗಳೆಲ್ಲವನ್ನೂ ತೆರೆದು ನೋಡಿದಾಗ ಸಮತಾ ಸ್ವೀಟ್ಸ್ ಸ್ಟಾಲ್ ನಲ್ಲಿ ಬೆಂಕಿಯ ಜ್ವಾಲೆ ಕಾಣಿಸಿತು. ಕ್ಷಣಾರ್ಧದಲ್ಲಿ ಇಡೀ ಬೇಕರಿಯನ್ನು ಆವರಿಸಿದ ಬೆಂಕಿಯ ಕೆನ್ನಾಲೆಗೆಯು ಅಂಗಡಿ ಮಾಲಕರು ಅಸಹಾಯಕತೆಯಿಂದ ನೋಡುತ್ತಿದ್ದಂತೆಯೇ ಇಡೀ ಅಂಗಡಿಯನ್ನು ಆಪೋಷಣಗೈದಿತ್ತು. ಸ್ಟಾಲ್‌ನಲ್ಲಿದ್ದ ಫ್ರಿಡ್ಜ್, ಸಿಹಿತಿಂಡಿಗಳು, ಕಪಾಟುಗಳು ಸುಟ್ಟು ಹೋಗಿದ್ದು, ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸುವಂತಾಗಿದೆ.


ಮಾಹಿತಿ ನೀಡಿ ಸುಮಾರು 40 ನಿಮಿಷಗಳ ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಬೆಂಕಿಯನ್ನು ನಂದಿಸಲಾಯಿತು. ಮತ್ತು ವಾಣಿಜ್ಯ ಮಳಿಗೆಯ ಬೇರೆ ಕೊಠಡಿಗಳಿಗೆ ಬೆಂಕಿ ಪ್ರಸಹರಿಸುವುದನ್ನು ತಡೆಗಟ್ಟಲಾಯಿತು. ಆದಾಗ್ಯೂ ಬೆಂಕಿಯ ತೀವ್ರತೆಗೆ ಸಮೀಪದ ಮೂರ್ನಾಲ್ಕು ಅಂಗಡಿಗಳಿಗೆ ಭಾಗಶಃ ಹಾನಿಯುಂಟಾಗಿದೆ.
ಸಮತಾ ಸ್ವೀಟ್ಸ್ ಸ್ಟಾಲ್ ಗೆ ಬೆಂಕಿ ಹಬ್ಬಿರುವ ಬಗ್ಗೆ ಮಾಹಿತಿ ತಿಳಿದಾಕ್ಷಣ ತಡ ರಾತ್ರಿಯೆನ್ನದೆ ನೂರಾರು ಮಂದಿ ಸ್ಥಳಕ್ಕೆ ಧಾವಿಸಿ ಬಂದಿದ್ದರಾದರೂ ಆ ವೇಳೆ ನಿಯಂತ್ರಣಕ್ಕೆ ಸಿಗದಂತೆ ಪ್ರಸಹರಿಸುತ್ತಿದ್ದ ಬೆಂಕಿಯನ್ನು ಶಮನ ಮಾಡಲು ಅಸಾಧ್ಯವಾಗಿ ಅಸಹಾಯಕರಾಗಿ ನೋಡಬೇಕಾಗಿ ಬಂದಿತ್ತು.


ಉಪ್ಪಿನಂಗಡಿ ಪರಿಸರದಲ್ಲಿ ಇತ್ತೀಚೆಗೆ ನಡೆದ ಐದನೇ ದೊಡ್ಡ ಮಟ್ಟದ ಅಗ್ನಿ ಅನಾಹುತ ಇದಾಗಿದ್ದು, ವಿದ್ಯುತ್ ಸರಬರಾಜಿನಲ್ಲಿ ಸಂಭವಿಸುತ್ತಿರುವ ಅಪಾಯಕಾರಿ ಏರಿಳಿತವೇ ಈ ರೀತಿಯ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ಗೆ ಕಾರಣವೆಂದು ನಾಗರಿಕರು ಆರೋಪಿಸಿದರೆ, ವಿದ್ಯುತ್ ಸರಬರಾಜಿನಲ್ಲಿ ಉಂಟಾಗುವ ಏರಿಳಿತವನ್ನು ನಿಯಂತ್ರಿಸಲು ಸೂಕ್ತ ವ್ಯವಸ್ಥೆಯನ್ನು ಗ್ರಾಹಕರೇ ತಮ್ಮ ತಮ್ಮ ಮನೆ ಅಂಗಡಿಗಳಿಗೆ ಅಳವಡಿಸಬೇಕಾಗಿರುವುದು ಇಲಾಖಾ ನಿಯಮವಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಸುರಕ್ಷತೆಯ ಬಗ್ಗೆ ಇಲಾಖಾ ಮಾನ್ಯತೆ ಪಡೆದ ಅಧಿಕೃತ ಎಲೆಕ್ಟ್ರೀಷಿಯನ್ ಗಳಿಂದಲೇ ತಪಾಸಣೆಗೆ ಒಳಪಡಿಸಬೇಕಾಗಿದೆ ಎಂದು ಮೆಸ್ಕಾಂ ಅಧಿಕಾರಿ ನಿತಿನ್ ಕುಮಾರ್ ತಿಳಿಸಿದ್ದಾರೆ.

ಕಾಡಿದ ಅಗ್ನಿಶಾಮಕ ದಳದ ಕೊರತೆ
ಪೊಲೀಸ್ ಅಧಿಕಾರಿಗಳು, ಪಂಚಾಯತ್ ಜನಪ್ರತಿನಿಧಿಗಳು ಸೇರಿದಂತೆ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರೂ, ಬೆಂಕಿಯ ಕೆನ್ನಾಲಗೆಯನ್ನು ನಿಯಂತ್ರಿಸಲು ಯಾವುದೇ ವ್ಯವಸ್ಥೆ ಇಲ್ಲದೆ ಈ ಸಂದರ್ಭ ಅವರಿಗೆ ಕಷ್ಟಕರವಾಯಿತು. ಪರಿಸರದಲ್ಲಿ ಪದೇ ಪದೇ ವಿದ್ಯುತ್ ಅವಘಡದ ಘಟನೆಗಳು ಸಂಭವಿಸಿದ್ದರೂ ನಾಗರಿಕ ಆಡಳಿತ ವ್ಯವಸ್ಥೆ ಯಾವುದೇ ಪೂರ್ವ ಸಿದ್ದತೆಯನ್ನು ಕೈಗೊಂಡಿಲ್ಲ ಎನ್ನುವುದು ಇಲ್ಲಿ ಸಾಬೀತಾಗುತ್ತಿದೆ. ಸ್ಥಳೀಯ ಪಂಚಾಯತ್ ಆಡಳಿತ ಈ ಹಿಂದೆ ಹಲವು ಬಾರಿ ಉಪ್ಪಿನಂಗಡಿಯಲ್ಲಿ ಅಗ್ನಿಶಾಮಕ ದಳದ ಘಟಕವನ್ನು ಸ್ಥಾಪಿಸಬೇಕೆಂದು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಪೊಲೀಸ್ ಇಲಾಖೆಯಲ್ಲಿಯಾಗಲಿ, ಗೃಹರಕ್ಷಕ ಪಡೆಯಲ್ಲಾಗಲಿ ಅಗ್ನಿ ಅನಾಹುತವನ್ನು ತಡೆಗಟ್ಟಲು ಬೇಕಾದ ಯಾವುದೇ ಪರಿಕರಗಳು ಇಲ್ಲದಿರುವುದರಿಂದ ದೊಡ್ಡ ಮಟ್ಟದ ಅಗ್ನಿ ಅನಾಹುತಗಳಿಗೆ ದೂರದ ಬೆಳ್ತಂಗಡಿ ಅಥವಾ ಪುತ್ತೂರಿನ ಅಗ್ನಿಶಾಮಕ ದಳದ ಮೊರೆ ಹೋಗಬೇಕಿದೆ.

LEAVE A REPLY

Please enter your comment!
Please enter your name here