ಹಿರಿಯರನ್ನು ನೆನೆಯುವುದರಿಂದ ಜೀವನ ಪಾವನವಾಗುತ್ತದೆ: ಕಡಮಜಲು ಸುಭಾಷ್ ರೈ
ಪುತ್ತೂರು: ಸ್ಮರಣೆಗೆ ಮರಣವಿಲ್ಲ ಎಂಬ ಮಾತಿದೆ. ನಾವು ನಮ್ಮ ಜೀವನದಲ್ಲಿ ಹಿರಿಯರನ್ನು ನೆನೆಯುವ ಕಾರ್ಯವನ್ನು ಯಾವಾಗ ಮಾಡುತ್ತೇವೆಯೋ ಆಗ ನಮ್ಮ ಜೀವನ ಪಾವನವಾಗುತ್ತದೆ. ತಂದೆ, ತಾಯಿ, ಗುರು ಹಿರಿಯರನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಎನ್.ಎಸ್.ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಷ್ ರೈ ಹೇಳಿದರು.
ಅವರು ದ.31 ರಂದು ಕುಂಬ್ರ ಹೇಮಾವತಿ ಸಂಕೀರ್ಣದ ಬಳಿ ದಿ.ತ್ಯಾಂಪಣ್ಣ ರೈ ಕುಂಬ್ರ ವೇದಿಕೆಯಲ್ಲಿ ಪಡ್ಡಂಬೈಲುಗುತ್ತು ದಿ.ನಾರಾಯಣ ರೈ ಸ್ಮರಣಾರ್ಥ ಮಂದಾರ ಬಳಗ ಕುಂಬ್ರ ಅರ್ಪಿಸುವ ಮಂದಾರ ಪ್ರಶಸ್ತಿ 2024 ಅನ್ನು ಸಾಧಕರಿಗೆ ಪ್ರದಾನ ಮಾಡಿ ಮಾತನಾಡಿದರು. ಮಂದಾರ ಸುಂದರ ರೈ ಮತ್ತು ಅವರ ಕುಟುಂಬದವರು ತನ್ನ ತಂದೆ ದಿ.ನಾರಾಯಣ ರೈ ಸ್ಮರಣಾರ್ಥ ಅವರ ನೆನಪಲ್ಲಿ ಕೊಡುವ ಈ ಪ್ರಶಸ್ತಿಯು ಅವರ ಹೆಸರನ್ನು ಶಾಶ್ವತವಾಗಿಸುವ ಕೆಲಸ ಮಾಡಿದೆ ಎಂದ ಸುಭಾಷ್ ರೈಯವರು, ಸಮಾಜದ ನಿಜವಾದ ಮೂವರು ಸಾಧಕರಿಗೆ ಈ ಪ್ರಶಸ್ತಿ ಸಂದಿರುವುದು ಖುಷಿ ತಂದಿದೆ ಎಂದು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರು ಮಾತನಾಡಿ, ಒಬ್ಬ ಕಲಾವಿದನಾಗಿದ್ದುಕೊಂಡು ತನ್ನ ತಂದೆಯ ಹೆಸರನ್ನು ಶಾಶ್ವತವಾಗಿಸುವ ಕೆಲಸವನ್ನು ಈ ಪ್ರಶಸ್ತಿ ಕೊಡುವ ಮೂಲಕ ಮಾಡುತ್ತಿದ್ದಾರೆ. ಕಲಾವಿದನ ಮನಸ್ಸು ಎಲ್ಲರಿಗೂ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಾಗ್ಮಿ, ಧಾರ್ಮಿಕ ಪಂಡಿತರಾದ ಕೆ.ಆರ್.ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ, ಸರ್ವ ಜನಾಂಗದ ಶಾಂತಿಯ ತೋಟವೊಂದಿದ್ದರೆ ಅದು ನಮ್ಮ ಕುಂಬ್ರ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ.ಜಾತಿ,ಧರ್ಮ ಬೇಧವಿಲ್ಲದೆ ಎಲ್ಲರೂ ಒಂದೇ ಮನಸ್ಸಿನಿಂದ ಇರುವ ಊರು ನಮ್ಮದಾಗಿದೆ. ಎಷ್ಟೇ ರಾತ್ರಿಯಾದರೂ ಕುಂಬ್ರದಲ್ಲಿ ನಿಲ್ಲಲು, ಇಲ್ಲಿ ಇಳಿದುಕೊಳ್ಳಲು ಯಾರು ಯಾವುದೇ ಭಯಪಡಬೇಕಾಗಿಲ್ಲ ಏಕೆಂದರೆ ಇದೊಂದು ಸೌಹಾರ್ದತೆಯ ಬೀಡಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಕುಂಬ್ರ ವರ್ತಕರ ಸಂಘದ ಗೌರವ ಸಲಹೆಗಾರರಾದ ಪಿ.ಯಂ.ಅಬ್ದುಲ್ ರಹೀಮಾನ್ ಅರಿಯಡ್ಕರವರು ಮಾತನಾಡಿ, ಸಮಾಜಕ್ಕೆ ನಾವು ಮಾಡುವ ಒಳ್ಳೆಯ ಕೆಲಸಗಳಿಂದ ನಮ್ಮ ವ್ಯಕ್ತಿತ್ವ, ಗೌರವ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಮಂದಾರ ಸುಂದರ ರೈ ಮತ್ತು ಅವರ ಬಳಗವು ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ. ಒಬ್ಬ ಕಲಾವಿದನಾಗಿ ತನ್ನ ತಂದೆಯ ಹೆಸರಲ್ಲಿ ಪ್ರಶಸ್ತಿ ಕೊಡುತ್ತಿರುವುದು ಸಮಾಜಕ್ಕೆ ಮಾದರಿ ಕೆಲಸವಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಪುತ್ತೂರು ಅಕ್ಷಯ ಗ್ರೂಪ್ಸ್‌ನ ಮಾಲಕರು, ಉದ್ಯಮಿ ಜಯಂತ ನಡುಬೈಲ್ ಮಾತನಾಡಿ, ಒಬ್ಬ ಕಲಾವಿದನ ಬದುಕು ಯಾವತ್ತೂ ಕಷ್ಟದ ಬದುಕು ಆಗಿರುತ್ತದೆ. ಇಂತಹ ಕಷ್ಟದ ಬದುಕಿನಲ್ಲೂ ಸಮಾಜದ ಒಳ್ಳೆಯ ಮನಸ್ಸುಗಳನ್ನು ಹುಡುಕಿ ಗೌರವಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಈ ನಿಟ್ಟಿನಲ್ಲಿ ಮಂದಾರ ಬಳಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇದೊಂದು ಎಲ್ಲರಿಗೂ ಮಾದರಿ ಕಾರ್ಯಕ್ರಮವಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಮುಕ್ರಂಪಾಡಿ ಆಕರ್ಷಣ್ ಇಂಡಸ್ಟ್ರೀಸ್ ಮಾಲಕರಾದ ಮಹಮ್ಮದ್ ಸಾದಿಕ್ ಹಾಜಿಯವರು ಮಾತನಾಡಿ, ದೇವರು ವರವಾಗಿ ಕೊಟ್ಟ ಭೂಮಿ ಇದ್ದರೆ ಅದು ಕುಂಬ್ರ ಆಗಿದೆ. ಇಲ್ಲಿರುವಷ್ಟು ಒಳ್ಳೆಯ ಮನಸ್ಸುಗಳನ್ನು ನಾವು ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ನನ್ನನ್ನು ಬಹಳಷ್ಟು ಜನ ಪ್ರಶ್ನೆ ಮಾಡಿದ್ದಾರೆ ನೀನ್ಯಾಕೆ ಆ ಕುಂಬ್ರದಲ್ಲಿಯೇ ಇದ್ದೀಯಾ ಅಂತ. ಅವರಿಗೆಲ್ಲಾ ನಾನು ಕೊಟ್ಟ ಉತ್ತರವೆಂದರೆ ನನ್ನ ಹುಟ್ಟು ಇಲ್ಲಾಗಿದೆ. ಇನ್ನು ಸಾವು ಇಲ್ಲೇ ಆಗಲಿ,ಯಾಕೆಂದರೆ ಕುಂಬ್ರದಂತಹ ಊರು ಇನ್ನೊಂದು ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು.
ಕುಂಬ್ರ ಮಾತೃಶ್ರೀ ಅರ್ಥ್‌ಮೂವರ‍್ಸ್ ಮಾಲಕ, ಉದ್ಯಮಿ ಕುಂಬ್ರ ಮೋಹನದಾಸ ರೈಯವರು ಮಾತನಾಡಿ, ಸುಂದರ ರೈಯವರು ಒಬ್ಬ ಅದ್ಭುತ ಕಲಾವಿದ. ನಾವಿಬ್ಬರೂ ಕ್ಲಾಸ್‌ಮೇಟ್, ನಾನೂ ಬಹಳಷ್ಟು ನಾಟಕಗಳಲ್ಲಿ ಬಣ್ಣ ಹಚ್ಚಿದವ. ಒಬ್ಬ ಕಲಾವಿದನಾಗಿ ಮಂದಾರ ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು. ಪ್ರಶಸ್ತಿ ಪುರಸ್ಕೃತರ ಬಗ್ಗೆ ಅಭಿನಂದನಾ ಮಾತುಗಳನ್ನಾಡಿದ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು, ತಂದೆ, ತಾಯಿಯ ನೆನೆಪು ಸದಾ ನಮ್ಮಲ್ಲಿ ಇರಬೇಕು, ತಂದೆಯ ನೆನೆಪು ಯಾವಾಗ ಬರುತ್ತದೆ ಎಂದರೆ ನಾವು ತಂದೆಯಾದಾಗ. ತಂದೆಯ ನೆನಪಿನಲ್ಲಿ ಪ್ರಶಸ್ತಿ ಕೊಡುವ ಕೆಲಸವನ್ನು ಮಾಡಿದ ಸುಂದರ ರೈ ಮಂದಾರ ಹಾಗೂ ಅವರ ಬಳಗ ಒಂದು ಸಮಾಜಕ್ಕೆ ಮಾದರಿಯಾಗುವ ಕೆಲಸವನ್ನು ಮಾಡುತ್ತಿದ್ದಾರೆ. ಅವರಿಗೆ ದೇವರು ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡುವ ಶಕ್ತಿಯನ್ನು ಕೊಡಲಿ ಎಂದು ಹೇಳಿ ಸನ್ಮಾನಿತರನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ಉದ್ಯಮಿ ಯೂಸುಫ್ ಹಾಜಿ ಕೈಕಾರ, ಕುಂಬ್ರ ನಿಶ್ಮಿತಾ ಕಾಂಪ್ಲೆಕ್ಸ್ ಮಾಲಕ ಪುರಂದರ ರೈ ಕೋರಿಕ್ಕಾರು,ಕುಂಬ್ರ ಸ್ಪಂದನಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರ, ಉದ್ಯಮಿ ಅಕ್ಷಿತ್ ರೈ ಕುರಿಕ್ಕಾರ, ಉಪ್ಪಿನಂಗಡಿ ಮಾಂಡೋವಿ ಮೋಟಾರ‍್ಸ್‌ನ ಹರ್ಷ ರೈ ಕುರಿಕ್ಕಾರ, ನಿವೃತ್ತ ಪೊಲೀಸ್ ಅಧಿಕಾರಿ ಬಾಲಚಂದ್ರ ರೈ, ನಿವೃತ್ತ ಸರಕಾರಿ ಅಧಿಕಾರಿ ಪ್ರೇಮಾ ಬಿ.ರೈ, ಕುಂಬ್ರ ಪಿಶ್‌ಲ್ಯಾಂಡ್ ಮಾಲಕ ಪಿ.ಕೆ ಮೊಹಮ್ಮದ್, ಕಲಾಪೋಷಕ ಶಿವಕುಮಾರ್ ಬಾರಿತ್ತಾಯ ಬೆಳಾಲು ಉಪಸ್ಥಿತರಿದ್ದರು. ಮಂದಾರ ಬಳಗದ ಸುಂದರ ರೈ ಮಂದಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉದಯ ರೈ ಮಂದಾರ, ರಾಜ್‌ಮೋಹನ್ ರೈ ನಿರಾಳ, ಮಲ್ಲಿಕಾ ಸುಂದರ ರೈ, ರಾಜೇಶ್ ರೈ ಪರ್ಪುಂಜ, ಅರುಣ್ ರೈ ಬಿಜಳ, ಆಯುಷ್ ರೈ ಮಂದಾರ, ರಕ್ಷಣ್ ರೈ, ಗೋಪಾಲಕೃಷ್ಣ ರೈ, ರಾಧಾಕೃಷ್ಣ ರೈ,ಶ್ರೀನಿವಾಸ ರೈ ಕುಂಬ್ರ, ವಿಜಯ ಕುಮಾರ್ ರೈ ಕೋರಂಗ,ಹರೀಶ್ ರೈ ಮುಗೇರು,ನವ್ಯ ರಕ್ಷಣ್ ರೈ ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು. ಸುಂದರ ರೈ ಮಂದಾರ ವಂದಿಸಿದರು. ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಅಮ್ಮ ಕಲಾವಿದರು ಕುಡ್ಲ ತಂಡದವರಿಂದ ‘ಅಮ್ಮೆರ್’ ಎನ್ನುವ ಸಾಂಸರಿಕಾ ಹಾಸ್ಯಮಯ ತುಳು ನಾಟಕ ಪ್ರದರ್ಶನಗೊಂಡಿತು. ನೂರಾರು ಮಂದಿ ನಾಟಕ ಪ್ರೇಮಿಗಳು ನಾಟಕ ನೋಡಿ ಆನಂದಿಸಿದರು.
ಮಂದಾರ ಪ್ರಶಸ್ತಿ-2024 ಪುರಸ್ಕೃತರು
ಡಾ.ಅಶ್ರಫ್ ಕಮ್ಮಾಡಿ, ವಾಸು ಪೂಜಾರಿ ಗುಂಡ್ಯಡ್ಕ, ಹೇಮಾವತಿ ರೈ
2024 ನೇ ವರ್ಷದ ‘ಮಂದಾರ ಪ್ರಶಸ್ತಿ’ಗೆ ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಡಾ.ಅಶ್ರಫ್ ಕಮ್ಮಾಡಿ, ಕೃಷಿ ಕ್ಷೇತ್ರದಿಂದ ವಾಸು ಪೂಜಾರಿ ಗುಂಡ್ಯಡ್ಕ ಮತ್ತು ಹಿರಿಯ ನಾಗರಿಕರಾಗಿ ಹೇಮಾವತಿ ರೈ ಕುಂಬ್ರರವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಡಮಜಲು ಸುಭಾಷ್ ರೈ ಮತ್ತು ಗಣ್ಯರು ಸಾಧಕರಿಗೆ ಶಾಲು,ಪೇಟಾ,ಹಾರ,ಸ್ಮರಣಿಕೆ,ಪ್ರಶಸ್ತಿಪತ್ರ ಹಾಗೂ ಹಣ್ಣುಹಂಪಲು ನೀಡಿ ಸನ್ಮಾನಿಸಿ ಗೌರವಿಸಿದರು. ತುಳು ಅಕಾಡೆಮಿ ಸದಸ್ಯ,ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಅಭಿನಂದನಾ ಮಾತುಗಳನ್ನಾಡಿದರು.
ಕಡಮಜಲು ಸುಭಾಷ್ ರೈ ದಂಪತಿಗಳ 45 ರ ದಾಂಪತ್ಯ ಸಂಭ್ರಮಾಚರಣೆ
ಕಾರ್ಯಕ್ರಮದಲ್ಲಿ ವಿಶೇಷವಾಗಿ ದಾಂಪತ್ಯದ 45 ರ ಸಂಭ್ರಮಾಚರಣೆಯನ್ನು ಆಚರಿಸಲಾಯಿತು. ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಷ್ ರೈ ಮತ್ತು ಪ್ರೀತಿ ಸುಭಾಷ್ ರೈಯವರ 45 ವರ್ಷಗಳ ಸುಮಧುರ ದಾಂಪತ್ಯ ಜೀವನದ ಆಚರಣೆಯನ್ನು ಕಲಾವಿದರ ಜೊತೆಗೂಡಿ ಆಚರಿಸಲಾಯಿತು. ವಿಶೇಷವಾಗಿ ಮಧುಮಗನಂತೆ ಪೇಟಾ ತೊಟ್ಟ ಸುಭಾಷ್ ರೈ ಮತ್ತು ಪ್ರೀತಿ ರೈಯವರು ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕುಂಬ್ರ ದುರ್ಗಾಪ್ರಸಾದ್ ರೈಯವರು ಈ ನವ ಜೋಡಿಯ ದಾಂಪತ್ಯ ಸಂಭ್ರಮವನ್ನು ನಡೆಸಿಕೊಟ್ಟರು. ಅಮ್ಮ ಕಲಾವಿದರ ಬಳಗ ಹಾಗೂ ಕುಂಬ್ರ ಮಂದಾರ ಬಳಗ ಸೇರಿದಂತೆ ನೂರಾರು ಮಂದಿ ಈ ಸುಮಧುರ ಕ್ಷಣಗಳಿಗೆ ಸಾಕ್ಷಿಯಾದರು. ದಾಂಪತ್ಯ ಬದುಕಿನ 50 ಸಂಭ್ರಮವನ್ನು ಆಚರಿಸುವ ಭಾಗ್ಯವನ್ನು ದೇವರು ಕರುಣಿಸಲಿ ಎಂದು ಸೇರಿದ ಜನರು ಸುಭಾಷ್ ರೈ ದಂಪತಿಗಳಿಗೆ ಶುಭ ಹಾರೈಸಿದರು.
‘ ಮಂದಾರ ಬಳಗದ ವತಿಯಿಂದ ತನ್ನ ತಂದೆಯ ಸ್ಮರಣಾರ್ಥ ಈ ಪ್ರಶಸ್ತಿ ಕೊಡುತ್ತಾ ಬಂದಿದ್ದೇವೆ. ಪ್ರಶಸ್ತಿ ಸ್ವೀಕರಿಸಿದ ಸಾಧಕರಿಗೆ ಹಾಗೂ ನನ್ನ ಮೇಲೆ ಪ್ರೀತಿ ಇಟ್ಟು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.’
ಸುಂದರ ರೈ ಮಂದಾರ, ರಂಗಭೂಮಿ ಕಲಾವಿದರು, ಮಂದಾರ ಬಳಗ ಕುಂಬ್ರ