ಜ.7: ಬೆಳಿಗ್ಗೆ ಹೊರೆಕಾಣಿಕೆ ಸಮರ್ಪಣೆ
ಜ.8: ಬೆಳಿಗ್ಗೆ 9.16ರ ಕುಂಭಲಗ್ನದಲ್ಲಿ ದೈವಗಳ ಪ್ರತಿಷ್ಠೆ, ರಾತ್ರಿ ಪಂಜುರ್ಲಿ, ಮೊಗೇರ ದೈವಗಳ ನೇಮೋತ್ಸವ
ಜ.9ರಂದು: ಬೆಳಿಗ್ಗೆ ಶಿರಾಡಿ ದೈವದ ನೇಮೋತ್ಸವ, ಬಟ್ಟಲು ಕಾಣಿಕೆ
ರಾಮಕುಂಜ: ಪುನರ್ ನಿರ್ಮಾಣಗೊಂಡಿರುವ ಕಡಬ ತಾಲೂಕಿನ ಕೊಯಿಲ ಗ್ರಾಮದ ಬರಮೇಲು ಶ್ರೀ ಶಿರಾಡಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಗ್ರಾಮ ದೈವ ಶ್ರೀ ಶಿರಾಡಿ, ಪಂಜುರ್ಲಿ ಮತ್ತು ಮೊಗೇರ ದೈವಗಳ ಪುನ: ಪ್ರತಿಷ್ಠಾ ಬ್ರಹ್ಮಕಲಶ ಮತ್ತು ನೇಮೋತ್ಸವ ಜ.7, 8 ಮತ್ತು 9ರಂದು ನಡೆಯಲಿದೆ. ಧಾರ್ಮಿಕ, ವೈದಿಕ ಕಾರ್ಯಕ್ರಮಗಳು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಹಿನ್ನೆಲೆ:
ಕೊಯಿಲ ಗ್ರಾಮದ ಬರೆಮೇಲು ಎಂಬಲ್ಲಿ ಶ್ರೀ ಶಿರಾಡಿ ಮತ್ತು ಸಪರಿವಾರ ದೈವಗಳ ಆರಾಧನೆಯು ಅನಾದಿಕಾಲದಿಂದ ನಡೆದುಕೊಂಡು ಬರುತ್ತಿದೆ. ಹಿಂದೆ ಹಿರಿಯರು ಲಭ್ಯವಿದ್ದ ವ್ಯವಸ್ಥೆಯಲ್ಲಿ ಮರದಡಿಯಲ್ಲಿ ಕಲ್ಲು ಹಾಕಿ ಕಾಲ ಕಾಲಕ್ಕೆ ಉತ್ಸವ ನಡೆಸಿಕೊಂಡು ಬರುತ್ತಿದ್ದರು. ಆದರೆ ಕಾರಣಾಂತರಗಳಿಂದ ಆರಾಧನೆ ನಿಂತು ಹೋದಾಗ ಊರಿನ ಜನರಿಗೆ, ಕೃಷಿಗೆ, ಜಾನುವಾರುಗಳಿಗೂ ನಾನಾ ರೀತಿಯ ದೋಷ, ಸಮಸ್ಯೆ ಎದುರಾದವು. ಇದನ್ನು ಮನಗಂಡು ಊರಿನ ಪ್ರಮುಖರು ಸೇರಿಕೊಂಡು 2006ನೇ ಇಸವಿಯಿಂದ ಬರೆಮೇಲು ಧರ್ಣಪ್ಪ ಗೌಡರ ಜಾಗದಲ್ಲಿ ನೂತನ ದೈವಸ್ಥಾನ ನಿರ್ಮಿಸಿ ದೈವಗಳಿಗೆ ಪತ್ತನಾಜೆ, ದೀಪಾವಳಿ ಪರ್ವ, ವಾರ್ಷಿಕ ನೇಮೋತ್ಸವ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ದೈವಸ್ಥಾನದ ಆಚರಣೆ, ವಿಧಿ, ವಿಧಾನಗಳಲ್ಲಿ ಕೆಲವೊಂದು ವ್ಯತ್ಯಾಸಗಳಿವೆ ಎಂದು ದೈವದ ನುಡಿ ಆಯಿತು. ಪ್ರಶ್ನೆ ಚಿಂತನೆಯ ಮೂಲಕ ಇದನ್ನು ಸರಿಪಡಿಸಬೇಕೆಂದು ದೈವದ ನಿರ್ದೇಶನವಾಯಿತು. ಆ ಪ್ರಕಾರ ಊರವರ ಸಲಹೆಯಂತೆ ಆಡಳಿತ ಸಮಿತಿಯ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಯಿತು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ದೈವಜ್ಞ ಟಿ.ಕೆ.ರತ್ನಾಕರನ್‌ರವರ ಮೂಲಕ 6 ದಿನಗಳ ಕಾಲ ನಡೆದ ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ರಾಜನ್ ದೈವವಾಗಿರುವ ಶ್ರೀ ಶಿರಾಡಿ ದೈವಕ್ಕೆ ಮುಖ ಮಂಟಪ ಇರುವ ಚಾವಡಿ ನಿರ್ಮಾಣ ಮಾಡಿ ಆರಾಧಿಸಿಕೊಂಡು ಬರಬೇಕೆಂದು ಕಂಡು ಬಂತು. ಇದೀಗ ಸದ್ರಿ ಜಾಗದಲ್ಲಿ 21 ಸೆಂಟ್ಸ್ ಜಾಗವನ್ನು ದಿ| ಧರ್ಣಪ್ಪ ಗೌಡರ ಮಕ್ಕಳು ದೈವದ ಹೆಸರಿಗೆ ಕರಾರು ಮಾಡಿಕೊಟ್ಟ ನಂತರ ನಾಗೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ಅನುಜ್ಞಾ ಕಲಶ ಮಾಡಿ ದೈವಗಳ ಬಾಲಾಲಯ ಪ್ರತಿಷ್ಠೆಯಾಗಿದೆ. ಸುಮಾರು 20 ಲಕ್ಷ ರೂ.ವೆಚ್ಚದಲ್ಲಿ ಚಾವಡಿ ನಿರ್ಮಾಣಗೊಂಡಿದ್ದು ಜ.7ರಿಂದ 9ರ ತನಕ ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ಪುನ: ಪ್ರತಿಷ್ಠೆ,ಬ್ರಹ್ಮಕಲಶೋತ್ಸವ ನಡೆಯಲಿದೆ.
ಜ.೭ರಂದು ಪೂರ್ವಾಹ್ನ 10 ಗಂಟೆಗೆ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಸಂಜೆ 6.30ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಪ್ರಾಸಾದ ಪರಿಗ್ರಹ, ಸ್ವಸ್ತಿ| ಪುಣ್ಯಾಹವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ಮಹಾಸುದರ್ಶನ ಹೋಮ, ಪ್ರೇತಾವಾಹನೆ, ಭಾವಾಕರ್ಷಣೆ, ಉಚ್ಚಾಟನೆ, ವಾಸ್ತುಹೋಮ, ವಾಸ್ತುಪೂಜಾ ಬಲಿ, ಪ್ರಾಕಾರ ದಿಕ್ಬಲಿ, ಪ್ರಸಾದ ವಿತರಣೆ ನಡೆಯಲಿದೆ.
ಜ.8ರಂದು ಬೆಳಿಗ್ಗೆ 7ರಿಂದ ಮಹಾಗಣಪತಿ ಹೋಮ, ಪಂಚವಿಂಶತಿ ಕಲಶ ಪೂಜೆ ನಡೆದು 9.16ರ ಕುಂಭಲಗ್ನ ಶುಭ ಮುಹೂರ್ತದಲ್ಲಿ ರಾಜನ್ ದೈವ ಶ್ರೀ ಶಿರಾಡಿ, ಪಂಜುರ್ಲಿ ಹಾಗೂ ಮೊಗೇರ ದೈವಗಳ ಪ್ರತಿಷ್ಠೆ ನಡೆಯಲಿದೆ. ಬಳಿಕ ಪಂಚ ವಿಂಶತಿ ಸಾನಿಧ್ಯ, ಕಲಶಾಭಿಷೇಕ, ತಂಬಿಲ ಸೇವೆ, ಬ್ರಾಹ್ಮಣ ಆರಾಧನೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ರಿಂದ ಶ್ರೀ ಶಿರಾಡಿ, ಪಂಜುರ್ಲಿ ಹಾಗೂ ಮೊಗೇರ ದೈವಗಳ ಭಂಡಾರ ತೆಗೆಯುವುದು, ರಾತ್ರಿ 7.30ರಿಂದ ಪಂಜುರ್ಲಿ ಮತ್ತು ಮೊಗೇರ ದೈವಗಳ ನೇಮೋತ್ಸವ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.
ಜ.9ರಂದು ಬೆಳಿಗ್ಗೆ 7ರಿಂದ ಶ್ರೀ ಶಿರಾಡಿ ದೈವದ ನೇಮೋತ್ಸವ, ಪೂರ್ವಾಹ್ನ 11ರಿಂದ ಬಟ್ಟಲು ಕಾಣಿಕೆ, ಮಧ್ಯಾಹ್ನ ಅನ್ನಸಂತರ್ಪಣೆ, ಬಿಂದಾರ್ಪಣೆ ನಡೆಯಲಿದೆ. ಸಂಜೆ 6.30ರಿಂದ ಶ್ರೀ ಗುಳಿಗ ದೈವದ ನುಡಿಕಟ್ಟು ಆಗಿ ವಳಕಡಮದ ಕುಮಾರಧಾರಾ ನದಿ ತಟದವರೆಗೆ ಊರ ಮಾರಿ ಅಟ್ಟುವ ಕಾರ್ಯಕ್ರಮ ನಡೆಯಲಿದೆ. ಜ.10ರಂದು ಬೆಳಿಗ್ಗೆ ಶುದ್ಧ ತಂಬಿಲ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.