’ಕಂಡವರ ಮನದಲ್ಲಿ ಶ್ರೀ ವಿಶ್ವೇಶತೀರ್ಥರು’ ಟಿ.ನಾರಾಯಣ ಭಟ್ ರಾಮಕುಂಜರವರ ಕೃತಿ ಬಿಡುಗಡೆ

0

ರಾಮಕುಂಜ: ಟಿ.ನಾರಾಯಣ ಭಟ್ ರಾಮಕುಂಜ ಇವರು ಬರೆದಿರುವ ’ಕಂಡವರ ಮನದಲ್ಲಿ ಶ್ರೀ ವಿಶ್ವೇಶತೀರ್ಥರು, ಭಾವಾಂತರಂಗದ ನುಡಿಬಿಂದುಗಳು’ ಎಂಬ ಕೃತಿ ಇತ್ತೀಚೆಗೆ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆದ ಶ್ರೀ ವಿಶ್ವೇಶತೀರ್ಥರ ಪಂಚಮ ಆರಾಧನಾ ಮಹೋತ್ಸವದಲ್ಲಿ, ಉಡುಪಿ ಪೇಜಾವರ ಮಠಾಧೀಶ ಡಾ. ಶ್ರೀ ವಿಶ್ವ ಪ್ರಸನ್ನತೀರ್ಥರ ದಿವ್ಯ ಹಸ್ತದಿಂದ ಬಿಡುಗಡೆಗೊಂಡಿತು. ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಕುರಿತು ನಾರಾಯಣ ಭಟ್‌ರವರು ಬರೆದ 7ನೆಯ ಕೃತಿ ಆಗಿದೆ.


ಕೃತಿ ಬಿಡುಗಡೆಗೊಳಿಸಿದ ಡಾ| ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಆಶೀರ್ವಚನ ನೀಡಿ, ಶ್ರೀ ವಿಶ್ವೇಶತೀರ್ಥರ ಗರಡಿಯಲ್ಲಿ ಪಳಗಿದ, ಅವರದೇ ಹುಟ್ಟೂರ ಹಾಗೂ ಕಲಿತ ಸಂಸ್ಥೆಯಲ್ಲಿ ಮುಖ್ಯಶಿಕ್ಷಕರಾಗಿ ದುಡಿದ ನಾರಾಯಣ ಭಟ್ ಅವರಿಗೆ ತನ್ನ ಗುರುಗಳ ಬಗ್ಗೆ ಎಷ್ಟು ಬರೆದರು ಸಾಲದೆಂಬಂತೆ ಮತ್ತೆ ಮತ್ತೆ ಕೃತಿಗಳನ್ನು ರಚಿಸುತ್ತಿರುವುದು ಇವರ ಗುರು ಭಕ್ತಿಯ ದ್ಯೋತಕವೆನಿಸಿದೆ. ಮಕ್ಕಳಿಗಾಗಿ ಹಾಗೂ ಸಮಾಜಕ್ಕಾಗಿ ಸಲ್ಲಿಸುತ್ತಿರುವ ಸಾಹಿತ್ಯ, ಶೈಕ್ಷಣಿಕ, ಸಮಾಜ ಸೇವೆ ಆದರ್ಶ ಪ್ರಾಯವಾಗಿದೆ. ಸುಮಾರು ಅರ್ಧ ಶತಕದಷ್ಟು ಮಕ್ಕಳ ಕೃತಿಗಳನ್ನು ರಚಿಸುತ್ತಾ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿರುತ್ತಾರೆ ಹಾಗೂ ಗುರುಗಳ ಆರಾಧನಾ ಮಹೋತ್ಸವದಲ್ಲಿ ಶ್ರೀ ವಿಶ್ವೇಶತೀರ್ಥರ ಶೈಕ್ಷಣಿಕ ಕಾಳಜಿಯ ಬಗೆಗೆ ವಿಶಿಷ್ಟ ಉಪನ್ಯಾಸವಿತ್ತು ಮನಮುಟ್ಟುವಂತೆ ತಿಳಿಸಿರುತ್ತಾರೆ ಎಂದು ನುಡಿದರು.


ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಡಾ| ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಕೃತಿಯು ಶ್ರೀ ವಿಶ್ವೇಶತೀರ್ಥ ಶ್ರೀಗಳ ಸಮಗ್ರ ವ್ಯಕ್ತಿತ್ವ ಚಿತ್ರಣವನ್ನು ಈ ಕಿರು ಪ್ರತಿಯಲ್ಲಿ ಹಿಡಿದಿಟ್ಟಿರುವುದು ದೊಡ್ಡ ಸಾಹಸವೆಂದು ಮೆಚ್ಚುಗೆಯ ನುಡಿಗಳನ್ನಾಡಿ ಶುಭ ಹಾರೈಸಿದರು. ದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಶ್ರೀನಿವಾಸ ವರಖೇಡಿ ಆಚಾರ್ಯರು ಶ್ರೀ ವಿಶ್ವೇಶತೀರ್ಥ ಗುರುಗಳನ್ನು ಹತ್ತಿರದಿಂದ ಕಂಡ ನಾರಾಯಣ ಭಟ್‌ರವರು ಅವರ ವ್ಯಕ್ತಿತ್ವವನ್ನು ಹಲವು ಕೋನಗಳಲ್ಲಿ ಕಂಡು ಚಿತ್ರಿಸುವ ಮೂಲಕ ಮುಂದಿನ ತಲೆಮಾರಿಗೆ ಅಧ್ಯಯನ ಯೋಗ್ಯ ಕಾರ್ಯವನ್ನು ಮಾಡಿದ್ದಾರೆಂದು ಸಂತಸ ವ್ಯಕ್ತಪಡಿಸಿದರು. ಲೇಖಕ ನಾರಾಯಣ ಭಟ್ ಅವರನ್ನು ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಯವರು ಶಾಲು ಹೊದಿಸಿ ಫಲಮಂತ್ರಾಕ್ಷತೆ ಸ್ಮರಣಕೆಯನ್ನು ನೀಡಿ ಆಶೀರ್ವದಿಸಿದರು

LEAVE A REPLY

Please enter your comment!
Please enter your name here