ʼಸಾಹಿತ್ಯದ ನಡಿಗೆ ಗ್ರಾಮದ ಕಡೆಗೆʼ ಕೆದಂಬಾಡಿಯಲ್ಲಿ ಮೇಳೈಸಿದ ಗ್ರಾಮ ಸಾಹಿತ್ಯ ಸಂಭ್ರಮ

0

ನಿತ್ಯ, ನಿರಂತರ ಚಿಂತನೆ ಮತ್ತು ಓದುವಿಕೆಯಿಂದ ಸಾಹಿತ್ಯ ಬರವಣಿಗೆ ಸಾಧ್ಯ: ಕಡಮಜಲು ಸುಭಾಷ್ ರೈ

ಪುತ್ತೂರು: ಬರೆಯುವುದೇ ಸಾಹಿತ್ಯ. ಓದು ಬರೆ, ಓದು ಬರೆ ಆಗ ನೀನು ಆಗುತ್ತೀ ಸಾಹಿತಿ ಎಂಬಂತೆ ನಾವು ನಿತ್ಯ ನಿರಂತರವಾಗಿ ಚಿಂತನೆ ಮಾಡುವುದರಿಂದ ಮತ್ತು ಓದುವುದರಿಂದ ಒಳ್ಳೆಯ ಸಾಹಿತ್ಯವನ್ನು ಬರೆಯಬಹುದಾಗಿದೆ. ಸಾಹಿತಿ ಸತ್ತರೂ ಸಾಹಿತ್ಯಕ್ಕೆ ಸಾವಿಲ್ಲ. ಆದ್ದರಿಂದ ನಾವೆಲ್ಲರೂ ಸಾಹಿತ್ಯದ ಕಡೆಗೆ ಒಲವು ತೋರಿಸುವ, ಗ್ರಾಮ ಸಾಹಿತ್ಯ ಸಂಭ್ರಮ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಚಿಗುರನ್ನು ಅರಳಿಸಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಹೋಬಳಿ ಘಟಕದ ಅಧ್ಯಕ್ಷರಾದ ಕಡಮಜಲು ಸುಭಾಸ್ ರೈ ಹೇಳಿದರು.


ಅವರು ಜ.04 ರಂದು ತಿಂಗಳಾಡಿಯಲ್ಲಿರುವ ಕೆದಂಬಾಡಿ ಗ್ರಾ.ಪಂ ಸಭಾಂಗಣದಲ್ಲಿ ನಡೆದ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು, ತಾಲೂಕು ಘಟಕದ ನೇತೃತ್ವದಲ್ಲಿ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು , ಗ್ರಾಮ ಪಂಚಾಯತ್ ಕೆದಂಬಾಡಿ ಹಾಗೂ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯೋಜನೆಯಲ್ಲಿ, ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿಯವರ ಪೋಷಕತ್ವದಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದ ಅಂಗವಾಗಿ ಗ್ರಾಮ ಸಾಹಿತ್ಯ ಸಂಭ್ರಮ 2024 ಸರಣಿ ಕಾರ್ಯಕ್ರಮ 19ರ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ಸಾಧಕರನ್ನು ಸನ್ಮಾನಿ ಗೌರವಿಸುವುದರಿಂದ ನಮ್ಮ ಗೌರವ ಹೆಚ್ಚಾಗುತ್ತದೆ ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದ ಸುಭಾಷ್ ರೈಗಳು, ಕ.ಸಾ.ಪ.ಪುತ್ತೂರು ತಾಲೂಕು ಘಟಕ ಹಮ್ಮಿಕೊಂಡ ಈ ಗ್ರಾಮ ಸಾಹಿತ್ಯ ಸಂಭ್ರಮ ರಾಜ್ಯಕ್ಕೆ ಮಾದರಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು.


ಸಮಾರಂಭದ ಸರ್ವಾಧ್ಯಕ್ಷರು ಮತ್ತು ಸಮಾರೋಪ ಭಾಷಣಕಾರರಾದ ಆಯಿಷತ್ ಮುನೀಷ ಹಾಗು ಪ್ರತಿಭಾ ಎನ್ ರವರನ್ನು ಕನ್ನಡ ಪೇಟ, ಕನ್ನಡ ಶಾಲನ್ನು ಜಯಾನಂದ ಮಿತ್ರಂಪಾಡಿಯವರು ತೊಡಿಸಿ ಮೆರವಣಿಗೆ ಮೂಲಕ ಮುಖ್ಯ ವೇದಿಕೆಗೆ ಕರೆತರಲಾಯಿತು. ಕನ್ನಡ ಭುವನೇಶ್ವರಿಗೆ ಎಲ್ಲಾ ಗಣ್ಯರು ಪುಷ್ಪಾರ್ಚನೆಗೈದು , ಕೆದಂಬಾಡಿ ಶಾಲಾ ವಿದ್ಯಾರ್ಥಿನಿಯರ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕೆದಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಲಕ್ಷ್ಮಿ. ಬಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆದಂಬಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ, ಸಿಆರ್‌ಪಿ ಶಶಿಕಲಾರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರುರವರು, ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಯಾಕೆ ಬಂದಿದೆ ಎಂಬ ಬಗ್ಗೆ ತಿಳಿಸಿದರು. ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಒಲವು ಹೆಚ್ಚಾಗಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಂಡು ಗ್ರಾಮ ಸಾಹಿತ್ಯ ಸಂಭ್ರಮ ಮಾಡುತ್ತಿದ್ದೇವೆ ಎಂಬ ಬಗ್ಗೆ ತಿಳಿಸಿದರು.

ವೇದಿಕೆಯಲ್ಲಿ ಕೃಷಿಕರಾದ ಜಯಾನಂದ ರೈ ಮಿತ್ರಂಪಾಡಿ ಉಪಸ್ಥಿತರಿದ್ದರು. ತಿಂಗಳಾಡಿ ಶಾಲಾ ಮುಖ್ಯಗುರು ವಿಜಯ ಕೆ ಸ್ವಾಗತಿಸಿದರು. ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾದ ನಾರಾಯಣ್ ಕುಂಬ್ರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚಿಗುರೆಲೆ ಸಾಹಿತ್ಯ ಬಳಗದ ಸದಸ್ಯೆ ರಶ್ಮಿತಾ ಸುರೇಶ್ ಜೋಗಿಬೆಟ್ಟು ವಂದಿಸಿದರು.


ಸಭಾ ಕಾರ್ಯಕ್ರಮದ ಬಳಿಕ ಯಶಸ್ ಅಧ್ಯಯನ ಕೇಂದ್ರದ ಪ್ರೇರಕ ಭಾಷಣಕಾರರು, ತರಬೇತುದಾರರಾದ ದರ್ಶನ್ ಗರ್ತಿಕೆರೆಯವರಿಂದ ಕನ್ನಡದಲ್ಲೂ ಐ ಎ ಎಸ್, ಐ ಪಿ ಎಸ್ ಬರೆಯಿರಿ ಕುರಿತು ಉಪನ್ಯಾಸ ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪುತ್ತೂರು ಇದರ ಮೇಲ್ವಿಚಾರಕರಾದ ಆರತಿ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಬಾಲಕವಿ ಗೋಷ್ಠಿ,ಬಾಲಕಥಾ ಗೋಷ್ಠಿ,ನನ್ನ ಆಪ್ತ ಮಿತ್ರ ಗೋಷ್ಠಿ, ನನ್ನ ನೆಚ್ಚಿನ ಶಿಕ್ಷಕ, ಶಿಕ್ಷಕಿ ಲೇಖನ ವಾಚನ,ಪ್ರವಾಸ ಕಥನ ಗೋಷ್ಠಿಗಳ ಅಧ್ಯಕ್ಷತೆಯನ್ನು ತಿಂಗಳಾಡಿ ಶಾಲೆ ಸಹಶಿಕ್ಷಕರಾದ ರೇಣುಕಾ ಮತ್ತು ಕೆದಂಬಾಡಿ ಶಾಲೆ ಸಹಶಿಕ್ಷಕರಾದ ಚೈತ್ರಾ, ಹಿರಿಯ ಸಾಹಿತಿಗಳು ಮಧು ಪ್ರಪಂಚ ಪತ್ರಿಕೆಯ ಸಂಪಾದಕರಾದ ನಾರಾಯಣ ರೈ ಕುಕ್ಕುವಳ್ಳಿ ವಹಿಸಿದ್ದರು.ಮಧ್ಯಾಹ್ನ ತಿಂಗಳಾಡಿ ಮತ್ತು ಕೆದಂಬಾಡಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು . ಮಧ್ಯಾಹ್ನ ನಂತರ ಸಮಾರೋಪ ಭಾಷಣವನ್ನು ತಿಂಗಳಾಡಿ ಶಾಲೆಯ ಕು. ಪ್ರತಿಭಾ ಎನ್ ಮಾಡಿದರು. ಗಿರೀಶ್ ಕೊಯಿಲ ಮತ್ತು ಶ್ರೀಶಾ ವಾಸವಿ ತುಳುನಾಡ್ ಕಾರ್ಯಕ್ರಮ ನಿರೂಪಿಸಿ,ರಶ್ಮಿತಾ ಸುರೇಶ್ ಜೋಗಿಬೆಟ್ಟು ವಂದಿಸಿದರು. ವಿವಿಧ ಗೋಷ್ಠಿಗಳನ್ನು ಕು. ಚೈತನ್ಯ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಗಿರೀಶ್ ಕೊಯಿಲ ಮತ್ತು ಶ್ರೀಶಾ ವಾಸವಿ ತುಳುನಾಡ್ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಜನ ಪ್ರತಿನಿಧಿಗಳು, ವಿವಿಧ ಶಾಲಾ ವಿದ್ಯಾರ್ಥಿಗಳು ಹಾಗೂ ಮುಖ್ಯಸ್ಥರು, ಊರಿನ ಗಣ್ಯರು ಉಪಸ್ಥಿತರಿದ್ದರು.


ಸಾಧಕರಿಗೆ ಸನ್ಮಾನ
ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಶಾರದಾ ಭಟ್ ಕೊಡೆಂಕಿರಿ -ಪುಸ್ತಕ ಪರಿಚಾರಿಕೆ, ಸಾಹಿತ್ಯ ಕ್ಷೇತ್ರ, ಕರುಣಾಕರ ಸಿ. ಎಚ್ -ಮಾಧ್ಯಮ ಕ್ಷೇತ್ರ ,ಅರುಣ್ ಕುಮಾರ್ ಆಳ್ವ ಬೋಳೋಡಿ -ಕೃಷಿ, ಸಿಶೇ. ಕಜೆಮಾರ್ -ಸಾಹಿತ್ಯ, ಪತ್ರಿಕೋದ್ಯಮ, ಚಂದ್ರ. ಐ -ದೈವಾರಾಧನೆ ಕ್ಷೇತ್ರ, ರವಿರಾಮ್ ಭಟ್ ಸನ್ಯಾಸಿಗುಡ್ಡೆ -ನಾಟಿ ವೈದ್ಯರು, ವೀಣಾ ಬಲ್ಲಾಳ್ ಬೀಡು -ಹೈನುಗಾರಿಕೆ,ಡಾ. ರಾಜಾರಾಮ್ ಚಡಗ -ವೈದ್ಯಕೀಯ, ಪುಷ್ಪ ಬೋಳೋಡಿ -ಸ್ವಚ್ಛತಾ ಕಾರ್ಯಕರ್ತರವರನ್ನು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಹೋಬಳಿ ಘಟಕದ ಅಧ್ಯಕ್ಷರಾದ ಕಡಮಜಲು ಸುಭಾಸ್ ರೈರವರು ಕನ್ನಡದ ಪೇಟ ತೊಡಿಸಿ, ಶಾಲು ಹಾಕಿ, ಪುಸ್ತಕ ಉಡುಗೊರೆ ನೀಡಿ ಅಭಿನಂದಿಸಿದರು.

ರಾಜ್ಯದಲ್ಲೇ ಪ್ರಥಮ ಪ್ರಯೋಗ
ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದಿಂದ ಇಂತಹ ಗ್ರಾಮ ಸಾಹಿತ್ಯ ಸಂಭ್ರಮ ರಾಜ್ಯದಲ್ಲೇ ಪ್ರಥಮ ಪ್ರಯೋಗ ಆಗಿದೆ. ಈಗಾಗಲೇ 19 ಸರಣಿಗಳನ್ನು ಮುಗಿಸಿದ್ದೇವೆ. ಶಾಲಾ ಮಕ್ಕಳಿಗೆ ಹೆಚ್ಚಿನ ಒತ್ತು ಕೊಟ್ಟು ಕಾರ್ಯಕ್ರಮ ನಡೆಸುತ್ತಿದ್ದೇವೆ. ಈಗಾಗಲೇ 2200 ಮಕ್ಕಳಿಗೆ ವಿವಿಧ ಗೋಷ್ಠಿಗಳಲ್ಲಿ ವೇದಿಕೆ ಕಲ್ಪಿಸಲಾಗಿದೆ. 159 ಸಾಧಕರನ್ನು ಗೌರವಿಸಿದ್ದೇವೆ ಎಂದು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರು ತಿಳಿಸಿದರು.

“ ಕ.ಸಾ.ಪ.ಪುತ್ತೂರು ತಾಲೂಕು ಘಟಕ ಪ್ರತಿ ಗ್ರಾಮದಲ್ಲಿ ಮಕ್ಕಳಲ್ಲಿ ಸಾಹಿತ್ಯದ ಒಲವನ್ನು ತುಂಬಿಸುವ ಕೆಲಸ ಮಾಡುತ್ತಿರುವುದು ಅತ್ಯಂತ ಖುಷಿ ತಂದಿದೆ. ಇದರೊಟ್ಟಿಗೆ ಗ್ರಾಮದ ಸಾಧಕರನ್ನು ಗೌರವಿಸುವ ಕೆಲಸವು ನಡೆಯುತ್ತಿರುವುದು ಶ್ಲಾಘನೀಯ. ಗ್ರಾಮ ಸಾಹಿತ್ಯ ಸಂಭ್ರಮ ಪುತ್ತೂರು ತಾಲೂಕಿನಿಂದ ಇಡೀ ರಾಜ್ಯಕ್ಕೆ ಮಾದರಿಯಾಗಲಿ ಎಲ್ಲಾ ಕಡೆಗಳಲ್ಲೂ ಇಂತಹ ಕಾರ್ಯಕ್ರಮ ನಡೆಯಲಿ ಎಂಬುದೇ ನನ್ನ ಆಶಯ. ಇದರ ಹಿಂದೆ ಶ್ರಮಿಸುತ್ತಿರುವ ಕ.ಸಾ.ಪ ಹಾಗೂ ವಿವಿಧ ಸಂಘಟನೆಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ.”
ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ, ಕಾರ್ಯಕ್ರಮದ ಮಹಾಪೋಷಕರು

LEAVE A REPLY

Please enter your comment!
Please enter your name here