ಜ.9 ರಿಂದ 12ರವರೆಗೆ ಪುತ್ತೂರು ಕರವಡ್ತ ವಲಿಯುಲ್ಲಾಹಿ ತಂಙಳ್ ರವರ ಉರೂಸ್

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಬದ್ರಿಯಾ ಜುಮ್ಮಾ ಮಸೀದಿಯ ವಠಾರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಕರವಡ್ತ ವಲಿಯುಲ್ಲಾಹಿ ತಂಙಳ್‌ರವರ ಹೆಸರಲ್ಲಿ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು ಜನವರಿ 9 ರಿಂದ ಜ. 12 ರವರೆಗೆ ನಾಲ್ಕು ದಿನಗಳ ಕಾಲ ಪುತ್ತೂರು ಬದ್ರಿಯಾ ಮಸೀದಿಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಪುತ್ತೂರು ಉರೂಸ್ ಸಮಿತಿಯ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಜಾಕ್ ಹಾಜಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಜ.9ರಂದು ಬೆಳಿಗ್ಗೆ ಜಮಾತಿನ ಹಿರಿಯರಾದ ಕೆ. ಯೂಸುಫ್ ಹಾಜಿ ಬಪ್ಪಳಿಗೆ ರವರು ಧ್ವಜಾರೋಹಣ ಗೈಯಲಿದ್ದಾರೆ. ಪುತ್ತೂರು ಮುದರಿಸ್ ಅಸಯ್ಯದ್ ಅಹಮದ್ ಪೂಕೋಯಾ ತಂಙಳ್‌ರವರು ದುವಾ ಆಶೀರ್ವಚನ ನಡೆಸುವ ಮೂಲಕ ಚಾಲನೆ ನೀಡಲಿದ್ದಾರೆ. ಈ ನಾಲ್ಕು ದಿನಗಳಲ್ಲಿಯೂ ಪ್ರತಿ ದಿನ ರಾತ್ರಿ ಪ್ರಸಿದ್ಧ ವಾಗ್ಮಿಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.


ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಉರೂಸ್ ಸಮಿತಿಯ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಜಾಕ್ ಹಾಜಿರವರು ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಉಲಮಾ ಸಂಘಟನೆಯ ಅಧ್ಯಕ್ಷ ಸೈಯದುಲ್ ಉಲಮಾ ಸೈಯದ್ ಜಿಫ್ರೀ ಮುತ್ತುಕೋಯಾ ತಂಙಳ್ ಉದ್ಘಾಟಿಸಲಿದ್ದಾರೆ. ವಾಗ್ಮಿ ಆಶ್ರಫ್ ರಹ್ಮಾನಿ ಚೌಕಿ ರವರು ಧಾರ್ಮಿಕ ಮತ ಪ್ರವಚನ ನೀಡಲಿದ್ದಾರೆ. ಜ.10 ರಂದು ವಾಗ್ಮಿ ಖಲೀಲ್ ಹುದವಿ, ಜ.11ರಂದು ಅಬ್ದುಲ್ ರಜಾಕ್ ಅಂಬ್ರಾರಿರವರು ಧಾರ್ಮಿಕ ಮತ ಪ್ರವಚನ ನೀಡಲಿದ್ದಾರೆ. ಖಾಝಿ ತ್ವಾಖಾ ಅಹಮದ್ ಮುಸ್ಲಿಯರ್, ಅಬ್ದುಲ್ ಖಾದಿರ್ ಮುಸ್ಲಿಯಾರ್ ಬಂಬ್ರಾಣ, ಉಸ್ಮಾನುಲ್ ಫೈಝಿ, ಎನ್‌ಪಿಎಂ ತಂಙಳ್ ಕುನ್ನುಂಗೈ, ಅಸಯ್ಯದ್ ಅಹಮದ್ ಪೂಕೋಯ ತಂಙಳ್, ಸೈಯದ್ ಎಸ್ ಎಂ ತಂಙಗಳ್ ಸಾಲ್ಮರ, ಮೊದಲಾದ ಹಲವಾರು ಉನ್ನತ ಉಲಮಾ ಸಾದತ್‌ಗಳು ವಿವಿಧ ದಿನಗಳಲ್ಲಿ ಭಾಗವಹಿಸಲಿದ್ದಾರೆ.


ಜ.12ರಂದು ಉರೂಸ್ ಸಮಾರಂಭದ ಸಮಾರೋಪ ಸಮಾರಂಭವು ನಡೆಯಲಿದ್ದು ಪ್ರಖ್ಯಾತ ವಾಗ್ಮಿ ಸಿರಾಜುದ್ದೀನ್ ಖಾಸಿಮಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಪುತ್ತೂರು ಅನ್ಸಾರುದ್ದೀನ್ ಜಮಾತ್ ಕಮಿಟಿ ಅಧ್ಯಕ್ಷ ಹಾಜಿ ಅಬ್ದುಲ್ ರೆಹೀಮಾನ್ ಆಜಾದ್‌ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಲವಾರು ಧಾರ್ಮಿಕ,ಸಾಮಾಜಿಕ ಹಾಗೂ ರಾಜಕೀಯ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.


ಹಲವಾರು ಪವಾಡಗಳಿಂದ ಪ್ರಸಿದ್ಧವಾದ ಪುತ್ತೂರು ಕರವಡ್ತ ವಲಿಯುಲ್ಲಾಹಿ ತಂಙಳ್ ದರ್ಗಾಕ್ಕೆ ದೈನಂದಿನ ವಿಶೇಷ ಪ್ರಾರ್ಥನೆಗಾಗಿ ನೂರಾರು ಜನರು ಬರುತ್ತಿದ್ದು ಈ ದರ್ಗಾವು ಪ್ರಸಿದ್ಧ ಝೀಯಾರತ್ ಕೇಂದ್ರವಾಗಿ ಗುರುತಿಸಿಕೊಂಡಿದೆ. ಕರ್ನಾಟಕ ಕೇರಳದಲ್ಲಿ ಪ್ರಸಿದ್ಧಿ ಪಡೆದಿರುವ ಪುತ್ತೂರು ಉರೂಸ್ ಕಾರ್ಯಕ್ರಮಕ್ಕೆ ಎಲ್ಲೆಡೆಯಿಂದ ಜನರು ಹರಿದು ಬರುತ್ತಿರುವುದು ವಾಡಿಕೆಯಾಗಿದೆ ಎಂದ ಅವರು ಸಮಾರೋಪದಲ್ಲಿ ಸಾರ್ವಜನಿಕ ಅನ್ನದಾನ ನಡೆಯಲಿದೆ ಎಂದು ತಿಳಿಸಿದರು. ಉರೂಸ್ ಕಾರ್ಯಕ್ರಮವು ಶಿಸ್ತುಬದ್ಧವಾಗಿ ಹಾಗೂ ಸುಗಮವಾಗಿ ನಡೆಸಲು ಸ್ವಯಂಸೇವಕರ ತಂಡ ಮತ್ತು ಕಾರ್ಯಕ್ರಮದ ಯಶಸ್ವಿಗಾಗಿ ವಿವಿಧ ಸನ್ನದ್ಧ ತಂಡಗಳನ್ನು ರಚಿಸಲಾಗಿದೆ. ನಾಡಿಗೆ ಶಾಂತಿ ಸೌಹಾರ್ದತೆಯ ಸಂದೇಶ ಸಾರುವ ಈ ಪ್ರಸಿದ್ಧ ಪುತ್ತೂರು ಉರೂಸ್ ಕಾರ್ಯಕ್ರಮದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಅನ್ಸಾರುದ್ದೀನ್ ಜಮಾತ್ ಕಮಿಟಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹಮಾನ್ ಆಜಾದ್, ಉಪಾಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ ಪ್ರಧಾನ ಕಾರ್ಯದರ್ಶಿ ಜುನೈದು ಸಾಲ್ಮರ ಊರೂಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಸನ್ ಸಾಲ್ಮರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here