ಕಲ್ಲಾರೆ ವಾಳೆ ಚಾಂಪಿಯನ್, ಸಂಟ್ಯಾರ್ ವಾಳೆ ರನ್ನರ್ಸ್
ವರದಿ: ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಆಧೀನದಲ್ಲಿರುವ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿಎಲ್ಸಿ) ವತಿಯಿಂದ ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಜ.5 ರಂದು ‘ಒಗ್ಗಟ್ಟಿಗಾಗಿ ಕ್ರೀಡೆ’ ಎಂಬ ಧ್ಯೇಯವಾಕ್ಯದಡಿಯಲ್ಲಿ ಶಿಕ್ಷಣ ಶಿಲ್ಪಿ ಮೊ|ಆಂಟನಿ ಪತ್ರಾವೋ ಸ್ಮರಣಾರ್ಥ ಜರಗಿದ 32ನೇ ವರ್ಷದ ಆರು ಓವರ್ಗಳ ಅಂತರ್-ವಾಳೆ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ಕಲ್ಲಾರೆ ವಾಳೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಸಂಟ್ಯಾರ್ ವಾಳೆಯು ರನ್ನರ್ಸ್ ಪ್ರಶಸ್ತಿಯನ್ನು ಪಡೆಯಿತು.
ಸೆಮಿಫೈನಲಿನಲ್ಲಿ ಫೈನಲ್ ವಿಜೇತ ಕಲ್ಲಾರೆ ವಾಳೆ ವಿರುದ್ಧ ಸೋತ ಸಾಮೆತ್ತಡ್ಕ ವಾಳೆಯು ತೃತೀಯ ಸ್ಥಾನವನ್ನು, ರನ್ನರ್ಸ್ ವಿಜೇತ ಸಂಟ್ಯಾರ್ ವಾಳೆ ವಿರುದ್ಧ ಸೋತ ಗುಂಡ್ಯಡ್ಕ ವಾಳೆಯು ಚತುರ್ಥ ಸ್ಥಾನವನ್ನು ಪಡೆಯಿತು. ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯ 19 ವಾಳೆಗಳ ಪೈಕಿ 16 ವಾಳೆಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದು ಬಲ್ನಾಡು, ಮಿತ್ತೂರು, ಪದವು, ಪಾಂಗ್ಲಾಯಿ, ನಿತ್ಯಾಧರ್, ಪುತ್ತೂರು, ರೋಟರಿಪುರ, ಸೈಂಟ್ ತೆರೆಜಾ ಸಾಲ್ಮರ, ಶಿಂಗಾಣಿ, ಸಂಟ್ಯಾರ್, ಹಾರಾಡಿ, ದರ್ಬೆ ವಾಳೆ ತಂಡಗಳು ನಾಕೌಟ್ ಹಂತದಲ್ಲಿಯೇ ನಿರ್ಗಮಿಸಿದ್ದವು. ಕಳೆದ ವರ್ಷ ಸಾಮೆತ್ತಡ್ಕ ವಾಳೆಯು ಚಾಂಪಿಯನ್ ಆಗಿದ್ದು, ಗುಂಡ್ಯಡ್ಕ ವಾಳೆಯು ರನ್ನರ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಕಲ್ಲಾರೆ-ಸಾಮೆತ್ತಡ್ಕ ರೋಚಕ ಸೆಮಿ:
ಫೈನಲ್ ಪಂದ್ಯಾಟದ ಮುನ್ನ ನಡೆದ ಸೆಮಿಫೈನಲ್ ಹೋರಾಟದಲ್ಲಿ ಕಲ್ಲಾರೆ ಹಾಗೂ ಸಾಮೆತ್ತಡ್ಕ ತಂಡದ ಹಣಾಹಣಿಯು ನಿಜಕ್ಕೂ ರೋಚಕತೆಯನ್ನು ಸೃಷ್ಟಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಸಾಮೆತ್ತಡ್ಕ ತಂಡವು ನರೇಶ್ ಲೋಬೊ 14 ರನ್(61,41), ಮ್ಯಾಕ್ಲಿನ್ ಫೆರ್ನಾಂಡೀಸ್ 24 ರನ್(62,42), ಮೇಗಸ್ ಮಸ್ಕರೇನ್ಹಸ್ 17 ರನ್(42)ರವರ ನೆರವಿನೊಂದಿಗೆ ಮೂರು ವಿಕೆಟ್ ನಷ್ಟಕ್ಕೆ 55 ರನ್ಗಳನ್ನು ಪೇರಿಸಿತ್ತು. ಕಲ್ಲಾರೆ ತಂಡದ ರಾಯನ್ 2, ವಿಲ್ಸನ್ ಹಾಗೂ ಐವನ್ರವರು ತಲಾ ಒಂದು ವಿಕೆಟ್ ಗಳಿಸಿದ್ದರು. ಬಳಿಕ ಬ್ಯಾಟಿಂಗ್ ಆರಂಭಿಸಿದ ಕಲ್ಲಾರೆ ವಾಳೆಯು ರಾಯನ್ 9ರನ್, ಐವನ್ ಡಿ’ಸಿಲ್ವ 35 ರನ್ಗಳನ್ನು ಸಿಡಿಸುವುದರೊಂದಿಗೆ ತಂಡವು ಕೇವಲ ಮೂರು ವಿಕೆಟ್ ಕಳೆದುಕೊಂಡು ವಿಜಯಿ ರನ್ ಬೆನ್ನಟ್ಟಿ ಫೈನಲಿಗೆ ಅರ್ಹತೆ ಪಡೆಯಿತು.
ಈ ಪಂದ್ಯಾಟದಲ್ಲಿ ಕಲ್ಲಾರೆ ವಾಳೆಯು ನಿಜಕ್ಕೂ ಸೋಲುವ ಹಂತವನ್ನು ತಲುಪಿತ್ತು ಆದರೆ ತಂಡದ ಆಧಾರಸ್ತಂಭ ಐವನ್ ಡಿ’ಸಿಲ್ವರವರು ಕೊನೆಗಳಿಗೆಯಲ್ಲಿ ಹ್ಯಾಟ್ರಿಕ್ ಸಿಕ್ಸರ್ ಜೊತೆಗೆ ಬರೋಬ್ಬರಿ ಐದು ಸಿಕ್ಸರ್ಗಳನ್ನು ಸಿಡಿಸಿ ಸಾಮೆತ್ತಡ್ಕ ವಾಳೆಯನ್ನು ಸೆಮಿಯಿಂದಲೇ ನಿರ್ಗಮಿಸುವಂತೆ ಮಾಡಿದ್ದರು. ಸಾಮೆತ್ತಡ್ಕ ವಾಳೆಯ ಪ್ರಣೀಲ್ರವರು ಎರಡು ವಿಕೆಟ್ ಉರುಳಿಸಿದರು.
ಸಂಟ್ಯಾರ್-ಗುಂಡ್ಯಡ್ಕ ನೀರಸ ಸೆಮಿ:
ಮತ್ತೊಂದು ಸೆಮಿಫೈನಲ್ ಪಂದ್ಯಾಟದಲ್ಲಿ ಸಂಟ್ಯಾರ್ ವಾಳೆಯು ಜೇಮ್ಸ್ ಡಿ’ಸೋಜ 7 ರನ್(61), ವಿಲ್ಸನ್ 9 ರನ್, ಜೀವನ್ 23 ರನ್(43) ನೆರವಿನೊಂದಿಗೆ ಎರಡು ವಿಕೆಟ್ ನಷ್ಟಕ್ಕೆ 49 ರನ್ಗಳನ್ನು ಗಳಿಸಲು ಶಕ್ತವಾಯಿತು. ಎದುರಾಳಿ ಗುಂಡ್ಯಡ್ಕ ವಾಳೆಯು ಯಾವುದೇ ಪ್ರತಿರೋಧ ತೋರದೆ ತಂಡವು ಐದು ವಿಕಿಟ್ ನಷ್ಟಕ್ಕೆ 28 ರನ್ಗಳನ್ನು ಗಳಿಸಿ 21ರನ್ಗಳ ಸೋಲನ್ನು ಅನುಭವಿಸಿತು. ಗುಂಡ್ಯಡ್ಕ ವಾಳೆಯ ಪ್ರದೀಪ್ರವರು ಏಕಮಾತ್ರ ಸಿಕ್ಸರ್ ಹಾಗೂ ಫೋರ್ ಬಾರಿಸಿ 13 ರನ್ ಗಳಿಸಿದ್ದರು. ಸಂಟ್ಯಾರ್ ವಾಳೆಯ ಜೇಮ್ಸ್ 1, ಮೆಲ್ವಿನ್ ಹಾಗೂ ಅನಿಲ್ ತಲಾ ಎರಡು ವಿಕೆಟ್ಗಳನ್ನು ಪಡೆದರು.
ಸಮಾರೋಪ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ವಂ|ಲೋಹಿತ್ ಅಜಯ್ ಮಸ್ಕರೇನ್ಹಸ್, ಫಿಲೋಮಿನಾ ಕಾಲೇಜು ಪುರುಷರ ವಸತಿನಿಲಯದ ವಾರ್ಡನ್ ವಂ|ರೂಪೇಶ್ ತಾವ್ರೋ, ನ್ಯಾಯವಾದಿ ಹಾಗೂ ಕ್ರಿಶ್ಚಿಯನ್ ವಿವಾಹ ನೋಂದಣಾಧಿಕಾರಿ ರಾಕೇಶ್ ಮಸ್ಕರೇನ್ಹಸ್ರವರು ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಸಿಎಲ್ಸಿ ಅಧ್ಯಕ್ಷ ಡಾ|ಎಲ್ಯಾಸ್ ಪಿಂಟೋ ಸ್ವಾಗತಿಸಿದರು. ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್ ವಂದಿಸಿ, ವಿಜೇತರ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ರುಡೋಲ್ಫ್ ಪಿಂಟೋ, ಉಪಾಧ್ಯಕ್ಷ ದೀಪಕ್ ಮಿನೇಜಸ್ ಸಹಿತ ವಿವಿಧ ಗಣ್ಯರು ಉಪಸ್ಥಿತರಿದ್ದರು.
ಪಂದ್ಯಾಟದಲ್ಲಿ ಅಂಪೈರುಗಳಾಗಿ ಸುಜನ್, ದೀಕ್ಷಿತ್, ಧನುಷ್, ಆಶ್ಲೇಷ್, ಸ್ಕೋರರ್ ಆಗಿ ಲತಿನ್ ಭಂಡಾರಿ, ರಂಜಿತ್ ಕುಂಬ್ಳೆ, ವೀಕ್ಷಕ ವಿವರಣೆಗಾರರಾಗಿ ವಿಲಿಯಂ ಪಿಂಟೋ, ಸೀತಾರಾಮ್ ಮುಕ್ರಂಪಾಡಿರವರು ಸಹಕರಿಸಿದರು. ಸದಸ್ಯ ಓಸ್ವಾಲ್ಡ್ ಲೋಬೊ ಕಾರ್ಯಕ್ರಮ ನಿರೂಪಿಸಿದರು. ಸಿಎಲ್ಸಿ ಸದಸ್ಯರು ಸಹಕರಿಸಿದರು.
ಫೈನಲ್-ಕಲ್ಲಾರೆ ನೋಲಾಸ್ ವಿನ್..
ಸಂಜೆ ಬಲಿಷ್ಟ ಕಲ್ಲಾರೆ ಹಾಗೂ ಸಂಟ್ಯಾರ್ ವಾಳೆಗಳ ನಡುವಣ ನಡೆದ ಫೈನಲ್ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಂಟ್ಯಾರ್ ವಾಳೆಯು ತಂಡದ ಆರಂಭಿಕ ಬ್ಯಾಟರ್ಗಳಾದ ಹೊಡಿಬಡಿ ಎಡಗೈ ದಾಂಡಿಗ ಜೇಮ್ಸ್ ಡಿ’ಸೋಜ ಹಾಗೂ ಮೆಲ್ವಿನ್ ಡಿ’ಸೋಜರವರು ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿ ಎರಡು ವಿಕೆಟ್ ಕಳೆದುಕೊಂಡು 45 ರನ್ಗಳನ್ನು ಗಳಿಸಿತ್ತು. ತಂಡದ ಇನ್ನಿಂಗ್ಸ್ನ 5.30 ಓವರ್ಗಳಾದಾಗ ಆರಂಭಿಕ ಮೆಲ್ವಿನ್ ವಿಕೆಟ್ ಕಳೆದುಕೊಂಡಿದ್ದು ಆಗ ತಂಡವು 38 ರನ್ಗಳನ್ನು ಗಳಿಸಿತ್ತು. ಇನ್ನಿಂಗ್ಸ್ ಕೊನೆಗೆ ಮತ್ತೋರ್ವ ಆರಂಭಿಕ ಜೇಮ್ಸ್ರವರೂ ರನೌಟ್ ಆಗಿದ್ದು, ಸಂಟ್ಯಾರ್ ತಂಡದ ಏಕೈಕ ವಿಕೆಟ್ ಕಲ್ಲಾರೆ ತಂಡದ ವಿಲ್ಸನ್ ಪಾಲಾಯಿತು. ಕಲ್ಲಾರೆ ತಂಡದ ಬೌಲರ್ಗಳಾದ ಐವನ್, ಶರನ್, ರಾಯನ್, ವಿಲ್ಸನ್ರವರ ಕರಾರುವಾಕ್ ಬೌಲಿಂಗ್ನಿಂದಾಗಿ ಸಂಟ್ಯಾರ್ ವಾಳೆಗೆ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗಿಲ್ಲ. ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಕಲ್ಲಾರೆ ವಾಳೆಯು ಆರಂಭಿಕ ಬ್ಯಾಟರ್ಗಳಾದ ಯುವ ದಾಂಡಿಗ ಶರನ್ ಡಿ’ಸಿಲ್ವ 23 ರನ್(63) ಹಾಗೂ ರಾಯನ್ ಡಾಯಸ್ 18 ರನ್(4*3)ರವರ ಅಜೇಯ ಬೀಸುವಿಗೆಯಿಂದ ಕೇವಲ ನಾಲ್ಕು ಓವರ್ಗಳಲ್ಲಿಯೇ ವಿಜಯಿ ರನ್(46 ರನ್)ಗಳ ಗುರಿ ಮುಟ್ಟಿ ನೋಲಾಸ್ ವಿಜಯದ ನಗು ಬೀರಿತ್ತು.
ಬಾಲಕಿಯರ ಜೋಶ್..
16 ವಾಳೆಗಳ ಈ ಪಂದ್ಯಾಕೂಟದಲ್ಲಿನ ಮೂರು ವಾಳೆಗಳಲ್ಲಿ ಮೂವರು ಬಾಲಕಿಯರು ಕ್ರಿಕೆಟ್ ಅಂಕಣದಲ್ಲಿ ಪುರುಷರೊಂದಿಗೆ ಕಾಣಿಸಿಕೊಂಡು ಮಿಂಚಿದ್ದಾರೆ. ಅಂಡರ್ 17ರ ವಯೋಮಿತಿಯ ರಾಷ್ಟ್ರಮಟ್ಟದ ಆಟಗಾರ್ತಿ ಹಾರಾಡಿ ವಾಳೆಯ ಡಾ|ಎಲ್ಯಾಸ್ ಪಿಂಟೊ ಹಾಗೂ ಮೋಲಿ ಫೆರ್ನಾಂಡೀಸ್ರವರ ಪುತ್ರಿ ಏಂಜಲಿಕಾ ಮೆಲಾನಿ ಪಿಂಟೊ, ರೋಟರಿಪುರ ವಾಳೆಯ ಜೋಯ್ಲಿನ್ ಲೋಬೊರವರ ಪುತ್ರಿ ಇವಾ ನತಾಶಾ, ಪುತ್ತೂರು ವಾಳೆಯ ಮನೋಜ್ ಡಾಯಸ್ ಹಾಗೂ ನಿಶಾ ಮಸ್ಕರೇನ್ಹಸ್ರವರ ಪುತ್ರಿ ಮೆಲಿಸ್ಸಾ ಡಾಯಸ್ರವರು ಕ್ರಿಕೆಟ್ ಅಂಕಣದಲ್ಲಿ ಭಾಗವಹಿಸಿ ಪ್ರೇಕ್ಷಕರಿಂದ ಜೋಶ್ ಹೆಚ್ಚಿಸಿಕೊಂಡಿದ್ದಾರೆ.
2023ರ ಪುನರಾವರ್ತನೆ..
ಈ ಪಂದ್ಯಾಕೂಟದಲ್ಲಿ ಕಲ್ಲಾರೆ ವಾಳೆಯ ಶರನ್ ಡಿ’ಸಿಲ್ವ ಉತ್ತಮ ಬ್ಯಾಟರ್ ಆಗಿ, ಸಂಟ್ಯಾರ್ ವಾಳೆಯ ಜೇಮ್ಸ್ ಉತ್ತಮ ಬೌಲರ್ ಆಗಿ, ಕಲ್ಲಾರೆ ವಾಳೆಯ ಐವನ್ ಡಿ’ಸಿಲ್ವ ಕೂಟದ ಸರ್ವಾಂಗೀಣ(ಅಲ್ರೌಂಡರ್) ಆಟಗಾರನಾಗಿ ಮೂಡಿಬಂದರು. 2023ರಲ್ಲಿಯೂ ಕಲ್ಲಾರೆ ಹಾಗೂ ಸಂಟ್ಯಾರ್ ವಾಳೆಗಳು ಫೈನಲಿನಲ್ಲಿ ಮುಖಾಮುಖಿಯಾಗಿದ್ದು ಅದೇ ಫಲಿತಾಂಶ ಇಂದು ಪುನರಾವರ್ತನೆಯಾಗಿರುವುದು ವಿಶೇಷವೇ ಸರಿ.
ಹೈಲೈಟ್ಸ್…
-16 ತಂಡಗಳನ್ನು ‘ಎ’ ಹಾಗೂ ‘ಬಿ’ ವಿಭಾಗಗಳನ್ನಾಗಿ ಮಾಡಿ ಕ್ರೀಡಾಂಗಣದಲ್ಲಿನ ಎರಡು ಅಂಕಣಗಳಲ್ಲಿ ಏಕಕಾಲದಲ್ಲಿ ಆಡಿಸಲಾಯಿತು.
-ಆಗಮಿಸಿದ ಆಟಗಾರರಿಗೆ ಹಾಗೂ ಪ್ರೇಕ್ಷಕರಿಗೆ ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.
-ಪಂದ್ಯಾಟವು ಬೆಳಿಗ್ಗೆ ಸರಿಯಾಗಿ 9.15 ಕ್ಕೆ ಆರಂಭವಾಗಿ ಸಂಜೆ 5.30ಕ್ಕೆ ಸಮಾಪ್ತಿಯನ್ನು ಕಂಡಿತ್ತು.
-ಸಿಎಲ್ಸಿ ಸಂಸ್ಥೆಯ ಸದಸ್ಯರು ಸಿಎಲ್ಸಿ ಲೋಗೊನೊಂದಿಗೆ ನೀಲಿ-ಹಳದಿ ಬಣ್ಣದ ಜೆರ್ಸಿಯನ್ನು ಧರಿಸಿ ಕಂಗೊಳಿಸುತ್ತಿದ್ದರು.
-ಫೈನಲ್ ಪಂದ್ಯಾಟಕ್ಕೂ ಮುನ್ನ ಆಗಮಿಸಿದ ಅತಿಥಿ ಗಣ್ಯರು ಫೈನಲ್ ತಲುಪಿದ ಎರಡೂ ತಂಡಗಳ ಆಟಗಾರರಿಗೆ ಹಸ್ತಲಾಘವ ಮಾಡುವ ಮೂಲಕ ಶುಭ ಹಾರೈಸಿದರು.
-ಸಂಘಟನೆಯ ಸದಸ್ಯರು ಪಂದ್ಯಾಟದ ಬಳಿಕ ಕ್ರೀಡಾಂಗಣವನ್ನು ಮತ್ತು ಕ್ರೀಡಾಂಗಣದ ಸುತ್ತಲಿನ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕುವ ಮೂಲಕ ಸ್ವಚ್ಚತೆಗೆ ಆದ್ಯತೆಯನ್ನು ನೀಡಿದ್ದರು.