ಉಪ್ಪಿನಂಗಡಿಯಲ್ಲಿ ಪಿಕ್‌ಪಾಕೆಟ್ 2 ಪ್ರತ್ಯೇಕ ಪ್ರಕರಣ- 15 ಪವನ್‌ ಚಿನ್ನ, 25ಸಾವಿರ ರೂ. ನಗದು ಕಳವು

0

ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದಲ್ಲಿ ನಿರಂತರವಾಗಿ ಕಿಸೆ ಕಳ್ಳತನ, ಬ್ಯಾಗ್‌ನಿಂದ ಹಣ, ಆಭರಣ ಲಪಟಾಯಿಸುವ ಕೃತ್ಯ ನಡೆಯುತ್ತಿದ್ದು, ಜ.6ರಂದು ಪ್ರತ್ಯೇಕ 2 ಘಟನೆಯಲ್ಲಿ ಓರ್ವ ಮಹಿಳೆಯ ಬ್ಯಾಗ್‌ನಿಂದ 15 ಪವನ್ ಚಿನ್ನಾಭರಣ ಮತ್ತು ಇನ್ನೋರ್ವ ಮಹಿಳೆಯ 25 ಸಾವಿರ ರೂಪಾಯಿ ನಗದು ಕಳವು ಆಗಿದೆ. ಈ ಪೈಕಿ ಚಿನ್ನಾಭರಣ ಕಳವು ಆಗಿರುವ ಬಗ್ಗೆ ಮಹಿಳೆಯೋರ್ವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.


ತಾನು ಮಧ್ಯಾಹ್ನ ಪೆರ್ನೆ ಹಾಲ್‌ನಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಅವರ ಬ್ಯಾಗ್‌ನಿಂದ 15 ಪವನ್ ಚಿನ್ನಾಭರಣವನ್ನು ಎಗರಿಸಲಾಗಿದೆ ಎಂದು ಕಡಬ ಸಮೀಪದ ಮರ್ದಾಳ ನೆಕ್ಕಿತ್ತಡ್ಕ ನಿವಾಸಿ ಹಬೀಬ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಪಾದಿಸಿದ್ದಾರೆ.


ಇನ್ನೊಂದು ಪ್ರಕರಣದಲ್ಲಿ, ಕೋಡಿಂಬಾಡಿ ದಾರಂದಕುಕ್ಕು ನಿವಾಸಿ ಝಾಹಿದಾ ಎಂಬವರು ಉಪ್ಪಿನಂಗಡಿ ಹಳೇ ಬಸ್ ನಿಲ್ದಾಣದ ಬಳಿಯಲ್ಲಿ ಕ್ಲಿನಿಕ್‌ಗೆ ಬಂದಿದ್ದು, ವೈದ್ಯರನ್ನು ಭೇಟಿ ಮಾಡಿ ಮರಳಿ ಮನೆಗೆ ಹೋಗುವಾಗ ಬಸ್ ನಿಲ್ದಾಣದಲ್ಲಿ ಪುತ್ತೂರು ಹೋಗುವ ಬಸ್ ಹತ್ತಿ ದಾರಂದಕುಕ್ಕು ತಲುಪುವುದರ ಒಳಗಾಗಿ ಬ್ಯಾಗ್‌ನಲ್ಲಿದ್ದ 25 ಸಾವಿರ ರೂಪಾಯಿ ಕಳವು ಆಗಿರುವುದಾಗಿ ಹೇಳಿಕೊಂಡಿದ್ದಾರೆ.


ನಿರಂತರ ಕಿಸೆಕಳ್ಳತನ:
ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಈ ರೀತಿಯ ಕೃತ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದ್ದು, ಪೊಲೀಸ್ ದೂರು ನೀಡಿದರೂ ಯಾವುದೇ ಪ್ರಯೋಜನ ಇಲ್ಲ ಎಂಬ ಕಾರಣಕ್ಕಾಗಿ ಯಾರೂ ದೂರು ನೀಡಲು ಮುಂದಾಗುತ್ತಿಲ್ಲ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here