ಉಪ್ಪಿನಂಗಡಿ: 34 ನೆಕ್ಕಿಲಾಡಿ- ಬೊಳುವಾರು ರಾಜ್ಯ ಹೆದ್ದಾರಿಯ 34 ನೆಕ್ಕಿಲಾಡಿಯಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣದ ಡಾಮರು ಕಾಮಗಾರಿ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಶೀಘ್ರ ಡಾಮರು ಕಾಮಗಾರಿಗೆ ಒತ್ತಾಯಿಸಿ ಜ.8ರಂದು 34 ನೆಕ್ಕಿಲಾಡಿಯ ಬಿಜೆಪಿ ಶಕ್ತಿ ಕೇಂದ್ರ ಹಮ್ಮಿಕೊಂಡಿದ್ದ ರಸ್ತೆ ತಡೆಯನ್ನು ರದ್ದುಗೊಳಿಸಲಾಗಿದೆ.
ಹೆದ್ದಾರಿ ಕಾಮಗಾರಿಯ ವಿಳಂಬವನ್ನು ಖಂಡಿಸಿ ಕಳೆದ ಡಿ.2ರಂದು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಆದರ್ಶನಗರದಲ್ಲಿ ರಸ್ತೆ ತಡೆ ನಡೆಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗಿತ್ತು. ಆಗ ಸ್ಥಳಕ್ಕಾಗಮಿಸಿದ ಪಿಡಬ್ಲೂಡಿ ಇಲಾಖೆಯ ಎಂಜಿನಿಯರ್ 15 ದಿನದ ಗಡುವು ಕೇಳಿದ್ದರು. ಪ್ರತಿಭಟನೆ ನಡೆದು ಒಂದು ತಿಂಗಳಾದರೂ ಡಾಮರು ಕಾಮಗಾರಿ ಆರಂಭಿಸಿರಲಿಲ್ಲ. ಆದ್ದರಿಂದ 34 ನೆಕ್ಕಿಲಾಡಿ ವ್ಯಾಪ್ತಿಯ ಬೊಳಂತಿಲ- ಬೇರಿಕೆ ತನಕದ ಚತುಷ್ಪಥ ಹೆದ್ದಾರಿ ಕಾಮಗಾರಿ ವಿಳಂಬ ಖಂಡಿಸಿ ಬಿಜೆಪಿಯು ಜ.8ರಂದು ಆದರ್ಶನಗರದಲ್ಲಿ ಮತ್ತೆ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಲು ಮುಂದಾಗಿತ್ತು. ಆದರೆ ಜ.6ರಂದು ಹೆದ್ದಾರಿಯ ಡಾಮರು ಕಾಮಗಾರಿ ಆರಂಭಗೊಂಡಿದ್ದು, ಇದರಿಂದ ಬಿಜೆಪಿಯು ತನ್ನ ಪ್ರತಿಭಟನೆಯನ್ನು ರದ್ದುಗೊಳಿಸಿದೆ ಹಾಗೂ ನಮ್ಮ ಮನವಿಗೆ ಸ್ಪಂದಿಸಿ ಡಾಮರು ಕಾಮಗಾರಿಗೆ ಮುಂದಾದ ಪಿಡಬ್ಲೂಡಿ ಇಲಾಖಾಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ 34 ನೆಕ್ಕಿಲಾಡಿ ಬಿಜೆಪಿ ಶಕ್ತಿ ಕೇಂದ್ರವು ಅಭಿನಂದನೆ ಸಲ್ಲಿಸಿದೆ.