ಉಪ್ಪಿನಂಗಡಿ: ಅಂಗನವಾಡಿ ಕೇಂದ್ರವೆಂಬುದು ಮಕ್ಕಳಿಗೆ ಎರಡನೇ ಮನೆಯಿದ್ದಂತೆ. ಅಂಗನವಾಡಿ ಕಾರ್ಯಕರ್ತೆ ಮಕ್ಕಳಿಗೆ ತಾಯಿ ಇದ್ದಂತೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಗ್ರಾ.ಪಂ.ನ ನರೇಗಾ ಯೋಜನೆ 5 ಲಕ್ಷ ರೂ. ಅನುದಾನ, ತಾ.ಪಂ.ನ 5 ಲಕ್ಷ ರೂ. ಅನುದಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 1 ಲಕ್ಷ ರೂ. ಅನುದಾನ ಸೇರಿದಂತೆ ಒಟ್ಟು 11 ಲಕ್ಷ ರೂ. ಅನುದಾನದಲ್ಲಿ ಬೀತಲಪ್ಪುವಿನಲ್ಲಿ ನಿರ್ಮಾಣವಾದ ಅಂಗನವಾಡಿ ಕಟ್ಟಡವನ್ನು ಡಿ.7ರಂದು ಉದ್ಘಾಟಿಸಿ ಅವರು ಮಾತನಾಡಿದರು.
ತಳಮಟ್ಟದಲ್ಲಿ ಉತ್ತಮ ಶಿಕ್ಷಣ ದೊರಕಿದಾಗ ಮಾತ್ರ ಮಕ್ಕಳ ಬದುಕು, ಭವಿಷ್ಯ ಉತ್ತಮವಾಗಲು ಸಾಧ್ಯ. ಈ ಕೇಂದ್ರವನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವುದು ನಮ್ಮೆಲ್ಲರ ಕೈಯಲ್ಲಿದೆ ಎಂದರು.
ಮೈಂದಡ್ಕದಲ್ಲಿ ಅಂಗನವಾಡಿ ಬೇಕೇ?:
ಬೀತಲಪ್ಪುವಿನ ಈ ಅಂಗನವಾಡಿಯಲ್ಲಿ 15 ಮಂದಿ ಮಕ್ಕಳಿದ್ದಾರೆ. ಇಲ್ಲಿಂದ ಮೂರು ಕಿ.ಮೀ. ದೂರದ ಮೈಂದಡ್ಕದ ಅಂಗನವಾಡಿಯಲ್ಲಿ ಮೂರು ಮಕ್ಕಳಿದ್ದಾರೆ. ಹೀಗಿರುವಾಗ ಮೈಂದಡ್ಕದಲ್ಲಿ ಅಂಗನವಾಡಿ ಬೇಕೇ ಎಂದು ಪ್ರಶ್ನಿಸಿದ ಶಾಸಕರು, ಸಿಡಿಪಿಒ ಅವರಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದರೆ ಮಾತ್ರ ಮೈಂದಡ್ಕದ ಅಂಗನವಾಡಿ ಬಗ್ಗೆ ಯೋಚನೆ ಮಾಡಿ. ಇಲ್ಲಾಂದರೆ ಮೂರು ಮಕ್ಕಳಿಗಾಗಿ ಪ್ರತ್ಯೇಕ ಅಂಗನವಾಡಿಯನ್ನು ನಿರ್ಮಿಸಿ ಹಣ ಪೋಲು ಮಾಡುವ ಬದಲು ಅದನ್ನು ಬೇರೆ ಕಡೆ ಉಪಯೋಗಿಸಬಹುದು. ಈ ಬಗ್ಗೆ ನೀವು ಚಿಂತಿಸಬೇಕು ಎಂದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಹೊಸ ಅಂಗನವಾಡಿ ಕಟ್ಟಡ ಕಾಮಗಾರಿ ಉತ್ತಮವಾಗಿ ನಡೆದಿದೆ. ಅಂಗನವಾಡಿಯಲ್ಲಿ ಮಕ್ಕಳಿಗೆ ಮನೆಯ ವಾತಾವರಣ ದೊರೆಯುವಂತಾಗಬೇಕು. ಶಿಕ್ಷಣ ಕೇಂದ್ರಗಳು ಮತ್ತು ಆರೋಗ್ಯ ಕೇಂದ್ರಗಳು ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ ಮಾತನಾಡಿ, ಅಂಗನವಾಡಿ ಕೇಂದ್ರಗಳ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ವೇದಿಕೆಯಲ್ಲಿ 34 ನೆಕ್ಕಿಲಾಡಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ., ಸಿಡಿಪಿಒ ಮಂಗಳಾ ಕಾಳೆ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಪ್ರೇಮ, 34 ನೆಕ್ಕಿಲಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದೇವಪ್ಪ ನಾಯ್ಕ ಉಪಸ್ಥಿತರಿದ್ದರು.
ಕಟ್ಟಡ ಕಾಮಗಾರಿಗೆ ತಮ್ಮ ನರೇಗಾ ಚೀಟಿ ನೀಡಿ ಸಹಕರಿಸಿದ ಚಂದ್ರಾವತಿ ತಾಳೆಹಿತ್ಲು, ರವಿ ಕೊಳಕ್ಕೆ, ರಾಮಕೃಷ್ಣ ತಾಳೆಹಿತ್ಲು, ಜೋಸೆಫ್ ಮಿನೇಜಸ್, ಮೀನಾಕ್ಷಿ ಬೀತಲಪ್ಪು, ಸಾವಿತ್ರಿ ಅಂಬೆಲ, ರೇವತಿ ಅಂಬೆಲ, ಪುಷ್ಪಾವತಿ ಕೊಳಕ್ಕೆ, ಶೇಷಪ್ಪ ನಾಯ್ಕ ತಾಳೆಹಿತ್ಲು, ದೇವಪ್ಪ ಅಂಬೆಲ, ಜಯಲಕ್ಷ್ಮಿ ದರ್ಬೆ, ರಕ್ಷಿತ್ ದರ್ಬೆ, ಪ್ರೇಮಾವತಿ ಅಂಬೆಲ, ಶ್ರೀಲತಾ ಚೀಮುಳ್ಳು, ಅಶ್ವಿನ್ ಚೀಮುಳ್ಳು, ಅರ್ಜುನ್ ಚೀಮುಳ್ಳು, ಪಾವನ ಆದರ್ಶನಗರ, ಮಹೇಶ್ ಕೊಳಕೆ ಇವರನ್ನು ಈ ಸಂದರ್ಭ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ೩೪ ನೆಕ್ಕಿಲಾಡಿ ಗ್ರಾ.ಪಂ. ಸದಸ್ಯ ವಿಜಯಕುಮಾರ್, ಅಂಗನವಾಡಿ ಮೇಲ್ವೀಚಾರಕಿ ಸುಜಾತ, 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಬೂತ್ ಅಧ್ಯಕ್ಷರಾದ ಹಮೀದ್ ಪಿ.ಟಿ. ಅಬ್ದುಲ್ ಖಾದರ್, ನವಾಝ್ ಕರ್ವೇಲು, ಇಸಾಕ್, ಶಿಕ್ಷಕಿ ಕಾವೇರಿ, ಕಾಂಗ್ರೆಸ್ ಮುಖಂಡರಾದ ಡಾ. ರಾಜಾರಾಮ್ ಕೆ.ಬಿ., ಮುರಳೀಧರ ರೈ, ಅಬ್ದುರ್ರಹ್ಮಾನ್ ಯುನಿಕ್, ಅಸ್ಕರ್ ಅಲಿ, ಜಾನ್ ಕೆನ್ಯೂಟ್, ಗಣೇಶ್ ನಾಯಕ್, ಸ್ಥಳೀಯರಾದ ಲೀಲಾ, ಚಿತ್ರಾವತಿ, ತನಿಯಪ್ಪ, ಗೀತಾ, ರವಿ ಮತ್ತಿತ್ತರರು ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಬೇಬಿ ಸ್ವಾಗತಿಸಿ, ವಂದಿಸಿದರು. ನವ್ಯತಾ ಪೂದೆಣ್ಣಾಯ ಕಾರ್ಯಕ್ರಮ ನಿರೂಪಿಸಿದರು.
ನೆಕ್ಕಿಲಾಡಿಯಲ್ಲಿ ಕೈಗಾರಿಕಾ ವಲಯ
ಯುವ ಜನತೆಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ನೆಕ್ಕಿಲಾಡಿ ಗ್ರಾಮದಲ್ಲಿ ಕೈಗಾರಿಕಾ ವಲಯ ನಿರ್ಮಿಸುವ ಯೋಜನೆಯಿದ್ದು, ಇದಕ್ಕಾಗಿ ಜಾಗದ ಸರ್ವೇ ಕಾರ್ಯ ನಡೆಯುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.