ನಾರ್ಶದ ಮನೆ ದರೋಡೆ ಪ್ರಕರಣ: ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ

0

ಅಧಿಕಾರಿಗಳ ಜೊತೆ ಮಾತುಕತೆ – ಉನ್ನತ ಮಟ್ಟದ ತನಿಖೆಗೆ ಸೂಚನೆ

ವಿಟ್ಲ: ಈಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ಹಣ ದರೋಡೆ ನಡೆಸಿರುವ ಬಂಟ್ವಾಳ ತಾಲೂಕಿನ ಬೋಳಂತೂರು ನಾರ್ಶದ ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ಅವರ ಮನೆಗೆ ಸ್ಪೀಕರ್ ಯು.ಟಿ. ಖಾದರ್, ದ.ಕ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಬೆಳಗ್ಗೆ ಭೇಟಿ ನೀಡಿ ತನಿಖೆಯ ಪ್ರಗತಿ ಪರಿಶೀಲನೆ ಮತ್ತು ಕಾರ್ಯವಿಧಾನದ ಕುರಿತು ಮನೆಯವರ ಜೊತೆಗೆ ಸಮಾಲೋಚನೆ ನಡೆಸಿದರು.

ಬಳಿಕ ಮಾತನಾಡಿದ ಯು.ಟಿ.ಖಾದರ್ ತನಿಖೆ ಇನ್ನಷ್ಟು ತೀವ್ರಗೊಳಿಸಲು ಪೊಲೀಸ್ ಇಲಾಖೆಯು ಆಧುನಿಕ ತಂತ್ರಜ್ಞಾನದೊಂದಿಗೆ ಉನ್ನತ ಮಟ್ಟದ ತನಿಖೆ ನಡೆಸುತ್ತಿದೆ. ಇದಕ್ಕೆ ಊರವರ ಮತ್ತು ಮನೆಯವರ ಸಹಕಾರ ಅಗತ್ಯ. ಈಗಾಗಲೇ ಡಿವೈಎಸ್ಪಿ ನೇತೃತ್ವದ 4 ತಂಡಗಳನ್ನು ರಚಿಸಲಾಗಿದೆ. ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಶೀಘ್ರವೇ ದರೋಡೆಕೋರರ ಪತ್ತೆ ಹಚ್ಚುವಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ವಿವರ ನೀಡಿದರು.

ಇದಕ್ಕೂ ಮುನ್ನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯತೀಶ್ ಎನ್, ಡಿವೈಎಸ್ಪಿ ವಿಜಯ ಪ್ರಸಾದ್ ಜೊತೆಗೆ ದರೋಡೆಗೊಳಗಾದ ಮನೆಯ ಮಾಲಕ ಸುಲೈಮಾನ್ ಹಾಜಿ ಹಾಗೂ ಪುತ್ರ ಇಕ್ಬಾಲ್ ಜೊತೆಗೆ ಮಾತುಕತೆ ನಡೆಸಿದರು. ವಿಟ್ಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಎಚ್.ಇ. ನಾಗರಾಜ್, ಸಬ್ ಇನ್ಸ್ ಪೆಕ್ಟರ್ ವಿದ್ಯಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here