ಆಲಂಕಾರು: ಆಲಂಕಾರು ಗ್ರಾಮದ ನೆಕ್ಕಿಲಾಡಿ ವಿನೋದ ಎಂಬವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಚಿನ್ನಾಭರಣ ಮತ್ತು ಬೆಲೆಬಾಳುವ ದಾಖಲೆಗಳು ಸುಟ್ಟು ಹೋದ ಘಟನೆ ಜ.7 ರಂದು ರಾತ್ರಿ ನಡೆದಿದೆ.
ವಿನೋದರ ಮಕ್ಕಳು ಆಲಂಕಾರು ದುರ್ಗಾಂಬಾ ಪದವಿ ಪೂರ್ವ ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಜ.7 ರಂದು ದುರ್ಗಾಂಬಾ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವಕ್ಕೆ ತೆರಳಿದ್ದರು. ರಾತ್ರಿ 7:30 ರ ಸಮಯದಲ್ಲಿ ಬೆಂಕಿ ಉರಿಯುವ ಶಬ್ದ ಪಕ್ಕದ ಮನೆಯವರಿಗೆ ಕೇಳಿ ಬಂದಿದ್ದು, ಈ ವೇಳೆ ವಿನೋದರಿಗೆ ಪೋನ್ ಮೂಲಕ ಸಂಪರ್ಕಿಸಿ ಮಾಹಿತಿ ನೀಡಿದ್ದರು. ಅಕ್ಕ-ಪಕ್ಕದ ಮನೆಯವರು ಮನೆಯ ಹಂಚು ಹೊಡೆದು ಬೆಂಕಿಯನ್ನು ನಂದಿಸಿದ್ದಾರೆ. ಮನೆಗೆ ಯಾವ ಕಾರಣದಿಂದ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿದು ಬಂದಿಲ್ಲ.
ನಾವು ಅರ್ಥಿಕವಾಗಿ ಹಿಂದುಳಿದಿದ್ದು, ಚಿನ್ನಾಭರಣ ಹಾಗೂ ಬೆಲೆಬಾಳುವ ದಾಖಲೆಗಳು ಸುಟ್ಟು ಕರಕಲಾಗಿದೆ ಎಂದು ಮನೆಯವರು ಬೇಸರ ವ್ಯಕ್ತಪಡಿಸಿದರು. ಘಟನಾ ಸ್ಥಳಕ್ಕೆ ಆಲಂಕಾರು ಗ್ರಾ.ಪಂ ಅಧ್ಯಕ್ಷರಾದ ಸುಶೀಲ,ಅಭಿವೃದ್ಧಿ ಅಧಿಕಾರಿ ಸುಜಾತ,ಕಾರ್ಯದರ್ಶಿ ವಸಂತ ಶೆಟ್ಟಿ, ಗ್ರಾಮ ಆಡಳಿತಾಧಿಕಾರಿ ಪ್ರೇಮಲತಾ, ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜು ಮುಖ್ಯಗುರು ನವೀನ್ ಕುಮಾರ್ ರೈ , ಮೆಸ್ಕಾಂ ಶಾಖಾಧಿಕಾರಿ ಪ್ರೇಮ್ ಕುಮಾರ್ ಸೇರಿದಂತೆ ಹಲವು ಮಂದಿ ಭೇಟಿ ನೀಡಿದರು.