ಪುತ್ತೂರು: 9 ವರ್ಷದ ಹಿಂದೆ ಕಡಬ ಠಾಣಾ ವ್ಯಾಪ್ತಿಯ ಮರ್ದಾಳ ಎಂಬಲ್ಲಿ ಮಹಿಳೆಯೋರ್ವರ ಮಾನಭಂಗ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ಎದುರಿಸುತ್ತಿದ್ದ ಆರೋಪಿಯನ್ನು ಪುತ್ತೂರು ನ್ಯಾಯಾಲಯ ದೋಷ ಮುಕ್ತಗೊಳಿಸಿ ಬಿಡುಗಡೆಗೊಳಿಸಿದೆ.
2015ರ ಡಿಸೆಂಬರ್ ತಿಂಗಳಲ್ಲಿ ಕಡಬ ತಾಲೂಕಿನ ಮರ್ದಾಳ ಎಂಬಲ್ಲಿ ಮಹಿಳೆಯೊರ್ವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ಮಹಿಳೆಯ ಮಕ್ಕಳ ಸಮ್ಮುಖದಲ್ಲಿ, ಆಕೆಯ ಮಾನಭಂಗಕ್ಕೆ ಪ್ರಯತ್ನಿಸಿ ಕೊಲ್ಲುವುದಾಗಿ ಬೆದರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ತದನಂತರ ಈ ಪ್ರಕರಣದ ಆರೋಪಿ ಮೊಹಮ್ಮದ್ ಶರೀಫ್ ಎಂಬಾತನನ್ನು ಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ಬಳಿಕ ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯು,ತನ್ನ ಮೇಲೆ ಹಲ್ಲೆ ನಡೆಸಿದ ಬಗ್ಗೆ ದೂರುದಾರೆ ಮಹಿಳೆ ಹಾಗೂ ಆಕೆಯ ಸಂಬಂಧಿಕರಾದ ಕೋಲ್ಪೆ ನಿವಾಸಿಗಳ ವಿರುದ್ಧ ತದನಂತರ ದೂರನ್ನು ದಾಖಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುತ್ತೂರು ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹಾಗೂ ಪ್ರಥಮ ದರ್ಜೆ ನ್ಯಾಯಕ ದಂಡಾಧಿಕಾರಿ ನ್ಯಾಯಾಲಯದ, ನ್ಯಾಯಾಧೀಶರಾದ ಯೋಗೇಂದ್ರ ಶೆಟ್ಟಿ ಯವರು, ಸಾಕ್ಷಿಗಳ ವಿಚಾರಣೆಯನ್ನು ನಡೆಸಿ, ಆರೋಪಿ ವಿರುದ್ಧ ಆರೋಪ ಸಾಬೀತುಪಡಿಸಲು ಅಭಿಯೋಜನ ಪಕ್ಷವು ವಿಫಲವಾದ ಹಿನ್ನೆಲೆಯಲ್ಲಿ, ಆರೋಪಿಯನ್ನು ದೋಷ ಮುಕ್ತಗೊಳಿಸಿ ಬಿಡುಗಡೆಗೆ ಆದೇಶಿಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿ ಪರವಾಗಿ ನ್ಯಾಯವಾದಿಗಳಾದ ನೂರುದ್ದೀನ್ ಸಾಲ್ಮರ, ಹರೀಶ್ ಕುಮಾರ್ ಎಂ ಮತ್ತು ಸಾತ್ವಿಕ್ ಆರಿಗ ಬಿ ವಾದಿಸಿದ್ದರು.