ಆಶಾ ಕಾರ್ಯಕರ್ತೆಯರಿಗೆ 9,500 ರೂ. ಮುಂಗಡ ನೀಡಲು ಸಿದ್ಧ-ಮುಷ್ಕರ ಸ್ಥಳಕ್ಕೆ ಭೇಟಿ ನೀಡಿದ ಸಚಿವ ದಿನೇಶ್ ಗುಂಡೂರಾವ್ ಭರವಸೆ

0

ಬೆಂಗಳೂರು:ಆಶಾ ಕಾರ್ಯಕರ್ತೆಯರಿಗೆ ಪ್ರಸ್ತುತ ನೀಡುತ್ತಿರುವ 8 ಸಾವಿರ ರೂ.ಖಚಿತ ಗೌರವಧನದ ಬದಲಾಗಿ 9,500 ರೂಪಾಯಿಗಳನ್ನು ಮುಂಗಡವಾಗಿ ನೀಡಲು ಸರಕಾರ ಸಿದ್ಧ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.


ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಸಚಿವರು, ಮುಷ್ಕರ ಕೈ ಬಿಟ್ಟು ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕು.ಹೆಚ್ಚಿನ ಪ್ರೋತ್ಸಾಹಧನ ಕೇಂದ್ರ ಸರಕಾರದ ಅನುದಾನದ ಮೇಲೆ ಒದಗಿಸಲಾಗುತ್ತಿದೆ.ಆರ್.ಸಿ.ಎಚ್ ಪೊರ್ಟಲ್‌ನಲ್ಲಿ ಆಶಾ ಕಾರ್ಯಕರ್ತೆಯರ ಕಾರ್ಯಚಟುವಟುಕೆಗಳ ಆಧಾರದ ಮೇಲೆ ಪ್ರೋತ್ಸಾಹಧನ ಲಭ್ಯವಾಗುವಂಥದ್ದು ಎಂದರು.


ಪ್ರಸ್ತುತ ಗೌರವಧನ ಹಾಗೂ ಪ್ರೋತ್ಸಾಹಧನ ಸೇರಿ ಸರಾಸರಿ ಒಬ್ಬ ಆಶಾ ಕಾರ್ಯಕರ್ತೆಗೆ ಮಾಸಿಕ 9,500 ರೂ.ಪಾವತಿ ಮಾಡಲಾಗುತ್ತಿದೆ.ಇದನ್ನು ಮುಂಗಡವಾಗಿ ಆಶಾ ಕಾರ್ಯಕರ್ತೆಯರಿಗೆ ಒದಗಿಸಲು ಸಿದ್ಧ.ಆದರೆ ಗೌರವಧನದ ಹೊರತಾಗಿ ಆಶಾ ಕಾರ್ಯಕರ್ತೆಯರಿಗೆ ಲಭ್ಯವಾಗುತ್ತಿರುವ ಪ್ರೋತ್ಸಾಹಧನವನ್ನೂ ಮಾಸಿಕ ವೇತನದ ರೂಪದಲ್ಲಿ ನಿಗದಿಪಡಿಸಿ ನೀಡುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ ಎಂದು ಅವರು ತಿಳಿಸಿದರು.


ಗೌರವ ಧನ ಹೆಚ್ಚಳಕ್ಕೆ ಸಿಎಂ ಜೊತೆ ಚರ್ಚೆ:
ಮುಂಬರುವ ರಾಜ್ಯ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು.ರಾಜ್ಯ ಸರಕಾರದಿಂದ ನೀಡುತ್ತಿರುವ ಗೌರವಧನ ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಸಕಾರಾತ್ಮಕ ಚಿಂತನೆ ಹೊಂದಿದ್ದಾರೆ.ಈ ಬಾರಿಯ ಬಜೆಟ್‌ನಲ್ಲಿ ಈ ಬಗ್ಗೆ ನಿರ್ಧಾರ ಹೊರಬೀಳಲಿದೆ.ಹೀಗಾಗಿ ಆಶಾ ಕಾರ್ಯಕರ್ತೆಯರು ಮುಷ್ಕರ ಕೈ ಬಿಡಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಮನವಿ ಮಾಡಿದರು.


ರಜೆ ಕೇಳುವುದು ಹಕ್ಕು:
ರಜೆಗಳನ್ನು ಕೇಳುವುದು ಆಶಾ ಕಾರ್ಯಕರ್ತೆಯರ ಹಕ್ಕು. ಈ ನಿಟ್ಟಿನಲ್ಲಿ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.


ಬೇಡಿಕೆ ಈಡೇರುವವರೆಗೆ ಮುಷ್ಕರ ಮುಂದುವರಿಕೆ:
ಸಚಿವರ ಭೇಟಿ ನಂತರವೂ ಸಂಘದ ಮುಖಂಡರು ಸಭೆ ನಡೆಸಿದ್ದು, ಈಗಾಗಲೇ ಈ ಎಲ್ಲ ಸಮಸ್ಯೆಗಳ ಕುರಿತು, ವಿವಿಧ ಹಂತದಲ್ಲಿ 16ಕ್ಕೂ ಹೆಚ್ಚು ಸಭೆಗಳು ನಡೆದಿವೆ.ಆದರೆ ಈ ಸಮಸ್ಯೆಗಳು ಬಗೆಹರಿದಿಲ್ಲ.ಅಲ್ಲದೇ ನಿಶ್ಚಿತವಾಗಿ 15 ಸಾವಿರ ರೂ.ಗೌರವಧನವನ್ನು ನಿಗದಿ ಮಾಡಬೇಕು.ಇದನ್ನು ಒಪ್ಪುವವರೆಗೂ ಮುಷ್ಕರ ಮುಂದುವರಿಸಲು ನಿರ್ಧರಿಸಿದ್ದಾರೆ.

ಮುಷ್ಕರ ಮೂರನೇ ದಿನಕ್ಕೆ
ರೂ.15 ಸಾವಿರ ಗೌರವಧನ ನೀಡುವುದು ಸೇರಿದಂತೆ ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫ್ರೀಡಂ ಪಾರ್ಕ್‌ನಲ್ಲಿ ಶುರುವಾದ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಮುಷ್ಕರ ಎರಡನೆಯ ದಿನ ಜ.8ರಂದೂ ಮುಂದುವರೆದಿದೆ.ಬುಧವಾರ ಫ್ರೀಡಂಪಾರ್ಕ್ ಕಿಕ್ಕಿರಿದು ತುಂಬಿತ್ತಲ್ಲದೇ ಸುತ್ತಲ ರಸ್ತೆಗಳು, ಖಾಲಿ ಜಾಗಗಳು ಅಶಾ ಕಾರ್ಯಕರ್ತೆಯರಿಂದ ಭರ್ತಿಯಾಗಿತ್ತು.
ಆಶಾ ಕಾರ್ಯಕರ್ತೆಯರು ಮುಷ್ಕರದಲ್ಲಿ ಭಾಗವಹಿಸಿದರೆ ಬೇರೆಯವರನ್ನು ನೇಮಿಸಲಾಗುವುದು ಎಂದು ಆರೋಗ್ಯ ಇಲಾಖೆ ಬೆದರಿಕೆ ಹಾಕಿದ್ದರೂ, ಇದಕ್ಕೆ ಬಗ್ಗದೆ ೨೫ ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಕೊರೆಯುವ ಚಳಿಯ ನಡುವೆಯೂ ರಾತ್ರಿ ರಸ್ತೆಯಲ್ಲಿಯೇ ಮಲಗಿ, ತಮ್ಮ ಹೋರಾಟವನ್ನು ಮುಂದುವರೆಸುತ್ತಿದ್ದಾರೆ.
ಆಶಾಗಳ ಹೋರಾಟ ಬೆಂಬಲಿಸಿ ಮಾತನಾಡಿದ ವಿಶ್ರಾಂತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ, ಜೀವನಕ್ಕೆ ಅವಶ್ಯಕವಾದ ವೇತನವನ್ನು ಪಡೆಯುವುದು ಮಾನವನ ಹಕ್ಕಾಗಿದ್ದು, ರಾಜ್ಯ ಸರಕಾರವು ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನವನ್ನು ನಿರಾಕರಿಸುತ್ತಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದರು.ರಾಜ್ಯ ಸಂಯುಕ್ತ ಆಶಾಕಾರ್ಯಕರ್ತೆಯರ ಸಂಘದ ರಾಜ್ಯ ಅಧ್ಯಕ್ಷ ಸೋಮಶೇಖರ್ ಯಾದಗಿರಿ,ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎ.ಮುರಿಗೆಪ್ಪ, ಸಾಹಿತಿ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಮತ್ತಿತತರು ಇದ್ದರು.

LEAVE A REPLY

Please enter your comment!
Please enter your name here