ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ರಕ್ಷಕ – ಶಿಕ್ಷಕ ಸಂಘ ಇದರ ಆಶ್ರಯದಲ್ಲಿ ಜ.11 ಹಾಗೂ 13 ರಂದು ಕಾಲೇಜು ಸಭಾಂಗಣದಲ್ಲಿ ಮುಂಬರುವ ದ್ವಿತೀಯ ಪಿ.ಯು.ಸಿ ಪರೀಕ್ಷೆಗಳ ತಯಾರಿ ನಡೆಸುವಲ್ಲಿ ವಿದ್ಯಾರ್ಥಿಗಳ, ಪೋಷಕರ ಹಾಗೂ ಶಿಕ್ಷಕರ ಜವಾಬ್ದಾರಿ ಹಾಗೂ ಕರ್ತವ್ಯಗಳ ಬಗ್ಗೆ ಸಮಾಲೋಚನೆ ಮತ್ತು ಮಾಹಿತಿ ಸಭೆಯನ್ನು ನಡೆಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಸುಬ್ಬಪ್ಪ ಕೈಕಂಬ ಮಾತನಾಡಿ, ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಬದುಕಿನ ಅತ್ಯಂತ ಮಹತ್ವದ ಘಟ್ಟವಾಗಿದ್ದು, ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿರುತ್ತದೆ. ಈ ಸಂದರ್ಭದಲ್ಲಿ ಪೋಷಕರು ವಿದ್ಯಾರ್ಥಿಗಳ ಬಗ್ಗೆ ನಿಗಾ ವಹಿಸಿ ನೋಡಿಕೊಳ್ಳಬೇಕು. ಪೋಷಕರಿಗೆ ತಮ್ಮ ಮಕ್ಕಳ ಬಗ್ಗೆ ನಂಬಿಕೆ ಅತ್ಯಂತ ಮುಖ್ಯ. ಮಕ್ಕಳ ಪರೀಕ್ಷಾ ತಯಾರಿ ಸಂದರ್ಭದಲ್ಲಿ ಅವರಿಗೆ ಸಾತ್ವಿಕ ಆಹಾರವನ್ನು ನೀಡುವುದರ ಜೊತೆಗೆ ಮನೆಯಲ್ಲಿ ಉತ್ತಮ ವಾತಾವರಣವನ್ನು ನಿರ್ಮಿಸುವ ಜವಾಬ್ದಾರಿ ಪೋಷಕರದ್ದಾಗಿರುತ್ತದೆ. ವಿದ್ಯಾರ್ಥಿಗಳು ಕೂಡ ಇಷ್ಟ ಪಟ್ಟು ಅಧ್ಯಯನ ನಡೆಸಬೇಕು. ಇಂದು ವಿದ್ಯಾರ್ಥಿಗಳು ಹಾಕುವ ಶ್ರಮ ಮುಂದಿನ ಜೀವನಕ್ಕೆ ನಾಂದಿಯಾಗಿರುತ್ತದೆ. ಹಾಗಾಗಿ ಶ್ರಮ ವಹಿಸಿ ಅಧ್ಯಯನ ಮಾಡಬೇಕು. ಪರೀಕ್ಷಾ ದಿನಾಂಕಗಳನ್ನು ಸರಿಯಾಗಿ ಗಮನಿಸಿ. ಪ್ರಾಯೋಗಿಕ ಪರೀಕ್ಷೆಗಳಿಗೂ ಉತ್ತಮ ರೀತಿಯಲ್ಲಿ ತಯಾರಿ ನಡೆಸಬೇಕು. ಯಾವುದೇ ಸಂದರ್ಭದಲ್ಲಿ ನಿರೀಕ್ಷಿಸಿದ ಅಂಕ ಬಾರದೆ ಹೋದರೆ ನಿರಾಶರಾಗಬೇಡಿ. ವಿದ್ಯಾಭ್ಯಾಸದ ಅಂತಿಮ ಗುರಿ ಅಂಕ ಗಳಿಕೆಯಾಗಿರದೆ ಜ್ಞಾನ ವೃದ್ಧಿ ಆಗಿರುತ್ತದೆ. ಹಾಗಾಗಿ ಶ್ರದ್ದೆಯಿಂದ ಅಧ್ಯಯನ ಮಾಡಿ ಪರೀಕ್ಷೆಗಳನ್ನು ಎದುರಿಸಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯ ಸಂದರ್ಭದಲ್ಲಿ ನಡೆಸಬೇಕಾದ ಪೂರ್ವ ಸಿದ್ಧತೆಗಳ ಬಗ್ಗೆ, ಹೆತ್ತವರು ವಿದ್ಯಾರ್ಥಿಗಳ ಕಡೆಗೆ ಯಾವ ರೀತಿ ಗಮನ ಹರಿಸಬೇಕು ಎಂಬುದರ ಕುರಿತು ಮಾತನಾಡಿದರು.
ಎನ್.ಸಿ.ಇ.ಆರ್.ಟಿ ನವದೆಹಲಿ ಹಾಗೂ ಶಾಲಾ ಶಿಕ್ಷಣ ಸಚಿವಾಲಯ ಭಾರತ ಸರ್ಕಾರ ಆಯೋಜನೆಯಲ್ಲಿ ಜನವರಿ 2 ರಿಂದ 8 ರವರೆಗೆ ಮಧ್ಯ ಪ್ರದೇಶದ ಬೋಪಾಲ್ ನಲ್ಲಿ ನಡೆದ 2024-25 ರ ಸಾಲಿನ ರಾಷ್ಟ್ರಮಟ್ಟದ ‘ಕಲಾ ಉತ್ಸವ’ ದಲ್ಲಿ ಭಾಗವಹಿಸಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಹಾಗೂ ಜನವರಿ 23 ರಿಂದ ನವದೆಹಲಿಯಲ್ಲಿ ನಡೆಯಲಿರುವ ಪರೀಕ್ಷಾ ಪೇ ಚರ್ಚಾ ಮತ್ತು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲಿರುವ ದ್ವಿತೀಯ ವಿಜ್ಞಾನ ವಿಭಾಗದ ಪ್ರಾರ್ಥನಾ. ಬಿ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಡಾ. ಪ್ರಕಾಶ್. ಬಿ ಉಪಸ್ಥಿತರಿದ್ದರು. ಕಾಲೇಜಿನ ಬೋಧಕ/ಬೋಧಕೇತರ ವರ್ಗ ದ್ವಿತೀಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಗೂ ಹೆತ್ತವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ರಕ್ಷಕ-ಶಿಕ್ಷಕ ಸಂಘದ ನಿರ್ದೇಶಕರಾದ ಯಶವಂತ್ ಎಂ. ಡಿ ಸ್ವಾಗತಿಸಿ, ಸಂಜಯ್. ಎಸ್ ವಂದಿಸಿ, ಉಪನ್ಯಾಸಕರಾದ ಉಷಾ. ಎ ಕಾರ್ಯಕ್ರಮ ನಿರೂಪಿಸಿದರು.