ಬನ್ನೂರು ನವೋದಯ ಯುವಕ ವೃಂದದಿಂದ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ, ಯುವಜನೋತ್ಸವ

0

ಪುತ್ತೂರು: ನವೋದಯ ಯುವಕ ವೃಂದ ಬನ್ನೂರು, ನವೋದಯ ಯುವತಿ ವೃಂದ ಬನ್ನೂರು, ನವೋದಯ ಮಹಿಳಾ ಮಂಡಲ ಬನ್ನೂರು ವತಿಯಿಂದ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ ಮತ್ತು ಯುವಜನೋತ್ಸವ ಕಾರ್ಯಕ್ರಮ ಜ.11ರಂದು ಬನ್ನೂರು ನವೋದಯ ಯುವಕ ವೃಂದದ ಕಟ್ಟಡದಲ್ಲಿ ನಡೆಯಿತು.


ಬೆಳಿಗ್ಗೆ ಕೆದಂಬಾಡಿ ರವಿರಾಮ ಭಟ್‌ರವರ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಯುವಜನೋತ್ಸವ-2025 ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.


ರಾತ್ರಿ ಸಭಾಕಾರ್ಯಕ್ರಮ ನಡೆಯಿತು. ಬೆಳ್ತಂಗಡಿ ಪದ್ಮುಂಜ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪ್ರಭಾ ಹೆಗ್ಡೆ ಕೆ. ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ನಮ್ಮ ಧರ್ಮದ ಬಗ್ಗೆ ಬಗ್ಗೆ ತಿಳುವಳಿಕೆ ನೀಡುವುದು ಅತ್ಯಂತ ಅಗತ್ಯವಾಗಿದೆ ಎಂದರು. ನಗರಸಭೆಯ ಉಪಾಧ್ಯಕ್ಷ ಬಾಲಚಂದ್ರ ಮಾತನಾಡಿ, ಸಣ್ಣ ಮಕ್ಕಳಿಂದಲೇ ನಮ್ಮ ಒಳಗಿನ ಸಂಬಂಧಗಳ ಬಗ್ಗೆ ಅಂದರೆ ಅಜ್ಜ ಅಜ್ಜಿ ಚಿಕ್ಕಪ್ಪ ಚಿಕ್ಕಮ್ಮ ದೊಡ್ಡಮ್ಮ ದೊಡ್ಡಪ್ಪ ಹಾಗೂ ಮಾನವೀಯ ಸಂಬಂಧಗಳ ಬಗ್ಗೆ ಮಕ್ಕಳ ಮಾನಸಿಕ ನೈತಿಕತೆಯನ್ನು ಸಣ್ಣದರಿಂದಲೇ ಅತ್ಯಂತ ಚೆನ್ನಾಗಿ ಬೆಳೆಸಬೇಕು ಎಂದರು.

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ ನಮ್ಮ ಸಂಸ್ಕೃತಿ ಪದ್ಧತಿ ಹಾಗೂ ಆಚರಣೆಯ ಬಗ್ಗೆ ಯುವಜನತೆಗೆ ತಿಳಿಯಪಡಿಸುವುದು ಮತ್ತು ಅದರ ಅಗತ್ಯತೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಈಗ ಅನಿವಾರ್ಯವಾಗಿದೆ ಎಂದರು.
ಅಧ್ಯಕ್ಷತೆಯನ್ನು ನವೋದಯ ಯುವಕ ವೃಂದದ ಅಧ್ಯಕ್ಷ ರಾಧಾಕೃಷ್ಣ ರೈ ವಹಿಸಿದ್ದರು. ನಗರಸಭಾ ನಾಮನಿರ್ದೇಶಿತ ಸದಸ್ಯ ರೋಶನ್ ರೈ ಬನ್ನೂರು, ನಗರಸಭೆ ಸದಸ್ಯೆ ಮೋಹಿನಿ ವಿಶ್ವನಾಥ ಗೌಡ, ಬನ್ನೂರು ನವೋದಯ ಯುವಕ ವೃಂದದ ಗೌರವಾಧ್ಯಕ್ಷ ಅಂಗಾರ ಪಿ, ಬನ್ನೂರು ನವೋದಯ ಮಹಿಳಾ ಮಂಡಲ ಅಧ್ಯಕ್ಷೆ ನಳಿನಿ ಎಸ್. ಪೂಜಾರಿ ಬನ್ನೂರು, ರೋಹಿತ್ ರೈ ಬನ್ನೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ: ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನೂತನ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹಾಗೂ ನಗರಸಭಾ ಉಪಾಧ್ಯಕ್ಷ ಬಾಲಚಂದ್ರರವರನ್ನು ಬನ್ನೂರು ನವೋದಯ ಯುವಕ ವೃಂದದ ವತಿಯಿಂದ ಸನ್ಮಾನಿಸಲಾಯಿತು.

ನವೋದಯ ಯುವಕ ವೃಂದದ ಅಧ್ಯಕ್ಷ ರಾಧಾಕೃಷ್ಣ ರೈ ಸ್ವಾಗತಿಸಿ ನಗರಸಭಾ ಸದಸ್ಯೆ ಗೌರಿ ಬನ್ನೂರು ವಂದಿಸಿದರು. ನಗರಸಭಾ ನಿವೃತ್ತ ಉದ್ಯೋಗಿ ರಾಧಾಕೃಷ್ಣ ಗೌಡ ಕಾರ್ಯಕ್ರಮ ನಿರೂಪಿಸಿದರು. ಬನ್ನೂರು ನವೋದಯ ಯುವಕ ವೃಂದದ ಸದಸ್ಯರಾದ ಉಮೇಶ್ ಶೆಟ್ಟಿ ಆನೆಮಜಲು, ಆನಂದ ಕುಲಾಲ್, ಪವನ್ ಆಚಾರ್ಯ, ಚಂದ್ರಶೇಖರ, ಗೋಪಾಲ್, ಹೊನ್ನಪ್ಪ ಪೂಜಾರಿ ಸೇರಿದಂತೆ ಹಲವು ಸದಸ್ಯರು ಸಹಕರಿಸಿದರು. ರಾತ್ರಿ ವಿಠಲ ನಾಯಕ್ ಕಲ್ಲಡ್ಕ ಮತ್ತು ತಂಡದವರಿಂದ ಗೀತಾ-ಸಾಹಿತ್ಯ-ಸಂಭ್ರಮ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here