ಪುರುಷರಕಟ್ಟೆಯಲ್ಲಿ ಕ್ಯಾಸ್ಟಲಿನೋ ಪ್ರಾವಿಡೆನ್ಸ್ ಚ್ಯಾರಿಟೇಬಲ್ ಟ್ರಸ್ಟ್‌ನಿಂದ ವಯೋವೃದ್ಧರ ಪುನರ್ವಸತಿ ಕಟ್ಟಡದ ಶಿಲಾನ್ಯಾಸ

0

ಪುತ್ತೂರು: ‘ಅಗತ್ಯವಿರುವವರಿಗೆ ಸಹಾಯಹಸ್ತ ನೀಡಿ, ಬಡವರಿಗೆ ಬಡತನದಿಂದ ಪಾರಾಗಲು ಸಹಾಯ ಮಾಡಿ’ ಎಂಬ ಧ್ಯೇಯವಾಕ್ಯದೊಂದಿಗೆ ಕ್ಯಾಸ್ಟಲಿನೋ ಪ್ರಾವಿಡೆನ್ಸ್ ಚ್ಯಾರಿಟೇಬಲ್ ಟ್ರಸ್ಟ್(ಸಿಪಿಸಿಟಿ)ನಿಂದ ಪುರುಷರಕಟ್ಟೆಯಲ್ಲಿನ ಸುಮಾರು ಮೂರು ಎಕರೆ ತಮ್ಮ ಸ್ವಂತ ಜಾಗದಲ್ಲಿ ಅಸಹಾಯಕ ವಯೋವೃದ್ಧರಿಗೆ ಪುನರ್ವಸತಿ ನಿರ್ಮಿಸುವ ಉದ್ಧೇಶದಿಂದ ಎಲ್ಲಾ ಸೌಕರ್ಯಗಳನ್ನು ಒಳಗೊಂಡ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಜ.12 ರಂದು ಬೆಳಿಗ್ಗೆ ನೆರವೇರಿತು.


ಮಂಗಳೂರಿನ ಸಂತ ಅಂತೋನಿ ಆಶ್ರಮದಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ 94 ವರ್ಷದ ಹಿರಿಯ ಧರ್ಮಗುರು, ಇಲ್ಲಿನ ಕಲ್ಲಾರೆ ಪ್ರಾವಿಡೆನ್ಸ್ ಕಾಟೇಜ್‌ನ ವಂ|ಕ್ಲಿಫರ್ಡ್ ಡಿ’ಸೋಜರವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ನೂತನ ಕಟ್ಟಡದ ಶಿಲಾನ್ಯಾಸಕ್ಕೆ ಪವಿತ್ರ ಜಲ ಸಿಂಪಡಿಸಿ ಶುಭ ಹಾರೈಸಿದರು. ಕ್ಯಾಸ್ಟಲಿನೋ ಪ್ರಾವಿಡೆನ್ಸ್ ಚ್ಯಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಡ್ಯಾಪ್ನಿ ಕ್ಯಾಸ್ಟಲಿನೋ, ಡಾ.ವಿವಿಯನ್ ಕ್ಯಾಸ್ಟಲಿನೋರವರ ಸಹೋದರಿ ಹಿಲ್ಡಾ ಕ್ಯಾಸ್ಟಲಿನೋರವರು ಬೈಬಲ್ ವಾಚಿಸಿ ಪ್ರಾರ್ಥಿಸಿದರು.


ಕ್ಯಾಸ್ಟಲಿನೋ ಪ್ರಾವಿಡೆನ್ಸ್ ಚ್ಯಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ವಂ|ಕ್ಲಿಫರ್ಡ್ ಡಿ’ಸೋಜರವರ ಸಹೋದರಿ, ಗೇಮ್ಸ್ ಟೀಚರ್ ಎಂದೇ ಪ್ರಸಿದ್ಧರಾದ 96 ವರ್ಷದ ಕು.ಹಿಲ್ಡಾ ಡಿ’ಸೋಜ ಕಲ್ಲಾರೆ, ಶ್ರೀಮತಿ ಡ್ಯಾಪ್ನಿ ಕ್ಯಾಸ್ಟಲಿನೋ, ಡಾ.ವಿವಿಯನ್ ಕ್ಯಾಸ್ಟಲಿನೋ, ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಉದ್ಯಮಿಗಳಾದ ಶಿವರಾಮ ಆಳ್ವ, ಕಿರಣ್ ಎಂಟರ್‌ಪ್ರೈಸಸ್‌ನ ಕೇಶವ, ರಿಚರ್ಡ್ ಕ್ಯಾಸ್ಟಲಿನೋ ಮಂಗಳೂರುರವರು ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸುವಲ್ಲಿ ಸಹಕರಿಸಿದರು. ನೂತನ ಕಟ್ಟಡವು ಜೆ.ಕೆ ಕನ್‌ಸ್ಟ್ರಕ್ಷನ್ ಆಂಡ್ ಡೆವಲಪರ‍್ಸ್‌ನ ಜಯಕುಮಾರ್ ನಾಯರ್ ಹಾಗೂ ಅವರ ಪುತ್ರ ಇಂಜಿನಿಯರ್ ಸಿದ್ಧಾರ್ಥ್ ನಾಯರ್‌ರವರ ಮುಂದಾಳತ್ವದಲ್ಲಿ ನಿರ್ಮಾಣಗೊಳ್ಳಲಿದೆ.


50 ಕೋಟಿ ರೂ. ಪ್ರಾಜೆಕ್ಟ್‌ನ 2 ಕಟ್ಟಡಗಳು:
ಕ್ಯಾಸ್ಟಲಿನೋ ಪ್ರಾವಿಡೆನ್ಸ್ ಚ್ಯಾರಿಟೇಬಲ್ ಟ್ರಸ್ಟ್ 2015ರಲ್ಲಿ ಭಾರತ ಸರಕಾರದಿಂದ ನೋಂದಾಯಿತಗೊಂಡ ಸಂಸ್ಥೆಯಾಗಿದೆ. ಇದೀಗ ಈ ಸಂಸ್ಥೆಯು ನಿರಾಶ್ರಿತ ವಯೋವೃದ್ಧರಿಗೆ ಒಂದು ಸುಸಜ್ಜಿತ ಸೂರನ್ನು ಒದಗಿಸಲು ಅದರಲ್ಲೂ ಉಚಿತವಾಗಿ ನೀಡುವ ಉದ್ಧೇಶದೊಂದಿಗೆ ಕಾರ್ಯೋನ್ಮುಖವಾಗಿದೆ. ಇಲ್ಲಿನ ಮೂರು ಎಕರೆ ಜಾಗದಲ್ಲಿ ಒಂದು ನಿರಾಶ್ರಿತ ವಯೋವೃದ್ಧರಿಗೆ ಉಚಿತವಾಗಿ ಉಳಕೊಳ್ಳಲು, ಮತ್ತೊಂದು ಮಕ್ಕಳು ವಿದೇಶದಲ್ಲಿ ಅಥವಾ ದೂರದ ಊರಿನಲ್ಲಿದ್ದು ತಮ್ಮ ಹೆತ್ತವರನ್ನು ನೋಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಣ ಪಾವತಿಸಿ ಅವರುಗಳಿಗೆ ಉಳಕೊಳ್ಳಲು ಹೀಗೆ ಎರಡು ಪ್ರತ್ಯೇಕ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. ಒಟ್ಟು ರೂ.50 ಕೋಟಿ ಬಜೆಟ್‌ನ ಕಟ್ಟಡಗಳಾಗಿದ್ದು, ಇದರಲ್ಲಿ ರೂ.30 ಕೋಟಿ ಕಟ್ಟಡ ನಿರ್ಮಾಣಕ್ಕೆ ಮತ್ತು ರೂ.20 ಕೋಟಿ ಜೀವನಾಂಶಕ್ಕೆ ಮೀಸಲಿಡಲಾಗುತ್ತಿದೆ.


ಈ ಸಂದರ್ಭದಲ್ಲಿ ಕಟ್ಟಡದ ಬಗೆಗಿನ ಸವಿಸ್ತಾರ ಮಾಹಿತಿಯನ್ನೊಳಗೊಂಡ ಬ್ರೋಶರ್ ಅನ್ನು ಬಿಡುಗಡೆಗೊಳಿಸಲಾಯಿತು. ಪ್ರಾವಿಡೆನ್ಸ್ ಫ್ಲಾಝಾದ ಕು.ಹಿಲ್ಡಾ ಡಿ’ಸೋಜರವರ ಹಿತೈಷಿಗಳು, ಕ್ಯಾಸ್ಟಲಿನೋ ಪ್ರಾವಿಡೆನ್ಸ್ ಚ್ಯಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಡಾ.ವಿವಿಯನ್ ಕ್ಯಾಸ್ಟಲಿನೋರವರ ಹಿತೈಷಿಗಳು, ಜೆ.ಕೆ ಕನ್‌ಸ್ಟ್ರಕ್ಷನ್‌ನ ಜಯಕುಮಾರ್ ನಾಯರ್, ಅವರ ಪತ್ನಿ, ಪುತ್ರ, ಪುತ್ರಿ ಉಪಸ್ಥಿತರಿದ್ದರು.


ವಯೋವೃದ್ಧರ ಮುಖದಲ್ಲಿ ಮಂದಹಾಸ ಕಾಣುವ ಇರಾದೆ..
ಪುರುಷರಕಟ್ಟೆಯಲ್ಲಿ ಹಲವು ವರ್ಷಗಳ ಹಿಂದೆ ಜಾಗವನ್ನು ಹೊಂದಿದ್ದು, ಕಳೆದ ಹತ್ತು ವರ್ಷದ ಹಿಂದೆ ನಿರಾಶ್ರಿತ ವಯೋವೃದ್ಧರಿಗೆ ಸೂರು ಕಲ್ಪಿಸಿಕೊಡಬೇಕು ಮಾತ್ರವಲ್ಲ ನಿಮ್ಮೊಂದಿಗೆ ನಾವಿದ್ದೇವೆ, ಏನೂ ಭಯಪಡಬೇಡಿ ಎಂಬಂತೆ ಅವರ ಮುಖದಲ್ಲಿ ಮಂದಹಾಸ ಕಾಣುವ ಇರಾದೆ ನಾವು ಹೊಂದಿದ್ದೆವು. ಒಟ್ಟು ಎರಡು ಕಟ್ಟಡಗಳನ್ನು ನಾವು ನಿರ್ಮಿಸುತ್ತಿದ್ದು ಸುಮಾರು 250 ಮಂದಿಗೆ ಇಲ್ಲಿ ಉಳಕೊಳ್ಳಲು ಅವಕಾಶವೊಂದನ್ನು ತೆರೆಯುತ್ತಿದ್ದು, ಪ್ರಸ್ತುತ 25 ಮಂದಿಗೆ ಈ ಅವಕಾಶವನ್ನು ಒದಗಿಸಿಕೊಡಲಿದ್ದೇವೆ. ಬಡತನದಲ್ಲಿರುವ ವಯೋವೃದ್ಧರಿಗೆ ಯಾವುದೇ ಫೀಸು ತೆಗೆದುಕೊಳ್ಳದೆ ಉಚಿತವಾಗಿ ಅವರನ್ನು ನೋಡಿಕೊಳ್ಳುವಂತೆ ಹಾಗೂ ಹಣ ಪಾವತಿಸಿ ಉಳಕೊಳ್ಳುವ ಮತ್ತೊಂದು ಕಟ್ಟಡದಲ್ಲಿನ ಲಾಭದಲ್ಲಿ ಬಡತನದಲ್ಲಿರುವ ವಯೋವೃದ್ಧರನ್ನು ನೋಡಿಕೊಳ್ಳುವ ಯೋಜನೆ ನಮ್ಮದಾಗಿದೆ. ಇದರಲ್ಲಿ ಯಾವುದೇ ಲಾಭ ಮಾಡಿಕೊಳ್ಳುವ ಉದ್ಧೇಶ ಸಂಸ್ಥೆ ಹೊಂದಿಲ್ಲ.
-ಡಾ.ವಿವಿಯನ್ ಕ್ಯಾಸ್ಟಲಿನೋ, ಟ್ರಸ್ಟಿ, ಕ್ಯಾಸ್ಟಲಿನೋ ಪ್ರಾವಿಡೆನ್ಸ್ ಚ್ಯಾರಿಟೇಬಲ್ ಟ್ರಸ್ಟ್

2026, ಡಿಸೆಂಬರ್ 30ಕ್ಕೆ ಲೋಕಾರ್ಪಣೆ..
ಈಗಾಗಲೇ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯವು ಯಶಸ್ವಿಯಾಗಿ ನಡೆದಿದ್ದು, ಈ ಕಟ್ಟಡಗಳ ನಿರ್ಮಾಣದ ಮೇಲ್ವಿಚಾರಣೆಯನ್ನು ಜೆ.ಕೆ ಕನ್‌ಸ್ಟ್ರಕ್ಷನ್‌ನ ಜಯಕುಮಾರ್ ನಾಯರ್, ಇಂಜಿನಿಯರ್ ಸಿದ್ಧಾರ್ಥ್ ನಾಯರ್‌ರವರು ನೋಡಿಕೊಳ್ಳುತ್ತಿದ್ದು ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಅಂದರೆ 2026, ಡಿಸೆಂಬರ್ 30ಕ್ಕೆ ನೂತನ ಕಟ್ಟಡದ ಲೋಕಾರ್ಪಣೆಯಾಗಲಿದೆ ಎಂದು ಕ್ಯಾಸ್ಟಲಿನೋ ಪ್ರಾವಿಡೆನ್ಸ್ ಚ್ಯಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಡಾ.ವಿವಿಯನ್ ಕ್ಯಾಸ್ಟಲಿನೋರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here