ಪಾಪೆಮಜಲು ಪ್ರೌಢಶಾಲೆಯಲ್ಲಿ ಹವಾನಿಯಂತ್ರಿತ ಕಂಪ್ಯೂಟರ್ ಕೊಠಡಿ ಸಹಿತ ವಿವಿಧ ಕಾಮಗಾರಿಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

0

ಪಾಪೆಮಜಲು ಪ್ರೌಢಶಾಲೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ-ಅಶೋಕ್ ರೈ

ಪುತ್ತೂರು: ಅರಿಯಡ್ಕ ಗ್ರಾಮದ ಪಾಪೆಮಜಲು ಸರಕಾರಿ ಪ್ರೌಢಶಾಲೆಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಜ.12ರಂದು ನಡೆಯಿತು. ಶಾಸಕರ ಅನುದಾನದಲ್ಲಿ(ರೂ.2 ಲಕ್ಷ) ನವೀಕರಣಗೊಂಡ ಗ್ರಂಥಾಲಯವನ್ನು ಹಾಗೂ ಎಂಆರ್‌ಪಿಎಲ್ ಸಂಸ್ಥೆಯವರ ರೂ.10 ಲಕ್ಷ ಅನುದಾನದಿಂದ ನಿರ್ಮಾಣಗೊಂಡ ಶೌಚಾಲಯ ಕಟ್ಟಡವನ್ನು ಅಶೊಕ್ ಕುಮಾರ್ ರೈ ಅವರು ಉದ್ಘಾಟಿಸಿದರು. ದಾನಿಗಳಾದ ವಾಸು ಪೂಜಾರಿ ಗುಂಡ್ಯಡ್ಕರವರು ಹವಾ ನಿಯಂತ್ರಿತ ಕಂಪ್ಯೂಟರ್ ಕೊಠಡಿಯನ್ನು ಉದ್ಘಾಟಿಸಿದರು.

ಕಂಪ್ಯೂಟರ್ ಮೇಜು, ಫ್ಯಾನ್ ಕೊಡುಗೆ:
ಅರಿಯಡ್ಕ ಗ್ರಾ.ಪಂ ಮಾಜಿ ಅಧ್ಯಕ್ಷೆ ಶಶಿಕಲಾ ಚೌಟ, ಶಶಿಧರ್ ಭಟ್ ಅಭಿನಂದನ ಕೊಯಿಲ, ಯೂಸುಫ್ ಹಾಜಿ ಬಂಡಸಾಲೆ ಶೇಖಮಲೆ ಹಾಗೂ ನಿವೃತ್ತ ಶಿಕ್ಷಕ ರಾಮಣ್ಣ ದೇಲಂಪಾಡಿ ಅವರು ತಲಾ ಒಂದು ಟೇಬಲ್(ಕಂಪ್ಯೂಟರ್ ಮೇಜು) ಕೊಡುಗೆಯಾಗಿ ನೀಡಿದರು. ಅಲ್ಲದೇ ದಾನಿಯೊಬ್ಬರು ಆರು ಫ್ಯಾನ್ ಹಾಗೂ ಒಂದು ಟೇಬಲ್‌ನ್ನು ಕೊಡುಗೆಯಾಗಿ ನೀಡಿದರು.

ಪ್ರತಿಭಾ ಪುರಸ್ಕಾರ-ವಾರ್ಷಿಕ ಸಂಚಿಕೆ ಬಿಡುಗಡೆ
ಪ್ರತಿಭಾ ಪುರಸ್ಕಾರ, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಪಾಪೆಮಜಲು ಪ್ರೌಢಶಾಲೆ ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಇತರ ಎಲ್ಲ ವ್ಯವಸ್ಥೆಗಳೂ ಇಲ್ಲಿ ಅತ್ಯುತ್ತಮವಾಗಿದೆ, ಫಲಿತಾಂಶದಲ್ಲೂ ತಾಲೂಕಿನಲ್ಲೇ ಈ ಶಾಲೆ ಗುರುತಿಸಿಕೊಂಡಿದೆ, ಕ್ರೀಡೆಯಲ್ಲೂ ಅತ್ಯುತ್ತಮ ಸಾಧನೆ ಮಾಡುತ್ತಿರುವ ಈ ಶಾಲೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲ ಸೌಲಭ್ಯಗಳು ಇರುವ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಬೇಕು, ಇಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಕ್ಕೆ ಯೋಜನೆ ಹಾಕಿಕೊಂಡಿರುವುದು ಸಂತಸ ವಿಚಾರ, ಇದು ಅನಿವಾರ್ಯ ಕೂಡಾ ಆಗಿದೆ ಎಂದು ಶಾಸಕರು ಹೇಳಿದರು.
ಶಾಲಾ ವಾರ್ಷಿಕ ಸಂಚಿಕೆ ’ಹೊಂಬೆಳಕು’ಅನ್ನು ಇದೇ ಸಂದರ್ಬದಲ್ಲಿ ಶಾಸಕರು ಬಿಡುಗಡೆಗೊಳಿಸಿದರು.

ಸನ್ಮಾನ ಕಾರ್ಯಕ್ರಮ:
ದಾನಿಗಳಾದ ವಾಸು ಪೂಜಾರಿ ಗುಂಡ್ಯಡ್ಕ, ಎಂಆರ್‌ಪಿಎಲ್‌ನ ಸಹಾಯಕ ಪ್ರಬಂಧಕರಾದ ಪ್ರದೀಪ್ ಕುಮಾರ್, ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಪ್ರಬಂಧಕರಾದ ನಾರಾಯಣ ರೈ ಮಡ್ಯಂಗಳಗುತ್ತು, ಸರ್ವೆ ಕಲ್ಪಣೆ ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಗುರು ಜಯರಾಮ ಶೆಟ್ಟಿ, ಪುತ್ತೂರು ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಬಡಗನ್ನೂರು ಮೊದಲಾದವರನ್ನು ಶಾಸಕರು ಸನ್ಮಾನಿಸಿದರು.

ಬಹುಮಾನ ವಿತರಣೆ:
ಪ್ರತಿಭಾ ಪುರಸ್ಕಾರದ ಅಂಗವಾಗಿ ನಡೆದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಉದ್ಯಮಿ ಕೃಷ್ಣಪ್ರಸಾದ್ ಆಳ್ವ, ಶ್ರೀಮಾತಾ ಅರ್ಥ್ ಮೂವರ್ಸ್‌ನ ಮಾಲಕ ಮೋಹನದಾಸ್ ರೈ, ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಕೌಡಿಚಾರು ಇದರ ನಿರ್ದೇಶಕ ಶಿವಪ್ಪ ಮೂಲ್ಯ, ಸರ್ವೆ ಕಲ್ಪಣೆ ಸರಕಾರಿ ಪ್ರೌಢಶಾಲೆಯ ಕಾರ್ಯಾಧ್ಯಕ್ಷ ಸಿದ್ದೀಕ್ ಸುಲ್ತಾನ್, ಎಸ್‌ಡಿಎಂಸಿ ಸದಸ್ಯ ದಶರಥ ರೈ ಕುತ್ಯಾಡಿ ಉಪಸ್ಥಿತರಿದ್ದು ಬಹುಮಾನ ವಿತರಿಸಿದರು. ಬಹುಮಾನ ವಿಜೇತರ ಪಟ್ಟಿಯನ್ನು ಶಾಲಾ ವಿಜ್ಞಾನ ಶಿಕ್ಷಕಿ ಪ್ರೀತ ಟಿ ಎಂ, ಆಂಗ್ಲಭಾಷಾ ಶಿಕ್ಷಕಿ ಶಾಲೆಟ್ ಜೇನ್ ರೆಬೆಲ್ಲೊ, ಗಣಿತ ಶಿಕ್ಷಕ ಹರಿಪ್ರಸಾದ್ ಕೆ ವಾಚಿಸಿದರು. ಶಾಲಾ ಸಾಧಕರ ಪಟ್ಟಿಯನ್ನು ದೈ.ಶಿ.ಶಿಕ್ಷಕಿ ಪ್ರವೀಣಾ ರೈ ಬಿ ವರದಿ ವಾಚಿಸಿದರು.

ದತ್ತಿನಿಧಿ ವಿತರಣೆ:
ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುವ ದೃಷ್ಟಿಯಿಂದ ದತ್ತಿನಿಧಿ ಪ್ರಾಯೋಜಕರಾಗಿ ಸಹಕರಿಸುತ್ತಿರುವ ದಿ.ಕುರಿಂಜ ನಾರಾಯಣ ಮಣಿಯಾಣಿಯವರ ಸಹೋದರ ಶಿವರಾಮ ಮಣಿಯಣಿ, ನಿವೃತ್ತ ತಾ.ಪಂ ವಿಸ್ತರಣಾಧಿಕಾರಿ ಜಗನ್ನಾಥ ರೈ, ನಿವೃತ್ತ ಕನ್ನಡ ಶಿಕ್ಷಕ ಭವಾನಿ ಶಂಕರ ಬಿ, ನಿವೃತ್ತ ವಿಜ್ಞಾನ ಶಿಕ್ಷಕಿ ಇಂದಿರಾ ಕೆ ಉಪಸ್ಥಿತರಿದ್ದು ದತ್ತಿನಿಧಿ ಬಹುಮಾನವನ್ನು ವಿತರಿಸಿದರು.


ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರು ಸ್ವಾಗತಿಸಿದರು.ಶಿಕ್ಷಕರಾದ ಪೂರ್ಣಿಮಾ ಶೆಟ್ಟಿ, ಹರಿಣಾಕ್ಷಿ ಕೆ, ಎಸ್‌ಡಿಎಂಸಿ ಸದಸ್ಯರಾದ ಹೊನ್ನಪ್ಪ ನಾಯ್ಕ, ನಾಗೇಶ್ ನಾಯ್ಕ, ತಿಮ್ಮಪ್ಪ ನಾಯ್ಕ, ಭಾಗೀರಥಿ, ರೇವತಿ, ಲೀಲಾವತಿ, ಚನಿಯಪ್ಪ, ಪ್ರೇಮನಾಥ, ಎಸ್‌ಡಿಎಂಸಿ ಮಾಜಿ ಸದಸ್ಯರಾದ ಸುಂದರಿ, ಚಂದ್ರಶೇಖರ ಮಣಿಯಾಣಿ, ಪಾಪೆಮಜಲು ಸ.ಹಿ.ಪ್ರಾ.ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಕುಮಾರ್, ನಿವೃತ್ತ ರೇಂಜರ್ ಸುಬ್ರಹ್ಮಣ್ಯ ಗೌಡ, ಬಡಗನ್ನೂರು ಗ್ರಾ.ಪಂ ಸದಸ್ಯ ರವಿರಾಜ್ ಸಜಂಕಾಡಿ,ರಾಜೇಶ್ ಆರ್ ಪಿ, ಹಾಬಿದ್ ಬಡಗನ್ನೂರು ಹಾಗೂ ಪೋಷಕರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಮುಖ್ಯ ಶಿಕ್ಷಕ ಮೋನಪ್ಪ ಬಿ ಪೂಜಾರಿ ವಂದಿಸಿದರು. ಶಿಕ್ಷಕಿ ಸವಿತಾ ಪಿ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ವರ್ಷ ಆಂಗ್ಲ ಮಾಧ್ಯಮ ಪ್ರಾರಂಭ-ಇಕ್ಬಾಲ್ ಹುಸೇನ್
ಪಾಪೆಮಜಲು ಪ್ರೌಢ ಶಾಲೆಯಲ್ಲಿ ಮುಂದಿನ ವರ್ಷದಿಂದ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಆಧುನಿಕ ಯುಗದಲ್ಲಿ ಇಂಗ್ಲೀಷ್ ಶಿಕ್ಷಣದ ಅನಿವಾರ್ಯತೆಯಿದ್ದು ಅದಕ್ಕಾಗಿ ಇಂಗ್ಲೀಷ್ ಶಿಕ್ಷಣವನ್ನು ನೀಡಲು ನಾವು ತೀರ್ಮಾನ ಮಾಡಿದ್ದೇವೆ. ಇದಕ್ಕೆ ಪೋಷಕರ ಮತ್ತು ಊರವರ ಬೆಂಬಲ ಕೂಡಾ ಸಿಕ್ಕಿದೆ. ಈಗಾಗಲೇ ಶಾಲೆಯಲ್ಲಿ ಸುಸಜ್ಜಿತ ಹವಾ ನಿಯಂತ್ರಿತ ಕಂಪ್ಯೂಟರ್ ಕೊಠಡಿ ಸಹಿತ ವಿವಿಧ ಕಾಮಗಾರಿಗಳು ಉದ್ಘಾಟನೆಗೊಂಡಿದ್ದು ತಾಲೂಕಿನಲ್ಲೇ ಮಾದರಿ ಶಾಲೆಯಾಗಿ ನಮ್ಮ ಪಾಪೆಮಜಲು ಪ್ರೌಢ ಶಾಲೆ ಗುರುತಿಸಿಕೊಂಡಿದೆ. ಎಲ್ಲ ವಿಧದಲ್ಲೂ ಅಭಿವೃದ್ಧಿ ಹೊಂದುತ್ತಿರುವ ನಮ್ಮ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವ ಕನಸು ನಮ್ಮದಾಗಿದೆ.
-ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ಕಾರ್ಯಾಧ್ಯಕ್ಷರು ಸ.ಪ್ರೌ.ಶಾಲೆ ಪಾಪೆಮಜಲು

ಮನೆಗಿಂತ ಹೆಚ್ಚು ಗ್ರಾಮದ ಅಭಿವೃದ್ಧಿಯ ಚಿಂತನೆ..!
ಇಕ್ಬಾಲ್ ಹುಸೇನ್ ಕೌಡಿಚ್ಚಾರು ಅವರು ಗ್ರಾಮದ ರಸ್ತೆಯ ಬಗ್ಗೆ, ಶಾಲೆಯ ಅಭಿವೃದ್ಧಿಯ, ಗ್ರಾಮದ ವಿವಿಧ ಬೇಡಿಕೆಗಳ ಬಗ್ಗೆ… ಹೀಗೇ ವಿವಿಧ ಅರ್ಜಿಗಳನ್ನು ಹಿಡಿದುಕೊಂಡು ನನ್ನ ಬಳಿಗೆ ಬರುತ್ತಿರುತ್ತಾರೆ, ಗ್ರಾಮದ ಅಭಿವೃದ್ಧಿ ಕಾಮಗಾರಿಗಳ ಬೇಡಿಕೆ ಬಿಟ್ಟರೆ ಇವರು ಬೇರೆ ಏನನ್ನೂ ಕೇಳುವುದಿಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು. ತನ್ನ ಮನೆಗಿಂತಲೂ ಹೆಚ್ಚು ಗ್ರಾಮದ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುವ ಇವರ ವಲಯದಿಂದ ನನ್ನ ಬಳಿಗೆ ಬರುವ ಯಾವುದೇ ಅರ್ಜಿಗಳು ಕ್ರಮಬದ್ದವಾಗಿ ಮತ್ತು ಶಿಸ್ತು ಬದ್ದವಾಗಿ ಇರುತ್ತದೆ ಎಂದು ಶಾಸಕರು ಪ್ರಶಂಶಿಸಿದರು.

LEAVE A REPLY

Please enter your comment!
Please enter your name here