8ರಲ್ಲಿ ಕಾಂಗ್ರೆಸ್ ಬೆಂಬಲಿತರು, 4ರಲ್ಲಿ ಸಹಕಾರ ಭಾರತಿ
ಪುತ್ತೂರು ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ 8 ಮಂದಿ ಹಾಗೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 4 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಸಾಮಾನ್ಯ ವರ್ಗದಿಂದ ಸಂಘದ ಆಡಳಿತ ಮಂಡಳಿಯ ಹಾಲಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ್ ಭಟ್, ಹಾಲಿ ಸದಸ್ಯ ಸುಭಾಷ್ ನಾಯಕ್, ನಿರಂಜನ ರೈ ಮಠಂತಬೆಟ್ಟು, ಹಿಂದುಳಿದ ವರ್ಗ ಎ ಸ್ಥಾನಕ್ಕೆ ಹಾಲಿ ಸದಸ್ಯ ಮುಹಮ್ಮದ್ ಅಶ್ರಫ್ ಕಲ್ಲೇಗ, ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಹಾಲಿ ಸದಸ್ಯ ಸುಬ್ರಮಣ್ಯ ಗೌಡ ಹನಿಯೂರು, ಸಾಮಾನ್ಯ ಮಹಿಳಾ ಸ್ಥಾನಕ್ಕೆ ಹಾಲಿ ಸದಸ್ಯೆ ಜಯಲಕ್ಷ್ಮೀ ಸುರೇಶ್ ಹಾಗೂ ಶಶಿಕಲಾ ಶೆಟ್ಟಿ ಬೆಳ್ಳಿಪಾಡಿ, ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಹಾಲಿ ಸದಸ್ಯ ಶ್ರೀನಿವಾಸರವರು ಕಾಂಗ್ರೆಸ್ ಬೆಂಬಲಿತರಾಗಿ ಅವಿರೋಧವಾಗಿ ಆಯ್ಕೆಗೊಂಡವರು.
ಸಾಮಾನ್ಯ ವರ್ಗದಿಂದ ಸಂಘದ ಹಾಲಿ ಸದಸ್ಯರಾದ ದೇವಾನಂದ ಕೆ., ಮೋಹನ್ ಪಕ್ಕಳ ಕುಂಡಾಪು, ಸಾಲಗಾರರಲ್ಲದ ಸ್ಥಾನಕ್ಕೆ ಪೂವಪ್ಪ ಗೌಡ, ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಹಾಲಿ ಸದಸ್ಯ ರಾಜು ಎಂ.ರವರು ಅವಿರೋಧವಾಗಿ ಆಯ್ಕೆಯಾಗಿರುವ ಸಹಕಾರ ಭಾರತಿ ಅಭ್ಯರ್ಥಿಗಳು.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿದ್ದ ಮೋನಪ್ಪ ಗೌಡ ಬೆಳ್ಳಿಪ್ಪಾಡಿ, ವಾಲ್ಟರ್ ಡಿಸೋಜ ಸಿದ್ಯಾಳ, ಬಟ್ಯಪ್ಪ ಪಡ್ನೂರು,ಜಯಪ್ರಕಾಶ್ ಬದಿನಾರ್, ವಿಕ್ರಂ ಶೆಟ್ಟಿ, ಶಿವಪ್ರಸಾದ್ ರೈರವರು ನಾಮಪತ್ರ ಹಿಂತೆಗೆದುಕೊಂಡು ಕಾಂಗ್ರೆಸ್ ಬೆಂಬಲಿತ ಎಂಟು ಮಂದಿ ಅವಿರೋಧ ಆಯ್ಕೆಯಾಗಲು ಅವಕಾಶ ಮಾಡಿಕೊಟ್ಟರು ಹಾಗೂ ಸಹಕಾರ ಭಾರತಿಯಿಂದ ನಾಮಪತ್ರ ಸಲ್ಲಿಸಿದ್ದ ಪುರುಷೋತ್ತಮ ಮುಂಗ್ಲಿಮನೆ, ಜಯರಾಮ ನೆಕ್ಕರೆ, ಪ್ರತಿಭಾದೇವಿ ಹಾಗೂ ಜಯಾನಂದ ಕೋಡಿಂಬಾಡಿರವರು ನಾಮಪತ್ರ ಹಿಂತೆಗೆದುಕೊಂಡಿದ್ದರಿಂದ 4 ಮಂದಿ ಅವಿಧೋಧವಾಗಿ ಆಯ್ಕೆಯಾದರು.
ಮೊದಲಿನಂತೆ ಸೀಟು ಹಂಚಿಕೆ-ಮಾತುಕತೆ:
ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಹಿಂದಿನ ಆಡಳಿತ ಮಂಡಳಿಯಲ್ಲಿಯೂ ಕಾಂಗ್ರೆಸ್ ಬೆಂಬಲಿತ ಎಂಟು ಮಂದಿ ಮತ್ತು ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 4 ಮಂದಿ ನಿರ್ದೇಶಕರಿದ್ದರು. ಈ ಬಾರಿ ಕೂಡ ಅದೇ ಪ್ರಕಾರ ಅವಿರೋಧವಾಗಿ ಆಯ್ಕೆ ನಿಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಮಾತುಕತೆ ನಡೆಸಿ ಅದರಂತೆ ಈ ಬಾರಿಯೂ ಅವಿರೋಧ ಆಯ್ಕೆ ನಡೆದಿದೆ.
ನಾನು ಜೆಡಿಎಸ್-ಅಶ್ರಫ್ ಕಲ್ಲೇಗ:
ಕಾಂಗ್ರೆಸ್ ಬೆಂಬಲಿತನಾಗಿ ನಾಮಪತ್ರ ಸಲ್ಲಿಸಿ ಅವಿರೋಧವಾಗಿ ಆಯ್ಕೆಗೊಂಡಿದ್ದರೂ ನಾನು ಜೆಡಿಎಸ್ ಎಂದು ಮೊಹಮ್ಮದ್ ಅಶ್ರಫ್ ಕಲ್ಲೇಗರವರು ತಿಳಿಸಿದ್ದಾರೆ. ಇದು ನಾನು ಐದನೇ ಬಾರಿಗೆ ಅವಿರೋಧವಾಗಿ ಆಯ್ಕೆಗೊಳ್ಳುತ್ತಿರುವುದು ಎಂದು ಅವರು ತಿಳಿಸಿದ್ದಾರೆ.
ಚುನಾವಣೆ ಇಲ್ಲ :
ಜ. 25ರಂದು ಬನ್ನೂರು ರೈತರ ಸೇವಾ ಸಹಕಾರಿ ಸಂಘಕ್ಕೆ ಚುನಾವಣೆ ನಡೆಯಬೇಕಾಗಿತ್ತು. ಆದರೆ 12 ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿರುವುದರಿಂದ ಚುನಾವಣೆ ನಡೆಯುವುದಿಲ್ಲ ಎಂದು ರಿಟರ್ನಿಂಗ್ ಅಧಿಕಾರಿ ಶೋಭಾ ಎನ್.ಎಸ್.ರವರು ತಿಳಿಸಿದ್ದಾರೆ.