ಪ.ಪಂಗಡ ಮೀಸಲು ಸ್ಥಾನಕ್ಕೆ ಹರೀಶ್ ಬಿಜತ್ರೆ ಅವಿರೋಧ ಆಯ್ಕೆ
ಪುತ್ತೂರು:ಪ್ರತಿಷ್ಠಿತ ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕ್ಗೆ ಮುಂದಿನ 5 ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆಗೆ ನಡೆಯಲಿರುವ ಚುನಾವಣೆಯಲ್ಲಿ 12 ಸ್ಥಾನಗಳಿಗೆ 22 ಅಭ್ಯರ್ಥಿಗಳು ಕಣದಲ್ಲಿದ್ದು ಜ.25ರಂದು ಮತದಾನ ನಡೆಯಲಿದೆ.ಒಂದು ಸ್ಥಾನಕ್ಕೆ ಈಗಾಗಲೇ ಅವಿರೋಧ ಆಯ್ಕೆ ನಡೆದಿರುವುದರಿಂದ 12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಆಡಳಿತ ಮಂಡಳಿಯ 7 ಸಾಮಾನ್ಯ ಸ್ಥಾನಗಳಿಗೆ 13 ಮಂದಿ ಅಭ್ಯರ್ಥಿಗಳು, 2 ಮಹಿಳಾ ಸ್ಥಾನಗಳಿಗೆ 3 ಮಂದಿ, ಪ.ಜಾತಿ, ಹಿಂದುಳಿದ ವರ್ಗ ಎ ಮತ್ತು ಹಿಂದುಳಿದ ವರ್ಗ ಬಿ ತಲಾ 1 ಸ್ಥಾನಗಳಿಗೆ 2 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.ನಾಮಪತ್ರ ಹಿಂಪಡೆಯುವ ಅಂತಿಮ ದಿನವಾದ ಜ.19ರಂದು, ಸಾಮಾನ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ನಾರಾಯಣ ಗೌಡ ಹಾಗೂ ಹಿಂದುಳಿದ ವರ್ಗದಿಂದ ನಾಮಪತ್ರ ಸಲ್ಲಿಸಿದ್ದ ಗೌತಮ್ ಬಳ್ಳಾಲ್ ನಾಮಪತ್ರ ಹಿಂಪಡೆದುಕೊಂಡಿದ್ದಾರೆ.ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಸಹಕಾರ ಭಾರತಿಯಿಂದ ತಾ.ಪಂ.ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ,ಒಳಮೊಗ್ರು ಗ್ರಾಮದ ಬಿಜತ್ರೆ ನಿವಾಸಿ ಹರೀಶ್ ಬಿ.ಅವರೋರ್ವರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದ 12 ಸ್ಥಾನಗಳಿಗೆ 22 ಮಂದಿ ಕಣದಲ್ಲಿದ್ದಾರೆ.7 ನಿರ್ದೇಶಕರ ಸಾಮಾನ್ಯ ಸ್ಥಾನಗಳಿಗೆ ಸಹಕಾರ ಭಾರತಿ ಅಭ್ಯರ್ಥಿಗಳಾಗಿ ಹಾಲಿ ಅಧ್ಯಕ್ಷ ಕಿಶೋರ್ ಕೊಳತ್ತಾಯ ಎನ್., ಹಾಲಿ ನಿರ್ದೇಶಕ ಚಂದ್ರಶೇಖರ ರಾವ್ ಬಪ್ಪಳಿಗೆ, ರಾಜು ಶೆಟ್ಟಿ, ರಾಮಚಂದ್ರ ಕಾಮತ್, ಶ್ರೀಧರ ಗೌಡ ಕೆ., ಶ್ರೀಧರ ಪಟ್ಲ, ಸುಜೀಂದ್ರ ಪ್ರಭು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಚಂದ್ರಶೇಖರ, ಜೋನ್ ಸಿರಿಲ್ ರೊಡ್ರಿಗಸ್, ನೇಮಾಕ್ಷ ಎಂ., ಮಹಮ್ಮದ್ ಅಶ್ರಫ್ ಕಲ್ಲೇಗ, ಸುದರ್ಶನ ಗೌಡ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಹಾಲಿ ನಿರ್ದೇಶಕ ಸದಾಶಿವ ಪೈಯವರು ಕಣದಲ್ಲಿದ್ದಾರೆ.
ಮಹಿಳಾ ಸ್ಥಾನಕ್ಕೆ ಸಹಕಾರ ಭಾರತಿಯಿಂದ ವೀಣಾ, ಸೀಮಾ ಎಂ.ಎ., ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕೃಷ್ಣವೇಣಿ ಎಂ., ಪ.ಜಾತಿ ಮೀಸಲು ಸ್ಥಾನದಿಂದ ಸಹಕಾರ ಭಾರತಿಯಿಂದ ಗಣೇಶ್ ಕೌಕ್ರಾಡಿ, ಕಾಂಗ್ರೆಸ್ನಿಂದ ಶೀನಪ್ಪ ಎಂ., ಹಿಂದುಳಿದ ವರ್ಗ ‘ಎ’ ಮೀಸಲು ಸ್ಥಾನಕ್ಕೆ ಸಹಕಾರ ಭಾರತಿಯಿಂದ ಹಾಲಿ ನಿರ್ದೇಶಕ ಮಲ್ಲೇಶ್ ಕುಮಾರ್, ಕಾಂಗ್ರೆಸ್ ಬೆಂಬಲಿತರಾಗಿ ರಂಜಿತ್ ಬಂಗೇರ ಕೆ., ಹಿಂದುಳಿದ ವರ್ಗ ‘ಬಿ’ಸ್ಥಾನಕ್ಕೆ ಸಹಕಾರ ಭಾರತಿಯಿಂದ ಹಾಲಿ ನಿರ್ದೇಶಕ ಕಿರಣ್ ಕುಮಾರ್ ರೈ ಹಾಗೂ ಕಾಂಗ್ರೆಸ್ ಬೆಂಬಲಿತರಾಗಿ ಸನತ್ ರೈ ಅಂತಿಮ ಕಣದಲ್ಲಿದ್ದಾರೆ.
ಮತದಾನ ಪ್ರಕ್ರಿಯೆ ಜ.25ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ತನಕ ಬ್ಯಾಂಕಿನ ಸಭಾಂಗಣದಲ್ಲಿ ನಡೆದು ಅದೇ ದಿನ ಸಂಜೆ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎಂ.ರಘು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.