ಪುತ್ತೂರು: ಬ್ಯಾಂಕ್ ಆಫ್ ಬರೋಡಾ ಪುತ್ತೂರು ಕ್ಷೇತ್ರ ಇದರ ಆಶ್ರಯದಲ್ಲಿ ಬ್ಯಾಂಕ್ ಆಫ್ ಬರೋಡಾ ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಇದರ ಸಹಯೋಗದೊಂದಿಗೆ ಜಸ್ಟೀಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ದೇರಳಕಟ್ಟೆ ಮಂಗಳೂರು, ತೋಟಗಾರಿಕಾ ಇಲಾಖೆ ಜಿಲ್ಲಾ ಪಂಚಾಯತ್ ಇವರ ಸಹಭಾಗಿತ್ವದಲ್ಲಿ ಕೃಷಿ ಮೇಳ, ಉಚಿತ ಕಣ್ಣಿನ ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣೆಯು ಜ.22ರಂದು ಮುಕ್ರಂಪಾಡಿ ಸುಭದ್ರ ಕಲಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಮಾತನಾಡಿ, ಕೃಷಿ ಇಲ್ಲದೆ ಜೀವನ ಅಸಾಧ್ಯ. ಪ್ರಕೃತಿ ಇಲ್ಲದೆ ಜೀವನ ಊಹಿಸಲು ಸಾಧ್ಯವಿಲ್ಲ ಎಂಬುದು ಕೊರೋನಾ ಸಮಯದಲ್ಲಿ ಅನುಭವವಾಗಿದೆ. ಅವಿಭಜಿತ ಜಿಲ್ಲೆಯಲ್ಲಿ ಶೇ.80ರಷ್ಟು ಕೃಷಿಕರಿದ್ದು ಸಹಕಾರಿ ಕ್ಷೇತ್ರವೂ ಕೃಷಿಕರು ನೀಡಿದ ಕೊಡುಗೆಯಾಗಿದೆ. ಕೃಷಿ ಹಾಗೂ ಹೈಗಾರಿಕೆಯಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಅಭಿವೃದ್ಧಿಪಡಿಸಬೇಕು. ಇಲಾಖೆ, ಬ್ಯಾಂಕ್ಗಳಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದ ಅವರು ವಾಣಿಜ್ಯ ಬ್ಯಾಂಕ್ಗಳು ಕೈಗಾರಿಕೆ, ಉದ್ಯಮ, ವಾಹನ ಮೇಳವನ್ನು ನಡೆಸುತ್ತಿವೆ. ಆದರೆ ಬ್ಯಾಂಕ್ ಆಫ್ ಬರೋಡಾ ಕೃಷಿ ಮೇಳವನ್ನು ಆಯೋಜಿಸಿ ರೈತರಿಗೆ ಮಾಹಿತಿ ನೀಡುತ್ತಿರುವುದನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಆಫ್ ಬರೋಡಾದ ಮಹಾಪ್ರಬಂಧಕರು, ವಲಯ ಮುಖ್ಯಸ್ಥರಾಗಿರುವ ರಾಜೇಶ್ ಖನ್ನಾ ಮಾತನಾಡಿ, ಕೃಷಿಕರು ಸಮಾಜದ ಅನ್ನದಾತರು. ಕೃಷಿಕರಿಲ್ಲದೆ ಜೀವನವೇ ಇಲ್ಲ. ಕೃಷಿಕರು ಪ್ರತಿ ವ್ಯಕ್ತಿಯ ಹೃದಯದಲ್ಲಿದ್ದಾರೆ. ಅನ್ನದಾತನಾಗಿರುವ ರೈತರು ದೇವರ ಎರಡನೇ ರೂಪವಾಗಿದ್ದಾರೆ ಎಂದರು. ಕೃಷಿಕರಿಗೆ ಸರಕಾರದ ವಿವಿಧ ಯೋಜನೆಗಳಿವೆ. ಸರಕಾರದ ಸಬ್ಸಿಡಿ ಯೋಜನೆಗಳು, ಕಡಿಮೆ ಬಡ್ಡಿದರ ಸಾಲಗಳು, ಕೃಷಿ ಸಂಬಂದಿಸಿದ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗಲು ಕೃಷಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ಪುತ್ತೂರು ಪ್ರಾದೇಶಕ ಕಚೇರಿ ವ್ಯವಸ್ಥಾಪಕ ದೇವಿಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿ ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು. ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳಿಗೆ ಕೃಷಿಯೇ ಮೂಲವಾಗಿದೆ. ಸಾಂಪ್ರದಾಯಿಕ ವಿಧಾನಗಳಿಂದಾಗಿ ಕೃಷಿ ಲಾಭದಾಯಕವಲ್ಲ. ಹೀಗಾಗಿ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ, ವಿಧಾನಗಳನ್ನು ಬಳಸಿಕೊಂಡು ಆದಾಯ ಹೆಚ್ಚಿಸಲು ಕೃಷಿಕರಿಗೆ ಉತ್ತೇಜನ ನೀಡುವುದು ಹಾಗೂ ಕೃಷಿಯಲ್ಲಿ ಬಂಡವಾಳ, ಸಾಲ ಸೌಲಭ್ಯಗಳು ಸೇರಿದಂತೆ ಎಲ್ಲಾ ರೀತಿಯ ಸಹಕಾರಗಳ ಬಗ್ಗೆ ಕೃಷಿಕರು ಮಾಹಿತಿ ಪಡೆದುಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ರೇಖಾ ಮಾತನಾಡಿ, ವಾಣಿಜ್ಯ ಬೆಳೆಗಳಿಗೆ ಇಲಾಖೆಯಿಂದ ದೊರೆಯುವ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಬ್ಯಾಂಕ್ ಆಫ್ ಬರೋಡಾ ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ರಾಜೇಂದ್ರ ರೈಯವರು ಮಾತನಾಡಿ, ಪ್ರತಿಷ್ಠಾನದಿಂದ ರೈತರಿಗೆ ದೊರೆಯುವ ಸೌಲಭ್ಯಗ ಬಗ್ಗೆ ವಿವರಿಸಿದರು. ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ರೈ, ಬ್ಯಾಂಕ್ ಆಫ್ ಬರೋಡಾದ ಪುತ್ತೂರು ಕ್ಷೇತ್ರದ ಪ್ರಾದೇಶಿಕ ಉಪ ವ್ಯವಸ್ಥಾಪಕ ಭರತ್ ಎಚ್.ವಿ., ದೇರಳಕಟ್ಟೆ ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡಾ. ರಮ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ವಿಜಯ ಕುಮಾರ್ ರೈ ಕೋರಂಗ, ಪ್ರಗತಿಪರ ಕೃಷಿಕರಾದ ರಾಧಾಕೃಷ್ಣ ಇಟ್ಟಿಗುಂಡಿ, ಪ್ರವೀಣ್, ಜಯಪ್ರಕಾಶ್ ಸುಳ್ಯ, ಪುರಂದರ ರೈ ಮಿತ್ರಂಪಾಡಿ, ಸಂತೋಷ್ ಕುಮಾರ್ ರೈ ಇಳಂತಾಜೆ, ದಂಬೆಕ್ಕಾನ ಸದಾಶಿವ ರೈ, ಕಡಮಜಲು ಸುಭಾಷ್ ರೈ, ಉಮೇಶ್ ಗುತ್ತಿನಪಾಲು ಮುಂಡೂರು, ಮೂಲಚಂದ್ರ ಬಜತ್ತೂರು ಅವರನ್ನು ಸನ್ಮಾನಿಸಲಾಯಿತು. ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದಿಂದ ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ, ಸಾಲ ಪಡೆದ ರೈತರಿಗೆ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.
ಪುತ್ತೂರು ಪ್ರಾದೇಶಕ ಕಚೇರಿ ವ್ಯವಸ್ಥಾಪಕ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಕಡಬ ಶಾಖಾ ವ್ಯವಸ್ಥಾಪಕ ಶಿವಪ್ರಸಾದ್ ಸುರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ತೋಟಗಾರಿಕಾ ಇಲಾಖೆಯಿಂದ ಪ್ರಾತ್ಯಕ್ಷಿಕೆ, ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಯಿತು.
ಮಳಿಗೆಗಳ ಉದ್ಘಾಟನೆ:
ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಸಭಾ ಭವನದ ಹೊರ ಭಾಗದಲ್ಲಿ ಅಳವಡಿಸಲಾಗಿದ್ದ ವ್ಯಾಪಾರ ಮಳಿಗೆಗಳನ್ನು ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹಾಗೂ ಬ್ಯಾಂಕ್ ಆಫ್ ಬರೋಡಾದ ಮಹಾಪ್ರಬಂಧಕರು, ವಲಯ ಮುಖ್ಯಸ್ಥರಾಗಿರುವ ರಾಜೇಶ್ ಖನ್ನಾ ಉದ್ಘಾಟಿಸಿದರು. ನೂರಾರು ಮಂದಿ ಕೃಷಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.