ಕೈಕಾರ, ಕೊಯಿಲ್ತಡ್ಕ ಪರಿಸರದಲ್ಲಿ ಸ್ವಚ್ಚತೆ- ನೂರಕ್ಕೂ ಅಧಿಕ ಮಂದಿ ಭಾಗಿ
ಪುತ್ತೂರು: ತಾಲೂಕು ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ನೇತೃತ್ವದಲ್ಲಿ ತಾಲೂಕಿನಾದ್ಯಂತ ನಡೆಯುತ್ತಿರುವ ಸ್ವಚ್ಚ ಸಂಸ್ಕೃತಿ, ನಮ್ಮ ಸಂಸ್ಕೃತಿ ಸ್ವಚ್ಛ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಒಳಮೊಗ್ರು ಗ್ರಾಪಂ ವ್ಯಾಪ್ತಿಯಲ್ಲಿ ಮೂರು ಮತ್ತು ನಾಲ್ಕನೇ ದಿನದ ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಜ.24 ಮತ್ತು 25 ರಂದು ನಡೆಯಿತು.
ಮಿನಿಪದವು ಕೈಕಾರ ಮತ್ತು ಕುಂಬ್ರ ಕೊಲತ್ತಡ್ಕ ಪರಿಸರದಲ್ಲಿ ನಡೆದ ಸ್ವಚ್ಚತಾ ಶ್ರಮದಾನದಲ್ಲಿ ಕಾರ್ಯಕ್ರಮದ ನೋಡೆಲ್ ಅಧಿಕಾರಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ, ಪಂಚಾಯತ್ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಗ್ರಾಪಂ ಸದಸ್ಯರುಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ಗ್ರಾಮಸ್ಥರು ಭಾಗವಹಿಸಿದರು.
130ಕ್ಕೂ ಅಧಿಕ ಮಂದಿ ಭಾಗಿ
10 ದಿನಗಳ ಕಾಲ ನಡೆಯುವ ಸ್ವಚ್ಛತಾ ಶ್ರಮದಾನದ 3 ಮತ್ತು 4ನೇ ದಿನದ ಕಾರ್ಯಕ್ರಮದಲ್ಲಿ 130 ಕ್ಕೂ ಅಧಿಕ ಮಂದಿ ಭಾಗವಹಿಸಿದರು. ಜ.24 ರಂದು ಮಿನಿಪದವುನಿಂದ ಕೈಕಾರ ತನಕ, ಜ.25 ರಂದು ಕುಂಬ್ರದಿಂದ ಕೊಲತ್ತಡ್ಕದ ತನಕ ರಸ್ತೆ ಬದಿಯಲ್ಲಿದ್ದ ಪ್ಲಾಸ್ಟಿಕ್, ಕಸ, ಕಡ್ಡಿ ಸೇರಿದಂತೆ ಪೇಟೆಯನ್ನು ಸಂಪೂರ್ಣ ಸ್ವಚ್ಛತೆ ಮಾಡಲಾಯಿತು. ಸಂಗ್ರಹವಾದ ಕಸವನ್ನು ಗ್ರಾಪಂ ಸ್ವಚ್ಚತಾ ವಾಹಿನಿ ವಾಹನದಲ್ಲಿ ಘನತ್ಯಾಜ್ಯ ಘಟಕದಲ್ಲಿ ವಿಲೇವಾರಿ ಮಾಡಲಾಯಿತು. ಸ್ವಚ್ಚತಾ ಶ್ರಮದಾನದಲ್ಲಿ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕುಂಬ್ರ, ಅಡಿಕೆ ಗಾರ್ಬಲ್ ಕುಂಬ್ರ, ಸ್ಪಂದನಾ ಸೇವಾ ಬಳಗ ಕುಂಬ್ರ, ಸ್ನೇಹ ಮಹಿಳಾ ಮಂಡಲ ಪರ್ಪುಂಜ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೈಕಾರ ಶಾಲಾ ಶಿಕ್ಷಕರು, ಅನುಗ್ರಹ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು, ಪಂಚಾಯತ್ನ ಸದಸ್ಯರುಗಳು, ಅಧಿಕಾರಿ ವರ್ಗದವರು, ಸಿಬ್ಬಂದಿಗಳು ಭಾಗವಹಿಸಿದ್ದರು. ಗ್ರಾಪಂ ಸದಸ್ಯೆ ರೇಖಾ ಮತ್ತು ಉದ್ಯಮಿ ವೀರೇಂದ್ರ ಗಾಂಭೀರರವರು ಉಪಹಾರದ ವ್ಯವಸ್ಥೆ ಮಾಡಿದ್ದರು. ಜ.೨೫ ರಂದು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ಉಪಹಾರದ ವ್ಯಸಸ್ಥೆ ಮಾಡಿದ್ದರು.
ಕಸ ಹಾಕಿದ್ದಕ್ಕೆ ದಂಡನೆ
ಹೊಟೇಲ್ ಮುಂದೆಯೇ ಕಸ ಹಾಕಿರುವುದನ್ನು ಗಮನಿಸಿದ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ಹೊಟೇಲ್ನವರಲ್ಲಿ ಈ ಬಗ್ಗೆ ಪ್ರಶ್ನಿಸಿ, ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಿದರು. ಕಸ ಹಾಕಿರುವುದಕ್ಕೆ ಗ್ರಾಪಂನಿಂದ ದಂಡನೆ ಕೂಡ ವಿಧಿಸಲಾಯಿತು.
ಸ್ವಚ್ಚತೆಯ ಅರಿವು ಮೂಡಿಸಿದ ತಾಪಂ ಇಓ
ಕಾರ್ಯಕ್ರಮದ ನೋಡೆಲ್ ಅಧಿಕಾರಿಯಾಗಿರುವ ತಾಪಂ ಇಓ ನವೀನ್ ಭಂಡಾರಿಯರವರು ಕಳೆದ 4 ದಿನಗಳಿಂದಲೂ ಸ್ವಚ್ಚತಾ ಕಾರ್ಯದಲ್ಲಿ ಕೈಜೋಡಿಸುತ್ತಿದ್ದಾರೆ. ಪೊರಕೆ ಹಿಡಿದು ಗುಡಿಸುವುದರಿಂದ ಹಿಡಿದು ರಸ್ತೆ ಬದಿಯಲ್ಲಿನ ಕಸ,ಪ್ಲಾಸ್ಟಿಕ್ ತ್ಯಾಜ್ಯ ಇತ್ಯಾದಿಗಳನ್ನು ಹೆಕ್ಕಿ ಸ್ವಚ್ಛ ಮಾಡುವ ಮೂಲಕ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದಾರೆ.
“ ಎರಡು ದಿನಗಳ ಸ್ವಚ್ಛತಾ ಶ್ರಮದಾನದಲ್ಲಿ ೧೩೦ ಕ್ಕೂ ಅಧಿಕ ಮಂದಿ ಭಾಗವಹಿಸುವ ಮೂಲಕ ಗ್ರಾಮದ ಸ್ವಚ್ಛತೆಗೆ ಸಹಕಾರ ನೀಡಿದ್ದಾರೆ. ಸಹಕಾರ ನೀಡುತ್ತಿರುವ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ, ಗ್ರಾಮಸ್ಥರಿಗೆ, ಅಧಿಕಾರಿ ವರ್ಗದವರಿಗೆ, ಉಪಹಾರದ ವ್ಯವಸ್ಥೆ ಮಾಡಿದವರಿಗೆ ಗ್ರಾಪಂನಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ.”
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ