*60ಕ್ಕೂ ಹೆಚ್ಚು ತಂಡ ಭಾಗಿ | ಏಕಕಾಲದಲ್ಲಿ ಕುಣಿತ
*ಭಜನೆಯಿಂದ ನಿರಂತರ ಧರ್ಮಜಾಗೃತಿ: ಮನೋಹರ ಮಠದ್
ರಾಮಕುಂಜ: ದೇವಾಲಯ ಸಂವರ್ಧನಾ ಸಮಿತಿ ಕಡಬ ತಾಲೂಕು ಇದರ ಆಶ್ರಯದಲ್ಲಿ ಶ್ರೀ ರಾಮಕುಂಜೇಶ್ವರ ದೇವಸ್ಥಾನ ರಾಮಕುಂಜ, ಶ್ರೀ ವಿಷ್ಣುಮೂರ್ತಿ ಭಜನಾ ಮಂದಿರ ಹಳೆನೇರೆಂಕಿ, ಶ್ರೀ ದೇವಿ ಭಜನಾ ಮಂದಿರ ವರ್ನಡ್ಕ, ಶ್ರೀ ಶಾರದಾ ಭಜನಾ ಮಂದಿರ ಶಾರದಾನಗರ, ಶ್ರೀ ನಾಗಬ್ರಹ್ಮ ಭಜನಾ ಮಂಡಳಿ ಕುಂಡಾಜೆ ಇವರ ಸಹಯೋಗದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಕಡಬ ತಾಲೂಕು ಇವರ ಸಹಕಾರದಲ್ಲಿ ’ಕುಣಿತ ಭಜನೋತ್ಸವ’ ಜ.26ರಂದು ಸಂಜೆ ರಾಮಕುಂಜ ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಮೈದಾನದಲ್ಲಿ ನಡೆಯಿತು.
ಉದ್ಘಾಟನೆ;
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರೂ, ದೇವಾಲಯ ಸಂವರ್ಧನಾ ಸಮಿತಿ ವಿಭಾಗ ಪ್ರಮುಖ್ ಮುಳಿಯ ಕೇಶವ ಪ್ರಸಾದ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಕುಣಿತ ಭಜನೆಗೆ ಚಾಲನೆ ನೀಡಿದರು. ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಮನೋಹರ ಮಠದ್, ದಿವಾಕರ ರಾವ್ ಪಂಚವಟಿ, ಡಾ.ವೀಣಾ ಪುತ್ತೂರು, ಡಾ.ಸುಧಾರಾವ್ ಪುತ್ತೂರು, ಪ್ರಶಾಂತ್ ದೊಡ್ಡಡ್ಕ, ಜನಾರ್ದನ ಸೂಡ್ಲು, ವಿಶಾಲಾಕ್ಷಿ ಪಿಲಿಗೂಡು, ವೇದಾವತಿ, ಯದುಶ್ರೀ ಆನೆಗುಂಡಿ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ಏಕಕಾಲದಲ್ಲಿ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಿತು.
ಸಭಾ ಕಾರ್ಯಕ್ರಮ:
ಭಜನೆಯಿಂದ ನಿರಂತರ ಧರ್ಮಜಾಗೃತಿ-ಮಠದ್:
ಕುಣಿತ ಭಜನೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾತನಾಡಿದ ದೇವಾಲಯ ಸಂವರ್ಧನಾ ಸಮಿತಿಯ ರಾಜ್ಯ ಸಂಯೋಜಕ ಮನೋಹರ ಮಠದ್ ಅವರು, ಭಜನಾ ಕಾರ್ಯಕ್ರಮ ನಿತ್ಯ ನಿರಂತರ ಧರ್ಮ ಜಾಗೃತಗೊಳಿಸುತ್ತಿದೆ. ದೇಶದ ಸಮಗ್ರತೆಗೆ ಪ್ರೇರಣೆ ನೀಡುತ್ತಿರುವ ಭಜನೆಯಂತಹ ಕಾರ್ಯಕ್ರಮಗಳು ಭಕ್ತಿ ಶ್ರದ್ಧೆಯನ್ನು ಉದ್ದೀಪಗೊಳಿಸುತ್ತಿರುವುದ್ದರಿಂದ ಭಾರತದ ಶ್ರದ್ಧೆಯನ್ನು ನಾಶ ಮಾಡಲು ಈ ಜನ್ಮ ಅಲ್ಲ ಮುಂದಿನ ಜನ್ಮದಲೂ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು. ಭಜನೆಯಿಂದ ಭಗವಂತನ ಸಾಕ್ಷಾತ್ಕಾರದೊಂದಿಗೆ ಆರೋಗ್ಯ ಮತ್ತು ನೆಮ್ಮದಿಯನ್ನು ಪಡೆಯಬಹುದಾಗಿದೆ. ಭಜನೆಗೆ ದೊಡ್ಡ ಇತಿಹಾಸವೇ ಇದೆ, ವೇದಗಳ ಕಾಲದಲ್ಲೇ ಭಜನೆ ನಡೆಯುತಿತ್ತು. ಆದರೆ ಭಜನೆ ಹಾಗೂ ಭಜಕರ ವಿರುದ್ಧ ನಿಂದನೆ ಕೇಳಿ ಬರುತ್ತಿದು ವಿಪರ್ಯಾಸ. ಅಪಹಾಸ್ಯ, ವಿರೋಧ ಮಾಡುವವರೇ ಮುಂದೆ ಸ್ವೀಕಾರ ಮಾಡುತ್ತಾರೆ. ನಾವು ಆ ಮಟ್ಟಕ್ಕೆ ಬೆಳೆಯಬೇಕು. ನಿಂದಕರು ಇದ್ದಾಗ ನಾವು ಮಾಡುವ ಕೆಲಸಕ್ಕೆ ಬೆಲೆ ಬರುತ್ತದೆ ಎಂದು ಮನೋಹರ ಮಠದ್ ಹೇಳಿದರು.
ದೇವಾಲಯ ಸಂವರ್ಧನಾ ಸಮಿತಿ ಕಡಬ ತಾಲೂಕು ಸಂಯೋಜಕ ಯದುಶ್ರೀ ಆನೆಗುಂಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕೊಯಿಲ ಗ್ರಾಮದಲ್ಲಿ ಬೈಲುವಾರು ಸಮಿತಿ ರಚನೆ ಮಾಡಿಕೊಂಡು ಭಜನಾ ತಂಡ ರಚಿಸಿ ಭಜನೆ ಪ್ರಾರಂಭಿಸಲಾಗಿತ್ತು. ಇದರ ಪರಿಣಾಮವಾಗಿ ಗ್ರಾಮದಲ್ಲಿ ಧಾರ್ಮಿಕತೆ ಹೆಚ್ಚಾಗಿ ಮನೆ ಮನೆಯಲ್ಲಿ ತುಳಸಿ ಪೂಜೆ, ಶಾರದಾಪೂಜೆ ನಡೆಯಿತು. ಧಾರ್ಮಿಕವಾಗಿ ಕೊಯಿಲ ಗ್ರಾಮ ಬಲಿಷ್ಠಗೊಂಡಿದೆ. ಇದನ್ನೂ ಎಲ್ಲಾ ಕಡೆಯೂ ಮಾಡುವ ಉದ್ದೇಶದಿಂದ ದೇವಾಲಯ ಸಂವರ್ಧನಾ ಸಮಿತಿಯ ಮೂಲಕ ಪ್ರತಿವರ್ಷವೂ ತಾಲೂಕಿನ ಬೇರೆ ಬೇರೆ ಗ್ರಾಮಗಳಲ್ಲಿ ಕುಣಿತ ಭಜನೋತ್ಸವ ನಡೆಸಲು ನಿರ್ಧರಿಸಲಾಗಿದೆ. ಈ ವರ್ಷ ರಾಮಕುಂಜದಲ್ಲಿ ಹಮ್ಮಿಕೊಂಡ ಕುಣಿತ ಭಜನೋತ್ಸವಕ್ಕೆ ಗ್ರಾಮದ ಪ್ರತಿ ಮನೆಯಿಂದಲೂ, ಭಜನಾ ತಂಡಗಳಿಂದಲೂ ಉತ್ತಮ ಸಹಕಾರ ದೊರೆತಿದೆ ಎಂದು ಹೇಳಿದರು.
ದೇವಾಲಯ ಸಂವರ್ಧನಾ ಸಮಿತಿಯ ರಾಮಕುಂಜ ಗ್ರಾಮ ಸಂಯೋಜಕ ಯೋಗೀಶ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟೀಯ ಸ್ವಯಂ ಸೇವಕ ಸಂಘದ ಕಡಬ ತಾಲೂಕು ಸಂಘ ಚಾಲಕ ದಿವಾಕರ ರಾವ್ ಪಂಚವಟಿ, ರಾಷ್ಟ್ರ ಸೇವಿಕಾ ಸಮಿತಿ ಪುತ್ತೂರು ಜಿಲ್ಲಾ ಸಂಚಾಯಿಕರಾದ ಸವಿತಾ ಪಿ.ಜಿ ಭಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ನ ಕಡಬ ತಾಲೂಕು ಅಧ್ಯಕ್ಷ ಸುಂದರ ಗೌಡ ಬಿಳಿನೆಲೆ, ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗುರುಪ್ರಸಾದ್, ಹಳೆನೇರೆಂಕಿ ಶ್ರೀ ವಿಷ್ಣುಮೂರ್ತಿ ಭಜನಾ ಮಂದಿರದ ಅಧ್ಯಕ್ಷ ಚರಣ್ ಪಿ ಪಾಲೆತ್ತಡ್ಡ, ವರ್ನಡ್ಕ ಶ್ರೀ ದೇವಿ ಭಜನಾ ಮಂದಿರದ ಉಪಾಧ್ಯಕ್ಷ ಸಚಿನ್ ಬೈರಕಂಡ, ಶಾರದಾನಗರ ಶ್ರೀ ಶಾರದಾ ಭಜನಾ ಮಂದಿರದ ಅಧ್ಯಕ್ಷ ಗಣೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಾಗವಹಿಸಿದ ಎಲ್ಲಾ ಭಜನಾ ತಂಡಗಳಿಗೆ ಗೌರವಾರ್ಪಣೆ ಮಾಡಲಾಯಿತು. ವೀರೇಂದ್ರ ಹಳೆನೇರೆಂಕಿ ವೈಯಕ್ತಿಕ ಗೀತೆ ಹಾಡಿದರು. ನಿಶ್ಚಿತ್ ಶಾರದಾನಗರ ವಂದಿಸಿದರು. ಪ್ರಕಾಶ್ ಕೆಮ್ಮಾರ, ಶ್ವೇತಾ ಬದೆಂಜ ಕಾರ್ಯಕ್ರಮ ನಿರೂಪಿಸಿದರು.
1 ತಾಸು ಕುಣಿತ ಭಜನೆ:
ಕಡಬ ಹಾಗೂ ಪುತ್ತೂರು ತಾಲೂಕಿನ ವಿವಿಧ ಭಜನಾ ತಂಡಗಳಿಂದ ಏಕಕಾಲದಲ್ಲಿ ಮಂಡಲದಲ್ಲಿ ಕುಣಿತ ಭಜನೆ ನಡೆಯಿತು. 60ಕ್ಕೂ ಹೆಚ್ಚು ಭಜನಾ ತಂಡಗಳು ಕುಣಿತ ಭಜನೆಯಲ್ಲಿ ಭಾಗವಹಿಸಿದ್ದು ಸುಮಾರು 1 ತಾಸಿಗೂ ಹೆಚ್ಚು ಕಾಲ ಕುಣಿತ ಭಜನೆ ನಡೆಯಿತು. ಕಡಬ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ ಬಿಳಿನೆಲೆ ಭಜನೆ ನಡೆಸಿಕೊಟ್ಟರು. ಇವರಿಗೆ ಹಾರ್ಮೋನಿಯಂನಲ್ಲಿ ವಿಜಯ ಆಚಾರ್ಯ ಸುಳ್ಯ ಹಾಗೂ ತಬಲದಲ್ಲಿ ಹರೀಶ್ ಸುಬ್ರಹ್ಮಣ್ಯ ಸಹಕರಿಸಿದರು. ಭಜನಾ ತಂಡಗಳ ಸದಸ್ಯರಿಗೆ ಸಂಜೆ ಉಪಾಹಾರ, ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.