ಗ್ಯಾರಂಟಿ ಯೋಜನೆಗಳ ನೋಂದಾವಣೆಗೆ ಬಾಕಿ ಇರುವ, ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ-ಯುವನಿಧಿ ವಿಶೇಷ ನೋಂದಣಿ ಅಭಿಯಾನ ಹಾಗೂ ಗ್ಯಾರಂಟಿ ಅಹವಾಲು ಸ್ವೀಕಾರ

0

ಪುತ್ತೂರು: ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ರೂ.261.32 ಕೋಟಿ ಅನುದಾನ ಫಲಾನುಭವಿಗಳ ಖಾತೆಗೆ ನೇರ ಜಮೆಯಾಗಿದೆ ಎಂದು ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ ಹೇಳಿದರು.


ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಂಗಣದಲ್ಲಿ ಜ.28ರಂದು ನಡೆದ ಪುತ್ತೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ವತಿಯಿಂದ ಪಂಚ ಗ್ಯಾರಂಟಿ ಯೋಜನೆಗಳ ನೋಂದಾವಣೆಗೆ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ, ಯುವನಿಧಿ ವಿಶೇಷ ನೋಂದಣಿ ಅಭಿಯಾನ ಹಾಗೂ ಗ್ಯಾರಂಟಿ ಅಹವಾಲು ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣೆಯ ಪೂರ್ವದಲ್ಲಿ ಘೋಷಿಸಿದ 5 ಗ್ಯಾರಂಟಿ ಯೋಜನೆಗಳನ್ನು ಸರಕಾರ ಅಧಿಕಾರಕ್ಕೆ ಬಂದ 45 ದಿನಗಳಲ್ಲಿ ಒದಗಿಸಲಾಗಿದೆ. ಪುತ್ತೂರು ಭಾಗದಲ್ಲಿ ರೂ.211 ಕೋಟಿ, ಬಂಟ್ವಾಳ ವ್ಯಾಪ್ತಿಯಲ್ಲಿ ರೂ.49 ಕೋಟಿ ಸೇರಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ರೂ. 261,32,2,668 ಗ್ಯಾರಂಟಿ ಅನುದಾನ ಲಭ್ಯವಾಗಿದೆ. ಇದು ಗೃಹಿಣಿಯರು, ಮಕ್ಕಳಿಗೆ ಆರ್ಥಿಕ ಕ್ರೋಢೀಕರಣಕ್ಕೆ ನೆರವಾಗಿದೆ. ಗ್ಯಾರಂಟಿ ಯೋಜೆನಗಳು ಇನ್ನು ಶೇ.2 ರಷ್ಟು ಮಂದಿಗೆ ಗ್ಯಾರಂಟಿ ಸವಲತ್ತು ತಲುಪಲು ಬಾಕಿಯಿದ್ದು, ಅನುಷ್ಠಾನ ಸಮಿತಿಯ ಮೂಲಕ ಅದನ್ನೂ ಸರಿಮಾಡಿ ಶೇ.100 ಯಶಸ್ಸು ಸಾಧಿಸಲಾಗುವುದು ಎಂದು ಹೇಳಿದರು.


ಯುವನಿಧಿಗೆ ಸಂಬಂಧಿಸಿದಂತೆ ಪ್ರತಿ ಪದವಿ ಕಾಲೇಜುಗಳಲ್ಲಿ ಮುಂದಿನ ಮೂರು ತಿಂಗಳಲ್ಲಿ ಸೆಮಿನಾರ್‌ಗಳನ್ನು ಗ್ಯಾರಂಟಿ ಅನುಷ್ಠಾನ ಸಮಿತಿಯ ಮೂಲಕ ನಡೆಸಿ ಎಲ್ಲರ ಡಾಟಾ ಸಂಗ್ರಹಿಸಬೇಕು. ಪ್ರತಿಯೊಬ್ಬರನ್ನೂ ಯೋಜನೆಯಲ್ಲಿ ಒಳಗೊಳ್ಳಿಸುವ ಮೂಲಕ ಶೇ.100 ಪ್ರಗತಿ ಸಾಧಿಸಬೇಕು. ಶಾಸಕರ ಕಚೇರಿಯಲ್ಲೂ ಈ ನಿಟ್ಟಿನಲ್ಲಿ ಪ್ರತ್ಯೇಕ ವಿಂಗ್ ತೆರೆದು ವಿದ್ಯಾರ್ಥಿಗಳಿಗೆ ಸಹಕಾರ ನೀಡಲಾಗುತ್ತದೆ ಎಂದು ಹೇಳಿದ ಅಶೋಕ್ ರೈ, ಸರಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಇದಕ್ಕಾಗಿ ಮತದಾನದ ಬೆಂಬಲವನ್ನು ಸರಕಾರಕ್ಕೆ ನೀಡಬೇಕು ಎಂದು ವಿನಂತಿಸಿದರು.


ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ, ಯೋಜನೆಗಳ ಮಾಹಿತಿ ನೀಡಿದರು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಪೌರಾಯಕ್ತ ಮಧು ಎಸ್. ಮನೋಹರ್, ಗ್ಯಾರಂಟಿ ಅನುಷ್ಠಾನ ಸಮಿತಿ ಮುಖ್ಯಸ್ಥೆ ಸಿಡಿಪಿಒ ಮಂಗಳಾ ಕಾಳೆ, ಮೆಸ್ಕಾಂ ಎಂಜಿನಿಯರ್ ರಾಮಚಂದ್ರ, ಕೆ.ಎಸ್.ಆರ್.ಟಿ.ಸಿ. ಪುತ್ತೂರು ಘಟಕ ವ್ಯವಸ್ಥಾಪಕ ಜಿತೇಶ್, ಕೌಶಲ್ಯಾಭಿವೃದ್ಧಿ ಇಲಾಖೆ ಜಯಾನಂದ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಪೂರ್ಣೇಶ್ ಭಂಡಾರಿ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕೆಡೆಂಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ, ತಾ.ಪಂ. ನ ಭರತ್ ಕಾರ್ಯಕ್ರಮ ನಿರ್ವಹಿಸಿದರು.ಶಿಬಿರದಲ್ಲಿ ಪುತ್ತೂರು ನಗರಸಭೆ, ಆರ್ಯಾಪು, ಬನ್ನೂರು, ಕುಡಿಪ್ಪಾಡಿ, ಕಬಕ, ಬಲ್ನಾಡು ಗ್ರಾ.ಪಂ. ವ್ಯಾಪ್ತಿಯ ವ್ಯಾಪ್ತಿಯ ಗ್ಯಾರಂಟಿ ನೋಜನೆ ಫಲಾನುಭವಿಗಳ ಅಹವಾಲು ಸ್ವೀಕರಿಸಲಾಯಿತು.

LEAVE A REPLY

Please enter your comment!
Please enter your name here