ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ-ಪ್ರತಿಭಟನೆ ಎಚ್ಚರಿಕೆ
ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಗೋಳಿತ್ತೊಟ್ಟು, ಆರ್ಲ ಜಂಕ್ಷನ್ ಸೇರಿದಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಮರ್ಪಕ ಕಾಮಗಾರಿ ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಘಟನೆ ಗೋಳಿತ್ತೊಟ್ಟು ಗ್ರಾಮಸಭೆಯಲ್ಲಿ ನಡೆದಿದೆ.
ಸಭೆ ಜ.27ರಂದು ಗ್ರಾ.ಪಂ.ಅಧ್ಯಕ್ಷೆ ಸವಿತಾ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಕಡಬ ಪಶುವೈದ್ಯಾಧಿಕಾರಿ ಡಾ.ಅಜಿತ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಚರ್ಚೆ ವೇಳೆ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರಾದ ಅಬ್ದುಲ್ ಕುಂಞಿ ಕೊಂಕೋಡಿ, ಹನೀಫ್, ದಿನೇಶ್ ಕಲಾಯಿ, ಶಾಜು, ಬೈಜು ಮತ್ತಿತರರು, ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ವೇಳೆ ಗೋಳಿತ್ತೊಟ್ಟು ಜಂಕ್ಷನ್ನಲ್ಲಿ ಸಂಪರ್ಕ ರಸ್ತೆ ಅಗೆದು ಹಾಕಲಾಗಿದೆ. ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಆರ್ಲ ಜಂಕ್ಷನ್ನಲ್ಲೂ ಇದೇ ಸಮಸ್ಯೆ ಇದ್ದು ಪದೇ ಪದೇ ಅಪಘಾತ ನಡೆಯುತ್ತಿದೆ. ಅಲ್ಲದೇ ಇಲ್ಲಿ ಧೂಳಿನ ಸಮಸ್ಯೆಯೂ ಇದ್ದು ಸಮೀಪದಲ್ಲೇ ಬಾಲಕರ ಸರಕಾರಿ ವಸತಿ ನಿಲಯವೂ ಇರುವುದರಿಂದ ಅಲ್ಲಿನ ವಿದ್ಯಾರ್ಥಿಗಳಿಗೂ ಸಮಸ್ಯೆಯಾಗಿದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಗೋಳಿತ್ತೊಟ್ಟು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಇದ್ದು ಇಲ್ಲಿನ ವಿದ್ಯಾರ್ಥಿಗಳಿಗೂ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಈ ಎಲ್ಲಾ ಸಮಸ್ಯೆ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರ ಗಮನಕ್ಕೆ ತಂದರೂ ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಇಲಾಖೆಯವರನ್ನು ಗ್ರಾಮಸಭೆ ಕರೆಸುವಂತೆ ಒತ್ತಾಯಿಸಿದರು. ಗ್ರಾಮಸ್ಥರ ಬೇಡಿಕೆಯಂತೆ ಮಾರ್ಗದರ್ಶಿ ಅಧಿಕಾರಿ ಡಾ.ಅಜಿತ್ ಅವರು ಹೆದ್ದಾರಿ ಇಲಾಖೆಯ ಪ್ರೊಜೆಕ್ಟ್ ಡೈರೆಕ್ಟರ್ ಅವರನ್ನು ಫೋನ್ ಮೂಲಕ ಸಂಪರ್ಕಿಸಿ ವಿಚಾರ ತಿಳಿಸಿದರು. ಈ ವೇಳೆ ಪ್ರೊಜೆಕ್ಟ್ ಡೈರೆಕ್ಟರ್ ಅವರು ಸ್ಥಳಕ್ಕೆ ಭೇಟಿ ನೀಡುವ ಭರವಸೆ ನೀಡಿದರು. ರಾಷ್ಟ್ರೀಯ ಹೆದ್ದಾರಿಯ ಸಣ್ಣಂಪಾಡಿಯಿಂದ ಆರ್ಲ ಜಂಕ್ಷನ್ ತನಕ ಇರುವ ಸಮಸ್ಯೆ ಬಗ್ಗೆ ಮೂರು ದಿನದೊಳಗೆ ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡದೇ ಇದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಆಸ್ಪತ್ರೆ ಮೇಲ್ದರ್ಜೆಗೆ ನಿರ್ಣಯ:
ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ದಿನದ 24 ಗಂಟೆಯೂ ಇರಬೇಕು. ವೈದ್ಯರು ಇಲ್ಲದೇ ಇದ್ದಲ್ಲಿ ಆಸ್ಪತ್ರೆಗೆ ಬರುವ ವೃದ್ಧರು, ರೋಗಿಗಳಿಗೆ ಸಮಸ್ಯೆಯಾಗುತ್ತದೆ ಎಂದು ಮಹಮ್ಮದ್ ರಫೀಕ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಚ್ಒ ಪ್ರಜ್ವಲ್ ಅವರು, ಮೀಟಿಂಗ್ ಇದ್ದಲ್ಲಿ ವೈದ್ಯರು ಆಸ್ಪತ್ರೆಯಲ್ಲಿ ಇರುವುದಿಲ್ಲ. ಈ ವೇಳೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ನೀಡುತ್ತೇವೆ ಎಂದರು. ಈ ಬಗ್ಗೆ ಚರ್ಚೆ ನಡೆದು ಆಸ್ಪತ್ರೆ ಮೇಲ್ದರ್ಜೆಗೇರಿಸಲು ಸರಕಾರಕ್ಕೆ ಬರೆಯಲು ನಿರ್ಣಯಿಸಲಾಯಿತು.
ರಾಷ್ಟ್ರೀಕೃತ ಬ್ಯಾಂಕ್ ಬೇಕು:
ಗೋಳಿತ್ತೊಟ್ಟುಗೆ ರಾಷ್ಟ್ರೀಕೃತ ಬ್ಯಾಂಕ್ ಬರಬೇಕು ಎಂದು ಶೇಖರ ಗೌಡ ಅನಿಲಬಾಗ್ ಒತ್ತಾಯಿಸಿದರು. ಇದಕ್ಕೆ ಇತರೇ ಗ್ರಾಮಸ್ಥರು ಧ್ವನಿಗೂಡಿಸಿದರು. ಈ ಬಗ್ಗೆ ಸಂಬಂಧಪಟ್ಟವರಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ನೋಡೆಲ್ ಅಧಿಕಾರಿ-ಚರ್ಚೆ:
ಪ್ರತಿ ಗ್ರಾಮಸಭೆಗೂ ಒಬ್ಬರೇ ನೋಡೆಲ್ ಅಧಿಕಾರಿ ಬರಬೇಕು. ಈ ಗ್ರಾಮಸಭೆಗೆ ಒಬ್ಬರು, ಮುಂದಿನ ಗ್ರಾಮಸಭೆ ಇನ್ನೊಬ್ಬರು ನೋಡೆಲ್ ಅಧಿಕಾರಿ ಬರುವುದರಿಂದ ಗ್ರಾಮಸಭೆಯಲ್ಲಿ ನಡೆಯುವ ಚರ್ಚೆ ವಿಚಾರ ಅವರಿಗೆ ಗೊತ್ತೇ ಇರುವುದಿಲ್ಲ. ಆದ್ದರಿಂದ ಈ ಸಲದ ನೋಡೆಲ್ ಅಧಿಕಾರಿಯವರೇ ಮುಂದಿನ ಸಭೆಗೂ ನೋಡೆಲ್ ಅಧಿಕಾರಿಯಾಗಿ ಬರಬೇಕೆಂದು ಮಹಮ್ಮದ್ ರಫೀಕ್ ಕೋಲ್ಪೆ ಒತ್ತಾಯಿಸಿದರು.
ಶಾಲಾ ಕಟ್ಟಡಕ್ಕೆ ಅನುದಾನ ಕೊಡಿ:
ಇಲಾಖೆಯ ಆದೇಶದಂತೆ ನಾದುರಸ್ತಿಯಲ್ಲಿರುವ ಆಲಂತಾಯ ಶಾಲಾ ಕಟ್ಟಡ ನೆಲಸಮ ಮಾಡಲಾಗಿದೆ. ಆದರೆ ಹೊಸ ಕಟ್ಟಡಕ್ಕೆ ಅನುದಾನ ನೀಡುತ್ತಿಲ್ಲ ಯಾಕೆ ಎಂದು ಗ್ರಾ.ಪಂ.ಸದಸ್ಯರಾದ ಪದ್ಮನಾಭ ಪೂಜಾರಿ, ಶಿವಪ್ರಸಾದ್ ಅವರು ಸಿಆರ್ಪಿ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಆರ್ಪಿ ಮಂಜುನಾಥ್ ಅವರು, ಕಟ್ಟಡ ನೆಲಸಮಕ್ಕೆ ಸಂಬಂಧಿಸಿ ಎಸ್ಡಿಎಂಸಿಯಿಂದ ಶಿಕ್ಷಣ ಇಲಾಖೆಗೆ ಪತ್ರ ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಕಟ್ಟಡ ನೆಲಸಮಕ್ಕೆ ಆದೇಶ ಮಾಡಲಾಗಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸರಕಾರದಿಂದ ಅನುದಾನ ನೀಡಲಾಗುತ್ತಿದೆ ಎಂದರು.
ಸರಕಾರಿ ಶಾಲೆಗೆ ಮಕ್ಕಳನ್ನು ಕಳಿಸಿ:
ಸರಕಾರಿ ಇಲಾಖೆಯ ಅಧಿಕಾರಿಗಳಿಗೆ ಸರಕಾರದ ಸಂಬಳ ಬೇಕು, ಸರಕಾರದ ಗಾಡಿ ಬೇಕು, ಸರಕಾರದ ಎಲ್ಲಾ ಸೌಲಭ್ಯ ಬೇಕು. ಆದರೆ ಸರಕಾರಿ ಶಾಲೆ ಮಾತ್ರ ಬೇಡ. ಇದರಿಂದ ಸರಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ ಎಂದು ಕೊಣಾಲು ಶಾಲಾ ಎಸ್ಡಿಎಂಸಿ ಅಧ್ಯಕ್ಷರೂ ಆಗಿರುವ ಮಹಮ್ಮದ್ ರಫೀಕ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಆರ್ಪಿ ಮಂಜುನಾಥ್ ಅವರು, ಕಡ್ಡಾಯ ಶಿಕ್ಷಣ ನಿಯಮದಡಿ ಯಾವ ಶಾಲೆಯಲ್ಲಿ ಶಿಕ್ಷಣ ಪಡೆಯಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಮಗುವಿಗೆ ಇದೆ ಎಂದರು.
ಪವರ್ಮ್ಯಾನ್ ನೇಮಿಸಿ:
ಗೋಳಿತ್ತೊಟ್ಟು ಗ್ರಾಮದಲ್ಲಿ 102 ಟಿ.ಸಿ.ಗಳಿದ್ದು ಒಬ್ಬರೇ ಪವರ್ಮ್ಯಾನ್ ಇರುವುದರಿಂದ ಸಮಸ್ಯೆ ಆಗಿದೆ. ಇಲ್ಲಿಗೆ ಹೆಚ್ಚುವರಿ ಪವರ್ಮ್ಯಾನ್ ನೇಮಕ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಉಪ್ಪಿನಂಗಡಿ ಶಾಖಾ ಸಹಾಯಕ ಇಂಜಿನಿಯರ್ ನಿತಿನ್ ಅವರು, ಸರಕಾರದ ಹಂತದಲ್ಲಿ 3 ಸಾವಿರ ಪವರ್ಮ್ಯಾನ್ಗಳ ನೇಮಕ ಆಗುತ್ತಿದೆ. ಗೋಳಿತ್ತೊಟ್ಟು ಗ್ರಾಮಕ್ಕೆ ಇಬ್ಬರು ಪವರ್ಮ್ಯಾನ್ಗಳ ನೇಮಕ ಮಾಡುವಂತೆ ಪತ್ರ ಬರೆಯಲಾಗಿದೆ ಎಂದರು. ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಕುಶಾಲಪ್ಪ ಗೌಡ ಅನಿಲ ಹಾಗೂ ಇತರರು ಒತ್ತಾಯಿಸಿದರು.
ಮೀನು ಮಾರುಕಟ್ಟೆ ನಿರ್ಮಿಸಿ:
ಮೀನು ಏಲಂ ವಿಚಾರದ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಿತು. ಗ್ರಾಮ ಪಂಚಾಯತ್ನಿಂದ ಮೀನು ಮಾರುಕಟ್ಟೆ ನಿರ್ಮಿಸಿ. ಆ ಬಳಿಕವೇ ಮೀನು ಮಾರಾಟದ ಹಕ್ಕು ಏಲಂ ಮಾಡಬೇಕೆಂದು ಗ್ರಾಮಸ್ಥರಾದ ಅಬ್ದುಲ್ ಕುಂಞಿ, ಹನೀಫ್ ಮತ್ತಿತರರು ಆಗ್ರಹಿಸಿದರು. ಈ ಬಗ್ಗೆ ನಿರ್ಣಯಿಸಲಾಯಿತು.
ಸರ್ವೆ ಇಲಾಖೆ ವಿರುದ್ಧ ಆಕ್ರೋಶ:
ಸರ್ವೆ ಇಲಾಖೆಯಿಂದ ಯಾವುದೇ ಕೆಲಸ ಆಗುತ್ತಿಲ್ಲ. ಲಂಚ ಕೊಟ್ಟರೇ ಮಾತ್ರ ಸರ್ವೆ ಇಲಾಖೆಯಲ್ಲಿ ಕೆಲಸ ಆಗುತ್ತದೆ. ಬಡ ಮಹಿಳೆಯೊಬ್ಬರ ಜಾಗದ ಅಳತೆ ಮಾಡಲು ಹಲವು ಸಲ ಮನವಿ ಮಾಡಿದರೂ ಬಂದಿಲ್ಲ ಎಂದು ಗ್ರಾಮಸ್ಥ ದಿನೇಶ್ ಕಲಾಯಿ ಆರೋಪಿಸಿದರು. ಈ ಬಗ್ಗೆ ಎಡಿಎಲ್ಆರ್ ಅವರಿಗೆ ಬರೆಯಲು ನಿರ್ಣಯಿಸಲಾಯಿತು.
ಕಸ್ತೂರಿ ರಂಗನ್ ವರದಿ ಜಾರಿ ಬೇಡ:
ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ಆಗದೇ ಕಸ್ತೂರಿ ರಂಗನ್ ವರದಿ ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು. ಅಲ್ಲದೇ ಕೃಷಿಕರನ್ನು ಒಕ್ಕಲೆಬ್ಬಿಸುವುದು, ಆರ್ಟಿಸಿ ರದ್ದುಗೊಳಿಸಬಾರದು ಎಂದು ಪ್ರಸಾದ್ ಕೆ.ಪಿ.ಸುಲ್ತಾಜೆ ಒತ್ತಾಯಿಸಿದರು. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಬರೆಯಲು ನಿರ್ಣಯಿಸಲಾಯಿತು.
ಆರ್ಲ ಜಂಕ್ಷನ್ನಲ್ಲಿರುವ ಹೈಮಾಸ್ಕ್ ದೀಪದ ಮೂರು ಬಲ್ಬ್ಗಳು ಉರಿಯುವಂತೆ ವ್ಯವಸ್ಥೆ ಮಾಡಬೇಕೆಂದು ದಿನೇಶ್ ಕಲಾಯಿ ಒತ್ತಾಯಿಸಿದರು. ಗ್ರಾಮಸಭೆಗೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರುಣಾಕರ ಅವರು ಒತ್ತಾಯಿಸಿದರು. ಇತರೇ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚೆ ನಡೆಯಿತು.
ಬೀಟ್ ಪೊಲೀಸ್ ಕುಮಾರಸ್ವಾಮಿ, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಎಚ್ಒ ಪ್ರಜ್ವಲ್ ಕುಮಾರ್, ಸಿಆರ್ಪಿ ಮಂಜುನಾಥ್, ಜಿ.ಪಂ.ಇಂಜಿನಿಯರ್ ಹೊಳೆಬಸಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪುಷ್ಪಾವತಿ, ಮೆಸ್ಕಾಂ ಉಪ್ಪಿನಂಗಡಿ ಶಾಖಾ ಸಹಾಯಕ ಇಂಜಿನಿಯರ್ ನಿತಿನ್ ಕುಮಾರ್, ನೆಲ್ಯಾಡಿ ಶಾಖಾ ಜೆಇ ರಾಮಣ್ಣ, ಗಸ್ತು ಅರಣ್ಯ ಪಾಲಕ ಜಗದೀಶ್, ಕೃಷಿ ಸಹಾಯಕ ಸಾಯಿನಾಥ್, ಗ್ರಾಮ ಆಡಳಿತಾಧಿಕಾರಿ ಸುನಿಲ್ ಅವರು ಇಲಾಖಾವಾರು ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷ ಕೆ.ಬಾಬು ಪೂಜಾರಿ, ಸದಸ್ಯರಾದ ವಿ.ಸಿ.ಜೋಸೆಫ್, ಪ್ರಜಲ, ವಾರಿಜಾಕ್ಷಿ, ಶ್ರುತಿ ಪಿ., ನೋಣಯ್ಯ ಗೌಡ, ಶೋಭಾಲತಾ, ಸಂಧ್ಯಾ, ಜನಾರ್ದನ ಗೌಡ, ಜೀವಿತಾ, ಗುಲಾಬಿ ಕೆ., ಎ.ಬಾಲಕೃಷ್ಣ, ಹೇಮಲತಾ, ಪದ್ಮನಾಭ, ಶಿವಪ್ರಸಾದ್ ಎಸ್.ಎಸ್., ಉಪಸ್ಥಿತರಿದ್ದರು. ಕಾರ್ಯದರ್ಶಿ ಚಂದ್ರಾವತಿ ಸ್ವಾಗತಿಸಿ, ವರದಿ ವಾಚಿಸಿದರು. ಪಿಡಿಒ ಜಗದೀಶ್ ಹಾಗೂ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಅಧಿಕಾರಿಗಳ ಗೈರು ಹಾಜರಿಗೆ ಆಕ್ರೋಶ-ಜಿ.ಪಂ.ಸಿಇಒಗೆ ಬರೆಯಲು ನಿರ್ಣಯ:
ಸಭೆಯ ಆರಂಭದಲ್ಲೇ ಇಂಜಿನಿಯರ್ ಹಾಗೂ ಇತರೇ ಕೆಲ ಅಧಿಕಾರಿಗಳ ಗೈರು ಹಾಜರಿ ವಿಚಾರ ಪ್ರಸ್ತಾಪಿಸಿದ ಅಬ್ದುಲ್ಲಾ ಕುಂಞಿ, ಬೈಜು ಹಾಗೂ ಇತರ ಗ್ರಾಮಸ್ಥರು ಸಭೆ ನಡೆಸುವುದಕ್ಕೆ ಆಕ್ಷೇಪಿಸಿದರು. ಈ ವೇಳೆ ಮಾರ್ಗದರ್ಶಿ ಅಧಿಕಾರಿಯವರು ಇಂಜಿನಿಯರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರು ಸಭೆಗೆ ಬರುತ್ತಿರುವುದಾಗಿ ತಿಳಿಸಿದರು. ಮಾಹಿತಿ ನೀಡುವ ವೇಳೆ ಇತರೇ ಅಧಿಕಾರಿಗಳೂ ಸೇರಿಕೊಳ್ಳಲಿದ್ದಾರೆ. ಸಭೆ ಮುಂದುವರಿಸುವ ಎಂದರು. ಆದರೆ ಇದಕ್ಕೆ ಗ್ರಾಮಸ್ಥರು ಒಪ್ಪಲಿಲ್ಲ. ಅಪರಾಹ್ನ 11.40ರ ವೇಳೆಗೆ ಇಂಜಿನಿಯರ್ ಅವರು ಸಭೆಗೆ ಬಂದ ಬಳಿಕ ಸಭೆ ಮುಂದುವರಿಸಲಾಯಿತು. ಸಭೆಗೆ ಗೈರು ಹಾಜರಿಯಾಗಿರುವ ಇಲಾಖೆಯ ಅಧಿಕಾರಿಗಳ ವಿರುದ್ಧ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.