ಪುತ್ತೂರು: ಕೋರ್ಟ್ರಸ್ತೆ ವಿಶ್ವ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಒಟ್ಟು ಹತ್ತು ನಿರ್ದೇಶಕರ ಆಯ್ಕೆಯಾಗಬೇಕಿದ್ದು 20 ಮಂದಿ ಅಭ್ಯರ್ಥಿಗಳು ಸ್ಪರ್ಧಿಸುವ ಮೂಲಕ ಚುನಾವಣೆಯು ಅಕ್ಷರಸಃ ಕಾವೇರಿದೆ. ಯಾರು ಆ ಹತ್ತು ಮಂದಿ ನಿರ್ದೇಶಕರು ಎಂದು ಫೆ.2 ರಂದು ನಡೆಯುವ ಚುನಾವಣೆಯ ಫಲಿತಾಂಶದಲ್ಲಿ ಘೋಷಣೆಯಾಗಲಿದೆ.
ಸಾಮಾನ್ಯ ಸ್ಥಾನ 7:15 ಮಂದಿ ಸ್ಪರ್ಧೆ:
ಸೊಸೈಟಿಯ ಸಾಮಾನ್ಯ ಸ್ಥಾನಕ್ಕೆ 7 ಮಂದಿ ನಿರ್ದೇಶಕರ ಆಯ್ಕೆಯಾಗಬೇಕಿದ್ದು, ಇದೀಗ ಆ ಸ್ಥಾನಕ್ಕೆ ಬರೋಬ್ಬರಿ 15 ಮಂದಿ ಅಭ್ಯರ್ಥಿಗಳು ನಿರ್ದೇಶಕ ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದಾರೆ. ಸಾಮಾನ್ಯ ಸ್ಥಾನದಲ್ಲಿ ಅರುಣ್ ಸೆಬಾಸ್ಟಿಯನ್ ರೆಬೆಲ್ಲೋ, ಪವನ್ ಜೋನ್ ಮಸ್ಕರೇನ್ಹಸ್, ಮೆಲ್ವಿನ್ ಫೆರ್ನಾಂಡೀಸ್, ಮೌರಿಸ್ ಮಸ್ಕರೇನ್ಹಸ್, ರಾಕೇಶ್ ಜೋಯ್ಸನ್ ಮಸ್ಕರೇನ್ಹಸ್, ರೋಯಿಸ್ಟನ್ ಡಾಯಸ್, ಲ್ಯಾನ್ಸಿ ಮಸ್ಕರೇನ್ಹಸ್, ಲೆಸ್ಟರ್ ಪಿಂಟೊ, ವಾಲ್ಟರ್ ಡಿ’ಸೋಜ, ವಿಜಯ್ ವಿಲ್ಫ್ರೆಡ್ ಡಿ’ಸೋಜ, ವಿನಿಲ್ ರೋಹನ್ ಡಿ’ಸೋಜ, ವಿನ್ಸೆಂಟ್ ತಾವ್ರೋ, ಸಿಲ್ವೆಸ್ಟರ್ ಗೊನ್ಸಾಲ್ವಿಸ್, ಸಿಲ್ವೆಸ್ಟರ್ ಡಿ’ಸೋಜ, ಹೆರಾನ್ ಕುಟಿನ್ಹಾರವರು ಏಳು ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದಾರೆ.
ಮಹಿಳಾ ಮೀಸಲು ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ:
ಮಹಿಳಾ ಮೀಸಲು ಸ್ಥಾನಕ್ಕೆ 2 ಅಭ್ಯರ್ಥಿಗಳ ಆಯ್ಕೆಯಾಗಬೇಕಿದ್ದು, ಈ ವಿಭಾಗದಲ್ಲಿ ಮೂವರು ಮಹಿಳಾ ಸ್ಪರ್ಧಿಗಳು ಸ್ಪರ್ಧಿಸುತ್ತಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮಹಿಳಾ ಮೀಸಲು ಸ್ಥಾನದಲ್ಲಿ ಬಾಬ್ಬಿ ಮಗ್ದೆಲಿನ್ ಡಿಕ್ರೋಜ್, ಶೈನಿ ಎನ್.ಎಸ್, ಹಿಲ್ಡಾ ಮಿನೇಜಸ್ರವರು ಸ್ಪರ್ಧಿಸುತ್ತಿದ್ದಾರೆ.
ಹಿಂದುಳಿದ ಪ್ರವರ್ಗ ‘ಬಿ’ ನೇರ ಫೈಟ್:
ಹಿಂದುಳಿದ ಪ್ರವರ್ಗ ‘ಬಿ’ ಸ್ಥಾನದಲ್ಲಿ ನೇರ ಫೈಟ್ ಕಾಣಲಿದೆ. ಸೈಮನ್ ಗೊನ್ಸಾಲ್ವಿಸ್ ಹಾಗೂ ಸುನಿಲ್ ಶೈಲೇಶ್ ಮಸ್ಕರೇನ್ಹಸ್ರವರು ಈ ವಿಭಾಗದಲ್ಲಿ ‘ಒಂದು’ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿದ್ದು ನೇರ ಫೈಟ್ ಎದುರಾಗಲಿದೆ.
ಗುರುತಿನ ಚೀಟಿ ಕಡ್ಡಾಯ:
ಚುನಾವಣೆಯು ಗ್ಲೋರಿಯಾ ಸೊಸೈಟಿಯಲ್ಲಿ ಫೆ.2 ರಂದು ಬೆಳಿಗ್ಗೆಯಿಂದ ಅಪರಾಹ್ನ 4 ಗಂಟೆ ತನಕ ನಡೆಯಲಿರುವುದು. ಮತದಾರ ಅಭ್ಯರ್ಥಿಗಳು ಸೂಕ್ತ ಸಮಯದಲ್ಲಿ ಆಗಮಿಸಿ ತಮ್ಮ ಮತವನ್ನು ಚಲಾವಣೆ ಮಾಡಿ ಚುನಾವಣೆಗೆ ಸಹಕರಿಸಬೇಕು, ಮತದಾರ ಅಭ್ಯರ್ಥಿಗಳು ತಮ್ಮ ಭಾವಚಿತ್ರವಿರುವ ಗುರುತಿನ ಚೀಟಿಯೊಂದಿಗೆ ಆಗಮಿಸಿ ಮತವನ್ನು ಚಲಾಯಿಸತಕ್ಕದ್ದು, ಗುರುತಿನ ಚೀಟಿ ಇಲ್ಲದವರು ತಮ್ಮ ಭಾವಚಿತ್ರದೊಂದಿಗೆ ಸೊಸೈಟಿಯ ಕಛೇರಿಯಲ್ಲಿ ಗುರುತಿನ ಚೀಟಿ ಪಡೆದುಕೊಳ್ಳಬಹುದು ಎಂದು ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
316 ಮತದಾರರು..
2000ರಲ್ಲಿ ಆರಂಭವಾದ ಈ ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಯು ಪುತ್ತೂರು ತಾಲೂಕು ವ್ಯಾಪ್ತಿಯನ್ನು ಹೊಂದಿ ಕಾರ್ಯಾಚರಿಸುತ್ತಿದೆ. ಪ್ರಸ್ತುತ ಚುನಾವಣೆಯಲ್ಲಿ 316 ಮಂದಿ ಮತದಾರರು ಇದ್ದು ಈ ಬಾರಿ ಸ್ಪರ್ಧಿಸುವ ಆಭ್ಯರ್ಥಿಗಳಿಗೆ ಎಷ್ಟು ಮತಗಳು ಬೀಳುತ್ತವೆ ಎಂಬುದನ್ನು ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕವೇ ತಿಳಿಯಲಿದ್ದು ದಿನಗಣನೆ ಆರಂಭವಾಗಿದೆ.
ಪ್ರಥಮ ಚುನಾವಣೆ..
ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2000ರಲ್ಲಿ ಆರಂಭಗೊಂಡಿದ್ದು ಕಾಸ್ಮೀರ್ ಕುಟಿನ್ಹಾರವರು ಇದರ ಪ್ರಥಮ ಅಧ್ಯಕ್ಷರಾಗಿದ್ದರು. ಅಲ್ಲಿಂದ ಇಲ್ಲಿಯವರೆಗೆ ಜ್ಯೋ ಡಿ’ಸೋಜ, ಜೋಕಿಂ ರೆಬೆಲ್ಲೋ, ಜೆರಾಲ್ಡ್ ಲ್ಯಾನ್ಸಿ ಮಸ್ಕರೇನ್ಹಸ್, ರಾಕೇಶ್ ಮಸ್ಕರೇನ್ಹಸ್ರವರು ಸೊಸೈಟಿಯನ್ನು ಮುನ್ನೆಡಿಸಿದ್ದಾರೆ. ಇದೀಗ ಸೊಸೈಟಿಯು 25 ವರ್ಷವನ್ನು ಕಾಣುತ್ತಿದ್ದು ಅದು ಇಲ್ಲಿಯವರೆಗೆ ಚುನಾವಣೆಯನ್ನು ಕಂಡಿರದೆ ನಿರ್ದೇಶಕರ ಆಯ್ಕೆಯು ಅವಿರೋಧವಾಗಿ ನಡೆದಿದೆ. ಇದೀಗ ಪ್ರಥಮ ಬಾರಿ ಸೊಸೈಟಿಯು ಚುನಾವಣೆಯನ್ನು ಎದುರಿಸುತ್ತಿದೆ.
ಬಿರುಸಿನ ಪ್ರಚಾರ..
ಪ್ರಸ್ತುತ ಚುನಾವಣಾ ಕಣದಲ್ಲಿ 29 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಲು ನಾಮಪತ್ರವನ್ನು ಸಲ್ಲಿಸಿದ್ದರು. ಇದರಲ್ಲಿ ಒಂಭತ್ತು ಮಂದಿ ಸ್ಪರ್ಧಾಕಣದಿಂದ ಸ್ವತಂತ್ರವಾಗಿ ನಾಮಪತ್ರವನ್ನು ಹಿಂಪಡೆದಿರುತ್ತಾರೆ. ಇದೀಗ ಕಣದಲ್ಲಿರುವ ಉಮೇದುವಾರರ ಪಟ್ಟಿಯು ಚಿಹ್ನೆಯೊಂದಿಗೆ ಪ್ರಕಟವಾಗಿದ್ದು, ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.