ಜ.31-ಫೆ.2 : ಕೊಟ್ಟಿಬೆಟ್ಟು ಏಳ್ನಾಡುಗುತ್ತಿನ ಮನೆಯಲ್ಲಿ ಧರ್ಮನೇಮೋತ್ಸವ

0

ಮೂರು ವರ್ಷಗಳಿಗೊಮ್ಮೆ ನಡೆಯುವ ಧರ್ಮನೇಮಕ್ಕೆ ನಡೆದಿದೆ ಸಕಲ ಸಿದ್ಧತೆ


ಕನ್ನಡನಾಡಿನ ಕರಾವಳಿಯುದ್ದಕ್ಕೂ ಹಬ್ಬಿಕೊಂಡಿರುವ ತುಳುನಾಡಿನಲ್ಲಿ ತನ್ನದೇ ಆದ ಐತಿಹ್ಯವನ್ನು ಹೊಂದಿರುವ ಬಹಳಷ್ಟು ಗುತ್ತು ಮನೆಗಳನ್ನು, ಬೂಡುಗಳನ್ನು ಕಾಣಬಹುದು.. ಪಾರಂಪರಿಕವಾಗಿರುವ ಈ ಗುತ್ತು ಮನೆಗಳ ಪೈಕಿ ಪುತ್ತೂರಿನ ಕೊಟ್ಟಿಬೆಟ್ಟು ಏಳ್ನಾಡುಗುತ್ತು ಮನೆಯೂ ಒಂದು. ಜಮೀನ್ದಾರಿಕೆ ಮನೆತನದ ಈ ಏಳ್ನಾಡುಗುತ್ತು ಮನೆಯಿರುವುದು ಪುತ್ತೂರು ನಗರದ ಮಧ್ಯಭಾಗದಲ್ಲಿ. ಎಂಟ್ನೂರು ವರ್ಷಗಳ ದೀರ್ಘ ಇತಿಹಾಸವಿರುವ ಈ ಏಳ್ನಾಡುಗುತ್ತಿನ ಐದು ವಿಭಾಗಗಳಲ್ಲಿ ಈಗ ಸುಮಾರು ನೂರಕ್ಕೂ ಹೆಚ್ಚು ಕುಟುಂಬಗಳು ಸೇರಿವೆ.

ಪ್ರಮುಖವಾಗಿ ಪುತ್ತೂರು, ಕೊಟ್ಟಿಬೆಟ್ಟು, ಬೀದಿಮಜಲು, ಕೊಟ್ಟಿಗೆಮಜಲು, ಬೊಳ್ಳೂರಿನಲ್ಲಿ ಈ ಏಳ್ನಾಡುಗುತ್ತು ಮನೆತನ ಹಂಚಿಕೊಂಡಿದೆ. ಜಿಲ್ಲೆಯಲ್ಲಿ ಹಂಚಿಹೋಗಿರುವ ಈ ಮನೆತನದ ಕುಟುಂಬವನ್ನು ಒಂದಾಗಿ ಸೇರಿಸುವುದು ಏಳ್ನಾಡುಗುತ್ತಿನ ಮನೆಯಲ್ಲಿ ನಡೆಯುವ ಧರ್ಮ ನೇಮೋತ್ಸವ. ಮೂರು ವರ್ಷಗಳಿಗೊಮ್ಮೆ ನಿಗದಿತ ದಿನದಂದು ನಡೆಯುವ ಕೊಟ್ಟಿಬೆಟ್ಟು ಏಳ್ನಾಡುಗುತ್ತಿನ ಮನೆಯ ಧರ್ಮ ನೇಮೋತ್ಸವ ಅಂದ್ರೆ ಎಲ್ಲಿಲ್ಲದ ಸಂಭ್ರಮ, ಕುಟುಂಬ ಸಮ್ಮಿಲನದ ಸಡಗರ.


ಏಳ್ನಾಡುಗುತ್ತು-ಪರಿವಾರ ದೈವಗಳ ದಿವ್ಯ ಸನ್ನಿಧಿ:
ಶತಮಾನಗಳಿಂದಲೂ ಏಳ್ನಾಡುಗುತ್ತಿನ ಹಿರಿಯರು ಆರಾಧಿಸಿಕೊಂಡು ಬಂದಿರುವ ಕುಲದೇವ ಶ್ರೀ ವೆಂಕಟ್ರಮಣ ದೇವರ ಮುಡಿಪು, ನಾಗ, ಭೂಮಿ ದೈವ ರಕ್ತೇಶ್ವರಿ, ಏಳ್ನಾಡು ದೈವ ಪಿಲಿಚಾಮುಂಡಿ, ಧರ್ಮದೈವ ಜುಮಾದಿ ಬಂಟ, ವರ್ಣರ ಪಂಜುರ್ಲಿ, ಕುಪ್ಪೆ ಪಂರ್ಜುಲಿ, ಕಲ್ಲುರ್ಟಿ, ಗುಳಿಗ, ಭೈರವ ಇತ್ಯಾದಿ ದೈವ ಶಕ್ತಿಗಳಿಗೆ ಇಲ್ಲಿ ನೇಮ-ನಡಾವಳಿ ನಡೆಯುತ್ತಿತ್ತು. ಆದರೆ ಮುಂದೆ ನಾನಾ ಕಾರಣಗಳಿಂದ ಈ ಉತ್ಸವ, ನೇಮ, ಗೌಜಿ-ಗದ್ದಲ ನಿಂತು ಹೋಯಿತು. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಹಲವು ತೊಂದರೆಗಳನ್ನು ಅನುಭವಿಸಬೇಕಾಯಿತು. ಕಾಲಾನಂತರ ಮುಂದೊಂದು ಸುಪ್ರಭಾತದಲ್ಲಿ ಬ್ರಹ್ಮಶ್ರೀ ರವೀಶ ತಂತ್ರಿಗಳ ನೇತೃತ್ವದಲ್ಲಿ ಖ್ಯಾತ ಜ್ಯೋತಿಷಿ ಶ್ರೀ ಕುಂಡಕುವಿ ರತ್ನಾಕರ ಜೋಯಿಸರ ಸಮಕ್ಷಮ ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಸಿ, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲಾಯಿತು. ವಾಸ್ತು ಶಿಲ್ಪಿ ಪ್ರಸಾದ್ ಮುನಿಯಂಗಳ ನಿರ್ದೇಶನದಂತೆ ಏಳ್ನಾಡುಗುತ್ತಿನ ಮನೆಯ ಸುತ್ತು ಪೌಳಿ, ಸತ್ಯಚಾವಡಿ ಸೇರಿದಂತೆ ಗುತ್ತಿನ ಮನೆಯ ಪುನರ್ ನಿರ್ಮಾಣ ಕಾರ್ಯವನ್ನು 2013ರಲ್ಲಿ ಆರಂಭಿಸಲಾಗಿತ್ತು. ಏಳ್ನಾಡುಗುತ್ತು ಕುಟುಂಬ ಸದಸ್ಯರ ಸಹಕಾರದಿಂದ ನಿರಂತರ ಕಾಮಗಾರಿ ನಡೆದು, ಸತ್ಯ ಚಾವಡಿಯ ಒಳಗಿನ ಭಾಗದಲ್ಲಿ ವಿಶೇಷ ಕೆತ್ತನೆಯ ಮೇಲ್ಛಾವಣಿ, ವಿಶೇಷ ಅಲಂಕಾರಿಕ ಭೋದಿಗೆಯ ಕಂಬಗಳನ್ನು ರಚಿಸುವ ಮೂಲಕ ನಿರ್ಮಾಣಗೊಂಡ ಗುತ್ತುಮನೆಯ ಗೃಹಪ್ರವೇಶ 2014ರ ಏಪ್ರಿಲ್ 1 ರಂದು ನಡೆದು ಪರಿವಾರ ದೈವಗಳ ಪ್ರತಿಷ್ಠಾಪನೆ ಮಾಡಲಾಗಿತ್ತು.


ಸಂಕ್ರಮಣದಲ್ಲಿ ತಂಬಿಲ ಸೇವೆ:
ಏಳ್ನಾಡುಗುತ್ತು ತರವಾಡು ಮನೆಯಲ್ಲಿ ಪ್ರತಿ ತಿಂಗಳ ಸಂಕ್ರಮಣದಂದು ವಿಶೇಷ ತಂಬಿಲ ಸೇವೆ ನಡೆಯುತ್ತದೆ. ಭಕ್ತಿಯಿಂದ ಪ್ರಾರ್ಥಿಸಿಕೊಂಡವರನ್ನು ದೈವಗಳು ಎಂದೂ ಕೈ ಬಿಟ್ಟಿಲ್ಲ ಎನ್ನುವುದು ಇಲ್ಲಿನ ಕುಟುಂಬದ ಹಿರಿಯರ ಮಾತು. ಕೊಟ್ಟಿಗೆಮಜಲಿನಲ್ಲಿ ಮಾಯವಾದ ತೊಟ್ಟಿಲು, ತೊಟ್ಟಿಲಕಯದಲ್ಲಿ ಉದ್ಭವವಾಗಿದೆ ಎಂಬುದು ಇಲ್ಲಿನ ನುಡಿಗಟ್ಟು. ನಂಬಿದವರಿಗೆ ಇಂಬು ಕೊಡುವ ಮೂಲಕ ಕಾರಣಿಕವನ್ನು ಹೊಂದಿರುವ ಇಲ್ಲಿನ ದೈವಗಳಿಗೆ ಕುಟುಂಬಸ್ಠರಿಂದ ಮಾತ್ರವಲ್ಲದೇ ಊರವರಿಂದಲೂ ಸಂಕ್ರಮಣದ ತಂಬಿಲ ಸೇವೆ ನಡೆಯುತ್ತದೆ.


ಟ್ರಸ್ಟ್ ಮತ್ತು ಧರ್ಮನೇಮ:
ಕೊಟ್ಟಿಬೆಟ್ಟು-ಏಳ್ನಾಡುಗುತ್ತು ಕುಟುಂಬದ ಯಜಮಾನ ಕೆ. ನರಸಿಂಗ ನಾಯ್ಕ್ ಅವರ ಮುಂದಾಳತ್ವ ಮತ್ತು ಮಾರ್ಗದರ್ಶನದಲ್ಲಿ ಕೊಟ್ಟಿಬೆಟ್ಟು ಏಳ್ನಾಡುಗುತ್ತು ಫ್ಯಾಮಿಲಿ ಟ್ರಸ್ಟ್ ವತಿಯಿಂದ ನಡೆಯುತ್ತಿದ್ದ ಧರ್ಮ ನೇಮೋತ್ಸವ, ನರಸಿಂಗ ನಾಯ್ಕ್ ಅವರ ಮರಣಾ ನಂತರ ದೈವ ಸಂಕಲ್ಪದಂತೆ ಅವರ ಹಿರಿಯ ಪುತ್ರ ದಕ್ಷಿಣ ಕನ್ನಡ ಜಿಲ್ಲಾ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಸಂಘದ ಅಧ್ಯಕ್ಷ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಠಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ ಆಗಿರುವ ರಾಧಾಕೃಷ್ಣ ನಾಯ್ಕ್ ಅವರ ಯಜಮಾನಿಕೆಯಲ್ಲಿ ನಡೆಯುತ್ತಿದೆ. ತಂದೆಯ ಮರಣಾನಂತರ ಕುಟುಂಬದ ಯಜಮಾನರಾಗಿ ನಿಯುಕ್ತಿಗೊಂಡ ಶ್ರೀ ರಾಧಾಕೃಷ್ಣ ನಾಯ್ಕ್ ಏಳ್ನಾಡುಗುತ್ತು ಮನೆಯ ಅಭಿವೃದ್ಧಿ ಕಾರ್ಯ, ಧಾರ್ಮಿಕ ಕಾರ್ಯವನ್ನು ಕುಟುಂಬ ಸದಸ್ಯರ ಸಹಕಾರದೊಂದಿಗೆ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.‌


ತಾನೊಂದು ಬಗೆದರೆ ದೈವ ಇನ್ನೊಂದು ಬಗೆದಂತೆ..!:
2014 ಏಪ್ರಿಲ್ 1 ರಂದು ಏಳ್ನಾಡುಗುತ್ತಿನ ಮನೆಯಲ್ಲಿ ದೈವಗಳ ಪ್ರತಿಷ್ಠಾಪನೆ ವೇಳೆ ಪ್ರತಿ ಮೂರು ವರ್ಷಗಳಿಗೊಮ್ಮೆ ಗುತ್ತಿನ ಮನೆಯಲ್ಲಿ ಧರ್ಮ ನೇಮೋತ್ಸವ ಮಾಡುವುದಾಗಿ ಸಂಕಲ್ಪ ಮಾಡಲಾಗಿತ್ತು. ಇದು ಮಾನವ ಸಂಕಲ್ಪವಾಗಿದ್ದರೆ. ದೈವ ನಿಶ್ಚಯ ಬೇರೆಯೇ ಆಗಿತ್ತು. ತನಗೆ ಬೇಕಾದ್ದನ್ನು ಪಡೆಯುವ ದೈವಗಳ ಸಂಕಲ್ಪದಂತೆ 2018ರವರೆಗೆ ಪ್ರತಿ ವರ್ಷ ವಿಜೃಂಭಣೆಯಿಂದ ಧರ್ಮ ನೇಮೋತ್ಸವ ನಡೆದಿದೆ. ಕೋವಿಡ್ ಹಿನ್ನಲೆಯಲ್ಲಿ ಒಮ್ಮೆ ನೇಮೋತ್ಸವ ಸ್ಠಗಿತಗೊಂಡಿದ್ದು, ಬಿಟ್ಟರೆ ದೈವಗಳ ಪ್ರೇರಣೆ, ಕಾರಣಿಕದಿಂದ ಮತ್ತಾವುದೇ ಅಡಚಣೆಯಿಲ್ಲದೆ ಕುಟುಂಬದ ಮತ್ತು ಊರವರ ಕೂಡುವಿಕೆಯಿಂದ 2018 ರಿಂದ ಮೂರು ವರ್ಷಗಳಿಗೊಮ್ಮೆ ಸಂಭ್ರಮ, ಸಡಗರ, ವಿಜೃಂಭಣೆಯಿಂದ ಧರ್ಮ ನೇಮೋತ್ಸವ ನಡೆಯುತ್ತಿದೆ.


ಪುತ್ತೂರು ಮಹಾದೇವನ ಸನ್ನಿಧಿ ಮತ್ತು ಏಳ್ನಾಡುಗುತ್ತು ಕುಟುಂಬ:
ಪುತ್ತೂರು ಸೀಮೆಯೊಡೆಯ ಶ್ರೀ ಮಹಾಲಿಂಗೇಶ್ವರ ದೇವಸ್ಠಾನಕ್ಕೂ ಏಳ್ನಾಡುಗುತ್ತು ಕುಟುಂಬಕ್ಕೂ ಬಹಳ ಹಳೆಯ ಸಂಬಂಧವಿದೆ. ದೇವಾಲಯದ ಆಗು-ಹೋಗುಗಳಲ್ಲಿ ಏಳ್ನಾಡುಗುತ್ತು ಕುಟುಂಬಸ್ಠರು ಹಿಂದಿನಿಂದಲೂ ಪ್ರಧಾನ ಪಾತ್ರ ವಹಿಸಿಕೊಂಡು ಬಂದಿದ್ದಾರೆ. ಪ್ರತಿ ವರ್ಷ ಏಪ್ರಿಲ್ 1 ರಂದು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಅಂಗವಾಗಿ ಗೊನೆ ಕಡಿಯುವ ಶುಭದಿನದಂದು ಕೊಟ್ಟಿಬೆಟ್ಟು ಏಳ್ನಾಡುಗುತ್ತು ಕುಟುಂಬ ಸದಸ್ಯರಿಂದ ಬ್ರಾಹ್ಮಣ ಸಂತರ್ಪಣೆ ಮತ್ತು ಅನ್ನಸಂತರ್ಪಣೆ ವಾಡಿಕೆಯಂತೆ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಏಪ್ರಿಲ್ 12 ರಂದು ಏಳ್ನಾಡುಗುತ್ತಿನ ಮನೆಗೆ ಮಹಾದೇವನ ಆಗಮನದೊಂದಿಗೆ ಇಲ್ಲಿನ ಕಟ್ಟೆಯಲ್ಲಿ ಪೂಜೆ-ಪುನಸ್ಕಾರ ನಡೆಯುತ್ತದೆ. ಪೂರ್ವಿಕರ ಕಾಲದಿಂದಲೂ ಏಳ್ನಾಡುಗುತ್ತಿನ ಮನೆಯಲ್ಲಿರುವ ಖಡ್ಗ ಮತ್ತು ಗುರಾಣಿಯನ್ನು ಶ್ರೀ ಮಹಾಲಿಂಗೇಶ್ವರ ದೇವರ ರಥೋತ್ಸವದಂದು ಕುಟುಂಬ ಸದಸ್ಯರೊಂದಿಗೆ ದೇವಾಲಯಕ್ಕೆ ತಂದು ದೇವರ ಸೇವೆ ಮಾಡುವ ಮೂಲಕ ತಂತ್ರಿಗಳಿಂದ ಗಂಧ-ಪ್ರಸಾದ ಪಡೆಯುವ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದ್ದು, ಮುಂದುವರಿದಿದೆ. ಮಾತ್ರವಲ್ಲ ಜಾತ್ರೋತ್ಸವದ ಸಂದರ್ಭ ನಡೆಯುವ ಅಪ್ಪಂಗಾಯ ಸೇವೆಯ ವೇಳೆ ಕೊಟ್ಟಿಬೆಟ್ಟು ಏಳ್ನಾಡುಗುತ್ತು ಕುಟುಂಬಸ್ಠರು ತೆಂಗಿನಕಾಯಿ ಅರ್ಪಿಸುವ ಪದ್ಧತಿ ಇಂದಿಗೂ ಜಾರಿಯಲ್ಲಿದೆ. ಜಾತ್ರೆಯ ಬಳಿಕ ನಡೆಯುವ ನೇಮೋತ್ಸವ ಹಾಗೂ ಕೋಳಿ ಅಂಕದಲ್ಲಿ ಏಳ್ನಾಡುಗುತ್ತು ಮನೆತನದವರ ಉಪಸ್ಥಿತಿ ಅತ್ಯಗತ್ಯ.

ಧರ್ಮನೇಮೋತ್ಸವ ಹೀಗೆ ನಡೆಯಲಿದೆ..
ಕೊಟ್ಟಿಬೆಟ್ಟು ಏಳ್ನಾಡುಗುತ್ತು ಫ್ಯಾಮಿಲಿ ಟ್ರಸ್ಟ್ ವತಿಯಿಂದ ಯಜಮಾನ ರಾಧಾಕೃಷ್ಣ ನಾಯ್ಕ್ ನೇತೃತ್ವದಲ್ಲಿ ಈ ಬಾರಿ ಧರ್ಮ ನೇಮೋತ್ಸವ ಜ.31 ರಿಂದ ಫೆ.2ರವರೆಗೆ ನಡ ರಂದು ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ, ಗುಳಿಗ ನೇಮ ನಡೆಯಲಿದ್ದು, ಫೆ.1 ರಂದು ವರ್ಣರ ಪಂಜುರ್ಲಿ ಮತ್ತು ಪಿಲಿ ಚಾಮುಂಡಿ ನೇಮ ನಡೆಯಲಿದೆ. ಫೆ.2 ರಂದು ಕುಟುಂಬದ ಧರ್ಮ ದೈವ ಜುಮಾದಿ ಬಂಟ ದೈವದ ನೇಮ ನಡೆಯಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಅನ್ನಸಂತರ್ಪಣೆಯೊಂದಿಗೆ ಮೂರು ದಿನಗಳವರೆಗೆ ನಡೆಯುವ ಈ ಪುಣ್ಯ ಕಾರ್ಯದಲ್ಲಿ ಕೊಟ್ಟಿಬೆಟ್ಟು ಏಳ್ನಾಡುಗುತ್ತು ಮನೆತನದ ಸದಸ್ಯರು, ಭಕ್ತಾಭಿಮಾನಿಗಳು ಕುಟುಂಬ ಸಮೇತರಾಗಿ ಭಾಗವಹಿಸುವಂತೆ ಏಳ್ನಾಡುಗುತ್ತಿನ ಮನೆಯ ಯಜಮಾನ ರಾಧಾಕೃಷ್ಣ ನಾಯ್ಕ್ ಮತ್ತು ಕುಟುಂಬದ ಸದಸ್ಯರು ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕಂಪ ಸುದರ್ಶನ ನಾಯ್ಕ್ ( 9880908382) ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here