ರೋಟರಿ ಪುತ್ತೂರು, ಚೆನ್ನೈ ಫ್ರೀಡಂ ಟ್ರಸ್ಟ್‌ನಿಂದ ಕಾಲು ಕಳೆದುಕೊಂಡವರಿಗೆ ಉಚಿತ ಕೃತಕ ಕಾಲು ಪರಿಕರಗಳ ಜೋಡಣಾ ಶಿಬಿರ

0


ಮತ್ತೊಬ್ಬರ ಬಾಳಿನಲ್ಲಿ ಬೆಳಕು ಚೆಲ್ಲುವುದೇ ನಮ್ಮ ಧ್ಯೇಯವಾಗಲಿ-ವಿಕ್ರಂ ದತ್ತ

ಪುತ್ತೂರು: ಕಾಲುಗಳನ್ನು ಕಳೆದುಕೊಂಡವರು ರೋಗಿಗಳಲ್ಲ, ಅವರು ಫಲಾನುಭವಿಗಳು ಎಂದು ನಾವು ಗುರುತಿಸಿಕೊಳ್ಳಬೇಕಾಗಿದೆ. ಫ್ರೀಡಂ ಟ್ರಸ್ಟ್ ಸಂಸ್ಥೆಯು ರೋಟರಿ ಪುತ್ತೂರು ಸಂಸ್ಥೆಯೊಂದಿಗೆ ಸೇರಿಕೊಂಡು ಇದು ದೇವರ ಕೆಲಸ ಎಂಬಂತೆ ಕಾಲಿಲ್ಲದವರಿಗೆ ಕೃತಕ ಕಾಲುಗಳ ಪರಿಕರಗಳನ್ನು ಪ್ರೀತಿಯಿಂದ ಹಾಗೂ ಜವಾಬ್ದಾರಿಯುತವಾಗಿ ಪೂರೈಸಿದ್ದು, ಕಾಲು ಕಳೆದುಕೊಂಡವರ ಬಾಳಿನಲ್ಲಿ ಬೆಳಕು ಚೆಲ್ಲುವುದೇ ನಮ್ಮ ಉದ್ದೇಶ ಎಂದು ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಹೇಳಿದರು.


ಜ.30 ರಂದು ರೋಟರಿ ಕ್ಲಬ್ ಪುತ್ತೂರು, ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು, ರೋಟರ‍್ಯಾಕ್ಟ್ ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜು, ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ಚೆನ್ನೈ ಫ್ರೀಡಂ ಟ್ರಸ್ಟ್ ಹಾಗೂ ತಿರುಮಲೈ ಕೆಮಿಕಲ್ಸ್ ಇದರ ಸಹಭಾಗಿತ್ವದಲ್ಲಿ ‘ವಾಕ್ ಇಂಡಿಯಾ’ ಯೋಜನೆಯಡಿ ನಡೆದ ಉಚಿತ ಕೃತಕ ಕಾಲುಗಳ ಪರಿಕರಗಳ ಜೋಡಣಾ ಶಿಬಿರದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.


ಕಾಲಿಲ್ಲದವರ ಬಾಳಿನಲ್ಲಿ ಆತ್ಮಸ್ಥೈರ್ಯ ತುಂಬುವುದು ಶ್ಲಾಘನೀಯ-ಡಾ.ಹರ್ಷಕುಮಾರ್ ರೈ:
ರೋಟರಿ ಅಸಿಸ್ಟೆಂಟ್ ಗವರ್ನರ್ ಡಾ.ಹರ್ಷಕುಮಾರ್ ರೈ ಮಾತನಾಡಿ, ಕಾಲುಗಳ ಅಂಗವೈಕಲ್ಯ ಹೊಂದಿದವರಿಗೆ ಕೃತಕ ಕಾಲುಗಳ ಸಾಧನವನ್ನು ನೀಡಿ ಅವರ ಬಾಳಿನಲ್ಲಿ ಆತ್ಮಸ್ಥೈರ್ಯ ತುಂಬುವ ಮೂಲಕ ಹೃದಯವಂತಿಕೆ ಮೆರೆಸುವ ಕಾರ್ಯ ರೋಟರಿ ಪುತ್ತೂರು ಹಾಗೂ ಚೆನೈ ಫ್ರೀಡಂ ಟ್ರಸ್ಟ್ ರವರಿಂದ ಆಗಿದೆ. ಲಕ್ಷಾಂತರ ಹಣ ಖರ್ಚು ಮಾಡಿ ಸಾಧನವನ್ನು ಉಚಿತವಾಗಿ ನೀಡಿದ್ದನ್ನು ಲಘುವಾಗಿ ಪರಿಗಣಿಸದೆ ಅವುಗಳ ಸಂಪೂರ್ಣ ಪ್ರಯೋಜನವನ್ನು ಫಲಾನುಭವಿಗಳು ಬಳಸುವ ಮೂಲಕ ಅನುಭವಿಸುವಂತಾಗಬೇಕು ಎಂದರು.


ಅಂಗವೈಕಲ್ಯತೆಯ ನೋವು ಅನುಭವಿಸಿದವರಿಗೆ ಗೊತ್ತು ಅದರ ಪರಿಣಾಮ-ಡಾ.ಶ್ರೀಪತಿ ರಾವ್:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್ ಮಾತನಾಡಿ, ಕಳೆದ ನಲ್ವತ್ತು ವರ್ಷಗಳ ನನ್ನ ವೈದ್ಯಕೀಯ ಜೀವನದಲ್ಲಿ ಅಂಗವೈಕಲ್ಯ ಹೊಂದಿದವರನ್ನು ಕಂಡಿದ್ದೇನೆ. ಅಂಗವೈಕಲ್ಯತೆ ಹೀಗೆಯೇ ಬರುತ್ತದೆ ಎಂದು ಹೇಳಲಾಗದು, ಬೇರೆ ಬೇರೆ ಕಾರಣಗಳಿಂದ ಅಂಗವೈಕಲ್ಯತೆಗೆ ತುತ್ತಾಗುವ ಸಂದರ್ಭಗಳು ಇರುತ್ತದೆ. ಅಂಗವೈಕಲ್ಯತೆಯ ನೋವು ಅನುಭವಿಸಿದವರಿಗೆ ಗೊತ್ತು ಅದರ ಪರಿಣಾಮ. ಕಳೆದ ಎಂಟು ವರ್ಷಗಳಿಂದ ರೋಟರಿ ಪುತ್ತೂರು ಕಾಲು ಕಳೆದುಕೊಂಡವರ ಬಾಳಿಗೆ ಹ್ಯುಮಾನಿಟಿ ಸೇವೆ ನೀಡುತ್ತಾ ಬಂದಿದೆ ಎಂದರು.


ಫಲಾನುಭವಿಗಳು ಉತ್ತಮವಾಗಿ ಉಪಯೋಗ ಮಾಡಿದ್ದಲ್ಲಿ ಶ್ರಮ ಸಾರ್ಥಕ-ಸುದರ್ಶನ್:
ಚೆನ್ನೈ ಫ್ರೀಡಂ ಟ್ರಸ್ಟ್ ಆಡಳಿತ ಸಮಿತಿ ಸದಸ್ಯ ಸುದರ್ಶನ್ ಮಾತನಾಡಿ, ಕಾಲು ಇಲ್ಲದವರಿಗೆ ಕೃತಕ ಕಾಲು ನೀಡುವಲ್ಲಿ ರೋಟರಿ ಪುತ್ತೂರು ಫ್ರೀಡಂ ಟ್ರಸ್ಟ್‌ನೊಂದಿಗೆ ಜೈಜೋಡಿಸಿರುವುದಕ್ಕೆ ಅಭಿನಂದನೆಗಳು. ಕೃತಕ ಕಾಲು ಪಡೆದ ಫಲಾನುಭವಿಗಳು ಅವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿದಾಗ ನಾವು ಮಾಡುವ ಶ್ರಮವು ಸಾರ್ಥಕವಾಗುತ್ತದೆ ಮಾತ್ರವಲ್ಲ ಫಲಾನುಭವಿಗಳಿಗೆ ನೀಡಿದಂತಹ ಸಾಧನಗಳಿಗೆ ಒಂದು ವರ್ಷದ ವಾರಂಟಿಯಿದ್ದು, ಏನಾದರೂ ಸಮಸ್ಯೆ ಬಂದಲ್ಲಿ ನಮ್ಮನ್ನು ಸಂಪರ್ಕಿಸಬಹುದು ಎಂದರು.


ಸಮಾಜಕ್ಕೆ ಕೊಡುಗೆ ನೀಡಿದ ಹಿರಿಯ ಸಂಸ್ಥೆ ರೋಟರಿ ಪುತ್ತೂರು-ಕೆ.ವಿಶ್ವಾಸ್ ಶೆಣೈ:
ಪುತ್ತೂರು ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಆಡಳಿತ ಮಂಡಳಿ ಟ್ರಸ್ಟಿ ಕೆ.ವಿಶ್ವಾಸ್ ಶೆಣೈ ಮಾತನಾಡಿ, ಪುತ್ತೂರಿನ ಹಿರಿಯ ಸಮಾಜಮುಖಿ ಸಂಘಟನೆಯಾದ ರೋಟರಿ ಪುತ್ತೂರು ಸಂಸ್ಥೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಬಹಳಷ್ಟು ಶ್ರಮಿಸಿದೆ. ಇದೇ ಸಭಾಂಗಣದಲ್ಲಿ ಕಳೆದ ಬಾರಿ ಎಂಡೋಸಲ್ಫಾನ್ ಪೀಡಿತರಿಗೆ ಕೃತಕ ಕಾಲುಗಳನ್ನು ನೀಡುವ ಕಾರ್ಯಕ್ರಮ ಜರಗಿದ್ದು, ಇದೀಗ ರೋಟರಿ ಪುತ್ತೂರು ಅಂತಹುದೇ ಮತ್ತೊಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.


ರೋಟರಿ ಪುತ್ತೂರು ಸದಸ್ಯ ದತ್ತಾತ್ರೇಯ ರಾವ್ ಪ್ರಾರ್ಥಿಸಿದರು. ಕಾರ್ಯಕ್ರಮದ ಸಂಯೋಜಕ ಡಾ.ಶ್ರೀಪ್ರಕಾಶ್ ಬಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಪುತ್ತೂರು ಕಾರ್ಯದರ್ಶಿ ದಾಮೋದರ್ ಕೆ.ಎ ವಂದಿಸಿದರು. ರೋಟರಿ ಪುತ್ತೂರು ಸಮುದಾಯ ಸೇವಾ ವಿಭಾಗದ ನಿರ್ದೇಶಕ ರಾಜ್‌ಗೋಪಾಲ್ ಬಲ್ಲಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೊ|ಸುಬ್ಬಪ್ಪ ಕೈಕಂಬ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಪುತ್ತೂರು ಸದಸ್ಯರು ಸಹಕರಿಸಿದರು.



52 ಫಲಾನುಭವಿಗಳು, ರೂ.7 ಲಕ್ಷ ವೆಚ್ಚ..
ಉಚಿತ ಕೃತಕ ಕಾಲು ಜೋಡಣಾ ಶಿಬಿರದಲ್ಲಿ ಓರ್ವ ಫಲಾನುಭವಿಯ ಕೃತಕ ಕಾಲಿಗೆ ಸುಮಾರು ರೂ.10 ಸಾವಿರ ವೆಚ್ಚವಾಗಲಿದೆ. ಹಾವೇರಿ, ಸಕಲೇಶಪುರ, ಚಿಕ್ಕಮಗಳೂರು, ಧಾರವಾಡ, ಮಡಿಕೇರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ 52 ಮಂದಿ ಕಾಲಿಲ್ಲದ ಫಲಾನುಭವಿಗಳಿಗೆ ಅವರ ಕಾಲಿನ ಅಳತೆಗನುಗುಣವಾಗಿ ಸುಮಾರು 7 ಲಕ್ಷ ರೂ.ವೆಚ್ಚದಲ್ಲಿ ಚೆನ್ನೈಯಿಂದ ನಿರ್ಮಾಣ ಮಾಡಿಸಿದ ಕೃತಕ ಕಾಲಿನ ಪರಿಕರಗಳನ್ನು ಉಚಿತವಾಗಿ ಹಸ್ತಾಂತರಿಸಲಾಯಿತು. ನಿರ್ಮಿಸಿದ ಕೃತಕ ಕಾಲುಗಳಲ್ಲಿ ಬಿಗಿತ, ಸಡಿಲಿಕೆ ಹೀಗೆ ಯಾವುದಾದರೂ ತೊಂದರೆ ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟವರಿಗೆ ಫೋನಾಯಿಸಿದ್ದಲ್ಲಿ ಅವರಿಗೆ ಬದಲಿ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ. ಕೃತಕ ಕಾಲುಗಳು ಯಾವುದೇ ರೆಡಿಮೇಡ್ ಅಲ್ಲ, ಬದಲಾಗಿ ಫಲಾನುಭವಿಗಳ ಕಾಲಿನ ಅಳತೆಯನ್ನು ತೆಗೆದುಕೊಂಡು ಮಾಡಿದುದಾಗಿದೆ. ಇದನ್ನು ಮತ್ತೊಬ್ಬ ವ್ಯಕ್ತಿಗೆ ಧರಿಸಲು ಸಾಧ್ಯವಾಗುವುದಿಲ್ಲ.
-ಡಾ.ಶ್ರೀಪ್ರಕಾಶ್ ಬಿ, ಪ್ರಾಜೆಕ್ಟ್ ಕೋ-ಆರ್ಡಿನೇಟರ್

ಗೌರವ..
ಈ ಸಂದರ್ಭದಲ್ಲಿ ಸಹಕರಿಸಿದ ರೋಟರ‍್ಯಾಕ್ಟ್ ಪುತ್ತೂರು ಅಧ್ಯಕ್ಷ ಸುಬ್ರಮಣಿ, ರೋಟರ‍್ಯಾಕ್ಟ್ ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜು ಅಧ್ಯಕ್ಷೆ ಕು.ಕವಿತಾ, ಚೆನ್ನೈ ಫ್ರೀಡಂ ಟ್ರಸ್ಟ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಜಗನ್, ತಾಂತ್ರಿಕ ಅಧಿಕಾರಿಗಳಾದ ಬಾಲಾಜಿ, ರೋಯ್ ಮೋನು, ರಾಜ್, ಪೂಮಾಲೈರನ್ನು ಬದ್ಧತೆಯ ಸೇವೆಗಾಗಿ ವಿಶೇಷವಾಗಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here