ಪುತ್ತೂರು: ಅಪಘಾತವೆಂಬುದು ಆಕಸ್ಮಿಕ ಘಟನೆಯಾಗಿದೆ. ರಸ್ತೆ ನಾವು ಹೊರಟ ಜಾಗಕ್ಕೆ ನಮ್ಮನ್ನು ತಲುಪಿಸುವ ಒಂದು ಮಾಧ್ಯಮವಷ್ಟೇ. ರಸ್ತೆಗೆ ನಮ್ಮ ಮೇಲೆ ಯಾವುದೇ ದ್ವೇಷವಿಲ್ಲ. ರಸ್ತೆಯಲ್ಲಿ ಸಾಗುವ ವಾಹನಗಳಿಗೂ ಪರಸ್ಪರ ದ್ವೇಷ ಭಾವನೆ ಇಲ್ಲ. ನಾವು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದಲ್ಲಿ ಅದೇ ನಮ್ಮ ಪಾಲಿಗೆ ಕಂಟಕವಾಗಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶ್ವನಾಥ ಅಜಲ ಹೇಳಿದರು.
ಬನ್ನೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಜ.30ರಂದು ನಡೆದ ಕರ್ನಾಟಕ ಸರಕಾರ ಸಾರಿಗೆ ಇಲಾಖೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಪುತ್ತೂರು ಇದರ ಆಯೋಜನೆಯಲ್ಲಿ ‘ರಸ್ತೆ ನಿಯಮಗಳ ಪಾಲಿಸಿ, ಜೀವಗಳ ರಕ್ಷಿಸಿ’ ಎಂಬ ಘೋಷವಾಕ್ಯದಲ್ಲಿ ನಡೆಯಲಿರುವ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ – 2025 ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಸ್ತೆಯ ಪರಿಸ್ಥಿತಿಯನ್ನು ಗಮನಿಸಿಕೊಂಡು ನಾವು ನಮ್ಮ ವಾಹನವನ್ನು ಚಲಾಯಿಸಬೇಕೇ ಹೊರತು, ವೇಗಕ್ಕೆ ಆದ್ಯತೆ ಕೊಟ್ಟು ವಾಹನ ಚಲಾಯಿಸಬಾರದು. ಸಂಚಾರಿ ನಿಯಮಗಳಿಗೆ ಜೀವವಿಲ್ಲ ಆದರೆ ನಾವು ಅವುಗಳನ್ನು ಸರಿಯಾಗಿ ಪಾಲಿಸದರೆ ಅವುಗಳು ನಮ್ಮ ಜೀವವನ್ನು ಉಳಿಸುತ್ತವೆ. ರಸ್ತೆ ಅಪಘಾತಗಳಿಗೆ ಮೂಲ ಕಾರಣ ವಾಹನಗಳನ್ನು ಚಲಾಯಿಸುವ ನಾವೇ. ಸಂಚಾರ ನಿಯಮಗಳನ್ನು ಪಾಲಿಸಿ, ವೇಗವನ್ನು ನಿಯಂತ್ರಣದಲ್ಲಿರಿಸಿಕೊಂಡು ಜವಾಬ್ದಾರಿಯಿಂದ ವಾಹನಗಳನ್ನು ಚಲಾಯಿಸಿದಲ್ಲಿ ನಾವು ಸಾಗುವ ರಸ್ತೆ ನಮ್ಮ ಪಾಲಿಗೆ ಸುಖಕರ ಪ್ರಯಾಣವನ್ನೇ ಒದಗಿಸುತ್ತದೆ ಎಂದು ಹೇಳಿದರು.
ಸಂಚಾರ ನಿಯಮಗಳ ಪಾಲನೆ ನಮ್ಮೆಲ್ಲರ ಆದ್ಯ ಕರ್ತವ್ಯ – ಡಾ. ದೀಪಕ್ ರೈ
ಮುಖ್ಯ ಅತಿಥಿಗಳಾಗಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಕ್ ಕುಮಾರ್ ರೈ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸುದ್ದಿ ಕೇಳುತ್ತಲೇ ಇದೆ. ವಾಹನಗಳ ಸಂಖ್ಯೆ ಜಾಸ್ತಿಯಾಗಿರುವುದು ಒಂದು ಕಾರಣವಾಗಿದ್ದರೆ, ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸದೇ ಇರುವುದೂ ಸಹ ಅಪಘಾತಗಳು ಸಂಭವಿಸಲು ಪ್ರಮುಖವಾದ ಕಾರಣವಾಗಿದೆ. ನಾವು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿದಲ್ಲಿ ಶೇ.೯೫ರಷ್ಟು ಅಪಘಾತಗಳನ್ನು ತಪ್ಪಿಸಲು ಸಾಧ್ಯವಿದೆ. ವಾಹನ ಅಪಘಾತದಿಂದ ಚಿಕ್ಕ ಪ್ರಾಯದ ಯುವಕರು ಅಪಘಾತದಲ್ಲಿ ಗಾಯಗೊಂಡು ಜೀವನ ಪರ್ಯಂತ ನರಳಾಡುತ್ತಿರುವುದೇ ಅಧಿಕ. ಹೀಗಾಗಿ ಡ್ರೈವಿಂಗ್ ಲೈಸನ್ಸ್ ನೀಡುವ ವಿಚಾರದಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ನಿಯಮಗಳ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
’ನಾವು ದಂಡ ಹಾಕುವುದು ಜನರ ಜಾಗೃತಿಗಾಗಿ-ಕೆ.ಎಸ್. ಕುಟ್ಟಿ
ಪುತ್ತೂರು ಸಂಚಾರ ಠಾಣಾ ಉಪ ನಿರೀಕ್ಷಕ ಕೆ.ಎಸ್. ಕುಟ್ಟಿ ಮಾತನಾಡಿ, ಪುತ್ತೂರು ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ವಿವಿಧ ಅಪಘಾತಗಳಲ್ಲಿ ಉಂಟಾದ ೨೮ ಸಾವು ಪ್ರಕರಣಗಳಲ್ಲಿ ಹೆಚ್ಚಿನ ಸಾವು ಸಂಭವಿಸಿರುವುದು ದ್ವಿಚಕ್ರ ವಾಹನಗಳ ಹಿಂಬದಿ ಸವಾರರಾಗಿದ್ದಾರೆ. ಹೆಲ್ಮೆಟ್ ಧರಿಸದಿರುವುದೂ ಒಂದು ಪ್ರಮುಖ ಕಾರಣವಾಗಿದೆ. ಅಪಘಾತವಾದಾಗ ಸಂತ್ರಸ್ತರಿಗೆ ವಿಮಾ ಸೌಲಭ್ಯ ಸಿಗುತ್ತದೆ ಎಂಬ ಮನೋಭಾವ ನಮ್ಮಲ್ಲಿರಬಾರದು, ನಾವು ದಂಡ ಹಾಕುವುದು ಸರಕಾರದ ಒತ್ತಡದಿಂದಲ್ಲ. ಅದು ಜನರ ಜಾಗೃತಿಗೆ ಆಗಿದೆ. ಎಂದು ಹೇಳಿದ ಅವರು ಡ್ರಿಂಕ್ ಆಂಡ್ ಡ್ರೈವ್ ಪ್ರಕರಣಗಳು ಇತ್ತಿಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ಕಳವಳಕಾರಿ ವಿಚಾರ, ಒಂದು ತಿಂಗಳಲ್ಲಿ ೧೦-೧೫ ಡ್ರಿಂಕ್ ಆಂಡ್ ಡ್ರೈವ್ ಪ್ರಕರಣ ದಾಖಲಿಸಿದ್ದೇವೆ, ಒಂದೇ ದಿನದಲ್ಲಿ ೮ ಪ್ರಕರಣಗಳು ನಮಗೆ ಸಿಕ್ಕಿರುವುದೂ ಇದೆ ಎಂದು ಅವರು ಹೇಳಿದರು.
ಹಿರಿಯ ಮೋಟಾರು ವಾಹನ ನಿರೀಕ್ಷಕ ಬಿ.ಎಸ್. ಅಶ್ಪಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧೀಕ್ಷಕ ದೀಪಕ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಅಧೀಕ್ಷಕ ಆಸ್ಕರ್ ಸಂತೋಷ್ ವಂದಿಸಿದರು. ಕಚೇರಿಯ ಸಿಬ್ಬಂದಿಗಳು, ಡ್ರೈವಿಂಗ್ ಸ್ಕೂಲ್ ಮಾಲಕರು ಹಾಗೂ ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೇಳಿಬಂದ ಪ್ರಮುಖ ಅಂಶಗಳು:
- ವಾಹನಗಳ ದಾಖಲಾತಿಗಳನ್ನು ಸರಿಯಾಗಿ ಇಟ್ಟುಕೊಳ್ಳುವುದು, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಎಲ್ಲಾ ವಾಹನ ಮಾಲಕರು, ಸವಾರರ ಜವಾಬ್ದಾರಿ.
- ಚಾಲನಾ ಪರವಾನಿಗೆ ಪತ್ರ (ಡ್ರೈವಿಂಗ್ ಲೈಸನ್ಸ್) ನೀಡುವ ಪ್ರಕ್ರಿಯೆಯನ್ನು ಇನ್ನಷ್ಟು ಕಠಿಣಗೊಳಿಸುವ ಅಗತ್ಯವಿದೆ.
- ಯುರೋಪ್ ರಾಷ್ಟ್ರಗಳಲ್ಲಿ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಲೈಸನ್ಸ್ ಪಡೆದುಕೊಳ್ಳುವುದೇ ಒಬ್ಬ ವ್ಯಕ್ತಿಯ ಜೀವಮಾನದ ದೊಡ್ಡ ಸಾಧನೆ ಎಂದೇ ಭಾವಿಸಲಾಗುತ್ತಿದೆ.
- ವಾಹನ ಚಾಲನೆಯ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ಬಳಕೆ ಬೇಡ. ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಬೇಡವೇ ಬೇಡ.
- ಅಪಘಾತದಲ್ಲಿ ತಲೆಗೆ ಪೆಟ್ಟಾದ್ರೆ ಕೆಲವರಿಗೆ ಜೀವನ ಪೂರ್ತಿ ಫಿಟ್ಸ್ ಬರುವ ಸಾಧ್ಯತೆಗಳಿವೆ. ಅಪಘಾತದಲ್ಲಿ ನರ ಮಂಡಲ ವ್ಯವಸ್ಥೆಗೆ ಹಾನಿಯಾದ್ರೆ ಜೀವನ ಪರ್ಯಂತ ನರಳಬೇಕಾಗ್ತದೆ.
- ಟೂ ವ್ಹೀಲರ್ ಚಾಲನೆ ಸಂದರ್ಭದಲ್ಲಿ ಹೆಲ್ಮೆಟ್ ಧರಿಸುವುದು ಮತ್ತು ಫೋರ್ ವ್ಹೀಲರ್ ಚಲಾಯಿಸುವ ಸಂದರ್ಭದಲ್ಲಿ ಸೀಟ್ ಬೆಲ್ಟ್ ಧರಿಸುವುದರಿಂದ ನಮ್ಮ ಜೀವ ಉಳಿಯುತ್ತದೆ.
- ದ್ವಿಚಕ್ರ ವಾಹನದಲ್ಲಿ ಸಣ್ಣ ಮಕ್ಕಳನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ವಿಶೇಷ ಎಚ್ಚರಿಕೆ ವಹಿಸಬೇಕು.
- ಹೊಗೆ ತಪಾಸಣೆ ನಡೆಸುವ ಕೇಂದ್ರದ ಸಿಬ್ಬಂದಿಯ ಬಳಿಯೇ ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ಇರ್ಲಿಲ್ಲ!
- ಅಪ್ರಾಪ್ತ ವಯಸ್ಸಿನವರಿಗೆ ಹೆತ್ತವರು ವಾಹನಗಳನ್ನು ಕೊಡಬೇಡಿ.
- ಎಲ್ಲೆಂದರಲ್ಲಿ ಓವರ್ ಟೇಕ್ ಮಾಡಬಾರದು – ಓವರ್ ಟೇಕ್ ಮಾಡುವ ಜಾಗಗಳಲ್ಲೇ ಓವರ್ ಟೇಕ್ ಮಾಡಬೇಕು.
- ಸಂಚಾರ ಸೂಚನಾ ಫಲಕಗಳಿಗೆ ವಾಹನ ಸವಾರರು ಗೌರವ ನೀಡಬೇಕು.
- ಫೂಟ್ ಪಾತ್ ಇಲ್ಲದ ಪ್ರದೇಶಗಳಲ್ಲಿ ರಸ್ತೆಯ ಬಲ ಬದಿಯಲ್ಲೇ ನಡೆಯಬೇಕು.
- ಮದ್ಯಪಾನ ಮತ್ತು ಅಮಲು ಪದಾರ್ಥಗಳನ್ನು ಸೇವಿಸಿ ಯಾವುದೇ ಕಾರಣಕ್ಕೂ ವಾಹನಗಳನ್ನು ಚಲಾಯಿಸಬಾರದು.
- ರಸ್ತೆಯಲ್ಲಿ ನಾವು ಮಾತ್ರ ಓಡಾಡೋದಲ್ಲ ಎಂಬ ಪ್ರಜ್ಞೆ ನಮ್ಮಲ್ಲಿ ಸದಾ ಇರಬೇಕು