ಬೇಡಿಕೆಗೆ ಸರಕಾರದಿಂದ ಇನ್ನೂ ದೊರೆಯದ ಸ್ಪಂದನೆ- 5ನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ಕಾರ್ಯಕರ್ತೆಯರ ಧರಣಿ

0

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 25 ಸಾವಿರ ರೂ. ಹಾಗೂ ಸಹಾಯಕಿಯರಿಗೆ ಮಾಸಿಕ 12 ಸಾವಿರ ರೂ. ಕನಿಷ್ಠ ವೇತನ ನಿಗದಿ ಸೇರಿದಂತೆ ತಮ್ಮ ಕೆಲವೊಂದು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ, ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ-ಸಹಾಯಕಿಯರ ಸಂಘದ ವತಿಯಿಂದ ಜ.28ರಿಂದ ಅನಿರ್ಧಿಷ್ಟಾವಧಿ ಧರಣಿ ನಡೆಯುತ್ತಿದ್ದರೂ ಸರಕಾರದಿಂದ ಸ್ಪಂದನೆ ದೊರೆಯದೇ ಇರುವುದರಿಂದ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ, ನಾಲ್ಕನೇ ದಿನವಾದ ಜ.31ರಂದು ಮುಷ್ಕರ ನಡೆಯುತ್ತಿರುವ ನಡುವೆಯೇ ಪೊಲೀಸರು ಬಂದು ಶಾಮಿಯಾನ ತೆರವು ಮಾಡುವಂತೆ ಸೂಚಿಸಿದ್ದರಿಂದ ಧರಣಿ ನಿರತರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪುತ್ತೂರು,ಕಡಬದಿಂದಲೂ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಧರಣಿಯಲ್ಲಿ ಭಾಗಿಯಾಗಿದ್ದಾರೆ. ಅಂಗನವಾಡಿ ಕೇಂದ್ರಗಳು ಕಳೆದ ನಾಲ್ಕು ದಿನಗಳಿಂದ ಬಂದ್ ಆಗಿವೆ.


ಲಿಖಿತ ಭರವಸೆ ತನಕ ಮುಷ್ಕರ ಮುಂದುವರಿಕೆ:

ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಯುತ್ತಿದೆ. ತಮ್ಮ ಬೇಡಿಕೆಗಳ ಕುರಿತು ಧರಣಿ ನಿರತರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೂ ಮನವಿ ಸಲ್ಲಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗದೇ ಇದ್ದುದರಿಂದ ಮುಷ್ಕರ ಮುಂದುವರಿದಿದೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕನಿಷ್ಠ ವೇತನ ನೀಡುವ ಕುರಿತು ಸರಕಾರ ಲಿಖಿತ ಭರವಸೆ ನೀಡುವವರೆಗೂ ಧರಣಿಯನ್ನು ಮುಂದುವರಿಸುವುದಾಗಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆಯ ಅಧ್ಯಕ್ಷೆ ಬಿ.ಪ್ರೇಮಾ ತಿಳಿಸಿದ್ದಾರೆ.


ಶಾಮಿಯಾನ ತೆರವಿಗೆ ಪೊಲೀಸರ ಸೂಚನೆ-ಆಕ್ರೋಶ:

ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು,ಸಹಾಯಕಿಯರು ಪ್ರತಿಭಟನೆ ನಿರತರಾಗಿದ್ದ ವೇಳೆ ಏಕಾಏಕಿ ಆಗಮಿಸಿದ ಪೊಲೀಸರು, ಅಲ್ಲಿ ಅಳವಡಿಸಲಾಗಿದ್ದ ಶಾಮಿಯಾನ ತೆರವು ಮಾಡುವಂತೆ ಮುಷ್ಕರ ನಿರತರಿಗೆ ಸೂಚಿಸಿದರು. ಆದರೆ ಇದಕ್ಕೊಪ್ಪದ ಪ್ರತಿಭಟನಾಕಾರರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಅವರಿಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಅವರು ಭರವಸೆ ನೀಡುತ್ತಿದ್ದರೆ ನಾವು ಮುಷ್ಕರ ಮುಂದುವರಿಸುತ್ತಿರಲಿಲ್ಲ. ಇದೀಗ ಸರ್ಕಾರ, ಪ್ರತಿಭಟನೆಯ ಶಾಮಿಯಾನ ತೆಗೆಯಲು ಸೂಚನೆ ನೀಡಿದೆ. ಆದರೆ ಯಾವುದೇ ಕಾರಣಕ್ಕೂ ನಾವು ಮುಷ್ಕರ ನಿಲ್ಲಿಸೋದಿಲ್ಲ. ಪೊಲೀಸರು ಬಂದರೂ ಹೆದರಲ್ಲ, ಮಿಲಿಟರಿ ಬಂದರೂ ಎದ್ದೇಳಲ್ಲ. ನಮ್ಮ ಬೇಡಿಕೆ ಈಡೇರೋವರೆಗೂ ಜಾಗ ಬಿಟ್ಟು ಕದಲೋದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.


ಧರಣಿ ನಡೆಸುವ ಕುರಿತು ನಾವು ಅನುಮತಿ ಪಡೆದುಕೊಂಡಿದ್ದೇವೆ. ಪೊಲೀಸ್ ಕಮಿಷನರ್ ಕಚೇರಿಗೆ ಹೋಗಿ ಅನುಮತಿ ಪಡೆದುಕೊಂಡಿದ್ದೇವೆ. ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಹೋಗಿ ಅನುಮತಿ ಪಡೆದುಕೊಂಡಿದ್ದೇವೆ. ಅನುಮತಿ ಪತ್ರವೂ ಇದೆ. ಆದರೂ ಕೂಡಾ ದೌರ್ಜನ್ಯ ಮಾಡ್ತಿದ್ದಾರೆ. ಸರಕಾರ ಮಹಿಳೆಯರನ್ನು ಬಿಸಿಲಿನಲ್ಲಿ ಕೂರಿಸಿದೆ. ನಮಗೆ ಬೇರೆಡೆ ಧರಣಿಗೆ ಸ್ಥಳಾವಕಾಶ ಮಾಡಿಕೊಡದೆ ದೌರ್ಜನ್ಯ ಮಾಡಿದ್ದಾರೆ ಎಂದು ಸಂಘದ ರಾಜ್ಯಾಧ್ಯಕ್ಷೆ ಪ್ರೇಮಾ ಆರೋಪಿಸಿದರು. ಪೊಲೀಸರು ಏಕಾಏಕಿ ಧರಣಿಯನ್ನು ತೆರವುಗೊಳಿಸಲು ಬಂದಿದ್ದರು. ಮಾಧ್ಯಮದವರು ಬಂದ ತಕ್ಷಣ ಹಾಗೇ ಬಿಟ್ಟು ಹೋಗಿದ್ದಾರೆ ಎಂದು ಅವರು ತಿಳಿಸಿದರು.


ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಸಂಘದ ರಾಜ್ಯ ಗೌರವಾಧ್ಯಕ್ಷೆ ಜಯಲಕ್ಷ್ಮೀ ಬಿ.ಆರ್, ಕಾರ್ಯದರ್ಶಿ ಉಮಾಮಣಿ, ಖಜಾಂಚಿ ವಿಶಾಲಾಕ್ಷ್ಮೀ, ಉಪಾಧ್ಯಕ್ಷೆ ನಿರ್ಮಲಾ ಬಿ.ಎಸ್, ಸಹಕಾರ್ಯದರ್ಶಿ ಶಾಂತ, ರಾಜ್ಯ ಸಲಹೆಗಾರ್ತಿ ಭಾರತಿ ಎನ್.ಪಿ, ಅಲ್ಲದೆ ಪುತ್ತೂರು, ಕಡಬ ತಾಲೂಕಿನ ನೂರಾರು ಕಾರ್ಯಕರ್ತೆಯರು,ಸ ಹಾಯಕಿಯರು ಸೇರಿದಂತೆ ದ.ಕ.ಜಿಲ್ಲೆಯಿಂದಲೂ ಹಲವರು ಪ್ರತಿಭಟನೆಯಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here