ಬಜೆಟ್ನಲ್ಲಿ ನ್ಯಾಯ ಕೊಡಿಸುವೆ-ಸಚಿವೆ ಹೆಬ್ಬಾಳ್ಕರ್ ಭರವಸೆ
ಬೆಂಗಳೂರು:ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕನಿಷ್ಟ ವೇತನ ನೀಡುವ ವಿಚಾರವನ್ನು ಬಜೆಟ್ನಲ್ಲಿ ಮಾಡಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೀಡಿರುವ ಭರವಸೆ ಹಿನ್ನೆಲೆಯಲ್ಲಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಡೆಸುತ್ತಿದ್ದ ಅನಿರ್ಧಿಷ್ಠಾವಧಿ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿರುವ ಮಾಹಿತಿ ಲಭಿಸಿದೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 25 ಸಾವಿರ ರೂ. ಹಾಗೂ ಸಹಾಯಕಿಯರಿಗೆ ಮಾಸಿಕ 12 ಸಾವಿರ ರೂ.ಕನಿಷ್ಠ ವೇತನ ನೀಡುವುದು ಸೇರಿದಂತೆ ತಮ್ಮ ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತದಿಂದ ಆಗಮಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಜ.28ರಿಂದ ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ಅನಿರ್ಧಿಷ್ಠಾವಧಿ ಮುಷ್ಕರ ಆರಂಭಿಸಿದ್ದರು.ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘದ ವತಿಯಿಂದ ನಡೆದ ಈ ಮುಷ್ಕರದಲ್ಲಿ ಪುತ್ತೂರು,ಕಡಬದಿಂದಲೂ ನೂರಾರು ಮಂದಿ ಪಾಲ್ಗೊಂಡಿದ್ದರು. ಬೇಡಿಕೆಗಳ ಕುರಿತು ಮುಖ್ಯಮಂತ್ರಿಯವರಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮುಷ್ಕರ ಐದು ದಿನ ಮುಂದುವರಿದಿತ್ತು.ಈ ಮಧ್ಯೆ ಇಲಾಖೆಯ ಜಂಟಿ ಆಯುಕ್ತರು ಫೆ.1ರಂದು ಮುಷ್ಕರ ನಿರತರೊಂದಿಗೆ ಮಾತುಕತೆ ನಡೆಸಿದ್ದರು.ಇದೀಗ, ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕನಿಷ್ಟ ವೇತನ ನೀಡುವ ನಿಟ್ಟಿನಲ್ಲಿ ಈ ಸಾಲಿನ ಬಜೆಟ್ನಲ್ಲಿ ನ್ಯಾಯ ಒದಗಿಸುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷೆ ಬಿ.ಪ್ರೇಮಾ ತಿಳಿಸಿದ್ದಾರೆ.
ನಮ್ಮ ಸ್ವತಂತ್ರ ಸಂಘಟನೆಯ ಹೋರಾಟದ ಫಲವಾಗಿ ಮೊದಲನೇ ಆದೇಶವಾಗಿ, ಮಿನಿ ಅಂಗನವಾಡಿಗಳು ಮೈನ್ ಅಂಗನವಾಡಿಗಳಾಗಿವೆ.ಬೇಸಿಗೆ ರಜೆ 15 ದಿನ ಇದ್ದುದನ್ನು ತಿಂಗಳಿಗೆ ಏರಿಸಲಾಗಿದೆ.ಈಗ ಸರ್ಕಾರದ ಬಜೆಟ್ನಲ್ಲಿ, ನಾವು ಕೇಳಿರುವ ಕನಿಷ್ಟ ವೇತನವನ್ನು ಮಾಡಿಸುವುದಾಗಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಫೋನ್ ಕರೆಯ ಮೂಲಕ ಮಾತನಾಡಿ ಬಜೆಟ್ನಲ್ಲಿ ನಮಗೆ ಕೊಡಿಸುವುದಾಗಿ ತಿಳಿಸಿರುತ್ತಾರೆ.ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಈ ಹೋರಾಟವನ್ನು ಬಜೆಟ್ನ ನಂತರದ ದಿನದಲ್ಲಿ ಮುಂದುವರಿಸಲಾಗುತ್ತದೆ-
ಬಿ.ಪ್ರೇಮ,ರಾಜ್ಯಾಧ್ಯಕ್ಷರು
ಅಂಗನವಾಡಿ ಕಾರ್ಯಕರ್ತೆಯರು,ಸಹಾಯಕಿಯರ ಸಂಘ