ʼಯಾವುದೇ ಅಧಿಕಾರಿ, ಸಿಬ್ಬಂದಿ ನನ್ನ ಹೆಸರ‍್ಹೇಳಿ ದುಡ್ಡು ತೆಗೆದುಕೊಂಡಿರುವುದು ಗೊತ್ತಾದರೆ ಚಪ್ಪಲಿಯಿಂದ ಹೊಡೆಯುತ್ತೇನೆʼ-ಶಾಸಕ ಅಶೋಕ್ ರೈ ಎಚ್ಚರಿಕೆ

0

ಪುತ್ತೂರು:ಯಾವುದೇ ಅಧಿಕಾರಿಗಳಾಗಲಿ, ಸಿಬ್ಬಂದಿಗಳಾಗಲಿ ಎಲ್ಲಾದರೂ ನನ್ನ ಹೆಸರು ಹೇಳಿ,ಶಾಸಕರಿಗೆ ಪಾಲು ನೀಡಬೇಕಾಗಿದೆ ಎಂದು ಹೇಳಿ ಜನರಿಂದ ದುಡ್ಡು ತೆಗೆದುಕೊಂಡಿರುವುದು ಗೊತ್ತಾದರೆ ಅಂಥವರಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಆಕ್ರೋಶ ಭರಿತ ಮಾತುಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ.


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಬಳಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಶಾಸಕರು ಉತ್ತರಿಸಿದರು.ಸರಕಾರಿ ಆಪ್ ಬಗ್ಗೆ ಗ್ರಾಮ ಆಡಳಿತಾಧಿಕಾರಿಯೋರ್ವರು ಧಿಕ್ಕಾರ ಕೂಗಿದ ವಿಚಾರ ವೈರಲ್ ಆಗಿರುವ ಕುರಿತು ಪತ್ರಕರ್ತರು ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಶಾಸಕ ಅಶೋಕ್ ಕುಮಾರ್ ರೈ,ಯಾವುದೇ ಅಧಿಕಾರಿ ಕೂಡಾ ಸರಕಾರದ ಕಾನೂನಿನ ಬಗ್ಗೆ ಧಿಕ್ಕಾರ ಕೂಗುವ ಅಗತ್ಯವಿಲ್ಲ.ಅವನಿಗೆ ಆ ಅಧಿಕಾರವೂ ಇಲ್ಲ.ಈ ವಿಚಾರ ನನ್ನ ಗಮನದಲ್ಲಿ ಇಲ್ಲ.ಇದನ್ನು ಪರಿಶೀಲನೆ ಮಾಡುತ್ತೇನೆ.ಎಲ್ಲಾದರೂ ಅಂತಹ ವೀಡಿಯೋಗಳು, ಮಾತನಾಡುವುದು ಸಿಕ್ಕಿದರೆ ಅವನನ್ನು ತಕ್ಷಣ ಅಮಾನತುಗೊಳಿಸುತ್ತೇನೆ.ಇವತ್ತು ಭ್ರಷ್ಟಾಚಾರದಿಂದ ತಿಂದು ತಿಂದು ಜಾಸ್ತಿಯಾಗಿದೆ.ಈಗ ಅಕ್ರಮ ಸಕ್ರಮ, 94ಸಿಗೆ ಸಂಬಂಧಿಸಿ ಯಾರಲ್ಲೂ ಹಣ ತೆಗೆದುಕೊಳ್ಳದೆ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಹೇಳಿದ್ದೇವೆ.ಆದರೂ ಜನರನ್ನು ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಹೆದರಿಸಿ, ಬೆದರಿಸಿ ಹಣ ಪಡೆಯುತ್ತಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ.ಮೊನ್ನೆ ತಹಸೀಲ್ದಾರ್ ಸೇರಿಸಿ ಎಲ್ಲರಿಗೂ ಮೀಟಿಂಗ್ ಮಾಡಿದ್ದೇನೆ.ಶಾಸಕರಿಗೆ ಪಾಲು ಕೊಡಬೇಕಾಗಿದೆ ಎಂದು ಎಲ್ಲಾದರೂ ನನ್ನ ಹೆಸರು ಹೇಳಿ ದುಡ್ಡು ತೆಗೆದುಕೊಂಡಿರುವುದು ಗೊತ್ತಾದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಹೇಳಿದ್ದೇನೆ.ಶಾಸಕ ಅಶೋಕ್ ರೈ ಅವರಿಗೆ ಪಾಲು ಕೊಡಬೇಕೆಂದು ಯಾವುದೇ ಅಧಿಕಾರಿ ಪುತ್ತೂರಿನಲ್ಲಿ ಬಾಯಿ ಎತ್ತಿದರೆ ಅಂಥವನಿಗೆ ಚಪ್ಪಲಿಯಲ್ಲಿ ಹೊಡಯುತ್ತೇನೆ ಎಂದು ಹೇಳಿದ್ದೇನೆ ಮತ್ತು ನಾನು ಹೊಡೆಯುತ್ತೇನೆ ಕೂಡಾ.ಹಾಗಾಗಿ ಸಾರ್ವಜನಿಕರು ದಯಮಾಡಿ ಯಾವುದೇ ಅಧಿಕಾರಿಗಳಿಗೆ ದುಡ್ಡು ಕೊಡಲು ಹೋಗಬೇಡಿ.ಎರಡು-ಮೂರು ದಿವಸ ನಿಮ್ಮ ಫೈಲ್ ಅವರು ಪೆಂಡಿಂಗ್ ಮಾಡಬಹುದು.ಹೆದರಬೇಡಿ,ನಾನು ಬಿಡುಗಡೆ ಮಾಡಿ ಕೊಡುತ್ತೇನೆ.ನನಗೆ ಜನರು ಓಟು ಕೊಟ್ಟಿದ್ದಾರೆ.ಅವರ ಋಣ ತೀರಿಸಿ ಕೊಡಬೇಕಾಗಿದೆ ಎಂದರಲ್ಲದೆ,ಯಾರಿಗೆ ದುಡ್ಡು ಕೊಟ್ಟಿದ್ದಾರೆಂದು ಹೇಳಲಿ.ನಾನು ವಾಪಸ್ ತೆಗೆಸಿಕೊಡುತ್ತೇನೆ ಎಂದು ಹೇಳಿದರು.

ಬಿಜೆಪಿಯವರು ಬಸಳೆ ದಂಡನ್ನು ಬಿಸಾಡಿದಂತೆ ಮಾಡುತ್ತಾರೆ
ಕೆದಂಬಾಡಿಯಲ್ಲಿ ಕಾಂಗ್ರೆಸ್ ಸೇರಿದವರು ಬಿಜೆಪಿ ಸದಸ್ಯತ್ವ ಪಡೆದುಕೊಂಡವರಲ್ಲ ಎಂದು ಪಕ್ಷದವರು ಸ್ಪಷ್ಟನೆ ನೀಡಿರುವ ಕುರಿತು ಕೇಳಿದಾಗ ಉತ್ತರಿಸಿದ ಶಾಸಕರು, ಬಿಜೆಪಿಯವರು ಒಬ್ಬ ವ್ಯಕ್ತಿಯನ್ನು ಬಳಸಿಕೊಳ್ಳುವಷ್ಟು ಬಳಸಿಕೊಂಡು ಕೊನೆಗೆ ಆತನನ್ನು ಬಸಳೆಯ ದಂಡನ್ನು ಚಿಮುಟಿ ಚಿಮುಟಿ ಕೊನೆಗೆ ಬಿಸಾಡುವ ಪರಿಸ್ಥಿತಿಯಂತೆ ಮಾಡುತ್ತಾರೆ.ಆ ಕಡೆ, ಈ ಕಡೆ ಹೋದರೆ ಅವನು ಬಿಜೆಪಿಯವನಲ್ಲ ಎನ್ನುತ್ತಾರೆ ಎಂದರು.ಈಗ ಕರ್ನಾಟಕದಲ್ಲೂ ಅದೇ ಪರಿಸ್ಥಿತಿ.ಬಿಜೆಪಿಗೆ ಅಪ್ಪ ಅಮ್ಮ ಇದೆಯಾ?ಬಿಜೆಪಿಗೆ ಗತಿ ಗೋತ್ರವಿಲ್ಲ,ಕಚ್ಚಾಡುವ ರೀತಿಯನ್ನು ಒಮ್ಮೆ ನೋಡಿ ಎಂದು ಅಶೋಕ್ ರೈ ಹೇಳಿದರು.

LEAVE A REPLY

Please enter your comment!
Please enter your name here