ರಾಮಕುಂಜ: ಒಕ್ಕಲಿಗ ಗೌಡ ಸೇವಾ ಸಂಘ ಆಲಂಕಾರು ವಲಯ ಇದರ ’ಕ್ರೀಡಾ ಸಂಭ್ರಮ 2024-25’ ಒಕ್ಕಲಿಗ ಗೌಡ ಸೇವಾ ಸಂಘ ಹಳೆನೇರೆಂಕಿ ಇವರ ಆತಿಥ್ಯದಲ್ಲಿ ಫೆ.2ರಂದು ಹಳೆನೇರೆಂಕಿ ಸರಕಾರಿ ಉ.ಹಿ.ಪ್ರಾ.ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.
ರಾಷ್ಟ್ರಮಟ್ಟದ ಖೋ ಖೋ ಆಟಗಾರ ಚಂದನ್ ಮರಂಕಾಡಿಯವರ ನೇತೃತ್ವದಲ್ಲಿ ಹಳೆನೇರೆಂಕಿ ವಿಷ್ಣುಮೂರ್ತಿ ಭಜನಾ ಮಂದಿರದಿಂದ ಕ್ರೀಡಾಜ್ಯೋತಿ ತರಲಾಯಿತು. ಬಳಿಕ ಕ್ರೀಡಾಕೂಟ ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಕ್ರೀಡೆಗೆ ಹೃದಯ, ಕುಟುಂಬ, ಜಾತಿ, ಗ್ರಾಮ, ಜಗತ್ತನ್ನು ಒಂದು ಗೂಡಿಸುವ ಶಕ್ತಿ ಇದೆ. ಆದ್ದರಿಂದಲೇ ಎಲ್ಲಾ ದೇಶಗಳು, ಸಮುದಾಯಗಳು ಕ್ರೀಡೆಗೆ ಮಹತ್ವ ನೀಡುತ್ತಿವೆ. ಈ ಮೂಲಕ ಪ್ರೀತಿ, ಸಹಬಾಳ್ವೆಯೂ ಸಾಧ್ಯವಿದೆ ಎಂದರು. ಯುವ ಸಮುದಾಯ ಕ್ರೀಡೆ, ವಿದ್ಯೆಯಲ್ಲಿ ಸಾಧಕರಾಗಬೇಕು. ಗೌಡ ಸಮಾಜ ನಿಂತ ನೀರಲ್ಲ. ನಿರಂತರ ಚಟುವಟಿಕೆಯಿಂದ ಕೂಡಿರುತ್ತದೆ. ಬಲಿಷ್ಠ ಸಮಾಜ ನಿರ್ಮಾಣಕ್ಕೆ ಎಲ್ಲರೂ ಒಗ್ಗೂಡಬೇಕೆಂದು ಹೇಳಿದರು.
ಅತಿಥಿಗಳಾಗಿದ್ದ ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕು ಅಧ್ಯಕ್ಷ ಸುರೇಶ್ ಬೈಲು, ಸ್ಪಂದನ ಸಮುದಾಯ ಸಹಕಾರ ಸಂಘ ಕಡಬ ಇದರ ಅಧ್ಯಕ್ಷ ಕೇಶವ ಅಮೈ ಕಲಾಯಿಗುತ್ತು, ಕೊಂಬೆಟ್ಟು ಪ.ಪೂ.ಕಾಲೇಜಿನ ಉಪನ್ಯಾಸಕ ಧರ್ಣಪ್ಪ ಗೌಡ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಆಲಂಕಾರು ವಲಯ ಹಿರಿಯ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಶಿವಣ್ಣ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಡಬ ತಾಲೂಕು ಮಹಿಳಾ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷೆ ವೀಣಾರಮೇಶ್ ಕೊಲ್ಲೆಸಾಗು, ಉಪಾಧ್ಯಕ್ಷೆ ಜಯಂತಿ ಆರ್.ಗೌಡ, ಊರ ಗೌಡರಾದ ಜತ್ತಪ್ಪ ಗೌಡ ಬರೆಂಬೆಟ್ಟು, ಹಳೆನೇರೆಂಕಿ ಸರಕಾರಿ ಉ.ಹಿ.ಪ್ರಾ.ಶಾಲಾ ಎಸ್ಡಿಎಂಸಿ ಅಧ್ಯಕ್ಷ ಹೊನ್ನಪ್ಪ ಗೌಡ ಮರಂಕಾಡಿ, ಹಳೆನೇರೆಂಕಿ ನವಸಾಕ್ಷರತಾ ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಯಶೋಧ ಕೆ.ಎಂ., ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅತಿಥಿಗಳಿಗೆ ಎಲೆ,ಅಡಿಕೆ ನೀಡಿ ಸಂಪ್ರದಾಯಿಕವಾಗಿ ಸ್ವಾಗತ ಕೋರಲಾಯಿತು. ಹಳೆನೇರೆಂಕಿ ಒಕ್ಕಲಿಗ ಗೌಡ ಸೇವಾ ಸಂಘದ ಯುವ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ ಸ್ವಾಗತಿಸಿ, ಆಲಂಕಾರು ವಲಯ ಮಹಿಳಾ ಸಮಿತಿ ಅಧ್ಯಕ್ಷೆ ಗೀತಾ ಮರಂಕಾಡಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಗೌಡ ದೋಳ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕ ಮನೋಹರ ಮರಂಕಾಡಿ ಸನ್ಮಾನಿತರನ್ನು ಪರಿಚಯಿಸಿದರು. ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು. ಇತ್ತೀಚೆಗೆ ನಿಧನರಾದ ಆಲಂಕಾರು ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಪ್ರದೀಪ್ ಬಾಕಿಲ ಅವರ ಆತ್ಮಕ್ಕೆ ಚಿರಶಾಂತಿ ಕೋರಿ 1 ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಧ್ವಜಾರೋಹಣ:
ಬೆಳಿಗ್ಗೆ ಪ್ರಗತಿಪರ ಕೃಷಿಕರಾದ ಮಾಯಿಲಪ್ಪ ಗೌಡ ಅಲೆಪ್ಪಾಡಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಆಲಂಕಾರು, ಕೊಯಿಲ, ರಾಮಕುಂಜ, ಹಳೆನೇರೆಂಕಿ, ಕುಂತೂರು,ಪೆರಾಬೆ ಗ್ರಾಮ ಸಮಿತಿಗಳ ಕ್ರೀಡಾಪಟುಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಕ್ರೀಡಾಕೂಟ ನಡೆಯಿತು.
ಸನ್ಮಾನ
ಕಾರ್ಯಕ್ರಮದಲ್ಲಿ ಮಾಯಿಲಪ್ಪ ಗೌಡ ಅಲೆಪ್ಪಾಡಿ, ಪೂವಣಿ ಗೌಡ ಮರಂಕಾಡಿ, ಮೇದಪ್ಪ ಗೌಡ ಎತ್ತರಪಡ್ಪು ಹಾಗೂ ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಲಲಿತಾ ಚಕ್ರಪಾಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಉದ್ಯಮ ಕ್ಷೇತ್ರದಲ್ಲಿನ ಸಾಧನೆಗಾಗಿ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದಿಂದ ’ಕರಾವಳಿ ಸಾಧಕ’ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಎಸ್ಆರ್ಕೆ ಲ್ಯಾಡರ್ಸ್ನ ಕೇಶವ ಅಮೈ ಅವರನ್ನು ಸನ್ಮಾನಿಸಲಾಯಿತು.
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ:
ರಾಷ್ಟ್ರಮಟ್ಟದ ಖೋ ಖೋ ಆಟಗಾರ ಚಂದನ್ ಮರಂಕಾಡಿ, ಕಬಡ್ಡಿ ಆಟಗಾರರಾದ ವಾತ್ಸಲ್ಯ ಬಿ.ಗೌಡ ಕೊಯಿಲ, ಕೆ.ಭವ್ಯ ಪಲ್ಲತ್ತಡ್ಕ, ಧನ್ಯಶ್ರೀ ಅರ್ಬಿ, ಜನನಿ ಪಜ್ಜಡ್ಕ, ಶ್ರದ್ಧಾ ಕೆ.ಕುಂಟ್ಯಾನ, ಸಾತ್ವಿನ ಕೆದ್ದೊಟ್ಟೆ, ಭುವಿ ಕುಂಟ್ಯಾನ, ಸ್ಕೇಟಿಂಗ್ ಆಟಗಾರ ಶಿಹಾನ ಎ.ಆರ್., ರಾಜ್ಯ ಮಟ್ಟದ ಆಟಗಾರರಾದ ಅಕ್ಷಯ್ ಗೌಡ, ಚರಣ್ ಪಾಣಿಗ ಅವರಿಗೆ ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.