10 ಕೋ.ರೂ. ಕಾಮಗಾರಿ ಅಂತಿಮ ಹಂತದಲ್ಲಿ
20 ಕೋ.ರೂ. ಕಾಮಗಾರಿ ಶೀಘ್ರ ಆರಂಭ: ಅಶೋಕ್ ಕುಮಾರ್ ರೈ
ಉಪ್ಪಿನಂಗಡಿ: 34 ನೆಕ್ಕಿಲಾಡಿ- ಬೊಳುವಾರು ರಾಜ್ಯ ಹೆದ್ದಾರಿಯನ್ನು ಮಾದರಿ ರಸ್ತೆಯನ್ನಾಗಿಸುವ ಯೋಜನೆ ರೂಪಿಸಲಾಗಿದ್ದು, ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ 10 ಕೋ. ರೂ.ನ ಚತುಷ್ಫಥ ರಸ್ತೆ ಅಭಿವೃದ್ಧಿ ಕಾಮಗಾರಿಯು ಅಂತಿಮ ಹಂತದಲ್ಲಿದೆ. ಇನ್ನು 20 ಕೋ.ರೂ. ಅನುದಾನ ಬಿಡುಗಡೆಯಾಗಿ ಟೆಂಡರ್ ಆಗಿದ್ದು, ಇದರ ಕಾಮಗಾರಿ ಈ ವಾರದಲ್ಲಿ ಆರಂಭವಾಗಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆಯುತ್ತಿರುವ 10 ಕೋ. ರೂ.ನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿ, ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಕಾಮಗಾರಿಯು ಅಂತಿಮ ಹಂತದಲ್ಲಿದ್ದು, ಡಾಮರು ಕಾಮಗಾರಿ ಮಾತ್ರ ಬಾಕಿಯಿದೆ. ವಾರದಲ್ಲಿ ಡಾಮರು ಕೆಲಸ ನಡೆದು ಕಾಮಗಾರಿ ಪೂರ್ಣಗೊಳ್ಳಲಿದೆ. ಇನ್ನು ಮೊನ್ನೆ ಶಿಲಾನ್ಯಾಸ ನೆರವೇರಿಸಿರುವ 20 ಕೋ.ರೂ.ನಲ್ಲಿ ಮಂಗಳೂರಿನಿಂದ ಬರುವಾಗ ಮೊದಲು ಸಿಗುವ ಬೊಳುವಾರು ರಸ್ತೆಯಲ್ಲಿ ದೊಡ್ಡ ವೃತ್ತ ನಿರ್ಮಿಸಿ, ಆಂಜನೇಯ ದೇವಾಲಯದ ಬಳಿ ದೊಡ್ಡ ವೃತ್ತ ನಿರ್ಮಿಸಿ ಹಾರಾಡಿಯವರೆಗೆ ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ. ಉಳಿದ ಹಣದಲ್ಲಿ ಸೇಡಿಯಾಪುನಿಂದ ಕೋಡಿಂಬಾಡಿಯವರೆಗೆ ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ. ಇನ್ನು 13 ಕೋ. ರೂ. ಅನುದಾನ ಬಿಡುಗಡೆಯಾಗಿದ್ದು, ಇದರ ಟೆಂಡರ್ ಪ್ರಕ್ರಿಯೆ ಬಾಕಿಯಿದೆ. ಈ ಹಣದಲ್ಲಿ 34 ನೆಕ್ಕಿಲಾಡಿಯಿಂದ ರಾಷ್ಟ್ರೀಯ ಹೆದ್ದಾರಿಯ ಅಂಡರ್‌ಪಾಸ್ ಬಳಿ ತನಕ ಚತುಷ್ಪಥ ರಸ್ತೆಯನ್ನು ನಿರ್ಮಿಸಲಾಗುವುದು. ಇಲ್ಲಿ ನೇರ ರಸ್ತೆ ನಿರ್ಮಾಣದ ಸಂದರ್ಭ ಕೆಲವು ಮನೆಗಳು ಅಡ್ಡ ಬರುವುದರಿಂದ ಅವರ ಮನವಿಗೆ ಸ್ಪಂದಿಸಿ ರಸ್ತೆ ನಿರ್ಮಾಣದ ಯೋಜನಾ ನಕ್ಷೆಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಲಾಗಿದೆ. ಇನ್ನು ಕೋಡಿಂಬಾಡಿಯಲ್ಲಿ ದೊಡ್ಡದಾದ ತೋಡೊಂದಿದ್ದು, ಅದಕ್ಕೆ ಸೇತುವೆ ನಿರ್ಮಿಸಲು ಸುಮಾರು ಎರಡೂವರೆ ಕೋಟಿಯಷ್ಟು ಹೆಚ್ಚುವರಿ ಅನುದಾನ ಬೇಕಾಗಿದ್ದು, ಅದನ್ನು ತರುವ ಕೆಲಸ ಮಾಡಲಾಗುವುದು ಎಂದರು.
ಪಿಡಬ್ಲ್ಯೂಡಿ ಇಲಾಖೆಯಿಂದ ಮತ್ತೆ 10 ಕೋ.ರೂ. ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ 5 ಕೋ.ರೂ.ನಲ್ಲಿ ಕೃಷ್ಣನಗರದಿಂದ ನೆಕ್ಕಿಲಾಡಿ ತನಕ ರಸ್ತೆಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು. ರಸ್ತೆಯ ಇಕ್ಕೆಲಗಳಲ್ಲಿ ಹಸೀರಿಕರಣಕ್ಕೆ ಆದ್ಯತೆ ನೀಡಲಾಗಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಹಣ್ಣಿನ ಮರಗಳು ಹಾಗೂ ರಸ್ತೆಯ ಮಧ್ಯೆ ಹೂವಿನ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ. ಒಟ್ಟಿನಲ್ಲಿ ಒಂದು ವರ್ಷದಲ್ಲಿ ಎಲ್ಲಾ ಕಾಮಗಾರಿಗಳು ಮುಗಿದು ಬೊಳುವಾರು- ನೆಕ್ಕಿಲಾಡಿ ರಾಜ್ಯ ಹೆದ್ದಾರಿಯನ್ನು ಒಂದು ಮಾದರಿ ರಸ್ತೆಯನ್ನಾಗಿ ನಿರ್ಮಿಸುವ ಯೋಜನೆ ಇದೆ. ಈ 10 ಕೋಟಿಯಲ್ಲಿ ಉಳಿದ 2 ಕೋ.ರೂ.ವನ್ನು ನೂಜಿಗೆ, 2 ಕೋಟಿಯನ್ನು ಆರ್ಯಾಪಿನಲ್ಲಿ ತಡೆಗೋಡೆ ನಿರ್ಮಾಣಕ್ಕೆ, 1 ಕೋಟಿಯನ್ನು ಪಾಣಾಜೆಯ ಕಂದಲ್‌ಕಾನ ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು ಎಂದರು.
ಈ ಸಂದರ್ಭ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ನಿಕಟಪೂರ್ವ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್, ಕಾಂಗ್ರೆಸ್ ಮುಖಂಡ ಜಯಪ್ರಕಾಶ್ ಬದಿನಾರು, ಪಿಡಬ್ಲ್ಯೂಡಿ ಎಂಜಿನಿಯರ್‌ಗಳಾದ ಕಾನಿಷ್ಕ, ರಾಜೇಶ್ ರೈ, ತೌಸೀಫ್ ಅಹಮ್ಮದ್ ಪ್ರಮೋದ್ ಇದ್ದರು.