ಪುತ್ತೂರು: ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಜೀವ ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಮೂವರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಮುಂದಿನ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಕೆದಂಬಾಡಿ ಗ್ರಾಮದ ಕುಂಬ್ರ ಮೆಸ್ಕಾಂ ಎದುರುಗಡೆ ಮನೆ ನಿವಾಸಿ ಕೆ.ಸತ್ಯನಾರಾಯಣ ಶರ್ಮ ಎಂಬವರ ಪತ್ನಿ ಕೆ.ಸುಮಂಗಲ ಎಸ್.ಶರ್ಮ ಎಂಬವರು ನೀಡಿದ್ದ ದೂರಿನ ಮೇರೆಗೆ ಪಾಣಾಜೆ ನಿವಾಸಿಗಳಾದ ದಿವಾಕರ ಕುಲಾಲ್,ಅವಿನಾಶ್ ಮತ್ತು ರಾಮಕೃಷ್ಣ ಭಟ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
‘ತಾನು ಪಾಣಾಜೆ ಗ್ರಾಮದಲ್ಲಿ ಹೊಂದಿರುವ ಜಮೀನಿನಲ್ಲಿ ಕೃಷಿ ಕಾರ್ಯಗಳನ್ನು ಮಾಡಿಸುತ್ತಿದ್ದ ಸಂದರ್ಭ 2023 ನವಂಬರ್ 30ರಂದು ಸಂಜೆ 5.30ರ ಸುಮಾರಿಗೆ, ನಾನು ವಾಸಕ್ಕೆಂದು ನಿರ್ಮಿಸಿದ್ದ ಮನೆ ಸ್ಥಳಕ್ಕೆ ಆರೋಪಿಗಳು ಅಕ್ರಮ ಪ್ರವೇಶ ಮಾಡಿ ನಾಳೆಯಿಂದ ಈ ಸ್ಥಳಕ್ಕೆ ಬಂದು ಯಾವುದೇ ಕೆಲಸ ಕಾರ್ಯ ಮಾಡಬಾರದು, ಆಳುಗಳನ್ನು ಕರೆದುಕೊಂಡು ಬರಬಾರದು ಎಂದು ಹೇಳಿ ಜೀವಬೆದರಿಕೆಯೊಡ್ಡಿದ್ದರು ಮಾತ್ರವಲ್ಲದೆ ಆರೋಪಿಗಳಾದ ಅವಿನಾಶ್ ಮತ್ತು ರಾಮಕೃಷ್ಣ ಭಟ್ ಅವರು ಮೊಬೈಲ್ನಿಂದ ಫೋಟೋ ತೆಗೆದಿದ್ದು ಇದರಿಂದ ತನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ. ಆರೋಪಿಗಳ ಈ ಕೃತ್ಯದಿಂದ ಜೀವಭಯವಿರುವುದರಿಂದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಸುಮಂಗಲ ಎಸ್.ಶರ್ಮ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆರೋಪಿಗಳ ವಿರುದ್ಧ ಕಲಂ 447,506,509, 34ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ:
ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ನ್ನು ರದ್ದುಪಡಿಸುವಂತೆ ಕೋರಿ ಆರೋಪಿಗಳು ಕರ್ನಾಟಕ ಹೈಕೋರ್ಟ್ನಲ್ಲಿ 2023ರ ಡಿ.15ರಂದು ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಆರೋಪಿಗಳ ಪರ ದಿವಾಕರ ಕುಲಾಲ್ ಅವರು ನ್ಯಾಯವಾದಿ ರಾಜರಾಮ್ ಸೂರ್ಯಂಬೈಲ್ ಅವರ ಮೂಲಕ ಕ್ರಿಮಿನಲ್ ಪಿಟಿಷನ್ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರು ಪ್ರಕರಣದ ಮುಂದಿನ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಜ.28ರಂದು ಆದೇಶಿಸಿದ್ದು,ವಿಚಾರಣೆಯನ್ನು ಫೆ.27ಕ್ಕೆ ಮುಂದೂಡಿದ್ದಾರೆ.