ಪುತ್ತೂರು: ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ – ಚಿನ್ನದ ಪದಕ ವಿಜೇತ ಕೃಷಿಕ ಕಡಮಜಲು ಸುಭಾಸ್ ರೈಯವರ ಬದುಕಿನ 75ರ ಅಮೃತವರ್ಷ ಸಂಭ್ರಮವನ್ನು ಫೆ.6 ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಕಾದಶ ರುದ್ರಾಭಿಷೇಕದ ಮೂಲಕ ಸರಳ ರೀತಿಯಲ್ಲಿ ಆಚರಿಸಲಿದ್ದಾರೆ.
ದಾಂಪತ್ಯ 45ರ ಸಂಭ್ರಮ ಈಗಾಗಲೇ ಆಚರಿಸಿಕೊಂಡಿರುವ ಸುಭಾಸ್ ರೈಯವರು ತನ್ನ 75ರ ಅಮೃತವರ್ಷ ಸಂಭ್ರಮ ಅಂಗವಾಗಿ ಸಾಹಿತ್ಯಲೋಕಕ್ಕೆ ಒಂದು ಕೊಡುಗೆ ನೀಡುತ್ತಿದ್ದಾರೆ. ಪ್ರೀತಿಯ ಸೆಲೆ, ಆಸರೆಯ ನೆಲೆಯಾಗಿ ಜೀವನಯಾನ ʻಪ್ರೀತಿಯಿಂದ ಪ್ರೀತಿಗೆʼ ಎಂಬ ಕೃತಿಯನ್ನು ಶ್ರೀ ಮಹಾಲಿಂಗೇಶ್ವರ ದೇವರಿಗೆ ಅರ್ಪಿಸಿ ಸಾಂಕೇತಿಕವಾಗಿ ಬಿಡುಗಡೆಗೊಳಿಸಲಿದ್ದಾರೆ. ಇದೇ ಕೃತಿಯು ಅಧಿಕೃತವಾಗಿ ತಾಲೂಕು ಮಟ್ಟದ ಕಾರ್ಯಕ್ರಮವೊಂದರಲ್ಲಿ ಬಿಡುಗಡೆಗೊಂಡು ಓದುಗನಿಗೆ ʻಪ್ರೀತಿಯಿಂದ ಓದುʼ ಬೆಲೆಗೆ ನೀಡಲಿದ್ದೇನೆ ಎಂದು ಕಡಮಜಲುರವರು ಹೇಳಿದ್ದಾರೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ರವರು ಆಮಂತ್ರಿತ ಗಣ್ಯರ ಸಮ್ಮುಖದಲ್ಲಿ ಕೃತಿ ಬಿಡುಗಡೆಗೊಳಿಸಲಿದ್ದಾರೆ. ಕ.ಸಾ.ಪ. ಪುತ್ತೂರು ತಾಲೂಕು ಅಧ್ಯಕ್ಷ ಉಮೇಶ್ ನಾಯಕ್ ಉಪಸ್ಥಿತಿಯಲ್ಲಿ, ಪ್ರೊ. ವಿ.ಬಿ. ಅರ್ತಿಕಜೆ ಅರ್ತಿಪಿರ್ತಿಯ ಶುಭ ನುಡಿಗಳನ್ನಾಡಲಿದ್ದಾರೆ. ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಶುಭಾಸಂಶನೆ ಮಾಡಲಿದ್ದಾರೆ.
ಕಳೆದ 5 ವರ್ಷಗಳಿಂದ ಕಡಮಜಲು ಸುಭಾಸ್ ರೈಯವರು ತನ್ನ ಹುಟ್ಟುಹಬ್ಬವನ್ನು ದ.ಕ. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆಯವರೊಂದಿಗೆ ಆಚರಿಸುತ್ತಿದ್ದು, ಈ ಬಾರಿಯೂ ಅವರ ಜೊತೆಗೆ ಹುಟ್ಟುಹಬ್ಬ ಆಚರಣೆ ನಡೆಯಲಿದೆ ಎಂದು ತಿಳಿದುಬಂದಿದೆ.