ಕೋಡಿಂಬಾಡಿಯಲ್ಲಿ ಎನ್ನೆಸ್ಸೆಸ್ ಶಿಬಿರ ಉದ್ಘಾಟನೆ

0

ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸವಾಗಲಿ: ಅಶೋಕ್ ಕುಮಾರ್ ರೈ

ಉಪ್ಪಿನಂಗಡಿ: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಮಾಡುವ ಶ್ರಮದಾನದ ಜೊತೆ ಜೊತೆಗೆ ಸಮಾಜದಲ್ಲಿರುವ ಸಮಸ್ಯೆಗಳನ್ನು ಅರಿತುಕೊಂಡು ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಮನೋಭಾವವನ್ನು ಶಿಬಿರಾರ್ಥಿಗಳು ಬೆಳೆಸಿಕೊಳ್ಳಬೇಕು. ಆ ಮೂಲಕ ಇದರಲ್ಲಿ ಸಾರ್ಥಕತೆಯನ್ನು ಮೂಡಿಸಿಕೊಳ್ಳಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಕೋಡಿಂಬಾಡಿಯ ಸರಕಾರಿ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ವಾರ್ಷಿಕ ವಿಶೇಷ ಶಿಬಿರವನ್ನು ಫೆ.೪ರಂದು ಉದ್ಘಾಟಿಸಿ ಮಾತನಾಡಿದ ಅವರು, ಎನ್ನೆಸ್ಸೆಸ್ ಶಿಬಿರಕ್ಕೆ ವಿಶೇಷವಾದ ಗೌರವ, ಮಾನ್ಯತೆ ಇದೆ. ವಿದ್ಯಾರ್ಥಿಗಳು ಈ ಮೂಲಕ ತನ್ನ ವೃತ್ತಿ ಬದುಕಿಗೆ ಅವಶ್ಯಕತೆ ಇರುವ ಕೌಶಲ್ಯಗಳನ್ನೂ ಬೆಳೆಸಿಕೊಳ್ಳಬೇಕು ಎಂದರು.


ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಮಾತನಾಡಿ, ಹಿಂದೆಲ್ಲಾ ಎನ್ನೆಸ್ಸೆಸ್ ಶಿಬಿರ ಎಂದರೆ ಕೇವಲ ಶ್ರಮದಾನಕ್ಕಷ್ಠೇ ಸೀಮಿತವಾಗಿತ್ತು. ಆದರೆ ಇಂದು ಈ ಮೂಲಕ ಹಲವು ವಿಚಾರ, ಸಂವಾದ ನಡೆಯುತ್ತದೆ. ಊರಿನ, ಗ್ರಾಮದ ಸಮಸ್ಯೆಗಳ ಬಗ್ಗೆ ತಿಳಿಯುವುದಕ್ಕೂ ಒಂದು ವೇದಿಕೆಯಾಗಿ ರೂಪುಗೊಂಡಿದ್ದು, ಇವುಗಳೆಲ್ಲದರ ಸಂಗಮದೊಂದಿಗೆ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದರು.


ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎ. ಕೃಷ್ಣ ರಾವ್ ಆರ್ತಿಲ ಮಾತನಾಡಿ, ಉಪ್ಪಿನಂಗಡಿ ಕಾಲೇಜಿನ ವಿದ್ಯಾರ್ಥಿಗಳು ಅದರಲ್ಲೂ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಈಚೆಗೆ ನಡೆದ ರಾಷ್ಟ್ರ ಮಟ್ಟದ ಕ್ರೀಡಾಕೂಟದ ಸಂದರ್ಭದಲ್ಲಿ ತಮ್ಮ ಸೇವಾ ಬದ್ಧತೆಯನ್ನು ತೋರಿಸಿಕೊಟ್ಟಿದ್ದಾರೆ. ಆ ಮೂಲಕ ಕಾಲೇಜಿಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದಾರೆ. ತಮ್ಮ ಸೇವೆ ಇತರೇ ಊರಿಗೂ ಸಿಗುವಂತಾಗಲಿ. ತಮ್ಮಲ್ಲಿ ಇನ್ನಷ್ಟು ಪ್ರೌಢಿಮೆ ಹೊರ ಬರಲಿ ಎಂದರು.


ಕಾಲೇಜಿನ ಪ್ರಾಂಶುಪಾಲ ರವಿರಾಜ ಎಸ್. ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ, ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ ಎನ್., ಹಿರಿಯ ವಿದ್ಯಾರ್ಥಿ ವಿಕ್ರಂ ಶೆಟ್ಟಿ ಮಾತನಾಡಿದರು. ಶಾಲಾ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಶ್ರೀಮತಿ ಸ್ಪೂರ್ತಿ ರೈ, ಗ್ರಾಮ ಪಂಚಾಯತ್ ಸದಸ್ಯ ಜಗನ್ನಾಥ ಶೆಟ್ಟಿ ನಡುಮನೆ, ಮಾಜಿ ಸದಸ್ಯ ಮೋನಪ್ಪ ಗೌಡ ಉಪಸ್ಥಿತರಿದ್ದರು.
ಶಿಬಿರಾಧಿಕಾರಿಗಳಾದ ಹರಿಪ್ರಸಾದ್ ಎಸ್. ಸ್ವಾಗತಿಸಿದರು. ಕೇಶವ ಕುಮಾರ್ ವಂದಿಸಿದರು. ಘಟಕದ ನಾಯಕಿ ಅಶ್ವಿನಿ ಎಂ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here