ಬಿಜೆಪಿಯ ನಕಲಿ ಹಿಂದುತ್ವವನ್ನು ನಿರಂತರ ವಿರೋಧಿಸಿ-ಎಂ.ಜಿ.ಹೆಗಡೆ
ಪುತ್ತೂರು: ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿ ಅಭಿವೃದ್ಧಿಗೆ ಅಡ್ಡಿ ಪಡಿಸುತ್ತಿರುವ ಮತ್ತು ಪುತ್ತೂರಿನ ಸಮಗ್ರ ಅಭಿವೃದ್ಧಿಗೆ ಪಣತೊಟ್ಟಿರುವ ಶಾಸಕ ಅಶೋಕ್ ಕುಮಾರ್ ರೈರವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಫೆ.7ರಂದು ಬೆಳಿಗ್ಗೆ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್ ವಕ್ತಾರ ಎಂ.ಜಿ.ಹೆಗಡೆ ಮಾತನಾಡಿ, ಬಿಜೆಪಿಯವರು ನವ ಹಿಂದುತ್ವದ ಹೆಸರಿನಲ್ಲಿ ನಕಲಿ ಹಿಂದುತ್ವ ಮಾಡಿಕೊಂಡು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವರ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಹಿಂದುತ್ವ ಎಂದು ಹೇಳಿಕೊಂಡು ದೇವಾಸ್ಥಾನದ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ. ಇವರ ನಕಲಿ ಹಿಂದುತ್ವವನ್ನು ನಿರಂತರ ವಿರೋಧಿಸಬೇಕು. ಹಿಂದುತ್ವ, ಭಕ್ತಿ, ಆರಾಧನೆಗಳು ಪರಮಾತ್ಮನ ಕಡೆಗೆ ಇರಬೇಕು. ಆದರೆ ಬಿಜೆಪಿಯ ಹಿಂದುತ್ವ, ಭಕ್ತಿ ಓಟು ಹಾಗೂ ಬ್ಯಾಲೆಟ್ ಪೇಪರ್ ಮೇಲೆ ಮಾತ್ರ ಇದೆ. ಇದೀಗ ಪುತ್ತೂರಿನ ಕಾಂಗ್ರೆಸಿಗರಿಗೆ ದೇವರು ಅವಕಾಶ ನೀಡಿದ್ದಾನೆ. ಬಿಜೆಪಿಯ ನಕಲಿ ಹಿಂದುತ್ವವನ್ನು ಜನರಿಗೆ ನಿರಂತರ ತಿಳಿಸುವ ಕೆಲಸ ಮಾಡಬೇಕು ಎಂದರು.
![](https://puttur.suddinews.com/wp-content/uploads/2025/02/231074a6-7c66-4ad1-93ae-07d24baae994.jpg)
ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಪುತ್ತೂರಿನಲ್ಲಿ ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ಅಭಿವೃದ್ಧಿ ಪರ್ವ ಆಗುತ್ತಿದೆ. ದೇವಾಲಯದ ಅಭಿವೃದ್ಧಿಯನ್ನು ವಿರೋಧಿಸುವ ಮೂಲಕ ಬಿಜೆಪಿಯವರು ದೇವರಿಗೆ ಮೋಸ ಮಾಡುತ್ತಿದ್ದಾರೆ. ದೇವರ ನಂಬಿಕೆಗೆ ಕೈ ಹಾಕಿದರೆ ಬಿಜೆಪಿಯವರ ರಾಜಕಾರಣ ನಾಶವಾಗುತ್ತದೆ. ಬಿಜೆಪಿಯವರಿಗೆ ಮಹಾಲಿಂಗೇಶ್ವರ ದೇವರಿಗಿಂತ ರಾಜೇಶ್ ಬನ್ನೂರುರವರೇ ದೊಡ್ಡವರಾಗಿದ್ದಾರೆ. ಶಾಸಕರ ಮತ್ತು ದೇವಾಲಯದ ಸಮಿತಿಯ ಕೆಲಸಗಳನ್ನು ವಿರೋಧಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮನವಿ:
ಪುತ್ತೂರು ಕಾಂಗ್ರೆಸ್ ಪಕ್ಷವನ್ನು ಅವಹೇಳನ ಮಾಡಿದ ಬಿಜೆಪಿ ಮುಖಂಡರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಪುತ್ತೂರು ನಗರ ಪೊಲೀಸ್ ಇನ್ಸ್ಪೆಕ್ಟರ್ರವರಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮನವಿ ನೀಡಲಾಯಿತು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕೃಷ್ಣಪ್ರಸಾದ್ ಆಳ್ವ ಪ್ರಾಸ್ತಾವಿಕ ಮಾತನಾಡಿದರು. ರವೀಂದ್ರ ನೆಕ್ಕಿಲು ಸ್ವಾಗತಿಸಿ, ವಂದಿಸಿದರು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.