ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕಕ್ಕೆ ಆಗ್ರಹ-ಪ್ರತಿಭಟನೆಗೆ ನಿರ್ಧಾರ
ರಾಮಕುಂಜ: ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿ ನೇಮಕಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲು ಕೊಯಿಲ ಗ್ರಾಮಸಭೆಯಲ್ಲಿ ಗ್ರಾಮಸ್ಥರು ನಿರ್ಧಾರ ಕೈಗೊಂಡಿದ್ದಾರೆ.
ಸಭೆ ಫೆ.4ರಂದು ಗ್ರಾ.ಪಂ.ಅಧ್ಯಕ್ಷೆ ಪುಷ್ಪಾಸುಭಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನೋಡೆಲ್ ಅಧಿಕಾರಿಯಾಗಿದ್ದರು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಲೀಲಾವತಿ ಅವರು ಮಾಹಿತಿ ನೀಡಲು ಮುಂದಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರಾದ ಜುನೈದ್ ಕೆಮ್ಮಾರ, ಸೆಲಿಕತ್ ಅವರು ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಲವು ವರ್ಷಗಳಿಂದ ವೈದ್ಯರಿಲ್ಲ. ಈ ಬಗ್ಗೆ ಪ್ರತಿ ಗ್ರಾಮಸಭೆಯಲ್ಲೂ ಚರ್ಚೆ ನಡೆಯುತ್ತಿದೆ. ವೈದ್ಯರ ನೇಮಕ ಆಗುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಗ್ರಾಮಸ್ಥ ಯದುಶ್ರೀ ಅವರು, ಇದೊಂದು ಗಂಭೀರ ಸಮಸ್ಯೆಯಾಗಿದ್ದು ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಬೇಕೇ ಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಪುಷ್ಪಾ, ಪಿಡಿಒ ಸಂದೇಶ್ ಅವರು, ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕ ಮಾಡುವಂತೆ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರಿಗೆ ಗ್ರಾಮ ಪಂಚಾಯಿತಿಯಿಂದ ಪತ್ರ ಸಹ ಬರೆದಿದ್ದೇವೆ ಎಂದರು. ಪ್ರಕಾಶ್ ಕೆಮ್ಮಾರ, ಮೋಹನ್‌ದಾಸ್ ರೈ, ಹೇಮಾ ಎಂ.ರೈ ಸಹಿತ ಹಲವು ಗ್ರಾಮಸ್ಥರು ಆರು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕ ಮಾಡುವಂತೆ ಆಗ್ರಹಿಸಿದರು. ಈ ಬಗ್ಗೆ ಚರ್ಚೆ ನಡೆದು 10 ದಿನದೊಳಗೆ ವೈದ್ಯರ ನೇಮಕ ಆಗಬೇಕು. ಇಲ್ಲದೇ ಇದ್ದಲ್ಲಿ ಫೆ.14ರಂದು ಆರು ಗ್ರಾಮಗಳ ಗ್ರಾಮಸ್ಥರನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸಲು ಸಭೆಯಲ್ಲಿ ಗ್ರಾಮಸ್ಥರು ನಿರ್ಧರಿಸಿ ಈ ಬಗ್ಗೆ ಪಂಚಾಯತ್‌ಗೆ ಮನವಿಯನ್ನೂ ಸಲ್ಲಿಸಿದರು.
ಅಂಗನವಾಡಿ, ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಬೆಂಬಲ:
ಕನಿಷ್ಟ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟಕ್ಕೆ ಗ್ರಾಮಸಭೆಯಲ್ಲಿ ಬೆಂಬಲ ಸೂಚಿಸಿ ನಿರ್ಣಯಿಸಲಾಯಿತು. ಈ ಬಗ್ಗೆ ಮಾತನಾಡಿದ ಯದುಶ್ರೀ ಆನೆಗುಂಡಿ, ಅಶೋಕ್ ಕೊಯಿಲ, ಪ್ರಕಾಶ್ ಕೆಮ್ಮಾರ ಮತ್ತಿತರರು ಅಂಗನವಾಡಿ ಕಾರ್ಯಕರ್ತೆಯರಿಂದ ಗಣತಿ ಸೇರಿದಂತೆ ಹೆಚ್ಚುವರಿ ಕೆಲಸ ಮಾಡಿಸುತ್ತಿದ್ದಾರೆ. ಆದರೆ ಅವರಿಗೆ ಸರಿಯಾದ ಸಂಭಾವನೆ ಸಿಗುತ್ತಿಲ್ಲ. ಈ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆಯರು, ಹುದ್ದೆ ಖಾಯಂಗೊಳಿಸುವಂತೆ ಹಾಗೂ ಕನಿಷ್ಠ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಸರಕಾರಕ್ಕೆ ಮನವಿ ಮಾಡಲು ನಿರ್ಣಯಿಸಲಾಯಿತು.
ಬಸ್ಸಿನ ಕೊರತೆ-ಆಕ್ರೋಶ:
ಕೆಎಸ್‌ಆರ್‌ಟಿಸಿ ಬಸ್ಸಿನ ಕೊರತೆ ವಿರುದ್ಧ ಗ್ರಾಮಸ್ಥರಾದ ಅಶೋಕ್, ಸೆಲಿಕತ್, ಯದುಶ್ರೀ, ಜುನೈದ್ ಕೆಮ್ಮಾರ, ಹೇಮಾ ಮೋಹನ್‌ದಾಸ್ ರೈ, ಮೋಹನ್‌ದಾಸ್ ರೈ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು. ಶಾಲಾ ಮಕ್ಕಳು ನೇತಾಡಿಕೊಂಡು ಹೋಗುತ್ತಿದ್ದಾರೆ. ಶಾಲಾ ಅವಧಿಯಲ್ಲಿ ಹೆಚ್ಚುವರಿ ಬಸ್ ಓಡಾಟಕ್ಕೆ ಕ್ರಮ ಕೈಗೊಳ್ಳಬೇಕು. ಕೊಯಿಲ, ಕೆಮ್ಮಾರದಲ್ಲಿ ಬಸ್ಸು ನಿಲ್ಲಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿಯ ಅಧಿಕಾರಿ ಸುರೇಶ್ ಅವರು, 2017ರಿಂದ ಸರಕಾರ ಚಾಲಕ, ನಿರ್ವಾಹಕರ ನೇಮಕ ಮಾಡುತ್ತಿಲ್ಲ. ಸಿಬ್ಬಂದಿ ಕೊರತೆ ಇದೆ. ಏಜೆನ್ಸಿ ಮೂಲಕ ಚಾಲಕ, ನಿರ್ವಾಹಕರ ನೇಮಕ ಮಾಡಲಾಗುತ್ತಿದೆ. ಆದರೆ ಏಜೆನ್ಸಿಯವರು ಚಾಲಕ, ನಿರ್ವಾಹಕರಿಗೆ ಸರಿಯಾಗಿ ಸಂಬಳ ಕೊಡದೇ ಇರುವುದರಿಂದ ಸಮಸ್ಯೆಯಾಗಿದೆ ಎಂದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಮಾತನಾಡಿದ ಗ್ರಾಮಸ್ಥ ಪ್ರಕಾಶ್ ಕೆಮ್ಮಾರ ಅವರು, ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಹೆಚ್ಚುವರಿ ಬಸ್ ಓಡಾಟಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಗ್ರಾಮಸ್ಥರ ಬೇಡಿಕೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಕೆಎಸ್‌ಆರ್‌ಟಿಸಿಯ ಸುರೇಶ್ ಅವರು ಹೇಳಿದರು. ಉಪ್ಪಿನಂಗಡಿಯಿಂದ ಬೆಳಿಗ್ಗೆ 5.45ಕ್ಕೆ ಸುಬ್ರಹ್ಮಣ್ಯಕ್ಕೆ ಕೆಎಸ್‌ಆರ್‌ಟಿಸಿ ಬಸ್ಸಿನ ಓಡಾಟ ಆರಂಭಗೊಂಡು 1 ತಿಂಗಳು ಆಯಿತು. ಈ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಇಲ್ಲ. ಇದನ್ನು ಪ್ರಚುರಪಡಿಸುವಂತೆ ಪುರುಷೋತ್ತಮ ಕೊಲ ಆಗ್ರಹಿಸಿದರು.
ಪಡಿತರಕ್ಕೆ ಸರ್ವರ್ ಸಮಸ್ಯೆ;
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಯಿಲ ಶಾಖೆಯಲ್ಲಿ ಪಡಿತರ ಪಡೆಯಲು ಸರ್ವರ್ ಸಮಸ್ಯೆ ಇದೆ. ಪಡಿತರ ಪಡೆಯಲು ಬೆಳಿಗ್ಗೆ ಬಂದವರು ಸಂಜೆ ತನಕವೂ ಕಾಯಬೇಕಾಗುತ್ತದೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜುನೈದ್ ಕೆಮ್ಮಾರ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಖಾ ಮೇನೇಜರ್ ಆನಂದ ಗೌಡ ಅವರು, ಸರ್ವರ್ ಸಮಸ್ಯೆಗೆ ಪರಿಹಾರ ಸರಕಾರದ ಮಟ್ಟದಲ್ಲಿ ಆಗುವಂತದ್ದು ಎಂದರು. ಈ ಬಗ್ಗೆ ಚರ್ಚೆ ನಡೆದು ಆಹಾರ ಸಚಿವರಿಗೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
![](https://puttur.suddinews.com/wp-content/uploads/2025/02/b599cfa7-5f93-4534-8245-1bab7ace677f.jpg)
ರಸ್ತೆ ಅಭಿವೃದ್ಧಿಗೆ ಮನವಿ;
ಆತೂರು ದೇವಸ್ಥಾನ, ಮಸೀದಿ ಸಂಪರ್ಕಿಸುವ ಎಲ್ಯಂಗ ರಸ್ತೆ ಕಾಂಕ್ರಿಟೀಕರಣಗೊಳಿಸುವಂತೆ ಮುನೀರ್ ಆತೂರು ಒತ್ತಾಯಿಸಿದರು. ಹಿರೇಬಂಡಾಡಿ-ಬರೆಮೇಲು-ಕೊಯಿಲ ರಸ್ತೆ ಜಿ.ಪಂ.ರಸ್ತೆಯಾಗಿ ಮೇಲ್ದರ್ಜೆಗೇರಿದೆ. ಇದರ ಕಾಂಕ್ರಿಟೀಕರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಯದುಶ್ರೀ ಆನೆಗುಂಡಿ ಆಗ್ರಹಿಸಿದರು. ಎರಡೂ ರಸ್ತೆಯ ಅಭಿವೃದ್ಧಿ ಕುರಿತು ಅಂದಾಜುಪಟ್ಟಿ ತಯಾರಿಸಿಕೊಡುವುದಾಗಿ ಜಿ.ಪಂ.ಇಂಜಿನಿಯರ್ ಹೊಳೆಬಸಪ್ಪ ಭರವಸೆ ನೀಡಿದರು. ವಿದ್ಯುತ್, ರಸ್ತೆ ಸೇರಿದಂತೆ ವಿವಿಧ ಸಮಸ್ಯೆ ಬಗ್ಗೆ ಗ್ರಾಮಸ್ಥರು ಸಭೆಯಲ್ಲಿ ಪ್ರಸ್ತಾಪಿಸಿದರು.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಯಿಲ ಶಾಖಾ ಮೇನೇಜರ್ ಆನಂದ ಗೌಡ, ಸಮಾಜ ಕಲ್ಯಾಣ ಇಲಾಖೆಯ ಲೋಕೇಶ್ ಎಂ., ಜಿ.ಪಂ.ಇಂಜಿನಿಯರ್ ಹೊಳೆಬಸಪ್ಪ, ಅಲ್ಪಸಂಖ್ಯಾತ ಇಲಾಖೆಯ ಮಹಮ್ಮದ್ ರಫೀಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ನಂದನಕುಮಾರಿ, ಕೆಎಸ್‌ಆರ್‌ಟಿಸಿಯ ಸುರೇಶ್, ಮೆಸ್ಕಾಂ ಸಹಾಯಕ ಇಂಜಿನಿಯರ್ ನಿತಿನ್‌ಕುಮಾರ್, ಗ್ರಾಮ ಆಡಳಿತಾಧಿಕಾರಿ ಶೇಷಾದ್ರಿ, ಅರಣ್ಯ ಇಲಾಖೆಯ ಕಾಂತರಾಜು, ಪಶುಸಂಗೋಪನೆ ಇಲಾಖೆಯ ರವಿತೇಜ, ಶಿಕ್ಷಣ ಇಲಾಖೆಯ ಸಿಆರ್‌ಪಿ ಮಹೇಶ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಲೀಲಾವತಿ, ಕಡಬ ಪೊಲೀಸ್ ಠಾಣೆಯ ಹೆಡ್‌ಕಾನ್ಸ್‌ಸ್ಟೇಬಲ್ ಹರೀಶ್ ಅವರು ಇಲಾಖಾವಾರು ಮಾಹಿತಿ ನೀಡಿದರು.
ಗ್ರಾ.ಪಂ.ಉಪಾಧ್ಯಕ್ಷ ಯತೀಶ್‌ಕುಮಾರ್, ಸದಸ್ಯರಾದ ಹರ್ಷಿತ್‌ಕುಮಾರ್, ಗೀತಾ, ಕಮಲಾಕ್ಷಿ, ಸಫಿಯಾ, ಹಸನ್ ಸಜ್ಜದ್, ಜೋಹರಾಬಿ, ನಝೀರ್ ಪೂರಿಂಗ, ಸೀತಾರಾಮ ಬಲ್ತಕುಮೇರು, ಚಂದ್ರಶೇಖರ ಮಾಳ, ಲತಾ, ಭಾರತಿ, ಶಶಿಕಲಾ ಎಂ., ಚಿದಾನಂದ ಪಾನ್ಯಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಸಂದೇಶ್ ಕೆ.ಎನ್.ಸ್ವಾಗತಿಸಿ, ವರದಿ ವಾಚಿಸಿದರು. ಕಾರ್ಯದರ್ಶಿ ಪಮ್ಮು ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.
![](https://puttur.suddinews.com/wp-content/uploads/2025/02/koila-2-3.jpg)
ಗ್ರಾಮಸ್ಥರಿಂದ ಮನವಿ:
ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಬೇಕು ಹಾಗೂ ಶಾಲಾ ಅವಧಿಯಲ್ಲಿ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್ಸು ಓಡಾಟಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ, ಪಿಡಿಒಗೆ ಲಿಖಿತ ಮನವಿ ಸಲ್ಲಿಸಿದರು.