ಪುತ್ತೂರು-ಮಾಡಾವು ಹೆಚ್ಚುವರಿ ಸರಕಾರಿ ಬಸ್ಸು ಸಂಚಾರ ಕಲ್ಪಿಸಿ
ಕುಂಬ್ರ-ತಿಂಗಳಾಡಿ ಸಮನಾಂತರ ಸ್ಟೇಜ್ ಮಾಡಿ-ಗ್ರಾಮಸ್ಥರ ಆಗ್ರಹ
ಪುತ್ತೂರು: ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವುದರಿಂದ ಪುತ್ತೂರು-ತಿಂಗಳಾಡಿ-ಮಾಡಾವು ಮಧ್ಯೆ ಹೆಚ್ಚುವರಿ ಸರಕಾರಿ ಬಸ್ಸು ಸಂಚಾರ ಮಾಡಬೇಕು ಅಲ್ಲದೆ ಕುಂಬ್ರದಿಂದ ತಿಂಗಳಾಡಿಗೆ ಸಮನಾಂತರ ಸ್ಟೇಜ್ ಮಾಡಬೇಕು. ಈ ಬಗ್ಗೆ ಸಾರಿಗೆ ಅಧಿಕಾರಿಗಳು ಕೂಡಲೇ ಗಮನಹರಿಸಬೇಕು ಎಂದು ಗ್ರಾಮಸ್ಥರು ಕೆದಂಬಾಡಿ ಗ್ರಾಮಸಭೆಯಲ್ಲಿ ಆಗ್ರಹಿಸಿದರು.
ಸಭೆಯು ಗ್ರಾ.ಪಂ. ಅಧ್ಯಕ್ಷೆ ಸುಜಾತ ಮುಳಿಗದ್ದೆಯವರು ಅಧ್ಯಕ್ಷತೆಯಲ್ಲಿ ಫೆ.6 ರಂದು ಕೆದಂಬಾಡಿ ಗ್ರಾ.ಪಂ.ನ ಸಭಾಂಗಣದಲ್ಲಿ ನಡೆಯಿತು. ಸಹಾಯಕ ಕೃಷಿ ಅಧಿಕಾರಿ ಯಶಸ್ ಮಂಜುನಾಥರವರು ನೋಡೆಲ್ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟರು. ಸಾರಿಗೆ ಇಲಾಖೆಯ ಮಾಹಿತಿ ಸಂದರ್ಭದಲ್ಲಿ ನಾರಾಯಣ ಪೂಜಾರಿ ಕುರಿಕ್ಕಾರರವರು ವಿಷಯ ಪ್ರಸ್ತಾಪಿಸಿ, ಬೆಳಗ್ಗಿನ ಸಮಯದಲ್ಲಿ ಸರಿಯಾದ ಬಸ್ಸು ವ್ಯವಸ್ಥೆ ಇಲ್ಲದೇ ಇರುವುದರಿಂದ ಮಾಡಾವು, ತಿಂಗಳಾಡಿ, ಸಾರೆಪುಣಿ ಇತ್ಯಾದಿ ಕಡೆಗಳಿಂದ ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಹಳಷ್ಟು ಸಮಸ್ಯೆಯಾಗುತ್ತದೆ. ಸೀಮಿತ ಬಸ್ಸು ಇದ್ದು ಬೆಳಗ್ಗಿನ ಜಾವ 7.30 ರಿಂದ ಯಾವುದೆ ಬಸ್ಸನ್ನು ನಿಲ್ಲಿಸದೇ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಗ್ರಾಮಸ್ಥರು ಬೆಳಿಗ್ಗಿನ ಜಾವ ಹೆಚ್ಚುವರಿ ಬಸ್ಸು ಸಂಚಾರ ಕಲ್ಪಿಸುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳು ಗಮನ ಹರಿಸುವಂತೆ ಕೇಳಿಕೊಂಡರು.
ಸಮನಾಂತರ ಸ್ಟೇಜ್ ಮಾಡಿ
ಸರಕಾರಿ ಬಸ್ಸು ಸ್ಟೇಜ್ ವ್ಯವಸ್ಥೆಯಲ್ಲಿ ತಾರತಮ್ಯವಿದ್ದು ಪುತ್ತೂರಿನಿಂದ ಕುಂಬ್ರಕ್ಕೆ 9 ಕಿ.ಮೀ ಇದ್ದು 18 ರೂ.ಇದೆ. ಅದೇ ಸಂಟ್ಯಾರ್ನಿಂದ ಪರ್ಪುಂಜಕ್ಕೆ 1 ಕಿ.ಮೀ ಇದ್ದು 12 ರೂ.ಇದೆ. ಕುಂಬ್ರದಿಂದ ತಿಂಗಳಾಡಿಗೆ 3 ಕಿ.ಮೀ ಇದ್ದು 6 ರೂ.ಇದೆ. ಪುತ್ತೂರಿನಿಂದ ತಿಂಗಳಾಡಿಗೆ 13 ಕಿ.ಮೀ ಇದ್ದು 23 ರೂ.ಇದೆ. ಅದೇ ಪುತ್ತೂರಿನಿಂದ ಉಪ್ಪಿನಂಗಡಿಗೆ 13 ಕಿ.ಮೀ ಇದ್ದು 18 ರೂ.ಇದೆ. ಪುತ್ತೂರಿನಿಂದ ವಿಟ್ಲಕ್ಕೂ 17 ಕಿ.ಮೀ ಇದ್ದು 18 ರೂ.ಇದೆ. ಈ ರೀತಿಯ ಸ್ಟೇಜ್ ತಾರತಮ್ಯವಿದ್ದು ಇದನ್ನು ಸರಿಪಡಿಸಬೇಕಾಗಿದೆ ಎಂದು ಗ್ರಾ.ಪಂ ಸದಸ್ಯ ಮೆಲ್ವಿನ್ ಮೊಂತೆರೋ ಸಭೆಗೆ ತಿಳಿಸಿದರು. ಸಂಟ್ಯಾರ್ನಿಂದ ಕುಂಬ್ರಕ್ಕೆ 3 ಕಿ.ಮೀ ಗೆ 1 ಸ್ಟೇಜ್ ಮಾಡಿದ್ದು ಇದಕ್ಕೆ ಮುಖ್ಯ ಕಾರಣವಾಗಿದ್ದು ಕುಂಬ್ರ ತಿಂಗಳಾಡಿ ಮತ್ತು ಕುಂಬ್ರ ಕೌಡಿಚ್ಚಾರು ಒಂದೇ ಸಮನಾಂತರ ಸ್ಟೇಜ್ ಮಾಡಿದರೆ ಸರಿಯಾಗುತ್ತದೆ ಎಂದು ವಿಷಯವನ್ನು ಸಭೆಗೆ ತಿಳಿಸಿದರು. ಈ ಬಗ್ಗೆ ಸಾರಿಗೆ ಅಧಿಕಾರಿಗಳಿಗೆ ಬರೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಕೆಎಸ್ಆರ್ಟಿಸಿಯಲ್ಲಿ ಸಿಬ್ಬಂದಿಗಳ ಕೊರತೆ…!
ಡಿಫೋದಲ್ಲಿ ಬಸ್ಸು ಇದ್ದರೂ ಹೆಚ್ಚುವರಿ ಬಸ್ಸಿನ ವ್ಯವಸ್ಥೆ ಆಗ್ತಾ ಇಲ್ಲ, ಈಗಾಗಲೇ ಹಲವು ಸಿಟಿ ಬಸ್ಸುಗಳನ್ನು ನಿಲ್ಲಿಸಲಾಗಿದೆ ಈ ರೀತಿ ಯಾಕೆ ಆಗುತ್ತಿದೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಇಲಾಖಾ ಅಧಿಕಾರಿಯವರು ಕೆಎಸ್ಆರ್ಟಿಸಿಯಲ್ಲಿ ಸಿಬ್ಬಂದಿಗಳ ಕೊರತೆ ಇರುವುದು ನಿಜ. ಬಸ್ಸು ಇದ್ದರೂ ಡ್ರೈವರ್ ಮತ್ತು ನಿರ್ವಾಹಕರಿಲ್ಲದೆ ಬಸ್ಸು ಓಡಿಸುವುವಂತಿಲ್ಲ. ಹೆಚ್ಚಿನ ಸಿಬ್ಬಂದಿಗಳು ಕಂಟ್ರಾಕ್ಟ್ ಕ್ಯಾರೇಜ್ ಮೇಲೆಯೇ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ರಸ್ತೆ ದುರಸ್ತಿ ಮಾಡಲೇ ಇಲ್ಲ..!?
ಗ್ರಾಮದ 4 ನೇ ವಾರ್ಡ್ನ ಕೊಡಂಗೋಣಿ ರಸ್ತೆ ದುರಸ್ತಿ ಮಾಡಲೇ ಇಲ್ಲ, ಈ ಭಾಗದಲ್ಲಿ ಎಸ್ಸಿ ಎಸ್ಟಿ ಅಲ್ಪಸಂಖ್ಯಾತರ ಮನೆಗಳಿದ್ದರೂ ನಮ್ಮ ರಸ್ತೆಯನ್ನು ಕಡಗಣಿಸಲಾಗಿದೆ ದಯವಿಟ್ಟು ಎಲ್ಲಾ ರಸ್ತೆಗಳಿಗೂ ಆದ್ಯತೆ ಕೊಡಿ ಎಂದು ನಿವೃತ್ತ ಶಿಕ್ಷಕ ಕಿರಣ್ರಾಜ್ರವರು ಮನವಿ ಮಾಡಿಕೊಂಡರು.
ವಾರ್ಡ್ ಸಭೆಗಳನ್ನು ಸರಿಯಾಗಿ ನಡೆಸಿ
ವಾರ್ಡ್ ಸಭೆಗಳನ್ನು ಸರಿಯಾದ ಸೂಕ್ತವಾದ ಸ್ಥಳಗಳಲ್ಲಿ ನಡೆಸುವಂತೆ ಚಂದ್ರ ಇದ್ಪಾಡಿಯವರು ಮನವಿ ಮಾಡಿಕೊಂಡರು. ಎಲ್ಲೋ ಒಂದು ಕಡೆ ನಿಂತುಕೊಂಡು ಸಭೆ ನಡೆಸುವುದು ಸರಿಯಾದ ವ್ಯವಸ್ಥೆಯಲ್ಲ, ಕಳೆದ ವರ್ಷ ಕೂಡ ಇದೇ ರೀತಿ ಆಗಿದೆ.ಆದ್ದರಿಂದ ಮುಂದೆಯಾದರೂ ಸರಿಯಾದ ಜಾಗದಲ್ಲಿ ಸಭೆ ನಡೆಸುವಂತೆ ಅವರು ಕೇಳಿಕೊಂಡರು.
ಅಜಿಲ ಜನಾಂಗವನ್ನು ಅಲೆಮಾರಿ ಜನಾಂಗಕ್ಕೆ ಸೇರಿಸಿರುವುದು ಸರಿಯಲ್ಲ…?
ಅಜಿಲ ಜನಾಂಗವು ಅಂಬೇಡ್ಕರ್ ನಿಗಮನದ ಪಟ್ಟಿಯಲ್ಲಿ ಅಲೆಮಾರಿ ಜನಾಂಗಕ್ಕೆ ಸೇರಿರುವ ಬಗ್ಗೆ ಚಂದ್ರ ಇದ್ಪಾಡಿಯವರು ಸಭೆಯ ಗಮನಕ್ಕೆ ತಂದರು. ದಕ್ಷಿಣ ಕನ್ನಡದಲ್ಲಿ ಅಜಿಲ ಅಥವಾ ನಲಿಕೆ ಜನಾಂಗ ಇದ್ದು ಇದು ಎಸ್ಸಿ ಕೆಟಗರಿಗೆ ಸೇರಿರುತ್ತದೆ. ಆದರೆ ಅಂಬೇಡ್ಕರ್ ನಿಗಮದಿಂದ ಸೌಲಭ್ಯ ಪಡೆಯಬೇಕಾದರೆ ನಾವು ಅಲ್ಲಿ ಅರ್ಜಿ ಸಲ್ಲಿಸುವಾಗ ಅಜಿಲ ಜನಾಂಗವು ಅಲೆಮಾರಿ ಜನಾಂಗದಲ್ಲಿ ಸೇರಿದೆ ಎಂದು ತಿಳಿಸಿದರು. ಇದು ಸರಿಯಲ್ಲ ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು.
ಗಟ್ಟಮನೆಯಲ್ಲಿ ಲೇ ಔಟ್ನಿಂದ ತೊಂದರೆ
ಪಂಜಿಗುಡ್ಡೆ ಗಟ್ಟಮನೆಯಲ್ಲಿ ಹೌಸಿಂಗ್ ಲೇಔಟ್ ನಿರ್ಮಾಣ ಮಾಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಇಸ್ಮಾಯಿಲ್ ಗಟ್ಟಮನೆಯವರು ಸಭೆಯ ಗಮನಕ್ಕೆ ತಂದರು. ಗಟ್ಟಮನೆಯಲ್ಲಿ ಶಿವಪ್ರಸಾದ್ ಶೆಟ್ಟಿ ಎಂಬವರು ಮನೆ ಸೈಟಿಂಗ್ಗಾಗಿ ಜಾಗವನ್ನು ಸಮತಟ್ಟು ಮಾಡಿದ್ದು ಇದರಿಂದ ಮಳೆಗಾಲದಲ್ಲಿ ಈ ಭಾಗದ ಜನರಿಗೆ ತೊಂದರೆಯಾಗಲಿದೆ. ಸೈಟ್ನ ಮಣ್ಣು ಕೊಚ್ಚಿಕೊಂಡು ಹೋಗಿ ಬಾವಿ,ಕೆರೆ, ತೋಟಗಳಿಗೆ ಹಾಗೇ ಮನೆಯೊಳಗೆ ನುಗ್ಗುವ ಅಪಾಯವಿದೆ.ಈ ಬಗ್ಗೆ ಪಂಚಾಯತ್ಗೆ ದೂರು ಕೂಡ ಕೊಟ್ಟಿದ್ದೇವೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಇಸ್ಮಾಯಿಲ್ ಮತ್ತಿತರರು ತಿಳಿಸಿದರು.
ಕುಡಿಯುವ ನೀರಿನ ಸಂಪರ್ಕ ಕಡಿತ ಮಾಡಬೇಡಿ
ಈಗಾಗಲೇ ತಿಂಗಳಾಡಿ ಕಾಲನಿಗಳಲ್ಲಿ ಹಲವು ಮಂದಿಯ ಮನೆಗೆ ಇದ್ದ ಕುಡಿಯುವ ನೀರಿನ ಸಂಪರ್ಕವನ್ನು ಪಂಚಾಯತ್ನಿಂದ ಕಡಿತ ಮಾಡಲಾದ ಬಗ್ಗೆ ಸೋಮಯ್ಯರವರು ಸಭೆಯ ಗಮನಕ್ಕೆ ತಂದರು. ದಯವಿಟ್ಟು ಕುಡಿಯುವ ನೀರಿನ ಸಂಪರ್ಕವನ್ನು ಕಡಿತ ಮಾಡಬೇಡಿ ಎಂದು ಅವರು ಕೇಳಿಕೊಂಡರು. ಇದಕ್ಕೆ ಉತ್ತರಿಸಿದ ಪಿಡಿಓರವರು ಒಂದು ವರ್ಷ ಕಾಲ ಉಚಿತ ನೀರು ಕೊಟ್ಟಿದ್ದೇವೆ. ನೀರಿನ ಬಿಲ್ ಬಾಕಿ ಇರಿಸಿಕೊಂಡವರ ಸಂಪರ್ಕ ಮಾತ್ರ ಕಡಿತ ಮಾಡಿದ್ದೇವೆ ಎಂದು ತಿಳಿಸಿದರು.
ಕುಂಬ್ರದಲ್ಲಿ ಹೈಮಾಸ್ಕ್ ಲೈಟ್ ಅಳವಡಿಸಿರುವುದಕ್ಕೆ ಕುಂಬ್ರ ವರ್ತಕರ ಸಂಘದಿಂದ ನಾರಾಯಣ ಪೂಜಾರಿ ಕುರಿಕ್ಕಾರರವರು ಪಂಚಾಯತ್ಗೆ ಧನ್ಯವಾದಗಳನ್ನು ತಿಳಿಸಿದರು ಹಾಗೇ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ಕಾದಿರಿಸಿದ್ದಕ್ಕೆ ಚಂದ್ರ ಇದ್ಪಾಡಿಯವರು ಧನ್ಯವಾದ ಅರ್ಪಿಸಿದರು.
ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಜಯಲಕ್ಷ್ಮೀ ಬಲ್ಲಾಳ್ ಬೀಡು,ಸದಸ್ಯರುಗಳಾದ ವಿಠಲ ರೈ ಮಿತ್ತೋಡಿ, ಕೃಷ್ಣ ಕುಮಾರ್ ಇದ್ಯಾಪೆ, ಮೆಲ್ವಿನ್ ಮೊಂತೆರೋ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಸುಜಾತ ರೈ, ಅಸ್ಮಾ ಗಟ್ಟಮನೆ ಉಪಸ್ಥಿತರಿದ್ದರು.ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆಯವರು ಸ್ವಾಗತಿಸಿ, ಪಂಚಾಯತ್ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಗ್ರೇಡ್1 ಕಾರ್ಯದರ್ಶಿ ಸುನಂದ ರೈ ನಿರ್ಣಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿ ಜಯಂತ ಮೇರ್ಲ ವರದಿ ಮಂಡಿಸಿದರು. ಸಿಬ್ಬಂದಿಗಳಾದ ಗಣೇಶ್, ವಿದ್ಯಾಪ್ರಸಾದ್,ಮೃದುಳಾ, ಶಶಿಪ್ರಭಾ ರೈ ಸಹಕರಿಸಿದ್ದರು.
ಬಸ್ಸು ನಿಲ್ಲಿಸದಿದ್ದರೆ ದೂರು ಕೊಡಿ
ಬಸ್ಸು ಖಾಲಿ ಇದ್ದು ಒಂದು ವೇಳೆ ನಿಲ್ಲಿಸದೇ ಇದ್ದರೆ ಅಂತಹ ಬಸ್ಸಿನ ನಂಬರ್ ಅನ್ನು ನೋಟ್ ಮಾಡಿಕೊಂಡು ಅಥವಾ ಫೋಟೋ ತೆಗೆದು ಇಲಾಖೆಯ ಅಧಿಕಾರಿಗಳಿಗೆ ದೂರು ಕೊಡಿ. ಆ ಬಸ್ಸಿನ ಚಾಲಕರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಇಲಾಖೆಯ ಅಧಿಕಾರಿ ಸಭೆಗೆ ತಿಳಿಸಿದರು.